ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದ ಭಾರತದ ಕರೆನ್ಸಿ: 1 US ಡಾಲರ್​ಗೆ 90ರ ಗಡಿ ದಾಟಿದ ರೂಪಾಯಿ ಮೌಲ್ಯ! Rupee

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಅಮೆರಿಕದ ಡಾಲರ್​ ಎದುರು ನಿರಂತರ ಕುಸಿತ ಕಾಣುತ್ತಿರುವ ಭಾರತದ ರೂಪಾಯಿ
  • ಇದೇ ಮೊದಲ ಬಾರಿಗೆ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದ ಭಾರತದ ಕರೆನ್ಸಿ
  • ಒಂದು ಅಮೆರಿಕ ಡಾಲರ್​ಗೆ ಭಾರತದ ರೂಪಾಯಿ ಮೌಲ್ಯ 90 ರೂಪಾಯಿ ಗಡಿ ದಾಟಿದೆ
ನವದೆಹಲಿ: ಅಮೆರಿಕದ ಡಾಲರ್​ ಎದುರು ನಿರಂತರ ಕುಸಿತ ಕಾಣುತ್ತಿರುವ ಭಾರತದ ರೂಪಾಯಿ ( Rupee ) ಮೌಲ್ಯ, ಇದೇ ಮೊದಲ ಬಾರಿಗೆ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಬುಧವಾರ ಷೇರು ಮಾರುಕಟ್ಟೆಯ ಆರಂಭಿಕ ವಹಿವಾಟಿನ ಸಮಯದಲ್ಲಿ ಒಂದು ಡಾಲರ್​ಗೆ ಭಾರತದ ರೂಪಾಯಿ ಮೌಲ್ಯ 90 ರೂಪಾಯಿ ಗಡಿ ದಾಟಿದೆ.
ಜಾಗತಿಕ ಹೂಡಿಕೆದಾರರು ಭಾರತೀಯ ಷೇರು ಮಾರುಕಟ್ಟೆಗಳಿಂದ ತಮ್ಮ ಹೂಡಿಕೆ ಹಣವನ್ನು ಹಿಂತೆಗೆದುಕೊಂಡಿದ್ದರಿಂದ ಮತ್ತು ವಿಶ್ವದ ಬಹುತೇಕ ಕರೆನ್ಸಿಗಳ ವಿರುದ್ಧ ಡಾಲರ್ ಮೌಲ್ಯ ಬಲಗೊಳ್ಳುತ್ತಲೇ ಇರುವುದರಿಂದ ಈ ತೀವ್ರ ಕುಸಿತ ಕಂಡುಬಂದಿದೆ. ಭಾರತೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತದ ರೂಪಾಯಿ ಅತ್ಯಂತ ದುರ್ಬಲ ಸ್ಥಿತಿಗೆ ಜಾರಿದೆ.
ಷೇರು ಮಾರುಕಟ್ಟೆಯಲ್ಲಿ ಬೆಳಗ್ಗೆ 10 ಗಂಟೆಯ ಸುಮಾರಿಗೆ, ರೂಪಾಯಿ ಮೌಲ್ಯವು ಪ್ರತಿ ಡಾಲರ್‌ಗೆ 90.11 ಕ್ಕೆ ವಹಿವಾಟು ನಡೆಸುತ್ತಿದೆ. ಸದ್ಯಕ್ಕೆ ರೂಪಾಯಿ ಮೌಲ್ಯ ಸ್ಥಿರವಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಇನ್ನೂ ಈ ಕುಸಿತ ಅಚ್ಚರಿಯೇನಲ್ಲ ಆದರೆ, ಕುಸಿತದ ವೇಗ ಮಾರುಕಟ್ಟೆಯನ್ನೇ ಅಚ್ಚರಿಗೊಳಿಸಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.
ರೂಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿತ ಕಂಡಿರುವ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಭಾರತೀಯ ರಿಸರ್ವ್ ಬ್ಯಾಂಕ್, ಮತ್ತೆ ಹಿಂದಿನ ಸ್ಥಿತಿಗೆ ತೆಗೆದುಕೊಂಡು ಬರಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಆದರೆ, ತಕ್ಷಣಕ್ಕೆ ಹಿಂದಿನ ಸ್ಥಿತಿಗೆ ಬರುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಈ ದುರ್ಬಲ ಸ್ಥಿತಿ ಹೀಗೆ ಮುಂದುವರಿಯುತ್ತಾ? ಅಥವಾ ಮತ್ತೆ ಹಿಂದಿನ ಸ್ಥಿತಿಗೆ ಮರಳುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಇನ್ನು ಹಲವಾರು ಅಂಶಗಳು ರೂಪಾಯಿಯನ್ನು ಈ ಹಂತಕ್ಕೆ ತಳ್ಳಿವೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಭಾರತದಲ್ಲಿ ವಿದೇಶಿ ಬಂಡವಾಳ ಹರಿವು ತುಂಬಾ ದುರ್ಬಲವಾಗಿ ಉಳಿದಿವೆ. ಇದರ ನಡುವೆ ಅಮೆರಿಕ ಮತ್ತು ಭಾರತ ನಡುವಿನ ವ್ಯಾಪಾರ ಚರ್ಚೆಗಳ ಅನಿಶ್ಚಿತತೆ ಮುಂದುವರಿದಿರುವುದು ಕೂಡ ಪರಿಣಾಮ ಬೀರಿದೆ. ಇದಿಷ್ಟೇ ಅಲ್ಲದೆ, ಜಾಗತಿಕವಾಗಿ ಉಂಟಾಗಿರುವ ಅಪಾಯದ ವಾತಾವರಣ ಅಂದರೆ, ಯುದ್ಧದ ವಾತಾವರಣ ಡಾಲರ್ ಮೌಲ್ಯ ಹೆಚ್ಚಳಕ್ಕೆ ಪರೋಕ್ಷವಾಗಿ ಕಾರಣವಾಗುತ್ತಿದೆ.
ಇನ್ನು ಭಾರತೀಯ ಕರೆನ್ಸಿ ದುರ್ಬಲವಾಗುತ್ತಿರುವುದು ಮನೆಗಳು ಮತ್ತು ವ್ಯವಹಾರಗಳ ಮೇಲೆ ತಕ್ಷಣದ ಪರಿಣಾಮಗಳನ್ನು ಬೀರುತ್ತದೆ. ಆಮದು ಬಿಲ್‌ಗಳು ಹೆಚ್ಚಾಗಲಿವೆ. ಅದರಲ್ಲೂ ವಿಶೇಷವಾಗಿ ಕಚ್ಚಾ ತೈಲ, ಎಲೆಕ್ಟ್ರಾನಿಕ್ಸ್ ಮತ್ತು ಕೈಗಾರಿಕಾ ಸರಕುಗಳ ಬೆಲೆ ಹೆಚ್ಚಾಗಲಿದೆ. ಇದಿಷ್ಟೇ ಅಲ್ಲದೆ, ವಿದೇಶದಲ್ಲಿ ಸಾಲ ಹೊಂದಿರುವ ಕಂಪನಿಗಳು ಮರುಪಾವತಿ ವೆಚ್ಚವನ್ನು ಹೆಚ್ಚಿಸಲಿವೆ.
ವಿದೇಶದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಮತ್ತು ವಿದೇಶ ಪ್ರವಾಸಕ್ಕೆ ತೆರಳಿರುವ ಪ್ರಯಾಣಿಕರು ಕೂಡ ಇದರ ಪರಿಣಾಮವನ್ನು ತಕ್ಷಣವೇ ಅನುಭವಿಸುತ್ತಾರೆ. ಇದರ ನಡುವೆ ರಫ್ತುದಾರರು ಸ್ವಲ್ಪ ಮಟ್ಟದ ಪರಿಹಾರವನ್ನು ಪಡೆಯಬಹುದು ಆದರೆ, ಆರ್ಥಿಕತೆಯ ಮೇಲಿನ ಒಟ್ಟಾರೆ ಒತ್ತಡ ರೂಪಾಯಿ ಮೌಲ್ಯ ಕುಸಿತದಿಂದ ಹೆಚ್ಚಾಗುತ್ತದೆ.
ಇನ್ನು ವಿದೇಶಿ ಹರಿವು ಸ್ಥಿರವಾಗದ ಹೊರತು ಅಥವಾ ಜಾಗತಿಕ ಪರಿಸ್ಥಿತಿಗಳು ಸುಧಾರಿಸದ ಹೊರತು ಭಾರತೀಯ ಕರೆನ್ಸಿ ಮೌಲ್ಯ ಸುಧಾರಣೆ ಆಗುವುದಿಲ್ಲ. ಸದ್ಯದ ಮಟ್ಟಿಗೆ ರೂಪಾಯಿ ಅಸ್ಥಿರವಾಗೇ ಉಳಿಯುತ್ತದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net