ನಿಮ್ಮ ನಿಜವಾದ ಶತ್ರುವನ್ನು ಗುರುತಿಸಿ ಒಂದಾಗಿ: ಮುಸ್ಲಿಂ ರಾಷ್ಟ್ರಗಳಿಗೆ ಇರಾನ್‌ನ ಸರ್ವೋಚ್ಛ ನಾಯಕ ಮೊಜ್ತಬಾ ಖಮೇನಿ ಕರೆ! | Mojtaba Khamenei

Mojtaba Khamenei > ನಿಮ್ಮ ನಿಜವಾದ ಶತ್ರುವನ್ನು ಗುರುತಿಸಿ ಒಂದಾಗಿ :  ಇರಾನ್​ನ ಸರ್ವೋಚ್ಛ ನಾಯಕ ಮೊಜ್ತಬಾ ಖಮೇನಿ
Mojtaba Khamenei > ನಿಮ್ಮ ನಿಜವಾದ ಶತ್ರುವನ್ನು ಗುರುತಿಸಿ ಒಂದಾಗಿ : ಇರಾನ್​ನ ಸರ್ವೋಚ್ಛ ನಾಯಕ ಮೊಜ್ತಬಾ ಖಮೇನಿ
Published on

Mojtaba Khamenei: ಮಧ್ಯಪ್ರಾಚ್ಯ ಯುದ್ಧ ಆರಂಭವಾಗಿ ಆರು ತಿಂಗಳು ಪೂರೈಸಿದ ಹಿನ್ನೆಲೆಯಲ್ಲಿ, ಇರಾನ್​ನ ಸರ್ವೋಚ್ಛ ನಾಯಕ ಮೊಜ್ತಬಾ ಖಮೇನಿ ಇಂದು (ಆಗಸ್ಟ್ 30) ಲಿಖಿತ ಸಂದೇಶವೊಂದನ್ನು ರವಾನಿಸಿದ್ದು, ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಪ್ರಾದೇಶಿಕ ಮುಸ್ಲಿಂ ದೇಶಗಳು ಒಗ್ಗೂಡುವಂತೆ ಕರೆ ನೀಡಿದ್ದಾರೆ.

ಕಳೆದ ಫೆಬ್ರವರಿ 28ರಂದು ನಡೆದ ದಾಳಿಯಲ್ಲಿ ತಮ್ಮ ತಂದೆ ಆಯತೊಲ್ಲಾ ಅಲಿ ಖಮೇನಿ ಮೃತಪಟ್ಟ ಬಳಿಕ ಮೊಜ್ತಬಾ ಖಮೇನಿ ಇರಾನ್‌ನ ನಾಯಕತ್ವ ವಹಿಸಿಕೊಂಡಿದ್ದರು. ಆದರೆ, ಅಧಿಕಾರಕ್ಕೆ ಬಂದ ನಂತರ ಇದುವರೆಗೆ ಎಲ್ಲೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.

ಇಸ್ಲಾಂ ಶತ್ರುಗಳು ವ್ಯತ್ಯಾಸಗಳ ದುರುಪಯೋಗಕ್ಕೆ ಯತ್ನ

ಶಿಯಾ ಮುಸ್ಲಿಮರು ಪ್ರವಾದಿ ಮಹಮ್ಮದ್ ಅವರ ಜನ್ಮದಿನವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಭಾನುವಾರ ಎಕ್ಸ್ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಖಮೇನಿ, ಇಸ್ಲಾಂ ಧರ್ಮದ ಶತ್ರುಗಳು ಮುಸ್ಲಿಮರಲ್ಲಿ ವಿಭಜನೆ ಉಂಟುಮಾಡಲು ಮತ್ತು ಅವರ ಶಕ್ತಿಯನ್ನು ಕುಗ್ಗಿಸಲು ಜನಾಂಗೀಯ, ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಭೌಗೋಳಿಕ ವ್ಯತ್ಯಾಸಗಳನ್ನು ದುರುಪಯೋಗಪಡಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಮುಸ್ಲಿಮರಲ್ಲಿ ವಿಭಜನೆ ತಂದು ಅವರ ಶಕ್ತಿ ಕುಂದುವುದನ್ನು ನೋಡಲು ಕಾಯುತ್ತಿರುವ ಶತ್ರು, ತನ್ನ ಪ್ರಾಬಲ್ಯವನ್ನು ಸಾಧಿಸಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದಾನೆ ಎಂದು ತಿಳಿಸಿದ್ದಾರೆ.

ಯಾವುದೇ ಸ್ಥಾನದಲ್ಲಿರುವ ವ್ಯಕ್ತಿಯು ತಿಳುವಳಿಕೆಯಿಂದಾಗಲಿ ಅಥವಾ ಇಲ್ಲದೆಯಾಗಲಿ, ಉದ್ದೇಶಪೂರ್ವಕವಾಗಿ ಅಥವಾ ಅಕಸ್ಮಾತ್ತಾಗಿ ಮುಸ್ಲಿಮರ ನಡುವೆ ವಿಭಜನೆ ತರುವ ಮತ್ತು ಮುಸ್ಲಿಂ ಸಮುದಾಯದಲ್ಲಿ ಸಂಘರ್ಷ ಸೃಷ್ಟಿಸುವಂತಹ ಕೆಲಸವನ್ನು ಮಾಡಿದರೆ, ಅವರು ಇಸ್ಲಾಂ ಶತ್ರುಗಳ ಉದ್ದೇಶಕ್ಕೆ ನೆರವಾದಂತೆ ಎಂದು ಖಮೇನಿ ಎಚ್ಚರಿಸಿದ್ದಾರೆ.

ಪ್ರಾದೇಶಿಕ ರಾಷ್ಟ್ರಗಳ ಒಗ್ಗಟ್ಟಿಗೆ ಮನವಿ!

ಪರ್ಷಿಯನ್ ಗಲ್ಫ್ ಕರಾವಳಿ ಭಾಗದ ದೇಶಗಳು ಇಸ್ಲಾಂ ತತ್ವಗಳ ಅಡಿಯಲ್ಲಿ ದೃಢವಾಗಿ ಒಂದಾದರೆ, ಹೊರಗಿನ ಶಕ್ತಿಗಳು ಈ ಭಾಗದ ಜಾಗ ಮತ್ತು ಸಂಪತ್ತನ್ನು ದೋಚಲು ಧೈರ್ಯ ಮಾಡುವುದಿಲ್ಲ ಎಂದು ಅವರು ಪ್ರತಿಪಾದಿಸಿದ್ದು, ಮುಸ್ಲಿಂ ಸಮುದಾಯದ ಪ್ರಸ್ತುತ ಸವಾಲುಗಳಿಗೆ ಪರಸ್ಪರ ಸೌಹಾರ್ದತೆ ಮತ್ತು ಸಹಕಾರವೇ ಏಕೈಕ ಪರಿಹಾರ ಎಂದಿದ್ದಾರೆ.
ಅಮೆರಿಕ ಹಾಗೂ ಇಸ್ರೇಲ್ ಅನ್ನು ನೇರವಾಗಿ ಉಲ್ಲೇಖಿಸಿರುವ ಅವರು, ಪ್ರಾದೇಶಿಕ ಆಡಳಿತಗಾರರು ತಮ್ಮ ನಿಜವಾದ ಶತ್ರು ಯಾರು ಎಂಬುದನ್ನು ಸ್ಪಷ್ಟವಾಗಿ ಅರ್ಥೈಸಿಕೊಂಡು, ಅವರ ಕುತಂತ್ರಗಳನ್ನು ಮೆಟ್ಟಿ ನಿಲ್ಲಬೇಕು ಎಂದು ಹೇಳಿದ್ದಾರೆ. ಸಂಘರ್ಷದ ಆರಂಭದಲ್ಲಿ ಇರಾನ್ ಪಡೆಗಳು ಸೌದಿ ಅರೇಬಿಯಾ, ಯುಎಇ, ಜೋರ್ಡಾನ್, ಕುವೈತ್, ಕತಾರ್ ಹಾಗೂ ಬಹ್ರೇನ್‌ಗಳಲ್ಲಿರುವ ಅಮೆರಿಕನ್ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡಿದ್ದವು. ಇದರಿಂದಾಗಿ ಇರಾನ್ ಮತ್ತು ಈ ನೆರೆಯ ದೇಶಗಳ ಬಾಂಧವ್ಯದಲ್ಲಿ ಬಿರುಕು ಮೂಡಿತ್ತು.
ಅಮೆರಿಕದ ಆಡಳಿತ ಮತ್ತು ಇಸ್ರೇಲ್‌ನ ಝಿಯೋನಿಸ್ಟ್ ಸರ್ಕಾರವು ಮುಸ್ಲಿಮರ ಒಗ್ಗಟ್ಟಿನ ಪರಮ ವೈರಿಗಳು ಎಂದು ಬಣ್ಣಿಸಿರುವ ಅವರು, ದೇಶದ ಒಳಗಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಪ್ರಜೆಗಳು ಹಾಗೂ ಅಧಿಕಾರಿಗಳು ಒಂದಾಗಬೇಕು ಎಂದು ವಿನಂತಿಸಿದ್ದಾರೆ. ಅಲ್ಲದೆ, ದೇಶದ ಆರ್ಥಿಕತೆಯನ್ನು ಡಾಲರ್ ಮುಕ್ತಗೊಳಿಸಿ, ಆರ್ಥಿಕ ಉತ್ಪಾದನೆ ಹೆಚ್ಚಿಸುವಂತೆಯೂ ಖಮೇನಿ ಸಲಹೆ ನೀಡಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net