ಕುಡಿಯಲು ಸಮುದ್ರದ ನೀರು! ಈ ದೇಶಗಳು ಮುಂಚೂಣಿ

ಕುಡಿಯಲು ಕಡಲ ನೀರು
ಕುಡಿಯಲು ಕಡಲ ನೀರು
Published on

ಪ್ರಕೃತಿಯಲ್ಲಿ ಮಾನವನ ಅತಿಯಾದ ಹಸ್ತಕ್ಷೇಪ ಹವಾಮಾನ ಬದಲಾವಣೆಯ ಸಮಸ್ಯೆಯನ್ನು ವರ್ಷದಿಂದ ವರ್ಷಕ್ಕೆ ತೀವ್ರಗೊಳಿಸುತ್ತಿದೆ. ಅಕಾಲಿಕ ಮಳೆ, ಬರಗಾಲ ಹೆಚ್ಚುತ್ತಿದೆ. ಹವಾಮಾನ ಬದಲಾವಣೆ ಮತ್ತು ಹೆಚ್ಚುತ್ತಿರುವ ತಾಪಮಾನ ಮಳೆಯ ಮಾರುತಗಳನ್ನು ಕೂಡ ಅಸ್ತವ್ಯಸ್ತಗೊಳಿಸಿದೆ. ಹೀಗಾಗಿ ಕುಡಿಯುವ ನೀರಿನ ಸಮಸ್ಯೆ ಜಾಗತಿಕ ಸಮಸ್ಯೆಯಾಗಿ ಕಾಡುತ್ತಿದ್ದು, ಅಂತರ್ಜಲ ಬರಿದಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈಗ ವಿಶ್ವದ ಪ್ರಮುಖ ದೇಶಗಳು ಕುಡಿಯುವ ನೀರಿಗಾಗಿ ಸಮುದ್ರದತ್ತ ಮುಖ ಮಾಡಿವೆ!

ಹೌದು, ಇದು ಅಚ್ಚರಿಯೆನಿಸಿದರೂ ವಾಸ್ತವ. ಸಮುದ್ರದ ನೀರಿನಿಂದ ಉಪ್ಪನ್ನು ತೆಗೆದುಹಾಕುವ ಪ್ರಕ್ರಿಯೆಯಾದ ‘ಲವಣಮುಕ್ತಗೊಳಿಸುವಿಕೆ’ಯು, ಮಳೆ, ನದಿಗಳು ಅಥವಾ ಅಂತರ್ಜಲದ ಕೊರತೆಯಿರುವ ಪ್ರದೇಶಗಳಲ್ಲಿ ಸಿಹಿನೀರನ್ನು ಉತ್ಪಾದಿಸುವ ಮಾರ್ಗವನ್ನು ಒದಗಿಸುತ್ತಿದೆ. ಈ ತಂತ್ರಜ್ಞಾನ ಮಧ್ಯಪ್ರಾಚ್ಯದಿಂದ ಅಮೆರಿಕದವರೆಗೆ ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ನೀರನ್ನು ಪೂರೈಸುತ್ತಿದೆ ಮತ್ತು ನೀರಿನ ಅಭಾವ ಹೆಚ್ಚಾದಂತೆ ಇದರ ಬಳಕೆಯೂ ಹೆಚ್ಚುತ್ತಿದ್ದು, ಈ ಕುರಿತಾದ ವಿವರ ಇಲ್ಲಿದೆ.

ಹವಾಮಾನ ಬದಲಾವಣೆ, ಹೆಚ್ಚುತ್ತಿರುವ ತಾಪಮಾನ, ತೀವ್ರಗೊಳ್ಳುತ್ತಿರುವ ಬರಗಾಲ ಮತ್ತು ಮಳೆಯ ಕೊರತೆಯಿಂದಾಗಿ ಜಗತ್ತು ಭೀಕರ ಜಲಸಂಕಷ್ಟವನ್ನು ಎದುರಿಸುತ್ತಿದ್ದು, ಅಂತರ್ಜಲ ಬರಿದಾಗುತ್ತಿರುವುದು ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸಿದೆ. ಇಂತಹ ಸಂದರ್ಭದಲ್ಲಿ ಹಲವು ದೇಶಗಳು ಕುಡಿಯುವ ನೀರಿಗಾಗಿ ಸಮುದ್ರದತ್ತ ಮುಖ ಮಾಡಿದ್ದು, ಸಮುದ್ರದ ನೀರಿನಿಂದ ಉಪ್ಪನ್ನು ತೆಗೆದು ಹಾಕುವ ‘ಲವಣಮುಕ್ತಗೊಳಿಸುವಿಕೆ’ (ಡೀಸಲೈನೇಷನ್) ಪ್ರಕ್ರಿಯೆ ಆಶಾಕಿರಣವಾಗಿ ಹೊರಹೊಮ್ಮಿದೆ. ಪ್ರಸ್ತುತ ವಿಶ್ವದ 170ಕ್ಕೂ ಹೆಚ್ಚು ದೇಶಗಳಲ್ಲಿ ಡಿಸಲಿನೇಷನ್ ಪ್ಲಾಂಟ್​ಗಳಿವೆ. ಆಸ್ಟ್ರೇಲಿಯಾ, ಅಲ್ಜೀರಿಯಾ, ಸ್ಪೇನ್, ಅಮೆರಿಕ (ಕ್ಯಾಲಿಫೋರ್ನಿಯಾ), ಚೀನಾ ಮತ್ತು ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಇಂಥ ಘಟಕಗಳು ಹೆಚ್ಚುತ್ತಿವೆ.

ಏನಿದು ರಿವರ್ಸ್ ಆಸ್ಮೋಸಿಸ್ ತಂತ್ರಜ್ಞಾನ?

ಇಂದಿನ ಆಧುನಿಕ ಪ್ಲಾಂಟ್​ಗಳು ಪ್ರಮುಖವಾಗಿ ರಿವರ್ಸ್ ಆಸ್ಮೋಸಿಸ್ ಎಂಬ ಪ್ರಕ್ರಿಯೆಯನ್ನು ಬಳಸುತ್ತಿವೆ. ಈ ಪದ್ಧತಿಯಲ್ಲಿ ಸಮುದ್ರದ ನೀರನ್ನು ಹೆಚ್ಚಿನ ಒತ್ತಡದಲ್ಲಿ ಅತ್ಯಂತ ಸೂಕ್ಷ್ಮವಾದ ಪೊರೆಗಳ (ಸೆಮಿ ಪರ್ವಿುಯೇಬಲ್ ಮೆಂಬ್ರೇನ್) ಮೂಲಕ ಹಾಯಿಸಲಾಗುತ್ತದೆ. ಈ ಪೊರೆಗಳು ಉಪ್ಪಿನಂಶ ಮತ್ತು ಕಲ್ಮಶಗಳನ್ನು ತಡೆಹಿಡಿದು, ಕೇವಲ ನೀರಿನ ಅಣುಗಳನ್ನು ಮಾತ್ರ ದಾಟಲು ಬಿಡುತ್ತವೆ. ಇದರ ಫಲವಾಗಿ ಒಂದು ಬದಿಯಲ್ಲಿ ಶುದ್ಧ ಕುಡಿಯುವ ನೀರು ಹಾಗೂ ಮತ್ತೊಂದು ಬದಿಯಲ್ಲಿ ‘ಬ್ರೖೆನ್’ ಎಂದು ಕರೆಯಲ್ಪಡುವ ಸಾಂದ್ರೀಕೃತ ಉಪ್ಪಿನ ದ್ರಾವಣ ಸಂಗ್ರಹವಾಗುತ್ತದೆ. ಇದಕ್ಕೂ ಮೊದಲು, ಯಂತ್ರಗಳಿಗೆ ಹಾನಿಯಾಗದಂತೆ ಕಸ-ಕಡ್ಡಿಯನ್ನು ಫಿಲ್ಟರ್ ಮಾಡಲಾಗುತ್ತದೆ. ಶುದ್ಧೀಕರಣದ ನಂತರ, ಅಗತ್ಯ ಖನಿಜಗಳನ್ನು ಬೆರೆಸಿ ಅದನ್ನು ಕುಡಿಯಲು ಯೋಗ್ಯವಾಗುವಂತೆ ಸಿದ್ಧಪಡಿಸಲಾಗುತ್ತದೆ. ಹಳೆಯ ಪದ್ಧತಿಯಾದ ಥರ್ಮಲ್ ಡೆಸಾಲಿನೇಷನ್ (ನೀರನ್ನು ಕಾಯಿಸಿ ಆವಿಯಾಗಿಸುವಿಕೆ) ಇಂದಿಗೂ ಅಸ್ತಿತ್ವದಲ್ಲಿದ್ದರೂ, ಅದು ಹೆಚ್ಚು ವಿದ್ಯುತ್ ವ್ಯಯ ಮಾಡುವುದರಿಂದ ಬಳಕೆಯಲ್ಲಿ ಕಡಿಮೆಯಾಗಿದೆ.

ಪರಿಸರಕ್ಕೆ ಧಕ್ಕೆ

  • ಇತ್ತೀಚಿನ ಅಧ್ಯಯನದ ಪ್ರಕಾರ, ಈ ಪ್ರಕ್ರಿಯೆ ವಾರ್ಷಿಕವಾಗಿ 500ರಿಂದ 850 ಮಿಲಿಯನ್ ಟನ್ ಇಂಗಾಲವನ್ನು ಹೊರಸೂಸುತ್ತಿದೆ. ಇದು ಜಾಗತಿಕ ವಿಮಾನಯಾನ ಉದ್ಯಮದ ಹೊರಸೂಸುವಿಕೆಗೆ ಸಮೀಪದಲ್ಲಿದೆ.
  •  ಪ್ಲಾಂಟ್​ಗಳಿಂದ ಹೊರಬರುವ ವಿಷಕಾರಿ ‘ಬ್ರೖೆನ್’ ದ್ರಾವಣವನ್ನು ಮರಳಿ ಸಮುದ್ರಕ್ಕೆ ಬಿಡುವುದರಿಂದ ಹವಳದ ದಿಬ್ಬಗಳು ಮತ್ತು ಸಮುದ್ರ ತಳದ ಜೀವ ಪರಿಸರಕ್ಕೆ ಹಾನಿಯಾಗುತ್ತಿದೆ.
  • ನೀರನ್ನು ಎಳೆದುಕೊಳ್ಳುವ ವ್ಯವಸ್ಥೆಯಲ್ಲಿ ಮೀನಿನ ಮೊಟ್ಟೆಗಳು ಮತ್ತು ಪ್ಲಾಂಕ್ಟನ್​ಗಳು ಸಿಲುಕಿ ಸಾಯುತ್ತಿವೆ, ಇದು ಸಮುದ್ರದ ಆಹಾರ ಸರಪಳಿಯ ಮೇಲೆ ಪರಿಣಾಮ ಬೀರುತ್ತಿದೆ.

ವಿಶ್ವದಾದ್ಯಂತ ಹೆಚ್ಚುತ್ತಿದೆ ಬಳಕೆ

ಮಧ್ಯಪ್ರಾಚ್ಯ ರಾಷ್ಟ್ರಗಳಾದ ಕುವೈತ್ ಮತ್ತು ಒಮನ್ ತಮ್ಮ ಶೇಕಡ 85ಕ್ಕಿಂತ ಹೆಚ್ಚು ಕುಡಿಯುವ ನೀರಿಗಾಗಿ ಸಮುದ್ರವನ್ನೇ ಅವಲಂಬಿಸಿವೆ. ಅಷ್ಟೇ ಅಲ್ಲದೆ, ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಅಮೆರಿಕದ ಕ್ಯಾಲಿಫೋರ್ನಿಯಾ, ಟೆಕ್ಸಾಸ್​ನಂತಹ ಕರಾವಳಿ ಪ್ರದೇಶಗಳಲ್ಲಿ ಇದು ಜನಪ್ರಿಯವಾಗಿದೆ. ಸಮುದ್ರ ಮಟ್ಟ ಏರಿಕೆಯಿಂದಾಗಿ ಅಂತರ್ಜಲ ಕಲುಷಿತಗೊಂಡಿರುವ ಪೆಸಿಫಿಕ್ ದ್ವೀಪರಾಷ್ಟ್ರಗಳಿಗೆ ಇದು ಜೀವ ನಾಡಿಯಾಗಿದೆ. ಪ್ರಸ್ತುತ ವಿಶ್ವದಾದ್ಯಂತ 20,000ಕ್ಕೂ ಹೆಚ್ಚು ಪ್ಲಾಂಟ್​ಗಳು ಕಾರ್ಯನಿರ್ವಹಿಸುತ್ತಿದ್ದು, ಈ ಉದ್ಯಮವು ಪ್ರತಿವರ್ಷ ಶೇಕಡ 7ರಷ್ಟು ಬೆಳೆಯುತ್ತಿದೆ.

ಪರಿಹಾರದತ್ತ ಹೆಜ್ಜೆ

ಈ ಸವಾಲುಗಳನ್ನು ಎದುರಿಸಲು ವಿಜ್ಞಾನಿಗಳು ನೂತನ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಸೌರಶಕ್ತಿಯಂತಹ ನವೀಕರಿಸಬಹುದಾದ ಇಂಧನ ಬಳಕೆ, ಸಮುದ್ರದ ಆಳದಲ್ಲಿನ ನೈಸರ್ಗಿಕ ಒತ್ತಡವನ್ನು ಬಳಸಿಕೊಂಡು ಶುದ್ಧೀಕರಿಸುವ ತಂತ್ರಜ್ಞಾನಗಳು ಇನ್ನೂ ಪ್ರಯೋಗದ ಹಂತದಲ್ಲಿವೆ. ಆದರೆ, ತಜ್ಞರ ಪ್ರಕಾರ ನೀರಿನ ಮರುಬಳಕೆ ಮತ್ತು ಸಂರಕ್ಷಣೆ ಮೊದಲ ಆದ್ಯತೆಯಾಗಬೇಕು. ತ್ಯಾಜ್ಯ ನೀರನ್ನು ಶುದ್ಧೀಕರಿಸುವುದು ಸಮುದ್ರದ ನೀರನ್ನು ಶುದ್ಧೀಕರಿಸುವುದಕ್ಕಿಂತ ಕಡಿಮೆ ವೆಚ್ಚದಾಯಕ ಮತ್ತು ಪರಿಸರ ಸ್ನೇಹಿಯಾಗಿದೆ ಎನ್ನುತ್ತಾರೆ.

ಮುಂಚೂಣಿಯಲ್ಲಿ ಇಸ್ರೇಲ್

ಸಮುದ್ರದ ಉಪ್ಪುನೀರನ್ನು ಕುಡಿಯುವ ನೀರನ್ನಾಗಿ ಪರಿವರ್ತಿಸುವಲ್ಲಿ ವಿಶ್ವದಲ್ಲೇ ಇಸ್ರೇಲ್ ಮುಂಚೂಣಿಯಲ್ಲಿದೆ. ಇಸ್ರೇಲ್ ಪ್ರಮುಖವಾಗಿ ಸೀ ವಾಟರ್ ರಿವರ್ಸ್ ಆಸ್ಮೋಸಿಸ್ ತಂತ್ರಜ್ಞಾನವನ್ನು ಬಳಸುತ್ತಿದೆ. ಸಮುದ್ರದ ನೀರನ್ನು ಹೆಚ್ಚಿನ ಒತ್ತಡದಲ್ಲಿ ಸಣ್ಣ ರಂಧ್ರಗಳಿರುವ ಮೆಂಬ್ರೇನ್ (ಪೊರೆ) ಗಳ ಮೂಲಕ ಹಾಯಿಸಲಾಗುತ್ತದೆ. ಈ ಪೊರೆಗಳು ನೀರಿನಲ್ಲಿರುವ ಉಪ್ಪಿನಂಶ ಮತ್ತು ಇತರ ಕಣಗಳನ್ನು ತಡೆಹಿಡಿದು, ಶುದ್ಧ ನೀರನ್ನು ಮಾತ್ರ ಹೊರಬಿಡುತ್ತವೆ. ಇಸ್ರೇಲ್ ಈ ತಂತ್ರಜ್ಞಾನವನ್ನು ಕಡಿಮೆ ವೆಚ್ಚದಲ್ಲಿ ಮತ್ತು ಹೆಚ್ಚಿನ ದಕ್ಷತೆಯೊಂದಿಗೆ ಬಳಸುವ ವಿಧಾನವನ್ನು ಅಭಿವೃದ್ಧಿಪಡಿಸಿದೆ. ಅಲ್ಲಿನ ಶೇಕಡ 80ಕ್ಕೂ ಹೆಚ್ಚು ಕುಡಿಯುವ ನೀರು ಇಂತಹ ಪ್ಲಾಂಟ್​ಗಳಿಂದಲೇ ಪೂರೈಕೆಯಾಗುತ್ತದೆ. ಅಶ್ಕೆಲೋನ್, ಹದೇರಾ ಮತ್ತು ಸೋರೆಕ್ ಪ್ಲಾಂಟ್​ಗಳು ವಿಶ್ವದ ಅತಿದೊಡ್ಡ ಡೀಸಲೈನೇಷನ್ ಘಟಕಗಳಲ್ಲಿ ಸೇರಿವೆ.

ಇತರ ದೇಶಗಳ ಸ್ಥಿತಿ

ಸೌದಿ ಅರೇಬಿಯಾ: ವಿಶ್ವದಲ್ಲೇ ಭಾರಿ ಪ್ರಮಾಣದಲ್ಲಿ ಡೀಸಲೈನೇಷನ್ ಸಾಮರ್ಥ್ಯ ಹೊಂದಿರುವ ದೇಶ. ಇಲ್ಲಿನ ಕುಡಿಯುವ ನೀರಿನ ಶೇಕಡ 70ಕ್ಕಿಂತ ಹೆಚ್ಚು ಭಾಗ ಸಮುದ್ರದ ನೀರೇ ಆಗಿದೆ. ವಿಶ್ವದ ಅತಿದೊಡ್ಡ ಪ್ಲಾಂಟ್ ರಾಸ್ ಅಲ್ ಖೈರ್ ಇಲ್ಲಿದೆ.

ಸಂಯುಕ್ತ ಅರಬ್ ಎಮಿರೇಟ್ಸ್: ಇಲ್ಲಿನ ಕುಡಿಯುವ ನೀರಿನ ಶೇಕಡ 42ರಷ್ಟು ಭಾಗ ಈ ತಂತ್ರಜ್ಞಾನದಿಂದ ಬರುತ್ತದೆ. ದುಬೈನ ಜೆಬೆಲ್ ಅಲಿ ಪ್ಲಾಂಟ್ ಜಗತ್ತಿನ ಪ್ರಮುಖ ಘಟಕಗಳಲ್ಲಿ ಒಂದು.

ಕುವೈತ್ ಮತ್ತು ಒಮಾನ್: ಈ ದೇಶಗಳು ತಮ್ಮ ಶೇ.85-90ರಷ್ಟು ಕುಡಿಯುವ ನೀರಿಗಾಗಿ ಸಂಪೂರ್ಣವಾಗಿ ಡೀಸಲೈನೇಷನ್ ಮೇಲೆ ಅವಲಂಬಿತವಾಗಿವೆ.

ಪ್ರಧಾನಿ ನರೇಂದ್ರ ಮೋದಿ ಭೇಟಿ

ಭಾರತದ ಪ್ರಧಾನಿ ನರೇಂದ್ರ ಮೋದಿ 2017ರ ಜುಲೈನಲ್ಲಿ ಇಸ್ರೇಲ್ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುರೊಂದಿಗೆ ಹೈಫಾ ಸಮೀಪದ ದೊರ್ ಬೀಚ್​ನಲ್ಲಿರುವ ಮೊಬೈಲ್ ಡೀಸಲೈನೇಷನ್ ಪ್ಲಾಂಟ್​ಗೆ ಭೇಟಿ ನೀಡಿದ್ದರು. ಈ ಭೇಟಿಯ ಸಂದರ್ಭದಲ್ಲಿ ಭಾರತ ಮತ್ತು ಇಸ್ರೇಲ್ ನಡುವೆ ಜಲ ನಿರ್ವಹಣೆ ಮತ್ತು ಕೃಷಿ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಪ್ರಮುಖ ಒಪ್ಪಂದಗಳು ನಡೆದವು.

ಗ್ಯಾಲ್-ಮೊಬೈಲ್: ಇದು ವಾಹನದ ಮೇಲೆ ಅಳವಡಿಸಲಾದ ಸಣ್ಣ ಡೀಸಲೈನೇಷನ್ ಯಂತ್ರವಾಗಿದ್ದು, ಎಂಥದ್ದೇ ಕಲುಷಿತ ಅಥವಾ ಉಪ್ಪುನೀರನ್ನಾದರೂ ತಕ್ಷಣವೇ ಕುಡಿಯುವ ನೀರನ್ನಾಗಿ ಬದಲಿಸಬಲ್ಲದು. ಈ ವಾಹನದಲ್ಲಿ ಕುಳಿತು ಇಬ್ಬರೂ ನಾಯಕರು ಸಮುದ್ರದ ದಂಡೆಯಲ್ಲಿ ಸಂಚರಿಸಿದ್ದರು ಮತ್ತು ಶುದ್ಧೀಕರಿಸಿದ ನೀರನ್ನು ಕುಡಿದಿದ್ದರು. ಭಾರತವು ಈ ಮಾದರಿಯನ್ನು ತನ್ನ ಕರಾವಳಿ ರಾಜ್ಯಗಳಲ್ಲಿ ಅಳವಡಿಸಿಕೊಳ್ಳಲು ಉತ್ಸುಕವಾಗಿದೆ. ಇಸ್ರೇಲ್​ನ ಹನಿ ನೀರಾವರಿ ತಂತ್ರಜ್ಞಾನವನ್ನು ಕೂಡ ಭಾರತದ ಲಕ್ಷಾಂತರ ರೈತರು ಅಳವಡಿಸಿಕೊಂಡಿದ್ದಾರೆ.

ಭಾರತದಲ್ಲಿ ಅಳವಡಿಕೆ

ಇಸ್ರೇಲ್ ತಂತ್ರಜ್ಞಾನದ ಸಹಯೋಗದೊಂದಿಗೆ ಭಾರತದ ಹಲವೆಡೆ ಕೆಲಸಗಳು ನಡೆಯುತ್ತಿವೆ. ಭಾರತದಲ್ಲಿ ಸಮುದ್ರದ ನೀರನ್ನು ಶುದ್ಧೀಕರಿಸುವ ತಂತ್ರಜ್ಞಾನವು ವೇಗವಾಗಿ ಬೆಳೆಯುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇದನ್ನು ಭವಿಷ್ಯದ ನೀರಿನ ಭದ್ರತೆಗೆ ಪ್ರಮುಖ ಮಾರ್ಗವೆಂದು ಪರಿಗಣಿಸಿವೆ. ಭಾರತವು ಮುಖ್ಯವಾಗಿ ರಿವರ್ಸ್ ಆಸ್ಮೋಸಿಸ್ ಮತ್ತು ದ್ವೀಪ ಪ್ರದೇಶಗಳಲ್ಲಿ ಲೋ ಟೆಂಪರೇಚರ್ ಥರ್ಮಲ್ ಡೀಸಲೈನೇಷನ್ ತಂತ್ರಜ್ಞಾನವನ್ನು ಬಳಸುತ್ತಿದೆ. ತಮಿಳುನಾಡಿನ ಚೆನ್ನೈನಲ್ಲಿ ಈಗಾಗಲೇ ಮೀಂಜೂರು ಮತ್ತು ನೆಮ್ಮೇಲಿ ಎಂಬಲ್ಲಿ ಬೃಹತ್ ಘಟಕಗಳು ಕಾರ್ಯನಿರ್ವಹಿಸುತ್ತಿವೆ. 

ಪ್ರಸ್ತುತ ಪೇರೂರ್​ನಲ್ಲಿ 400 ಎಂಎಲ್​ಡಿ (ದಿನಕ್ಕೆ 400 ಮಿಲಿಯನ್ ಲೀಟರ್) ಸಾಮರ್ಥ್ಯದ ಏಷ್ಯಾದಲ್ಲೇ ಅತಿ ದೊಡ್ಡ ಪ್ಲಾಂಟ್​ಗಳಲ್ಲಿ ಒಂದಾದ ಘಟಕದ ಕಾಮಗಾರಿ ಶೇ.60ಕ್ಕೂ ಹೆಚ್ಚು ಪೂರ್ಣಗೊಂಡಿದ್ದು, 2027ರ ಅಂತ್ಯದಲ್ಲಿ ಸಿದ್ಧಗೊಳ್ಳಲಿದೆ. ಗುಜರಾತ್​ನ ಜಾಮ್ಗರ ಮತ್ತು ದಹೇಜ್ ಭಾಗಗಳಲ್ಲಿ ಇಸ್ರೇಲಿ ಕಂಪನಿಗಳ ಸಹಯೋಗದೊಂದಿಗೆ ಪ್ಲಾಂಟ್​ಗಳನ್ನು ಸ್ಥಾಪಿಸುವ ಪ್ರಕ್ರಿಯೆ ನಡೆಯುತ್ತಿದೆ. ಅಲ್ಲದೆ, ಲಕ್ಷದ್ವೀಪದಲ್ಲಿ ಸಮುದ್ರದ ಮೇಲ್ಮೈ ಬಿಸಿ ನೀರು ಮತ್ತು ಆಳದ ತಣ್ಣೀರಿನ ಉಷ್ಣಾಂಶದ ವ್ಯತ್ಯಾಸ ಬಳಸಿ ನೀರು ಶುದ್ಧೀಕರಿಸುವ ಪರಿಸರ ಸ್ನೇಹಿ ಘಟಕಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಜಲ ಜೀವನ್ ಮಿಷನ್ ಅಡಿಯಲ್ಲಿ ಕರಾವಳಿ ರಾಜ್ಯಗಳಿಗೆ ಸಮುದ್ರದ ನೀರನ್ನು ಬಳಸಿಕೊಳ್ಳಲು ಕೇಂದ್ರ ಸರ್ಕಾರ ಅನುದಾನ ನೀಡುತ್ತಿದೆ. ನೀರಿಗಾಗಿ ಕೇವಲ ಮಳೆ ಮತ್ತು ಅಂತರ್ಜಲದ ಮೇಲೆ ಅವಲಂಬಿತವಾಗುವುದನ್ನು ತಪ್ಪಿಸುವುದು ಇದರ ಉದ್ದೇಶವಾಗಿದೆ.

ಈ ತಂತ್ರಜ್ಞಾನ ತಂದಿರುವ ಬದಲಾವಣೆಗಳು

  • ನೀರಿನ ಲಭ್ಯತೆ: ಮಳೆಯನ್ನೇ ನಂಬಿಕೊಂಡಿದ್ದ ಮರುಭೂಮಿ ದೇಶಗಳು ಈಗ ಬರಗಾಲದ
  • ಭೀತಿಯಿಂದ ಮುಕ್ತ. ಹವಾಮಾನ ಬದಲಾದರೂ ಇವರ ನೀರಿನ ಪೂರೈಕೆಗೆ ಧಕ್ಕೆಯಾಗುವುದಿಲ್ಲ.
  • ಕೃಷಿ ಕ್ರಾಂತಿ: ಇಸ್ರೇಲ್​ನಂತಹ ದೇಶಗಳು ಈ ನೀರನ್ನು ಬಳಸಿ ಮರುಭೂಮಿಯಲ್ಲೂ ಹಣ್ಣು-ತರಕಾರಿ ಬೆಳೆಯುತ್ತಿವೆ. ಸಮುದ್ರದ ನೀರನ್ನು ಶುದ್ಧೀಕರಿಸಿ ಅದನ್ನು ಕೃಷಿಗೆ ಬಳಸಿ ಇಂದು ಇಸ್ರೇಲ್ ಕೃಷಿ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ.
  • ಆರ್ಥಿಕ ಬೆಳವಣಿಗೆ: ಕೈಗಾರಿಕೆಗಳಿಗೆ ನಿರಂತರ ನೀರಿನ ಪೂರೈಕೆ ಸಾಧ್ಯವಾಗುತ್ತಿರುವುದರಿಂದ ಆರ್ಥಿಕತೆ ಬಲಗೊಂಡಿದೆ. ಉದಾಹರಣೆಗೆ, ಗಲ್ಪ್ ರಾಷ್ಟ್ರಗಳಲ್ಲಿ ತೈಲ ಸಂಸ್ಕರಣಾ ಘಟಕಗಳಿಗೆ ಬೇಕಾದ ಬೃಹತ್ ಪ್ರಮಾಣದ ನೀರನ್ನು ಈ ಪ್ಲಾಂಟ್​ಗಳೇ ನೀಡುತ್ತವೆ.
  • ನಗರೀಕರಣ: ಸಮುದ್ರದ ದಂಡೆಯಲ್ಲಿ ಬೃಹತ್ ನಗರಗಳು (ಉದಾ: ದುಬೈ, ಅಬುಧಾಬಿ, ರಿಯಾದ್) ಬೆಳೆಯಲು ಈ ತಂತ್ರಜ್ಞಾನವೇ ಮೂಲ ಕಾರಣ. ನೀರಿಲ್ಲದಿದ್ದರೆ ಈ ನಗರಗಳ ಅಸ್ತಿತ್ವವೇ ಸಾಧ್ಯವಿರುತ್ತಿರಲಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net