

ವಾಷಿಂಗ್ಟನ್: ಪ್ರಪಂಚದ ನಂ. 01 ಶ್ರೀಮಂತ ಎಲಾನ್ ಮಸ್ಕ್ ಒಡೆತನದ ಸ್ಪೇಸ್‌ಎಕ್ಸ್ ಶನಿವಾರ(ನ. 14) ಇತಿಹಾಸ ನಿರ್ಮಿಸಿದ್ದು, ತನ್ನ ಬಾಹ್ಯಾಕಾಶ ನೌಕೆ ಸ್ಟಾರ್ಶಿಪ್ ಅನ್ನು ಸುರಕ್ಷಿತವಾಗಿ ಮತ್ತು ಯಶಸ್ವಿಯಾಗಿ ಮೊದಲ ಬಾರಿಗೆ ಭೂಮಿಗೆ ಇಳಿಸಿದೆ. ಆ ಸಂದರ್ಭದ ವಿಡಿಯೋವನ್ನು ಸ್ಪೇಸ್ ಎಕ್ಸ್ ಹಂಚಿಕೊಂಡಿದೆ.
ಟೆಕ್ಸಾಸ್ನ ಸ್ಟಾರ್‌ಬೇಸ್ ಕೇಂದ್ರದಲ್ಲಿರುವ ಉಡಾವಣಾ ಗೋಪುರದ ಮೇಲೆ ಅಳವಡಿಸಿರುವ ಚಾಪ್‌ಸ್ಟಿಕ್ ಎಂಬ ಯಾಂತ್ರಿಕ ತೋಳುಗಳ ಮಧ್ಯೆ ಸ್ಟಾರ್ಶಿಪ್ ಸುರಕ್ಷಿತವಾಗಿ ಇಳಿಸಲಾಗಿದೆ. ಕಕ್ಷೆಗೆ ತೆರಳಿ ಭೂಮಿಗೆ ಮರಳಿದ ಸ್ಟಾರ್‌ಶಿಪ್‌ನ ಮೇಲ್ಭಾಗದ ಘಟಕವನ್ನು ಉಡಾವಣಾ ಸ್ಥಳದಲ್ಲೇ ಮರಳಿ ಪಡೆದಿದ್ದು ಇದೇ ಮೊದಲ ಬಾರಿಯಾಗಿದೆ.
ವಿಶ್ವದ ಅತ್ಯಂತ ಶಕ್ತಿಶಾಲಿ ರಾಕೆಟ್ ಅನ್ನು ಸಂಪೂರ್ಣವಾಗಿ ಮತ್ತು ತ್ವರಿತವಾಗಿ ಮರುಬಳಕೆ ಮಾಡಬಲ್ಲಂತೆ ರೂಪಿಸುವ ಸ್ಪೇಸ್‌ಎಕ್ಸ್‌ನ ಗುರಿಯತ್ತ ಇದು ಒಂದು ಮಹತ್ವದ ಹೆಜ್ಜೆಯಾಗಿದೆ.
ಶುಕ್ರವಾರ ಟೆಕ್ಸಾಸ್ 'ಸ್ಟಾರ್‌ಬೇಸ್' ಉಡಾವಣೆ ಕೇಂದ್ರದಿಂದ ಉಡಾವಣೆಗೊಂಡಿದ್ದ 'ಸ್ಟಾರ್ಶಿಪ್ 42' ಬಾಹ್ಯಾಕಾಶದಲ್ಲಿ 22 ಗಂಟೆಗಳಿಗೂ ಹೆಚ್ಚು ಸಮಯ ಕಳೆದ ಬಳಿಕ ಭಾರತೀಯ ಕಾಲಮಾನ ಸುಮಾರು ಬೆಳಗಿನ ಜಾವ 2:52ಕ್ಕೆ ಇಳಿಯಿತು. ಕಕ್ಷೆಯಲ್ಲಿದ್ದ ಅವಧಿಯಲ್ಲಿ ಸ್ಟಾರ್ ಶಿಪ್ 42 ನೌಕೆ ಭೂಮಿಯ ಸುತ್ತ ಸುಮಾರು 14 ಸುತ್ತುಗಳನ್ನು ಸುತ್ತಿದ್ದು, ಮುಂದಿನ ಪೀಳಿಗೆಯ 26 'ಸ್ಟಾರ್‌ಲಿಂಕ್ ವಿ3' ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದೆ.
ಮೂರು ಉಪಗ್ರಹಗಳು ಬಾಹ್ಯಾಕಾಶ ನೌಕೆಯ ಶಾಖ ಕವಚ ಮತ್ತು ಇತರ ಯಂತ್ರಾಂಶಗಳನ್ನು ಪರೀಕ್ಷಿಸಲು ಕ್ಯಾಮೆರಾಗಳನ್ನು ಹೊತ್ತೊಯ್ದಿದ್ದವು. ಇದು ಎಂಜಿನಿಯರ್‌ಗಳು ಹಿಂದಿರುಗುವ ಪ್ರಯಾಣಕ್ಕೆ ಅದರ ಸಿದ್ಧತೆಯನ್ನು ನಿರ್ಣಯಿಸಲು ಸಹಾಯ ಮಾಡಿತು ಎನ್ನಲಾಗಿದೆ (ಏಜೆನ್ಸೀಸ್).