Fire Accident: ವೃದ್ಧಾಶ್ರಮದಲ್ಲಿ ಭೀಕರ ಅಗ್ನಿ ದುರಂತ: 12 ಮಂದಿ ಸಾವು, ಮ್ಯಾನೇಜರ್ ಬಂಧನ!

Fire Accident
Fire Accident
Published on
ಕೊಲಂಬೊ: ಶ್ರೀಲಂಕಾದ ವೃದ್ಧಾಶ್ರಮವೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ 12 ನಿವಾಸಿಗಳು ಸಜೀವ ದಹನವಾಗಿದ್ದು, ಆರು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ಆರೋಪದ ಮೇಲೆ ವೃದ್ಧಾಶ್ರಮದ ಮ್ಯಾನೇಜರ್‌ನನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ 'ಮೌಪಿಯ ಸೇವನ ಎಲ್ಡರ್ಸ್ ಹೋಮ್' (Maupiya Sewana Elders Home) ಎಂಬ ಆಶ್ರಮದಲ್ಲಿ ಬುಧವಾರ ತಡರಾತ್ರಿ ಈ ದುರಂತ ಸಂಭವಿಸಿದೆ. ಸ್ಥಳಕ್ಕೆ ಧಾವಿಸಿದ ವಿಧಿವಿಜ್ಞಾನ ತಜ್ಞರು ಮತ್ತು ರಕ್ಷಣಾ ಸಿಬ್ಬಂದಿ ಕಟ್ಟಡದ ಅವಶೇಷಗಳನ್ನು ಜಾಲಾಡುವಾಗ ಇಂದು ಇನ್ನೂ ಏಳು ಸುಟ್ಟ ದೇಹಗಳು ಪತ್ತೆಯಾಗಿವೆ. ಇದರೊಂದಿಗೆ ಒಟ್ಟು ಮೃತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಬಂಧಿತ ಮ್ಯಾನೇಜರ್‌ನನ್ನು ಕರೆತಂದು ತನಿಖೆ ನಡೆಸುತ್ತಿದ್ದು, ಬದುಕುಳಿದ ನಿವಾಸಿಗಳು ಹಾಗೂ ಸ್ಥಳೀಯರಿಂದ ಮಾಹಿತಿ ಕಲೆಹಾಕುತ್ತಿದ್ದಾರೆ.

ಮಾನಸಿಕ ಅಸ್ವಸ್ಥರೂ ಇದ್ದರು

ಈ ಆಶ್ರಮದಲ್ಲಿ ಕೇವಲ ವಯೋವೃದ್ಧರಷ್ಟೇ ಅಲ್ಲದೆ, ಮಾನಸಿಕ ಕಾಯಿಲೆಗಳಿಂದ ಬಳಲುತ್ತಿದ್ದ ಯುವಕರಿಗೂ ಆಶ್ರಯ ನೀಡಲಾಗಿತ್ತು. ಮೃತರಲ್ಲಿ ಅತ್ಯಂತ ಕಿರಿಯ ವಯಸ್ಸಿನ 17 ವರ್ಷದ ಬಾಲಕನೂ ಸೇರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ವಕ್ತಾರ ಫ್ರೆಡ್ರಿಕ್ ವೂಟ್ಲರ್ ಮಾತನಾಡಿ, "ಬುಧವಾರ ರಾತ್ರಿ ಆಶ್ರಮದಿಂದ ಒಟ್ಟು 51 ನಿವಾಸಿಗಳು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಸದ್ಯ ಅವರೆಲ್ಲರನ್ನೂ ಸಮೀಪದ ಸರ್ಕಾರಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದ್ದು, ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ. ಶಾರ್ಟ್ ಸರ್ಕ್ಯೂಟ್ ಅಥವಾ ಬೇರೆನಾದರೂ ಕಾರಣವಿದೆಯೇ ಎಂಬ ನಿಟ್ಟಿನಲ್ಲಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net