ಇದು ಭಾರತದ ಅತ್ಯಂತ ಸ್ವಚ್ಛ ಹಾಗೂ ಸುಂದರ ನಗರ: ಅಮೆರಿಕನ್ ವ್ಲಾಗರ್ ಮನಗೆದ್ದ 'ಸ್ಟೀಲ್ ಸಿಟಿ'! Steel City Jamshedpur

Steel City Jamshedpur (ಚಿತ್ರ X)
Steel City Jamshedpur (ಚಿತ್ರ X)
Published on
Steel City Jamshedpur: ಭಾರತ ಎಂದರೆ ಕೇವಲ ಸದಾ ಗಿಜಿಗುಡುವ ಮೆಟ್ರೋ ನಗರಗಳು, ಗೋವಾದ ಕಡಲತೀರಗಳು ಅಥವಾ ವಾರಣಾಸಿಯಂತಹ ಐತಿಹಾಸಿಕ ತಾಣಗಳು ಮಾತ್ರವಲ್ಲ. ಈ ಪ್ರಸಿದ್ಧ ಪ್ರವಾಸಿ ಸ್ಥಳಗಳ ಆಚೆಗೂ ದೇಶದಲ್ಲಿ ಎಲೆಮರೆ ಕಾಯಿಯಂತಿರುವ ಅನೇಕ ಸುಂದರ ಹಾಗೂ ಯೋಜಿತ ನಗರಗಳಿವೆ. ಅಂತಹ ಅಪರೂಪದ ತಾಣಗಳಲ್ಲಿ ಜಾರ್ಖಂಡ್‌ನ 'ಸ್ಟೀಲ್ ಸಿಟಿ' ಜಮ್‌ಶೆಡ್‌ಪುರವೂ ಒಂದು. ಇತ್ತೀಚೆಗೆ ಭಾರತದ ವಿವಿಧ ಭಾಗಗಳಲ್ಲಿ ಪ್ರವಾಸ ಮಾಡುತ್ತಿರುವ ಅಮೆರಿಕದ ಪ್ರಸಿದ್ಧ ಕಂಟೆಂಟ್ ಕ್ರಿಯೇಟರ್ ಟೋನಿ ಕ್ಲೋರ್ (Tony Klor), ಜಮ್‌ಶೆಡ್‌ಪುರಕ್ಕೆ ಭೇಟಿ ನೀಡಿದ್ದು ಅಲ್ಲಿನ ಸ್ವಚ್ಛತೆ ಮತ್ತು ಸೌಂದರ್ಯಕ್ಕೆ ಸಂಪೂರ್ಣ ಮರುಳಾಗಿದ್ದಾರೆ.
ಬಿಹಾರ ಹಾಗೂ ಉತ್ತರ ಪ್ರದೇಶದ ಸಂಸ್ಕೃತಿಯನ್ನು ಪರಿಚಯಿಸುವ ವೀಡಿಯೋಗಳ ಮೂಲಕ ಮನೆಮಾತಾಗಿದ್ದ ಟೋನಿ, ಆರಂಭದಲ್ಲಿ ಜಮ್‌ಶೆಡ್‌ಪುರವನ್ನು ತಮ್ಮ ಭಾರತ ಪ್ರವಾಸದ ಪಟ್ಟಿಯಲ್ಲೇ ಸೇರಿಸಿರಲಿಲ್ಲವಂತೆ. ಆದರೆ, ಒಮ್ಮೆ ಈ ನಗರಕ್ಕೆ ಭೇಟಿ ನೀಡಿದ ನಂತರ, ಇದು ಭಾರತದಲ್ಲೇ ಅವರ ಅತ್ಯಂತ ನೆಚ್ಚಿನ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ ಎಂದು ಬಣ್ಣಿಸಿದ್ದಾರೆ.

ಮಕ್ಕಳಿಗೆ ಹೆಮ್ಮೆಯಿಂದ ಕಥೆ ಹೇಳುವಂತಹ ನೆನಪು!

ತಮ್ಮ ಪ್ರವಾಸದ ಸುಂದರ ವೀಡಿಯೋವನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ಟೋನಿ, ಜಮ್‌ಶೆಡ್‌ಪುರ ನನ್ನ ಇಂಡಿಯಾ ಬಕೆಟ್ ಲಿಸ್ಟ್‌ನಲ್ಲಿ ಇರಲೇ ಇಲ್ಲ. ಆದರೆ ಈಗ ಇದು ಮುಂದಿನ ದಿನಗಳಲ್ಲಿ ನನ್ನ ಮಕ್ಕಳಿಗೆ ಹೆಮ್ಮೆಯಿಂದ ಕಥೆ ಹೇಳುವಂತಹ ನೆಚ್ಚಿನ ಸ್ಥಳವಾಗಿ ಮಾರ್ಪಟ್ಟಿದೆ. ಆದಾಗ್ಯೂ, ಇಲ್ಲಿನ ಜನರ ಪ್ರೀತಿ, ಆತಿಥ್ಯ ಮತ್ತು ಅನಿರೀಕ್ಷಿತ ಸೌಂದರ್ಯಕ್ಕೆ ನಾನು ಮನಸೋತಿದ್ದೇನೆ ಎಂದು ಬರೆದು ಪೋಸ್ಟ್ ಹಂಚಿಕೊಂಡಿದ್ದಾರೆ.

ಟಾಟಾ ನಿರ್ವಹಣೆ ಮತ್ತು 'ಪಿಟ್ಸ್‌ಬರ್ಗ್ ಆಫ್ ಇಂಡಿಯಾ'!

ವೀಡಿಯೋದಲ್ಲಿ ಜಮ್‌ಶೆಡ್‌ಪುರವನ್ನು "ಅತ್ಯಂತ ವಿಶಿಷ್ಟ ನಗರ" ಎಂದು ಬಣ್ಣಿಸಿರುವ ಟೋನಿ, ಭಾರತದ ಹೆಚ್ಚಿನ ನಗರಗಳಂತೆ ಇಲ್ಲಿ ಸಾಂಪ್ರದಾಯಿಕ ಮಹಾನಗರ ಪಾಲಿಕೆ ಇಲ್ಲ. ಬದಲಾಗಿ ಈ ಇಡೀ ನಗರದ ಪೌರಾಡಳಿತ ಸ್ವಚ್ಛತೆ ಮತ್ತು ನಿರ್ವಹಣೆಯನ್ನು ಟಾಟಾ ಸ್ಟೀಲ್​ ಸಂಸ್ಥೆಯೇ ನೋಡಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.
ನಗರದ ವಿಸ್ತಾರವಾದ ಹಸಿರು, ಯೋಜಿತ ಮೂಲಸೌಕರ್ಯ ಹಾಗೂ ಸೌರಶಕ್ತಿಯ ಬಳಕೆಯನ್ನು ಕಂಡು ಬೆರಗಾದ ಅವರು, ಇದನ್ನು "ಭಾರತದ ಪಿಟ್ಸ್‌ಬರ್ಗ್" ಎಂದು ಕರೆದಿದ್ದಾರೆ. ಅಷ್ಟೇ ಅಲ್ಲದೆ, ಭಾರತಕ್ಕೆ ಹಲವು ಒಲಿಂಪಿಯನ್ ಕ್ರೀಡಾಪಟುಗಳನ್ನು ನೀಡಿದ ಹೆಗ್ಗಳಿಕೆಯೂ ಈ ಮಣ್ಣಿಗಿದೆ ಎಂಬುದನ್ನು ಸ್ಮರಿಸಿದ್ದಾರೆ.

ಒಂದೇ ದಿನದಲ್ಲಿ ಪ್ರಮುಖ ತಾಣಗಳ ಸೌಂದರ್ಯ ದರ್ಶನ!

ತಮ್ಮ ಈ ಪ್ರವಾಸದ ವೇಳೆ ಅಮೆರಿಕನ್ ಯೂಟ್ಯೂಬರ್ ಟೋನಿ ಕ್ಲೋರ್ ಅವರು ಜಮ್‌ಶೆಡ್‌ಪುರದ ಪ್ರಸಿದ್ದ ತಾಣಗಳಾದ ಗೋಲ್ಪಹಾಡಿ ದೇವಸ್ಥಾನ, ಜುಬಿಲಿ ಪಾರ್ಕ್, ಸಾಕ್ಚಿ ಮಾರುಕಟ್ಟೆ, ಡಿಮ್ನಾ ಸರೋವರ ಹಾಗೂ ದೊಮುಹಾನಿ ಕ್ಷೇತ್ರಗಳಿಗೆ ಭೇಟಿ ನೀಡಿ ಇಲ್ಲಿನ ಸೌಂದರ್ಯವನ್ನು ಸವಿದರು.
ಈ ವೇಳೆ ಜಾರ್ಖಂಡ್ ರಾಜ್ಯದ ಬಗ್ಗೆ ಜನರಲ್ಲಿದ್ದ ಹಳೆಯ ಕಲ್ಪನೆಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ ಅವರು, ಜನರು ಅಂದುಕೊಳ್ಳುವುದಕ್ಕಿಂತ ಜಾರ್ಖಂಡ್ ಅತ್ಯಂತ ಸುಂದರವಾಗಿದೆ. ನನಗೆ ಯಾರೂ ಈ ನಗರವನ್ನು ಸೂಚಿಸಿರಲಿಲ್ಲ, ಆದರೆ ನಾನು ಭೇಟಿ ನೀಡಿದ್ದಕ್ಕೆ ನಿಜಕ್ಕೂ ಧನ್ಯತಾಭಾವ ಮೂಡಿದೆ. ಇದು ಪ್ರಚಾರ ಸಿಗದ ಒಂದು ನೈಜ ರತ್ನ ಎಂದು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ನೆಟ್ಟಿಗರಿಂದ ಹರಿದುಬಂದ ಶ್ಲಾಘನೆ!

ಟೋನಿ ಹಂಚಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆಯೇ ಅನೇಕ ಬಳಕೆದಾರರನ್ನು ಸೆಳೆಯಿತು. ಬಳಕೆದಾರರೊಬ್ಬರು "ನಮ್ಮ ಸುಂದರ ಹಾಗೂ ಸ್ವಚ್ಛ ನಗರಕ್ಕೆ ನಿಮಗೆ ಆತ್ಮೀಯ ಸ್ವಾಗತ, ಒಬ್ಬ ಜಮ್‌ಶೆಡ್‌ಪುರ ನಿವಾಸಿಯಾಗಿ ನನಗೆ ಹೆಮ್ಮೆಯಾಗುತ್ತಿದೆ" ಎಂದು ಬರೆದುಕೊಂಡಿದ್ದರೆ, ಮತ್ತೊಬ್ಬರು "ಒಂದೇ ದಿನದಲ್ಲಿ ಇಡೀ ನಗರದ ಸೌಂದರ್ಯವನ್ನು ಎಷ್ಟು ಚೊಕ್ಕವಾಗಿ ತೋರಿಸಿದ್ದೀರ!" ಎಂದು ಶ್ಲಾಘಿಸಿದ್ದಾರೆ. ಇನ್ನು ಕೆಲವರು ತಮಾಷೆಯಾಗಿ, ಈ ವ್ಯಕ್ತಿ ಶೀಘ್ರದಲ್ಲೇ ಜಾರ್ಖಂಡ್‌ನ ಪ್ರತಿಯೊಂದು ಮೂಲೆಯನ್ನೂ ಜಗತ್ತಿಗೆ ಪರಿಚಯಿಸಲಿದ್ದಾರೆ ಎಂದು ಕಮೆಂಟ್ ಮಾಡುವ ಮೂಲಕ ವೀಡಿಯೋಗೆ ಬೆಂಬಲ ಸೂಚಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net