100 ವರ್ಷಗಳ ಬಳಿಕ ಬೊಲಿವಿಯಾ ಅರಣ್ಯದಲ್ಲಿ ಬೆಕ್ಕು ಜಾತಿಗೆ ಸೇರಿದ ಹೊಸ ಪ್ರಾಣಿ ಪತ್ತೆ! ಚಿರತೆಯಂತಹ ನೋಟ... New Cat Species

ಸಾಮಾನ್ಯ ಬೆಕ್ಕಿನ ಆಕಾರದಲ್ಲೇ ಇದ್ದರೂ, ಮೈಮೇಲೆ ಚಿರತೆಯಂತಹ ಮಚ್ಚೆಗಳನ್ನು ಹೊಂದಿರುವ ಈ ವಿಸ್ಮಯಕಾರಿ ಪ್ರಾಣಿಯು ಸದ್ಯ ಜಗತ್ತಿನಾದ್ಯಂತ ವನ್ಯಜೀವಿ ಪ್ರಿಯರು ಹಾಗೂ ವಿಜ್ಞಾನಿಗಳ ಹುಬ್ಬೇರಿಸುವಂತೆ ಮಾಡಿದೆ.
New Cat Species
ಬೊಲಿವಿಯಾ ಅರಣ್ಯದಲ್ಲಿ ಬೆಕ್ಕು ಜಾತಿಗೆ ಸೇರಿದ ಹೊಸ ಪ್ರಾಣಿ ಪತ್ತೆ!
Published on

ಲಾ ಪಾಜ್​: ಬೊಲಿವಿಯಾದ ದಟ್ಟ ಅರಣ್ಯ ಪ್ರದೇಶದಲ್ಲಿ ಬರೋಬ್ಬರಿ ನೂರು ವರ್ಷಗಳ ಬಳಿಕ ಅತ್ಯಂತ ಅಪರೂಪದ ಹಾಗೂ ವಿಶೇಷ ಪ್ರಭೇದದ 'ಟೈಗರ್ ಕ್ಯಾಟ್' (Tiger Cat) ಎಂಬ ಹೊಸ ಬೆಕ್ಕು ಜಾತಿಗೆ ಸೇರಿದ ಪ್ರಾಣಿಯೊಂದು ( New Cat Species ) ಪತ್ತೆಯಾಗಿದೆ. ಸಾಮಾನ್ಯ ಬೆಕ್ಕಿನ ಆಕಾರದಲ್ಲೇ ಇದ್ದರೂ, ಮೈಮೇಲೆ ಚಿರತೆಯಂತಹ ಮಚ್ಚೆಗಳನ್ನು ಹೊಂದಿರುವ ಈ ವಿಸ್ಮಯಕಾರಿ ಪ್ರಾಣಿಯು ಸದ್ಯ ಜಗತ್ತಿನಾದ್ಯಂತ ವನ್ಯಜೀವಿ ಪ್ರಿಯರು ಹಾಗೂ ವಿಜ್ಞಾನಿಗಳ ಹುಬ್ಬೇರಿಸುವಂತೆ ಮಾಡಿದೆ. ದಶಕಗಳ ಕಾಲ ಕಣ್ಮರೆಯಾಗಿದ್ದ ಈ ವನ್ಯಜೀವಿಯ ಅಚ್ಚರಿಯ ವಿಶೇಷತೆಗಳೇನು ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಪ್ರಸ್ತುತ ಬಯಾಲಜಿ ನಿಯತಕಾಲಿಕದಲ್ಲಿ ಪ್ರಕಟವಾಗಿರುವ ಅಧ್ಯಯನದ ಪ್ರಕಾರ, ಬೊಲಿವಿಯಾದಲ್ಲಿ ಪತ್ತೆಯಾಗಿರುವ ಈ ಹೊಸ ಪ್ರಭೇದದ ಜೀವಿಗೆ 'ಲಿಯೋಪಾರ್ಡಸ್ ಟಿಲ್ಕಾಯೊ' ಎಂದು ಹೆಸರಿಸಲಾಗಿದೆ. 1923ರಲ್ಲಿ ಪಂಪಾಸ್ ಬೆಕ್ಕು ಪತ್ತೆಯಾದ ನಂತರದ ನೂರು ವರ್ಷಗಳಿಗೂ ಅಧಿಕ ಅವಧಿಯಲ್ಲಿ ಕಂಡುಹಿಡಿಯಲಾದ ಬೆಕ್ಕಿನ ಜಾತಿಗೆ ಸೇರಿದ ಮೊದಲ ಹೊಸ ಪ್ರಭೇದ ಇದಾಗಿದೆ ಎಂದು 'ಪಿಪಲ್' ಮಾಧ್ಯಮ ವರದಿ ಮಾಡಿದೆ.

ಜೀವಶಾಸ್ತ್ರಜ್ಞೆ ಪಾವೊಲಾ ನೊಗಾಲೆಸ್-ಅಸ್ಕಾರ್ರುಂಜ್ ಅವರಿಗೆ ಈ ಬೆಕ್ಕಿನ ಕುರಿತು 2016ರಲ್ಲಿ ಮೊದಲ ಮಾಹಿತಿ ಲಭ್ಯವಾಗಿತ್ತು. ಆಂಡಿಸ್ ಪ್ರದೇಶದ ಸೆಂಡಾ ವರ್ಡೆ ವನ್ಯಜೀವಿ ಅಭಯಾರಣ್ಯದಿಂದ ಅವರಿಗೆ ಕರೆ ಬಂದಿದ್ದು, ಸ್ಥಳೀಯರೊಬ್ಬರು ಇದನ್ನು ಮರಿಯಾಗಿದ್ದಾಗ ಸಾಮಾನ್ಯ ಸಾಕುಬೆಕ್ಕು ಎಂದು ತಿಳಿದು ಮನೆಗೆ ಕೊಂಡೊಯ್ದಿದ್ದರು. ಒಂದು ವರ್ಷದ ಬಳಿಕ ಅದು ಕಾಡುಪ್ರಾಣಿ ಎಂಬುದು ಗೊತ್ತಾದಾಗ ಅದನ್ನು ಅಭಯಾರಣ್ಯಕ್ಕೆ ಒಪ್ಪಿಸಿದ್ದರು.

ಆರಂಭದಲ್ಲಿ ಸಂಶೋಧಕರು ಇದನ್ನು 'ಲಿಯೋಪಾರ್ಡಸ್ ಟೈಗ್ರಿನಸ್' ಅಂದರೆ 'ಒನ್ಸಿಲ್ಲಾ' ಅಥವಾ 'ಟೈಗರ್ ಕ್ಯಾಟ್' ಪ್ರಭೇದಕ್ಕೆ ಸೇರಿದೆ ಎಂದು ಭಾವಿಸಿದ್ದರು. ಆದರೆ, 2019ರಲ್ಲಿ ಇದರ ಮಚ್ಚೆಗಳು ಸಾಮಾನ್ಯ ಟೈಗರ್ ಕ್ಯಾಟ್‌ಗಿಂತ ದೊಡ್ಡದಿರುವುದನ್ನು ಹಾಗೂ ಉಲ್ಲೇಖಿತ ಚಿತ್ರಗಳೊಂದಿಗೆ ಇದರ ಗುರುತುಗಳು ಹೊಂದಿಕೆಯಾಗದಿರುವುದನ್ನು ಅವರು ಗಮನಿಸಿದರು.

Also Read
ಮನುಷ್ಯರೇ ಇಲ್ಲದಿದ್ದರೆ ಭೂಮಿ ಹೇಗಿರುತ್ತೆ? ಕೆಲವೇ ವರ್ಷಗಳಲ್ಲಿ ನಗರಗಳು ಕಾಡಾಗುವ ರೋಚಕ Timeline | Earth without humans
New Cat Species

ಸ್ಥಳೀಯರು ಈ ಬೆಕ್ಕನ್ನು 'ಟಿಲ್ಕಾಯೊ' ಎಂದು ಕರೆಯುತ್ತಾರೆ ಎಂಬುದನ್ನು ತಿಳಿದುಕೊಂಡ ಸಂಶೋಧಕರು, ಇದಕ್ಕೆ 'ಲಿಯೋಪಾರ್ಡಸ್ ಟಿಲ್ಕಾಯೊ' ಎಂಬ ಹೆಸರನ್ನು ಸೂಚಿಸಿದರು. ಬೊಲಿವಿಯಾದ ಯುಂಗಾಸ್ ಅರಣ್ಯ ಪ್ರದೇಶದಲ್ಲಿ ಕಂಡುಬಂದಿರುವ ಈ ಪ್ರಾಣಿಯ ಆಹಾರ ಪದ್ಧತಿ ಮತ್ತು ಸಂತಾನೋತ್ಪತ್ತಿ ವಿಧಾನದ ಕುರಿತು ವಿಜ್ಞಾನಿಗಳು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.

ಈ ಮಹತ್ವದ ಸಂಶೋಧನೆಯು ಬೆಕ್ಕಿನ ಜಾತಿಯ ಇನ್ನೂ ಅನೇಕ ಪ್ರಭೇದಗಳನ್ನು ಪತ್ತೆಹಚ್ಚಲು ದಾರಿ ಮಾಡಿಕೊಟ್ಟಿದೆ. ಅಲ್ಲದೆ, ಲಿಯೋಪಾರ್ಡಸ್ ಟೈಗ್ರಿನಸ್ ವಾಸ್ತವವಾಗಿ ಐದು ವಿಭಿನ್ನ ಟೈಗರ್ ಕ್ಯಾಟ್ ಪ್ರಭೇದಗಳನ್ನು ಒಳಗೊಂಡಿರಬಹುದು ಎಂಬ ಸಾಧ್ಯತೆಯನ್ನು ಹುಟ್ಟುಹಾಕಿದ್ದು, ಕಾಡಿನಲ್ಲಿ ಇನ್ನೂ ಅನೇಕ ವಿಸ್ಮಯಕಾರಿ ಜೀವಿಗಳು ಅಸ್ತಿತ್ವದಲ್ಲಿರುವುದನ್ನು ಸಾಬೀತುಪಡಿಸಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net