ನೀಲಿ ಏಡಿಗಳ ಸಾಮ್ರಾಜ್ಯ ಕೊಲ್ಲಲು ಕಡಲಿಗಿಳಿದ 1.3 ಲಕ್ಷ ಮರಿ ಆಕ್ಟೋಪಸ್‌! ಕಾರಣ ಕೇಳಿದ್ರೆ ನಿಮ್ಮ ಹುಬ್ಬೇರೋದು ಖಚಿತ | Blue Crabs

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ನೀಲಿ ಏಡಿಗಳನ್ನು ಕೊಲ್ಲಲು ಮರಿ ಆಕ್ಟೋಪಸ್‌ಗಳ ಸೈನ್ಯ
  • ಆಡ್ರಿಯಾಟಿಕ್‌ನಲ್ಲಿ 1.3 ಲಕ್ಷ ಆಕ್ಟೋಪಸ್‌ಗಳನ್ನು ಸಮುದ್ರಕ್ಕಿಳಿಸಿದ ವಿಜ್ಞಾನಿಗಳು
  • ಈ ಬೃಹತ್ ಪ್ರಯೋಗದ ಹಿಂದಿರುವ ಕಾರಣ ಕೇಳಿದ್ರೆ ನಿಮ್ಮ ಹುಬ್ಬೇರೋದು ಖಚಿತ
Blue Crabs: ಇಡೀ ಜಗತ್ತಿಗೆ ಪ್ರವಾಹ, ಮೇಘಸ್ಫೋಟ, ಭೂಕಂಪನ, ಯುದ್ಧ ಭೀತಿಗಳು ದೊಡ್ಡ ಸಮಸ್ಯೆಯಾಗಿ ಕಾಣುತ್ತಿರುವಾಗ, ಅತ್ತ ಇಟಲಿಗೆ ಇದೆಲ್ಲವನ್ನೂ ಮೀರಿದ ಸಮಸ್ಯೆಯೊಂದು ಬೆಂಬಿಡದೆ ಕಾಡತೊಡಗಿದೆ. ಇದನ್ನು ಹೇಗಾದರೂ ಮಾಡಿ ತಡೆಗಟ್ಟಲು ಇದೀಗ ವಿಜ್ಞಾನಿಗಳ ಸಹಾಯದ ಮೂಲಕ ಹೊಸ ಪ್ರಯತ್ನಕ್ಕೆ ಇಳಿದಿರುವುದು ಆಶ್ಚರ್ಯಕರ ಸಂಗತಿಯಾಗಿದೆ.

ಮೀನುಗಾರರ ಉದ್ಯಮಕ್ಕೆ ಕೊಡಲಿ ಪೆಟ್ಟು

ಸಮುದ್ರದಾಳದಲ್ಲಿ ಕಂಡುಬಂದಿರುವ ನೀಲಿ ಏಡಿಗಳ ಸಂಚಾರವೇ ಸದ್ಯ ಇಟಲಿಗೆ ದೊಡ್ಡ ತಲೆ ನೋವಾಗಿ ಕಾಡಲಾರಂಭಿಸಿದೆ. ಇಟಾಲಿಯನ್ ಚಿಪ್ಪುಮೀನು ಉದ್ಯಮಕ್ಕೆ ಭಾರಿ ನಷ್ಟ ಉಂಟುಮಾಡಿರುವ ಈ ಏಡಿಗಳು, ಕಡಲಿನಲ್ಲಿ ಕಾಣಿಸುವ ವಿವಿಧ ಬಗೆಯ ಮೀನುಗಳನ್ನು ತಿಂದು ಹಾಕುತ್ತಿವೆ. ಇದರಿಂದ ಕರಾವಳಿ ಪ್ರದೇಶಗಳಲ್ಲಿ ನೀಲಿ ಏಡಿಗಳ ಸಂಖ್ಯೆ ಮೀನುಗಾರರ ಉದ್ಯಮಕ್ಕೆ ಕೊಡಲಿ ಪೆಟ್ಟು ಹಾಕಿದೆ. ಹೀಗಾಗಿ, ಇಟಾಲಿಯನ್ ಅಧಿಕಾರಿಗಳು ಹೊಸ ಪ್ರಯೋಗಕ್ಕೆ ಮುಂದಾಗಿದ್ದು, ಏಡಿಗಳ ಬಲಿಗೆ ಮರಿ ಆಕ್ಟೋಪಸ್​ಗಳನ್ನು ನೀರಿಗಿಳಿಸಿದ್ದಾರೆ. 

1 ಆಕ್ಟೋಪಸ್​ 4 ಏಡಿ ಗುಳಂ

ನೀಲಿ ಏಡಿಗಳು ಮೀನುಗಾರರು ಹಾಕುವ ಬಲೆಗಳು ಮತ್ತು ಗಾಳಗಳನ್ನು ತಮ್ಮ ಚುಪಾದ ಕೈಗಳಿಂದ ನಾಶಪಡಿಸುತ್ತಿವೆ. ಇದರ ಪರಿಣಾಮ, ಚಿಪ್ಪುಮೀನು ಉದ್ಯಮವು ಶತಕೋಟಿ ಯುರೋಗಳಷ್ಟು ನಷ್ಟವನ್ನು ಅನುಭವಿಸಿದೆ. ಈ ನಿಟ್ಟಿನಲ್ಲಿ, ಎಮಿಲಿಯಾ-ರೊಮಾಗ್ನಾ ಪ್ರಾದೇಶಿಕ ಸರ್ಕಾರದ ಸಹಯೋಗದೊಂದಿಗೆ 'ಆಕ್ಟೋ-ಬ್ಲೂ' ಯೋಜನೆಯ ಭಾಗವಾಗಿ ಬೊಲೊಗ್ನಾ ವಿಶ್ವವಿದ್ಯಾಲಯದ ಸಂಶೋಧಕರು, ಸುಮಾರು 1,30,000 ಮರಿ ಆಕ್ಟೋಪಸ್‌ಗಳನ್ನು ಆಡ್ರಿಯಾಟಿಕ್ ಸಮುದ್ರಕ್ಕೆ ಇಳಿಸಿದ್ದಾರೆ. 

ಆಕ್ಟೋಪಸ್ ರಕ್ಷಣೆಗೆ ಗುಹೆಗಳು

ಆದಾಗ್ಯೂ, ಇವು ದೊಡ್ಡ ಆಕ್ಟೋಪಸ್‌ಗಳೇನಲ್ಲ. ಅವು ಹೊಸದಾಗಿ ಮೊಟ್ಟೆಯೊಡೆದ ಪ್ಯಾರಾಲಾರ್ವಾಗಳು. ಕೆಲವೇ ಮಿಲಿಮೀಟರ್ ಗಾತ್ರದಲ್ಲಿವೆ. ಅವುಗಳನ್ನು ಸೆಸೆನಾಟಿಕೊ ಮತ್ತು ರಿಷನ್ ಬಳಿ ಸಮುದ್ರದ ನೀರಿನಲ್ಲಿ ಬಿಡಲಾಗಿದ್ದು, ಸಣ್ಣ ಆಕ್ಟೋಪಸ್‌ಗಳು ಬೆಳೆಯುವಾಗ ಅವುಗಳಿಗೆ ರಕ್ಷಣೆ ಒದಗಿಸಲು ಸಮುದ್ರ ತಳದಲ್ಲಿ ಕೃತಕ ಆವಾಸಸ್ಥಾನಗಳನ್ನು ಸಹ ರಚಿಸಲಾಗಿದೆ.
ಈ ಪ್ರಯೋಗದ ಮೂಲ ಉದ್ದೇಶ, ನೀಲಿ ಏಡಿಗಳೆಂಬ ಪರಭಕ್ಷಕಗಳ ಸಂತಾನೋತ್ಪತ್ತಿ ಕಡಿತಗೊಳಿಸುವುದು. ಅನುಕೂಲಕರ ಪರಿಸ್ಥಿತಿಗಳಲ್ಲಿ, ಒಂದು ಕೆಜಿ ತೂಕದ ಆಕ್ಟೋಪಸ್ ದಿನಕ್ಕೆ ಸುಮಾರು 4 ಮಧ್ಯಮ ಗಾತ್ರದ ನೀಲಿ ಏಡಿಗಳನ್ನು ತಿನ್ನಬಹುದು ಎಂದು ಸಂಶೋಧಕರು ಅಂದಾಜಿಸಿದ್ದಾರೆ. ಈ ಮೂಲಕ ಆಡ್ರಿಯಾಟಿಕ್‌ ಸಮುದ್ರದಲ್ಲಿ ಈಗಾಗಲೇ ನೈಸರ್ಗಿಕವಾಗಿರುವ ಸ್ಥಳೀಯ ಸಾಮಾನ್ಯ ಆಕ್ಟೋಪಸ್‌ನ ಜನಸಂಖ್ಯೆಯನ್ನು ಹೆಚ್ಚಿಸುವುದು ಗುರಿಯಾಗಿದೆ. ಆದಾಗ್ಯೂ, ಈ ಹೊಸ ಪ್ರಯೋಗ ಎಷ್ಟರ ಮಟ್ಟಿಗೆ ಯಶಸ್ವಿ ಆಗಲಿದೆ ಎಂಬುದರ ಬಗ್ಗೆ ಖಚಿತ ಮಾಹಿತಿ ಇಲ್ಲ ಎಂದೂ ಹೇಳಲಾಗಿದೆ.
ಆಕ್ಟೋಪಸ್ ಪ್ಯಾರಲಾರ್ವಾಗಳ ಮರಣ ಪ್ರಮಾಣವು ಹೆಚ್ಚಿರುವುದರಿಂದ ಇವು ಸಂಪೂರ್ಣವಾಗಿ ನೀಲಿ ಏಡಿಗಳ ಸಮಸ್ಯೆಯನ್ನು ಪರಿಹರಿಸುತ್ತವೆ ಎಂಬುದನ್ನು ಬಲವಾಗಿ ಹೇಳಲು ಸಾಧ್ಯವಿಲ್ಲ ಎಂದು ಸಂಶೋಧಕರು ಅಭಿಪ್ರಾಯಿಸಿದ್ದಾರೆ. ನೀಲಿ ಏಡಿ ಬೇಟೆಯ ಜತೆಗೆ ನಿಯಂತ್ರಣ ತಂತ್ರದ ಭಾಗವಾಗಿ ಈ ಪ್ರಯೋಗವನ್ನು ಕಾರ್ಯಗತಗೊಳಿಸಲಾಗುತ್ತಿದೆ. ಈ ಪ್ರಯೋಗದೊಂದಿಗೆ ಆಕ್ಟೋಪಸ್ ಸೈನ್ಯವು ನೀಲಿ ಏಡಿಗಳನ್ನು ಎಷ್ಟರ ಮಟ್ಟಿಗೆ ನಿಭಾಯಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ ಎಂದು ತಿಳಿಸಿದ್ದಾರೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net