ಪಾಕಿಸ್ತಾನಕ್ಕೆ ನಡುಕ, ಭಾರತಕ್ಕೆ ಬೆಂಬಲ! ಪಾಕ್​ನ ಅತಿದೊಡ್ಡ ರಫ್ತೇ ಭಯೋತ್ಪಾದನೆ! ಟ್ರಂಪ್ ಆಪ್ತೆಯ ಮಾತು ಕೇಳಿ ಬೆಚ್ಚಿಬಿದ್ದ ನೆರೆರಾಷ್ಟ್ರ! Laura Loomer

ಪಾಕಿಸ್ತಾನಕ್ಕೆ ನಡುಕ, ಭಾರತಕ್ಕೆ ಬೆಂಬಲ! ಪಾಕ್​ನ ಅತಿದೊಡ್ಡ ರಫ್ತೇ ಭಯೋತ್ಪಾದನೆ! ಟ್ರಂಪ್ ಆಪ್ತೆಯ ಮಾತು ಕೇಳಿ ಬೆಚ್ಚಿಬಿದ್ದ ನೆರೆರಾಷ್ಟ್ರ!
ಪಾಕಿಸ್ತಾನಕ್ಕೆ ನಡುಕ, ಭಾರತಕ್ಕೆ ಬೆಂಬಲ! ಪಾಕ್​ನ ಅತಿದೊಡ್ಡ ರಫ್ತೇ ಭಯೋತ್ಪಾದನೆ! ಟ್ರಂಪ್ ಆಪ್ತೆಯ ಮಾತು ಕೇಳಿ ಬೆಚ್ಚಿಬಿದ್ದ ನೆರೆರಾಷ್ಟ್ರ!
Published on
ನವದೆಹಲಿ: ಜಗತ್ತಿಗೆ ಪಾಕಿಸ್ತಾನ ನೀಡುತ್ತಿರುವ ಅತಿದೊಡ್ಡ ಕೊಡುಗೆ ಎಂದರೆ ಅದು ಇಸ್ಲಾಮಿಕ್ ಭಯೋತ್ಪಾದನೆ. ಇಂತಹ ರಾಷ್ಟ್ರದೊಂದಿಗೆ ಅಮೆರಿಕ ಮೃದು ಧೋರಣೆ ತಳೆಯಬಾರದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ಸಲಹೆಗಾರ್ತಿ ಹಾಗೂ ರಾಜಕೀಯ ಕಾರ್ಯಕರ್ತೆ ಲಾರಾ ಲೂಮರ್(Laura Loomer) ಗುಡುಗಿದ್ದಾರೆ.
ಈ ಬಗ್ಗೆ ನವದೆಹಲಿಯಲ್ಲಿ ನಡೆದ ಇಂಡಿಯಾ ಟುಡೇ ಕಾಂಕ್ಲೇವ್ 2026'ರಲ್ಲಿ ಪಾಲ್ಗೊಂಡು ಮಾತನಾಡಿದ ಲಾರಾ, ಪಾಕಿಸ್ತಾನದ ಜಿಹಾದಿ ಮನಸ್ಥಿತಿ ಮತ್ತು ಜಾಗತಿಕ ಭಯೋತ್ಪಾದನೆಯಲ್ಲಿ ಅದರ ಪಾತ್ರದ ಬಗ್ಗೆ ಸಂಚಲನ ಮೂಡಿಸುವಂತಹ ಹೇಳಿಕೆಗಳನ್ನು ನೀಡಿದ್ದಾರೆ.

ಪಾಕಿಸ್ತಾನದ ವಿರುದ್ಧ ಲಾರಾ ವಾಗ್ದಾಳಿ

ಲೂಮರ್ ತಮ್ಮ ಭಾಷಣದುದ್ದಕ್ಕೂ ಪಾಕಿಸ್ತಾನವನ್ನು ಖುಲ್ಲಂಖುಲ್ಲಾ ಜಿಹಾದಿ ರಾಷ್ಟ್ರ ಎಂದು ಕರೆದಿದ್ದಾರೆ. ವಿಶ್ವದ ಯಾವುದೇ ಮೂಲೆಯಲ್ಲಿ ಇಸ್ಲಾಮಿಕ್ ಭಯೋತ್ಪಾದನಾ ದಾಳಿ ನಡೆದರೂ, ಅದರ ಬೇರುಗಳು ಪಾಕಿಸ್ತಾನದಲ್ಲಿ ಕಂಡುಬರುತ್ತವೆ. ಭಾರತ ಮತ್ತು ಬ್ರಿಟನ್‌ನಲ್ಲಿ ಇತ್ತೀಚೆಗೆ ನಡೆದ ದಾಳಿಗಳ ಹಿಂದೆ ಪಾಕಿಸ್ತಾನದ ಉಗ್ರಗಾಮಿ ಜಾಲಗಳ ಕೈವಾಡವಿದೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ವಿಶೇಷವಾಗಿ, ಡೊನಾಲ್ಡ್ ಟ್ರಂಪ್ ಅವರ ಹತ್ಯೆಗೆ ಸಂಚು ರೂಪಿಸಿದ್ದ ಪಾಕಿಸ್ತಾನಿ ಪ್ರಜೆ ಆಸಿಫ್ ಮರ್ಚೆಂಟ್ ಪ್ರಕರಣವನ್ನು ಉಲ್ಲೇಖಿಸಿದ ಲೂಮರ್, ಭಯೋತ್ಪಾದನೆಯ ಬಹುಪಾಲು ಭಾಗ ಪಾಕಿಸ್ತಾನದಿಂದಲೇ ಹೊರಹೊಮ್ಮುತ್ತಿದೆ ಎಂಬುದು ಈ ಘಟನೆಯಿಂದ ಸ್ಪಷ್ಟವಾಗುತ್ತದೆ ಎಂದಿದ್ದಾರೆ.

ಟ್ರಂಪ್-ಪಾಕ್ ಸಂಬಂಧ ಮತ್ತು ಲೂಮರ್ ಆತಂಕ

ಇತ್ತೀಚಿನ ತಿಂಗಳುಗಳಲ್ಲಿ ಅಮೆರಿಕ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಸುಧಾರಿಸುತ್ತಿರುವ ಬಗ್ಗೆ ಲೂಮರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನವು ಟ್ರಂಪ್ ಅವರ ಹೆಸರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ಪ್ರಸ್ತಾಪಿಸುವುದು, ಕ್ರಿಪ್ಟೋಕರೆನ್ಸಿ ಒಪ್ಪಂದಗಳು ಮತ್ತು 500 ಮಿಲಿಯನ್ ಡಾಲರ್ ಮೊತ್ತದ ಖನಿಜ ಒಪ್ಪಂದಗಳ ಮೂಲಕ ಅಮೆರಿಕವನ್ನು ಓಲೈಸಲು ಯತ್ನಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
2025ರ ಜೂನ್​ನಲ್ಲಿ ಟ್ರಂಪ್ ಅವರು ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರೊಂದಿಗೆ ಖಾಸಗಿ ಔತಣಕೂಟ ನಡೆಸಿದ್ದನ್ನು ಉಲ್ಲೇಖಿಸಿದ ಲೂಮರ್, ಇಸ್ಲಾಮಿಕ್ ನಾಯಕರನ್ನು ವೈಟ್ ಹೌಸ್‌ನ ಓವಲ್ ಆಫೀಸ್‌ಗೆ ಸ್ವಾಗತಿಸುವುದು ನನಗೆ ಇಷ್ಟವಿಲ್ಲ. ನಾನು ಈ ಬಗ್ಗೆ ಅಧ್ಯಕ್ಷ ಟ್ರಂಪ್ ಅವರೊಂದಿಗೆ ಚರ್ಚಿಸಿದ್ದೇನೆ ಎಂದು ಹಿರಿಯ ಅಧಿಕಾರಿಯೊಬ್ಬರಂತೆ ನೇರ ಮಾತುಗಳನ್ನಾಡಿದರು.

ಭಾರತ, ಅಮೆರಿಕ ಮತ್ತು ಇಸ್ರೇಲ್: 'ಶಕ್ತಿಶಾಲಿ ತ್ರಿಕೋನ'

ಜಾಗತಿಕ ಭಯೋತ್ಪಾದನೆಯನ್ನು ಎದುರಿಸಲು ಭಾರತ, ಅಮೆರಿಕ ಮತ್ತು ಇಸ್ರೇಲ್ ದೇಶಗಳು ಕೈಜೋಡಿಸಬೇಕು ಎಂದು ಲೂಮರ್ ಕರೆ ನೀಡಿದರು. ಪ್ರಧಾನಿ ನರೇಂದ್ರ ಮೋದಿ, ಡೊನಾಲ್ಡ್ ಟ್ರಂಪ್ ಮತ್ತು ಬೆಂಜಮಿನ್ ನೆತನ್ಯಾಹು ಅವರ ನಾಯಕತ್ವ ಇಲ್ಲದಿದ್ದರೆ ಜಗತ್ತು ಇಸ್ಲಾಮಿಕ್ ಉಗ್ರರ ಕೈಗೆ ಸಿಲುಕಿ ನಲುಗಿ ಹೋಗುತ್ತಿತ್ತು ಎಂದು ಅಭಿಪ್ರಾಯಪಟ್ಟರು.
ಭಾರತವು ದಶಕಗಳಿಂದ ಭಯೋತ್ಪಾದನೆಯಿಂದ ನರಳುತ್ತಿದೆ ಎಂಬುದನ್ನು ನೆನಪಿಸಿದ ಲೂಮರ್, 26/11 ಮುಂಬೈ ದಾಳಿ, ಪುಲ್ವಾಮಾ ದಾಳಿ ಮತ್ತು 2025ರ ಪಹಲ್ಗಾಮ್ ಹತ್ಯಾಕಾಂಡಗಳನ್ನು ಉಲ್ಲೇಖಿಸಿ, ಇವು ಕೇವಲ ದಾಳಿಗಳಲ್ಲ, ಇವು ಅಸಂಖ್ಯಾತ ಅಮೆರಿಕನ್ ಮತ್ತು ಭಾರತೀಯರ ಬಲಿಯನ್ನು ಪಡೆದ ಬರ್ಬರ ಸಿದ್ಧಾಂತದ ಕ್ರೂರ ಮುಖಗಳು ಎಂದು ನೆರೆರಾಷ್ಟ್ರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

ಸಾಮಾನ್ಯ ಶತ್ರುವಿನ ವಿರುದ್ಧ ಹೋರಾಟ

ಕೊನೆಯಲ್ಲಿ ಮಾತನಾಡಿದ ಲೂಮರ್, ಇಸ್ಲಾಮಿಕ್ ಭಯೋತ್ಪಾದನೆಯು ಭಾರತ ಮತ್ತು ಅಮೆರಿಕ ಎರಡಕ್ಕೂ ಸಾಮಾನ್ಯ ಶತ್ರುವಾಗಿದೆ. ನಮ್ಮ ಮುಂದಿರುವ ಅತಿದೊಡ್ಡ ಹೋರಾಟವೇ ಇದು. ಈ ಬರ್ಬರ ಸಿದ್ಧಾಂತವನ್ನು ಬೇರುಸಹಿತ ಕಿತ್ತೆಸೆಯಲು ಎರಡೂ ದೇಶಗಳು ಗಟ್ಟಿಯಾಗಿ ನಿಲ್ಲಬೇಕು ಎಂದು ಕರೆ ನೀಡುವ ಮೂಲಕ ತಮ್ಮ ಭಾಷಣ ಮುಕ್ತಾಯಗೊಳಿಸಿದರು.
ಲಾರಾ ಲೂಮರ್ ಅವರ ಈ ಸ್ಫೋಟಕ ಹೇಳಿಕೆಗಳು ಪಾಕಿಸ್ತಾನದ ರಾಜತಾಂತ್ರಿಕ ವಲಯದಲ್ಲಿ ತಲ್ಲಣ ಮೂಡಿಸಿದ್ದು, ಅಮೆರಿಕದ ವಿದೇಶಾಂಗ ನೀತಿಯಲ್ಲಿ ಇದು ಎಂತಹ ಬದಲಾವಣೆ ತರಲಿದೆ ಎಂಬುದು ಕುತೂಹಲ ಮೂಡಿಸಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net