

ಭಾರತದಲ್ಲಿರುವಂತೆ ಅಮೆರಿಕದಲ್ಲಿ ಕೇಂದ್ರೀಯ ಚುನಾವಣಾ ಆಯೋಗವಿಲ್ಲ. ಅಲ್ಲಿನ ರಾಜ್ಯ ಮತ್ತು ಸ್ಥಳೀಯ ಆಡಳಿತಗಳು ಚುನಾವಣೆಗಳನ್ನು ನಡೆಸುತ್ತವೆ ಹಾಗೂ ವೋಟರ್ ಐಡಿ ನಿಯಮಗಳು ಪ್ರತಿ ರಾಜ್ಯಕ್ಕೂ ಭಿನ್ನವಾಗಿವೆ. ಹೊಸ ನಿಯಮ ಜಾರಿಯಾದರೆ ಮತದಾನದ ನೋಂದಣಿಗೆ ಪಾಸ್ಪೋರ್ಟ್, ಜನನ ಪ್ರಮಾಣಪತ್ರ ಅಥವಾ ಪೌರತ್ವದ ಪುರಾವೆ ನೀಡಬೇಕಾಗುತ್ತದೆ; ಮತದಾನದ ವೇಳೆ ಫೋಟೋ ಐಡಿ ಕಡ್ಡಾಯವಾಗುತ್ತದೆ. ಫೆಡರಲ್ ಮತದಾರರ ನೋಂದಣಿ ಫಾರ್ಮ್ಗಳಲ್ಲಿ ಪೌರತ್ವದ ದಾಖಲಾತಿ ಪುರಾವೆ ಮತ್ತು ಚುನಾವಣಾ ಆಡಳಿತದಲ್ಲಿ ಇತರ ಬದಲಾವಣೆಗಳನ್ನು ತರುವ ಕಾರ್ಯಕಾರಿ ಆದೇಶಕ್ಕೆ ಟ್ರಂಪ್ 2025ರ ಮಾರ್ಚ್ನಲ್ಲಿ ಸಹಿ ಹಾಕಿದ್ದರು.
ಅಮೆರಿಕದಲ್ಲಿ 2024ರಲ್ಲಿ 21.1 ಕೋಟಿ ಸಕ್ರಿಯ ನೋಂದಾಯಿತ ಮತದಾರರಿದ್ದರು. ಅಮೆರಿಕದ ಸಂಶೋಧನಾ ಸಂಸ್ಥೆ ಬಿಪಿಸಿ ಪ್ರಕಾರ, ಶೇ.12ರಷ್ಟು ಮತದಾರರ ಬಳಿ (ಪ್ರತಿ 8ನೇ ವ್ಯಕ್ತಿ) ಪೌರತ್ವ ಸಾಬೀತು ಪಡಿಸುವ ಅಗತ್ಯ ದಾಖಲೆಗಳು ಲಭ್ಯವಿಲ್ಲ. ಇದರಿಂದ ಮಹಿಳೆಯರು, ವಲಸಿಗರು ಮತ್ತು ತೃತೀಯಲಿಂಗಿಗಳು ಹೆಚ್ಚು ಪ್ರಭಾವಕ್ಕೊಳಗಾಗಲಿದ್ದಾರೆ.
ಒತ್ತಡ ಹೇರುತ್ತಿದ್ದಾರೆ?
ಅಮೆರಿಕದಲ್ಲಿ 2026ರ ನವೆಂಬರ್ನಲ್ಲಿ ಮಧ್ಯಂತರ ಚುನಾವಣೆ ನಡೆಯಲಿದೆ. ಟ್ರಂಪ್ ಅವರ ಅನುಮೋದನೆ ರೇಟಿಂಗ್ (Approval Rating) ಶೇ.33ರಷ್ಟಿದ್ದು, ಶೇ.64ರಷ್ಟು ಜನರು ಅವರ ಕಾರ್ಯವೈಖರಿಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ವೋಟರ್ ಐಡಿ ನಿಯಮವು ರಿಪಬ್ಲಿಕನ್ ಬೆಂಬಲಿಗರಿಗೆ ಪ್ರಮುಖ ಚುನಾವಣಾ ವಿಷಯವಾಗಿದೆ.
ಹೌದು, ಭಾರತದಲ್ಲಿನ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಮತ್ತು ಟ್ರಂಪ್ ತರಲು ಬಯಸುತ್ತಿರುವ ಕಾನೂನಿನ ನಡುವೆ ಸಾಮ್ಯತೆಗಳಿವೆ. ಅಮೆರಿಕದ ಚುನಾವಣಾ ವ್ಯವಸ್ಥೆಯು ಭಾರತಕ್ಕಿಂತ ಬಹಳ ಭಿನ್ನವಾಗಿದೆ ಮತ್ತು ಸೇವ್ ಅಮೆರಿಕ ಆಕ್ಟ್ ಮಸೂದೆಯ ಆಶಯಗಳು ಬಹುತೇಕ ‘ಎಸ್ಐಆರ್’ನಂತೆಯೇ ಇವೆ. ಪೌರತ್ವ, ಮತದಾರರ ಅರ್ಹತೆ, ಪಾರದರ್ಶಕ ಮತದಾರರ ಪಟ್ಟಿ, ಗುರುತಿಸುವಿಕೆ ಮತ್ತು ಮತದಾನಕ್ಕೆ ಯಾರಿಗೆ ಅವಕಾಶ ನೀಡಬೇಕು ಎಂಬ ಕಳವಳಗಳು ಇಲ್ಲಿ ಸಮಾನವಾಗಿ ಕಂಡುಬರುವ ವಿಷಯಗಳಾಗಿವೆ.
ಭಾರತದ ಎಸ್ಐಆರ್ ಮೂಲಭೂತವಾಗಿ ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಪ್ರಕ್ರಿಯೆಯಾಗಿದೆ. ಅರ್ಹ ನಾಗರಿಕರನ್ನು ಸೇರಿಸುವುದನ್ನು ಖಚಿತಪಡಿಸಿ ಕೊಳ್ಳುವುದು ಮತ್ತು ಮೃತಪಟ್ಟವರು, ಸ್ಥಳಾಂತರಗೊಂಡವರು, ನಕಲಿ ಮತ್ತು ಇತರ ಅನರ್ಹ ಮತದಾರರನ್ನು (ಪೌರರಲ್ಲದವರೂ ಸೇರಿದಂತೆ) ಪಟ್ಟಿಯಿಂದ ತೆಗೆದುಹಾಕುವುದು ಇದರ ಮುಖ್ಯ ಉದ್ದೇಶವಾಗಿದೆ. ‘ಸೇವ್ ಅಮೆರಿಕ’ ಮಸೂದೆ ಈ ವಿಷಯವನ್ನು ವಿಭಿನ್ನವಾಗಿ ನಿಭಾಯಿಸಿದರೂ, ಭಾರತದಂತೆಯೇ ಪೌರತ್ವವು ಇದರ ಕೇಂದ್ರಬಿಂದುವಾಗಿದೆ. ಇದು ಫೆಡರಲ್ ಚುನಾವಣೆಗಳಿಗೆ ನೋಂದಾಯಿಸುವ ಮೊದಲು ವ್ಯಕ್ತಿಯು ಅಮೆರಿಕದ ಪ್ರಜೆ ಎಂಬುದಕ್ಕೆ ದಾಖಲಾತಿ ಪುರಾವೆಯನ್ನು ಕಡ್ಡಾಯಗೊಳಿಸಲು ಬಯಸುತ್ತದೆ ಮತ್ತು ಮತದಾರರ ಪಟ್ಟಿಯಲ್ಲಿರುವ ಅಮೆರಿಕನ್ನರಲ್ಲದವರನ್ನು ಗುರುತಿಸುವ ಕಾರ್ಯವಿಧಾನಗಳನ್ನು ಸೂಚಿಸುತ್ತದೆ. ಆದ್ದರಿಂದ ಸಾಮಾನ್ಯ ಉದ್ದೇಶವು ಒಂದೇ ಆಗಿದೆ. ಎರಡೂ ವ್ಯವಸ್ಥೆಗಳು ಮತದಾರರ ಪಟ್ಟಿಯು ಅರ್ಹತಾ ಮಾನದಂಡಗಳು ಮತ್ತು ಪೌರತ್ವದ ಕಟ್ಟುನಿಟ್ಟಾದ ಪರಿಶೀಲನೆಯನ್ನು ಆಧರಿಸಿರಬೇಕು ಎಂದು ಒತ್ತಿಹೇಳುತ್ತವೆ.
ಕೆಳಮನೆಯಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ 2026ರ ಫೆಬ್ರವರಿಯಲ್ಲಿ ‘ಸೇವ್ ಅಮೆರಿಕ’ ಮಸೂದೆಯನ್ನು ಅನುಮೋದಿಸಿದೆ. ಮೇಲ್ಮನೆಯಾದ ಸೆನೆಟ್ನಲ್ಲಿ ರಿಪಬ್ಲಿಕನ್ನರು 53 ಸ್ಥಾನಗಳನ್ನು ಹೊಂದಿದ್ದು, ಸಾಮಾನ್ಯವಾಗಿ ಮಸೂದೆಗೆ 60 ಮತಗಳು ಬೇಕಾಗುತ್ತವೆ. ಮಸೂದೆ ಅಲ್ಲಿ ಅಡಚಣೆ ಎದುರಿಸಿದರೆ, ಟ್ರಂಪ್ ಸೆನೆಟ್ ನಿಯಮಗಳನ್ನು ಬದಲಾಯಿಸಲು ಒತ್ತಡ ಹೇರಬಹುದು, ರಾಜ್ಯಗಳಿಗೆ ಆರ್ಥಿಕ ಪೋ›ತ್ಸಾಹ ನೀಡಬಹುದು ಅಥವಾ ಎಕ್ಸಿಕ್ಯೂಟಿವ್ ಆರ್ಡರ್ ಮೊರೆ ಹೋಗಬಹುದು. ಆದರೆ ಅಮೆರಿಕ ಸಂಸತ್ತಿನ ಅನುಮೋದನೆಯಿಲ್ಲದೆ ದೇಶಾದ್ಯಂತ ಏಕರೂಪದ ವೋಟರ್ ಐಡಿ ಕಾನೂನನ್ನು ಜಾರಿಗೆ ತರುವುದು ಕಷ್ಟಕರವಾಗಿದೆ.
‘ಸೇವ್ ಅಮೆರಿಕ’ ಮಸೂದೆಯ ಪರವಾಗಿ ಶ್ವೇತಭವನವು ಭಾರತ ಮತ್ತು ಬ್ರೆಜಿಲ್ನ ಚುನಾವಣಾ ವ್ಯವಸ್ಥೆಗಳನ್ನು ಸ್ಪಷ್ಟವಾಗಿ ಬಳಸಿಕೊಂಡು, ಅಮೆರಿಕದ ನಿಯಮಗಳು ಅತಿಯಾದ ಸಡಿಲಿಕೆಯಿಂದ ಕೂಡಿವೆ ಎಂದು ವಾದಿಸುತ್ತಿದೆ. ಭಾರತ ಮತ್ತು ಬ್ರೆಜಿಲ್ ಮತದಾರರ ಗುರುತಿನ ಚೀಟಿಯನ್ನು ಬಯೋಮೆಟ್ರಿಕ್ ಡೇಟಾಬೇಸ್ಗೆ ಜೋಡಿಸುತ್ತವೆ ಎಂದು ಹೇಳುವ ಮೂಲಕ ಯುಎಸ್ನಲ್ಲಿರುವ ಪೌರತ್ವ ಸ್ವಯಂ-ದೃಢೀಕರಣಕ್ಕೆ ಇದನ್ನು ಹೋಲಿಸಿದೆ. ಸೇವ್ ಅಮೆರಿಕ ಮಸೂದೆಯು ಫೆಡರಲ್ ಮತದಾರರ ನೋಂದಣಿಗೆ ಪೌರತ್ವದ ದಾಖಲಾತಿ ಪುರಾವೆಯನ್ನು ಕಡ್ಡಾಯಗೊಳಿಸುತ್ತದೆ ಮತ್ತು ಮತದಾರರ ಗುರುತಿಗೆ ಕಠಿಣವಾದ ನಿಯಮಗಳನ್ನು ವಿಧಿಸುತ್ತದೆ.
ಮುಖ್ಯವಾಗಿ, ಅಂಚೆ ಮತದಾನದ ಮೇಲೆ ಕಠಿಣ ನಿರ್ಬಂಧಗಳನ್ನು ಹೇರುವುದು ಟ್ರಂಪ್ ಯೋಜನೆಯಾಗಿದೆ. ಅಮೆರಿಕ ಜನಗಣತಿ ಬ್ಯೂರೋ ಪ್ರಕಾರ, 2024 ರ ಅಧ್ಯಕ್ಷೀಯ ಚುನಾವಣೆಯಲ್ಲಿ 29% ಮತದಾರರು ಅಂಚೆ ಮತದಾನದ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದರು. ಭಾರತದ ಅಂಕಿಅಂಶಗಳೊಂದಿಗೆ ಹೋಲಿಸಿದರೆ, ಭಾರತೀಯ ಚುನಾವಣಾ ಆಯೋಗದ ಪ್ರಕಾರ ಚಲಾವಣೆಯಾದ ಒಟ್ಟು ಮತಗಳಲ್ಲಿ 0.66% ಮಾತ್ರ ಅಂಚೆ ಮತಪತ್ರಗಳಾಗಿದ್ದವು. ಚುನಾವಣಾ ವಂಚನೆಯನ್ನು ತಡೆಗಟ್ಟಲು ಮತ್ತು ಅಮೆರಿಕದ ಪ್ರಜೆಗಳಲ್ಲದವರು ಯುಎಸ್ ಚುನಾವಣೆಗಳ ಮೇಲೆ ಪ್ರಭಾವ ಬೀರುವುದನ್ನು ನಿಲ್ಲಿಸಲು ಈ ಕ್ರಮಗಳು ಅಗತ್ಯ ಎಂಬುದು ಟ್ರಂಪ್ ವಾದವಾಗಿದೆ.
ಟ್ರಂಪ್ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಪವನ್ ಖೇರಾ ವ್ಯಂಗ್ಯವಾಡಿದ್ದಾರೆ. ‘ಡಿಯರ್ ಡೊನಾಲ್ಡ್ ಟ್ರಂಪ್, ಜ್ಞಾನೇಶ್ ಕುಮಾರ್ ಅವರನ್ನು ಅಮೆರಿಕಕ್ಕೆ ಕರೆದುಕೊಂಡು ಹೋಗಿ, ಅಲ್ಲೇ ಇರಿಸಿಕೊಳ್ಳಿ. ನಾವು ಮುಂದಿನ ಲಭ್ಯವಿರುವ ವಿಮಾನದಲ್ಲೇ ಇವಿಎಂ ಯಂತ್ರಗಳನ್ನೂ ಕಳುಹಿಸಿಕೊಡುತ್ತೇವೆ’ ಎಂದು ‘ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.