ಉಕ್ರೇನ್​ನಲ್ಲಿ ಮತ್ತೆ ರಷ್ಯಾ ಡ್ರೋನ್ ದಾಳಿ: ಕಾರ್ಮಿಕರನ್ನು ಕರೆದೊಯ್ತಿದ್ದ ಬಸ್​ ಮೇಲೆ ದಾಳಿ; 15 ಸಾವು, 7 ಮಂದಿಗೆ ಗಾಯ | Russia drone attack

ಘಟನೆಯ ಸ್ಥಳ
ಘಟನೆಯ ಸ್ಥಳ
Published on
Drone attack: ರಷ್ಯಾ ಮತ್ತು ಉಕ್ರೇನ್ ಯುದ್ದ ಮುಂದುವರೆದಿದ್ದು, ಉಕ್ರೇನ್​ನ ಪಾವ್ಲೋಹ್ರಾಡ್ ಜಿಲ್ಲೆಯಲ್ಲಿ ಭಾನುವಾರ(ಫೆ. 01) ಗಣಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬಸ್​ ಮೇಲೆ ರಷ್ಯಾ ಡ್ರೋನ್ ದಾಳಿ ನಡೆಸಿದ್ದು, ಘಟನೆಯಲ್ಲಿ 15 ಮಂದಿ ಮೃತಪಟ್ಟಿದ್ದು, 7 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಎಕ್ಸ್​ನಲ್ಲಿ ಮಾಹಿತಿ ನೀಡಿರುವ ಉಕ್ರೇನ್‌ನ ರಾಜ್ಯ ತುರ್ತು ಸೇವೆ ಇಲಾಖೆ, ಪಾವ್ಲೋಹ್ರಾದ್ ಜಿಲ್ಲೆಯಲ್ಲಿ ಕಂಪನಿಯ ಸರ್ವಿಸ್ ಬಸ್ ಮೇಲೆ ರಷ್ಯಾದ ಡ್ರೋನ್ ದಾಳಿ ಮಾಡಿದೆ. ಪ್ರಾಥಮಿಕ ಮಾಹಿತಿ ಪ್ರಕಾರ 12 ಮಂದಿ ಸಾವನ್ನಪ್ಪಿದ್ದಾರೆ. ಇತರ ಏಳು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಸ್​ಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ಅಗ್ನಿಶಾಮಕ ಸಿಬ್ಬಂದಿ ನಂದಿಸಿದ್ದಾರೆ. ಇನ್ನೂ ರಷ್ಯಾ ದಾಳಿಯಿಂದ ಒಟ್ಟು 15 ಮಂದಿ ಬಲಿಯಾಗಿದ್ದಾರೆ ಎಂದು ತಿಳಿಸಿದೆ.
ಡಿಟಿಇಕೆ ಕಲ್ಲಿದ್ದಲು ಘಟಕದ ಬಳಿ ಕಂಪನಿಯ ಬಸ್ ಅನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ. ಡಿಟಿಇಕೆ ಕಂಪನಿಯ ಸಿಇಒ ಮ್ಯಾಕ್ಸಿಮ್ ಟಿಮ್ಚೆಂಕೊ ಈ ದಾಳಿಯನ್ನು ಖಂಡಿಸಿದ್ದು, ಇದು ಸಂಪೂರ್ಣವಾಗಿ ನಾಗರಿಕರನ್ನು ಗುರಿಯಾಗಿಸಿದ ನಡೆಸಿದ ಅಪ್ರಚೋದಿತ ಭಯೋತ್ಪಾದಕ ದಾಳಿ ಎಂದು ಕರೆದಿದ್ದಾರೆ. ಗಾಯಾಳುಗಳು ಮತ್ತು ಮೃತರ ಕುಟುಂಬಸ್ಥರಿಗೆ ಬೆಂಬಲ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕೂಡ ಮೃತರಿಗೆ ಎಕ್ಸ್​ನಲ್ಲಿ ಸಂತಾಪ ಸೂಚಿಸಿದ್ದು, ಪಾವ್ಲೋಹ್ರಾಡ್ ಜಿಲ್ಲೆಯ ಟೆರ್ನಿವ್ಕಾದ ಡ್ನಿಪ್ರೊ ಪ್ರದೇಶದಲ್ಲಿ ರಷ್ಯಾದ ಡ್ರೋನ್‌ಗಳು ಗಣಿಗಾರರನ್ನು ಸಾಗಿಸುತ್ತಿದ್ದ ಸಾಮಾನ್ಯ ಬಸ್‌ಗೆ ಡಿಕ್ಕಿ ಹೊಡೆದಿವೆ. ಅನೇಕ ಜನರು ಸಾವನ್ನಪ್ಪಿದ್ದು ದುಃಖಕರ. ಎಲ್ಲಾ ಕುಟುಂಬಗಳು ಮತ್ತು ಪ್ರೀತಿಪಾತ್ರರಿಗೆ ನನ್ನ ಸಂತಾಪಗಳು. ಪ್ರದೇಶಗಳಲ್ಲಿನ ಪರಿಸ್ಥಿತಿಯ ಬಗ್ಗೆ ಸಮನ್ವಯ ನಡೆಸಿದ್ದೇನೆ ಎಂದಿದ್ದಾರೆ.
ಇನ್ನೂ, ರಷ್ಯಾದೊಂದಿಗೆ ಯುದ್ಧ ಕೊನೆಗಾಣಿಸಲು ಮತ್ತು ಶಾಂತಿಯುತ ಪರಿಹಾರಕ್ಕಾಗಿ ರಾಜತಾಂತ್ರಿ ಪರಿಹಾರಗಳು ನಡೆಯುತ್ತಿದ್ದು, ಅಮೆರಿಕಾದ ಮಧ್ಯಸ್ಥಿಕೆಯಲ್ಲಿ ಫೆ. 04 ಮತ್ತು 05ರಂದು ಅಬುದಾಬಿಯಲ್ಲಿ ತ್ರಿಪಕ್ಷೀಯ ಸಭೆ ನಡೆಯಲಿದೆ ಎನ್ನಲಾಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net