ಬ್ರೆಜಿಲ್‌ಗೆ ಆರಂಭಿಕ ಪಂದ್ಯಕ್ಕೂ ಮುನ್ನ ಶಾಕ್: ಮೊರಾಕ್ಕೊ ವಿರುದ್ಧ ನೇಮರ್ ಅಲಭ್ಯ! | Neymar

Neymar
Neymar
Published on
ಬ್ರೆಜಿಲ್​​: ಫಿಫಾ ವಿಶ್ವಕಪ್ 2026ರಲ್ಲಿ ಬ್ರೆಜಿಲ್ ತಂಡಕ್ಕೆ ಆರಂಭದಲ್ಲೇ ದೊಡ್ಡ ಹಿನ್ನಡೆ ಎದುರಾಗಿದೆ. ತಂಡದ ಸ್ಟಾರ್ ಆಟಗಾರ ನೇಮರ್ ಜೂನಿಯರ್ (Neymar) ಗಾಯದ ಕಾರಣದಿಂದ ಮೊರಾಕ್ಕೊ ವಿರುದ್ಧದ ಮೊದಲ ಪಂದ್ಯದಲ್ಲಿ ಆಡಲು ಸಾಧ್ಯವಾಗುವುದಿಲ್ಲ ಎಂದು ಬ್ರೆಜಿಲ್ ತಂಡದ ಮುಖ್ಯ ಕೋಚ್ ಕಾರ್ಲೊ ಅನ್‌ಚೆಲೋಟಿ ಸ್ಪಷ್ಟಪಡಿಸಿದ್ದಾರೆ.
ಭಾರತೀಯ ಕಾಲಮಾನ ಪ್ರಕಾರ ಭಾನುವಾರ ನಡೆಯಲಿರುವ ಈ ಪಂದ್ಯಕ್ಕೆ ನೇಮರ್ ಲಭ್ಯರಾಗುವುದಿಲ್ಲ. ಕಾಲಿನ ಸ್ನಾಯು ಗಾಯದಿಂದ ಬಳಲುತ್ತಿರುವ ಅವರು ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಆದರೆ ಬ್ರೆಜಿಲ್ ಅಭಿಮಾನಿಗಳಿಗೆ ಸಮಾಧಾನಕರ ಸುದ್ದಿಯನ್ನೂ ಅನ್‌ಚೆಲೋಟಿ ನೀಡಿದ್ದಾರೆ. ನೇಮರ್ ಚೇತರಿಕೆಯ ದಾರಿಯಲ್ಲಿ ಉತ್ತಮ ಪ್ರಗತಿ ಸಾಧಿಸುತ್ತಿದ್ದು, ಶೀಘ್ರದಲ್ಲೇ ತಂಡದೊಂದಿಗೆ ಅಭ್ಯಾಸ ಆರಂಭಿಸುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
"ನೇಮರ್ ಸಾಧ್ಯವಾದಷ್ಟು ಬೇಗ ಚೇತರಿಸಿಕೊಳ್ಳಲು ಕಠಿಣ ಪರಿಶ್ರಮ ಪಡುತ್ತಿದ್ದಾರೆ. ಅವರ ಫುಟ್‌ಬಾಲ್ ಸಾಮರ್ಥ್ಯದ ಬಗ್ಗೆ ಯಾವುದೇ ಅನುಮಾನವಿಲ್ಲ. ಜೊತೆಗೆ ಯುವ ಆಟಗಾರರಿಗೆ ಅವರ ಅನುಭವ ಮತ್ತು ಮಾರ್ಗದರ್ಶನ ತುಂಬಾ ಮುಖ್ಯವಾಗಿದೆ" ಎಂದು ಅನ್‌ಚೆಲೋಟಿ ತಿಳಿಸಿದ್ದಾರೆ.
ನೇಮರ್ 2023ರ ಬಳಿಕ ಬ್ರೆಜಿಲ್ ಪರ ಯಾವುದೇ ಪಂದ್ಯ ಆಡಿಲ್ಲ. ಮೇ ತಿಂಗಳ ಮಧ್ಯಭಾಗದಲ್ಲಿ ಅವರಿಗೆ ಬಲ ಕಾಲಿನ ಸ್ನಾಯು ಗಾಯವಾಗಿತ್ತು. ಇದರಿಂದ ವಿಶ್ವಕಪ್‌ಗೆ ಅವರು ಸಿದ್ಧರಾಗುವರೇ ಎಂಬ ಪ್ರಶ್ನೆಗಳು ಮೂಡಿದ್ದವು. ಆದರೂ ಅವರ ಅನುಭವವನ್ನು ಗಮನದಲ್ಲಿಟ್ಟುಕೊಂಡು ಬ್ರೆಜಿಲ್ ತಂಡದ ಆಯ್ಕೆ ಸಮಿತಿ ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಿತ್ತು.
ಈಗ ನೇಮರ್ ಮುಂದಿನ ವಾರದಿಂದ ಅಭ್ಯಾಸ ಆರಂಭಿಸುವ ನಿರೀಕ್ಷೆ ಇದೆ. ಅವರ ಚೇತರಿಕೆ ಇದೇ ರೀತಿ ಮುಂದುವರಿದರೆ ಜೂನ್ 19ರಂದು ನಡೆಯಲಿರುವ ಹೈಟಿ ವಿರುದ್ಧದ ಬ್ರೆಜಿಲ್‌ನ ಎರಡನೇ ಗುಂಪು ಹಂತದ ಪಂದ್ಯದಲ್ಲಿ ಅವರು ಕಣಕ್ಕಿಳಿಯುವ ಸಾಧ್ಯತೆ ಇದೆ.
ಬ್ರೆಜಿಲ್ ತನ್ನ ಕೊನೆಯ ಗುಂಪು ಹಂತದ ಪಂದ್ಯವನ್ನು ಜೂನ್ 24ರಂದು ಸ್ಕಾಟ್ಲೆಂಡ್ ವಿರುದ್ಧ ಆಡಲಿದೆ. ಈ ಪಂದ್ಯದಲ್ಲೂ ನೇಮರ್ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.
34 ವರ್ಷದ ನೇಮರ್ ಈಗಾಗಲೇ ಮೂರು ವಿಶ್ವಕಪ್‌ಗಳಲ್ಲಿ ಬ್ರೆಜಿಲ್ ತಂಡವನ್ನು ಪ್ರತಿನಿಧಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಗಾಯದ ಸಮಸ್ಯೆ ಅವರನ್ನು ಕಾಡುತ್ತಿದ್ದರೂ, ಬ್ರೆಜಿಲ್ ತಂಡದ ಇತಿಹಾಸದಲ್ಲಿ ಅತಿ ಹೆಚ್ಚು ಗೋಲು ಗಳಿಸಿರುವ ಆಟಗಾರ ಎಂಬ ಹೆಗ್ಗಳಿಕೆ ಅವರಿಗೆ ಇದೆ.
ಈ ಕಾರಣದಿಂದಲೇ ಅನ್‌ಚೆಲೋಟಿ ಅವರ ವಿಶ್ವಕಪ್ ಯೋಜನೆಯಲ್ಲಿ ನೇಮರ್ ಪ್ರಮುಖ ಸ್ಥಾನ ಪಡೆದಿದ್ದಾರೆ. ಹಲವು ವರ್ಷಗಳಿಂದ ವಿಶ್ವಕಪ್ ಟ್ರೋಫಿಗಾಗಿ ಕಾಯುತ್ತಿರುವ ಬ್ರೆಜಿಲ್, ಈ ಬಾರಿ ಆರನೇ ಬಾರಿ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net