ನೆತನ್ಯಾಹು ಫೋನ್ ಕ್ಯಾಮೆರಾಕ್ಕೆ ಕೆಂಪು ಟೇಪ್..; ವಿಶ್ವದ ಅತ್ಯಂತ ಶಕ್ತಿಶಾಲಿ ಬೇಹುಗಾರಿಕಾ ರಾಷ್ಟ್ರದ ಪ್ರಧಾನಿಗೂ ಹ್ಯಾಕರ್ಸ್ ಭೀತಿಯೇ? Benjamin Netanyahu

ನೆತನ್ಯಾಹು ಫೋನ್ ಕ್ಯಾಮೆರಾಕ್ಕೆ ಕೆಂಪು ಟೇಪ್..; ವಿಶ್ವದ ಅತ್ಯಂತ ಶಕ್ತಿಶಾಲಿ ಬೇಹುಗಾರಿಕಾ ರಾಷ್ಟ್ರದ ಪ್ರಧಾನಿಗೂ ಹ್ಯಾಕರ್ಸ್ ಭೀತಿಯೇ?
ನೆತನ್ಯಾಹು ಫೋನ್ ಕ್ಯಾಮೆರಾಕ್ಕೆ ಕೆಂಪು ಟೇಪ್..; ವಿಶ್ವದ ಅತ್ಯಂತ ಶಕ್ತಿಶಾಲಿ ಬೇಹುಗಾರಿಕಾ ರಾಷ್ಟ್ರದ ಪ್ರಧಾನಿಗೂ ಹ್ಯಾಕರ್ಸ್ ಭೀತಿಯೇ?
Published on
ಟೆಲ್ ಅವಿವ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು(Benjamin Netanyahu) ಅವರ ಇತ್ತೀಚಿನ ಫೋಟೋವೊಂದು ಜಾಗತಿಕ ಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಬಿಳಿ ಶರ್ಟ್ ಮತ್ತು ಕಪ್ಪು ಜಾಕೆಟ್ ಧರಿಸಿ ವಾಹನದ ಪಕ್ಕದಲ್ಲಿ ನಿಂತು ಫೋನ್‌ನಲ್ಲಿ ಮಾತನಾಡುತ್ತಿರುವ ನೆತನ್ಯಾಹು ಅವರ ಫೋನ್‌ನ ಕ್ಯಾಮೆರಾ ಭಾಗವನ್ನು ಕೆಂಪು ಬಣ್ಣದ ಸ್ಟಿಕ್ಕರ್ ಅಥವಾ ಟೇಪ್‌ನಿಂದ ಮುಚ್ಚಿರುವುದು ನೆಟ್ಟಿಗರ ಕಣ್ಣಿಗೆ ಬಿದ್ದಿದೆ. ಇದು ಕೇವಲ ಒಂದು ಫೋಟೋ ಅಲ್ಲ, ಬದಲಾಗಿ ಡಿಜಿಟಲ್ ಯುಗದಲ್ಲಿ ನಮ್ಮ ಖಾಸಗಿತನ ಎಷ್ಟರ ಮಟ್ಟಿಗೆ ಸುರಕ್ಷಿತವಾಗಿದೆ ಎಂಬ ಬಲವಾದ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಟ್ವಿಟರ್‌ನಲ್ಲಿ ತಲ್ಲಣ ಮೂಡಿಸಿದ ಮರಿಯೊ ನೌಫಲ್ ಪೋಸ್ಟ್

ಪ್ರಖ್ಯಾತ ಬಿಸಿನೆಸ್ ಇನ್ಫ್ಲುಯೆನ್ಸರ್ ಮರಿಯೊ ನೌಫಲ್ ಈ ಫೋಟೋವನ್ನು ಹಂಚಿಕೊಂಡು, ಇಸ್ರೇಲ್ ಪ್ರಧಾನಿಯೇ ತಮ್ಮ ಫೋನ್ ಕ್ಯಾಮೆರಾ ಮುಚ್ಚಬೇಕಾದ ಪರಿಸ್ಥಿತಿ ಬಂದಿದೆ ಎಂದರೆ, ಸಾಮಾನ್ಯ ಜನರ ಗತಿಯೇನು? ಅವರು ಯಾರ ಬಗ್ಗೆ ಇಷ್ಟೊಂದು ಹೆದರುತ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ, ಪ್ರಪಂಚದಾದ್ಯಂತ ಡಿಜಿಟಲ್ ಸುರಕ್ಷತೆಯ ಬಗ್ಗೆ ಚರ್ಚೆ ಆರಂಭವಾಗಿದೆ.
ಏನಿದು ರೆಡ್ ಟೇಪ್ ರಹಸ್ಯ..?
ಈ ಬಗ್ಗೆ ಎಕ್ಸ್​ನ ಎಐ ಚಾಟ್‌ಬಾಟ್ 'ಗ್ರೋಕ್' (Grok) ವಿಶ್ಲೇಷಣೆ ನೀಡಿದ್ದು, ಇದು ಇಸ್ರೇಲ್‌ನ ಉನ್ನತ ಭದ್ರತಾ ಶಿಷ್ಟಾಚಾರದ ಭಾಗ ಎಂದು ಹೇಳಿದೆ. ಅತಿ ಸೂಕ್ಷ್ಮ ಸರ್ಕಾರಿ ಸೌಲಭ್ಯಗಳು ಅಥವಾ ವರ್ಗೀಕೃತ ಪ್ರದೇಶಗಳಿಗೆ ಪ್ರವೇಶಿಸುವಾಗ, ಆಕಸ್ಮಿಕವಾಗಿ ಅಥವಾ ದುರುದ್ದೇಶಪೂರಿತವಾಗಿ ಯಾವುದೇ ಚಿತ್ರೀಕರಣ ನಡೆಯಬಾರದು ಎಂಬ ಕಾರಣಕ್ಕೆ ಇಂತಹ ಟ್ಯಾಂಪರ್-ಎವಿಡೆಂಟ್ ಸ್ಟಿಕ್ಕರ್‌ಗಳನ್ನು ಬಳಸುವುದು ಅಲ್ಲಿನ ಸಾಮಾನ್ಯ ಪದ್ಧತಿಯಾಗಿದೆ.

ಪೆಗಾಸಸ್ ಸೃಷ್ಟಿಕರ್ತರಿಗೇ ಸ್ಪೈವೇರ್ ಭಯ..!

ವಿಪರ್ಯಾಸವೆಂದರೆ, ಜಗತ್ತಿನಾದ್ಯಂತ ಪತ್ರಕರ್ತರು ಮತ್ತು ರಾಜಕಾರಣಿಗಳ ಮೇಲೆ ನಿಗಾ ಇಡಲು ಬಳಸಲಾಗುವ ಪ್ರಖ್ಯಾತ ಪೆಗಾಸಸ್ ಸ್ಪೈವೇರ್ ಅನ್ನು ಅಭಿವೃದ್ಧಿಪಡಿಸಿದ್ದು ಇಸ್ರೇಲ್ ಮೂಲದ ಎನ್‌ಎಸ್‌ಒ (NSO) ಸಂಸ್ಥೆ. ತಂತ್ರಜ್ಞಾನದ ಮೂಲಕ ಬೇರೆಯವರ ಬೆಡ್‌ರೂಮ್‌ವರೆಗೂ ಇಣುಕಬಲ್ಲ ತಂತ್ರಜ್ಞಾನ ಹೊಂದಿರುವ ದೇಶದ ಪ್ರಧಾನಿಯೇ ತನ್ನ ಕ್ಯಾಮೆರಾಕ್ಕೆ ಟೇಪ್ ಹಚ್ಚಿರುವುದು ಬೇಹುಗಾರಿಕೆಗೆ ಯಾರು ಬೇಕಾದರೂ ಬಲಿಯಾಗಬಹುದು ಎಂಬ ಸತ್ಯವನ್ನು ಎತ್ತಿ ತೋರಿಸುತ್ತಿದೆ.

ತಜ್ಞರ ಎಚ್ಚರಿಕೆ

ಡಿಜಿಟಲ್ ಫೋರೆನ್ಸಿಕ್ ತಜ್ಞರ ಪ್ರಕಾರ, ಹ್ಯಾಕರ್‌ಗಳು ಹಳೆಯ ಆಪರೇಟಿಂಗ್ ಸಿಸ್ಟಮ್‌ಗಳ ಮೂಲಕ ಅಥವಾ ನಾವು ಅನುಮತಿ ನೀಡಿದ ಆ್ಯಪ್‌ಗಳ ಮೂಲಕ ನಮ್ಮ ಕ್ಯಾಮೆರಾವನ್ನು ನಮಗೆ ತಿಳಿಯದಂತೆ ನಿಯಂತ್ರಿಸಬಹುದು. ನಿಮ್ಮ ಸಾಧನವು ಹ್ಯಾಕ್ ಆಗಿದ್ದರೂ ಸಹ, ಭೌತಿಕವಾಗಿ ಕ್ಯಾಮೆರಾವನ್ನು ಮುಚ್ಚುವುದು ರಹಸ್ಯ ಚಿತ್ರೀಕರಣವನ್ನು ತಡೆಯುವ ಏಕೈಕ ಅಂತಿಮ ಮಾರ್ಗವಾಗಿದೆ ಎಂದು ಅವರು ಎಚ್ಚರಿಸಿದ್ದಾರೆ.
ಸಾಮಾನ್ಯ ನಾಗರಿಕರಿಗೆ ಇದು ಒಂದು ದೊಡ್ಡ ಸಂದೇಶ: ನಿಮ್ಮ ಫೋನ್‌ನ ಸೆಕ್ಯೂರಿಟಿ ಎಷ್ಟೇ ಹೆಚ್ಚಿದ್ದರೂ, ಸೈಬರ್ ಲೋಕದಲ್ಲಿ ಯಾವುದೂ ಶೇ.100 ಸುರಕ್ಷಿತವಲ್ಲ ಎಂದು ತಿಳಿದು ಬಂದಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net