

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಅವರದ್ದೇ ರಿಪಬ್ಲಿಕನ್ ಪಕ್ಷದಲ್ಲಿ ಮೊದಲ ಬಾರಿಗೆ ಬಹಿರಂಗವಾಗಿ ಬಂಡಾಯದ ಕಹಳೆ ಮೊಳಗಿದೆ. ಇದಕ್ಕೆ ಪ್ರಮುಖ ಕಾರಣ ಟ್ರಂಪ್ ಅವರ ಕುಸಿಯುತ್ತಿರುವ ಜನಪ್ರಿಯತೆ. ಇದರೊಂದಿಗೆ, ಮಧ್ಯಂತರ ಚುನಾವಣೆಯಲ್ಲಿ ಟ್ರಂಪ್ ಬೆಂಬಲವು ಅಭ್ಯರ್ಥಿಗಳಿಗೆ ಲಾಭ ತರುವ ಬದಲು ನಷ್ಟ ಉಂಟುಮಾಡಬಹುದು ಎಂಬ ಆತಂಕವೂ ಎದುರಾಗಿದೆ. 2026ರ ನವೆಂಬರ್‌ನಲ್ಲಿ ನಡೆಯಲಿರುವ ಚುನಾವಣೆಗೆ ಮುnewData, ತೀವ್ರ ಪೈಪೋಟಿ ಇರುವ ಕ್ಷೇತ್ರಗಳಲ್ಲಿ ಹಲವು ರಿಪಬ್ಲಿಕನ್ ಅಭ್ಯರ್ಥಿಗಳು ಟ್ರಂಪ್ ಅವರಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದಾರೆ. ಕೆಲವರು ತಮ್ಮ ಪ್ರಚಾರ ವೆಬ್‌ಸೈಟ್‌ನಿಂದ ಟ್ರಂಪ್ ಮತ್ತು ಅವರ "ಅಮೆರಿಕ ಫಸ್ಟ್' ಕಾರ್ಯಸೂಚಿಯ ಉಲ್ಲೇಖವನ್ನೇ ತೆಗೆದುಹಾಕಿದ್ದರೆ, ಇನ್ನು ಕೆಲವರು ಅಧ್ಯಕ್ಷ ಟ್ರಂಪ್ ಅವರೊಂದಿಗೆ ಚುನಾವಣಾ ವೇದಿಕೆ ಹಂಚಿಕೊಳ್ಳುವುದನ್ನು ತಪ್ಪಿಸುತ್ತಿದ್ದಾರೆ.
ರಿಪಬ್ಲಿಕನ್ ಪಕ್ಷದ ಹಳೆಯ ನೀತಿಗಳು ಹಾಗೂ ಡೊನಾಲ್ಡ್ ಟ್ರಂಪ್ ಕಾರ್ಯವೈಖರಿಯ ನಡುವಿನ ಭಿನ್ನಾಭಿಪ್ರಾಯಗಳು ಪಕ್ಷದಲ್ಲೇ ಹಲವು ನಾಯಕರ ಅಸಮಾಧಾನಕ್ಕೆ ಪ್ರಮುಖ ಕಾರಣವಾಗಿವೆ. ರಿಪಬ್ಲಿಕನ್ನರು ನ್ಯಾಟೋ ಬಲಪಡಿಸುವಿಕೆ ಮತ್ತು ಮುಕ್ತ ವ್ಯಾಪಾರದ ಪರವಾಗಿದ್ದಾರೆ. ಆದರೆ ಟ್ರಂಪ್ ಏಕಪಕ್ಷೀಯ ನಿರ್ಧಾರಗಳು, ಮಿತ್ರರಾಷ್ಟ್ರಗಳ ಮೇಲಿನ ಒತ್ತಡ ಹಾಗೂ ಸುಂಕ ನೀತಿಗಳ ಬಗ್ಗೆ ಹಲವು ಹಿರಿಯ ನಾಯಕರು ತೀವ್ರ ಅಸಮಾಧಾನಗೊಂಡಿದ್ದಾರೆ. ಟ್ರಂಪ್ ತಮ್ಮ ಪರವಾಗಿಲ್ಲದ ಸ್ವಪಕ್ಷೀಯ ನಾಯಕರ ವಿರುದ್ಧವೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ರಾಜಕೀಯವಾಗಿ ಮೂಲೆಗುಂಪು ಮಾಡುವ ಶೈಲಿ ಹಳೆಯ ತಲೆಮಾರಿನ ನಾಯಕರಲ್ಲಿ ಅಸಮಾಧಾನವನ್ನು ಮೂಡಿಸಿದೆ.
ಬಹಿರಂಗ ವಿರೋಧ
ಡೊನಾಲ್ಡ್ ಟ್ರಂಪ್ ನೀತಿಗಳ ವಿರುದ್ಧವೂ ಪಕ್ಷ ಒಳಗಡೆಯಿಂದ ಧ್ವನಿಗಳು ತೀವ್ರಗೊಂಡಿವೆ. ಐಯೋವಾದ ಸಂಸದೆ ಹಾಗೂ ಸೆನೆಟ್ ಅಭ್ಯರ್ಥಿ ಆಶ್ಲೇ ಹಿನ್ಸನ್ ಮತ್ತು ಮಿಚಿಗನ್‌ನ ಸೆನೆಟ್ ಅಭ್ಯರ್ಥಿ ಮೈಕ್ ರೋರ್ಜಸ್ ಅವರು ಇರಾನ್ ವಿರುದ್ಧದ ಯುದ್ಧವನ್ನು ಶೀಘ್ರವೇ ಕೊನೆಗೊಳಿಸಬೇಕೆಂದು ಒತ್ತಾಯಿಸಿದ್ದಾರೆ. ಇವರಿಬ್ಬರೂ ಈ ಹಿಂದೆ ಟ್ರಂಪ್ ಅವರ ಯುದ್ಧ ಕ್ರಮಗಳನ್ನು ಬೆಂಬಲಿಸಿದ್ದರು ಎಂಬುದು ಗಮನಾರ್ಹ. ಅಲ್ಲದೆ, ಫ್ಲೋರಿಡಾದ ಸಂಸದೆ ಮಾರಿಯಾ ಟ್ರಂಪ್ ಅವರ ಕಠಿಣ ವಲಸೆ ನೀತಿಯನ್ನು ಪ್ರಶ್ನಿಸಿದ್ದಾರೆ. ಅದೇ ಸಮಯದಲ್ಲಿ, ತಮಗೆ ಟ್ರಂಪ್ ಅವರ ಪ್ರಚಾರ ಬೇಡವೆಂದು ಹಲವು ಅಭ್ಯರ್ಥಿಗಳು ಹೇಳಿರುವುದು, ಪಕ್ಷದವರಿಗೆ ಟ್ರಂಪ್ ಎಷ್ಟು ಮುಜುಗರ ತಂದಿದ್ದಾರೆ ಎಂಬುದಕ್ಕೆ ಸ್ಪಷ್ಟ ನಿದರ್ಶನ.
ಸೆಪ್ಟೆಂಬರ್ 24ರಿಂದ 28ರವರೆಗೆ ನಡೆದ ಎಪಿ&ಎನ್‌ಒಆರ್‌ಸಿ ಸಮೀಕ್ಷೆಯ ಪ್ರಕಾರ, 30% ಅಮೆರಿಕನ್ನರು ಮಾತ್ರ ಟ್ರಂಪ್ ಕಾರ್ಯವೈಖರಿಯಿಂದ ತೃಪ್ತರಾಗಿದ್ದಾರೆ. ಆರ್ಥಿಕತೆಯ ವಿಚಾರದಲ್ಲಿ ಅವರ ಅಪ್ರೂವಲ್ ರೇಟಿಂಗ್ (ಒಪ್ಪಿಗೆ ದರ) 26% ರಷ್ಟಿದೆ. ಹಣದುಬ್ಬರ ನಿಭಾಯಿಸುವ ವಿಷಯದಲ್ಲಿ ಇದು ಕೇವಲ 17% ಆಗಿದೆ. ಹೆಚ್ಚುತ್ತಿರುವ ಬೆಲೆಗಳಿಗೆ ಟ್ರಂಪ್ ನೀತಿಗಳೇ ಕಾರಣ ಎಂದು 65%ಕ್ಕೂ ಹೆಚ್ಚು ಅಮೆರಿಕನ್ನರು ಆರೋಪಿಸಿದ್ದಾರೆ. ಒಟ್ಟಾರೆ ಕಾರ್ಯವೈಖರಿಯಲ್ಲಿ ಪ್ರತಿ 10 ಅಮೆರಿಕನ್ನರಲ್ಲಿ ಮೂವರು ಮಾತ್ರ ತೃಪ್ತರಾಗಿದ್ದಾರೆ.
ಸುಂಕದ (ಟ್ಯಾರಿಫ್) ವಿಚಾರದಲ್ಲಿ ಟ್ರಂಪ್ ಮಿತಿಮೀರಿ ಹೋಗಿದ್ದಾರೆ ಎಂದು 64% ಜನರು ಅಭಿಪ್ರಾಯಪಟ್ಟಿದ್ದಾರೆ. ಮತ್ತೊಂದೆಡೆ, ರಿಪಬ್ಲಿಕನ್ ಅಭ್ಯರ್ಥಿಗಳಿಗೆ ಎದುರಾಗಿರುವ ದೊಡ್ಡ ಸಮಸ್ಯೆ ಏನೆಂದರೆ, ಅವರು ಹಣದುಬ್ಬರದ ವಿರುದ್ಧ ಪ್ರಚಾರ ಮಾಡಲು ಬಯಸುತ್ತಾರಾದರೂ, ವೈಟ್‌ಹೌಸ್‌ನಲ್ಲಿರುವ ತಮ್ಮದೇ ಪಕ್ಷದ ಅಧ್ಯಕ್ಷರ ಆರ್ಥಿಕ ನೀತಿಗಳಿಂದ ಸಂಪೂರ್ಣವಾಗಿ ದೂರ ಉಳಿಯಲು ಸಾಧ್ಯವಾಗುತ್ತಿಲ್ಲ.
ನಾಯಕತ್ವಕ್ಕೆ ಅಗ್ನಿಪರೀಕ್ಷೆ
ಟ್ರಂಪ್ ಮೊದಲ ಅವಧಿಯಲ್ಲಿ (2017&2021) ಉಪಾಧ್ಯಕ್ಷರಾಗಿದ್ದ ಮೈಕ್ ಪೆನ್ಸ್, "ಸಂವಿಧಾನಕ್ಕಿಂತ ಯಾರೂ ದೊಡ್ಡವರಲ್ಲ' ಎಂದು ಹೇಳಿ ಟ್ರಂಪ್‌ರನ್ನು ಬೆಂಬಲಿಸಲು ನಿರಾಕರಿಸಿದ್ದಾರೆ.
ಮಾಜಿ ಸಂಸದರಾದ ಲಿಜ್ ಚೆನಿ ಮತ್ತು ಆಡಮ್ ಕಿಂಜಿಂಗರ್ ಇವರಿಬ್ಬರೂ ಕ್ಯಾಪಿಟಲ್ ದಾಳಿಯ ತನಿಖಾ ಸಮಿತಿಯಲ್ಲಿ ಮುಂಚೂಣಿಯಲ್ಲಿದ್ದು, ಟ್ರಂಪ್ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.
ಮಾಜಿ ಅಧ್ಯಕ್ಷೀಯ ಅಭ್ಯರ್ಥಿ ಹಾಗೂ ಉತಾಹ್‌ನ ಮಾಜಿ ಸೆನೆಟರ್ ಮಿಟ್ ರಾಮ್ನಿ ಅವರು ಟ್ರಂಪ್ ವಿರುದ್ಧದ ವಾಗ್ದಂಡನೆ ಪ್ರಕ್ರಿಯೆಯಲ್ಲಿ ಅವರ ವಿರುದ್ಧ ಮತ ಚಲಾಯಿಸಿದ್ದರು.
ಟ್ರಂಪ್ ಸಂಪುಟದಲ್ಲಿದ್ದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಹಾಗೂ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಅವರು 'ಟ್ರಂಪ್ ಅಧ್ಯಕ್ಷ ಸ್ಥಾನಕ್ಕೆ ಅರ್ಹರಲ್ಲ' ಎಂದು ಬಹಿರಂಗವಾಗಿ ಹೇಳಿದ್ದಾರೆ.
ಸೆನೆಟರ್‌ಗಳಾದ ಲಿಸಾ ಮುಕೋವರ್ಸ್ಕಿ ಮತ್ತು ಸುಸಾನ್ ಕಾಲಿನ್ಸ್ ಸೆನೆಟ್‌ನಲ್ಲಿ ಟ್ರಂಪ್ ಅವರ ಹಲವು ತೀವ್ರಗಾಮಿ ತೀರ್ಮಾನಗಳನ್ನು ವಿರೋಧಿಸಿದ್ದಾರೆ.
ಅಂತರ ಕಾಯ್ದುಕೊಂಡ ನಾಯಕರು
ಟ್ರಂಪ್ ಅವರಿಂದ ಅಂತರ ಕಾಯ್ದುಕೊಳ್ಳುತ್ತಿರುವವರ ಪಟ್ಟಿಯಲ್ಲಿ ಗವರ್ನರ್ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ವಿಸ್ಕಾನ್ಸಿನ್‌ನ ಟಾಮ್ ಟಿಫಾನಿ, ಅರಿಜೋನಾದ ಎಲಿ ಕ್ರೇನ್ ಮತ್ತು ಜಾರ್ಜಿಯಾದ ರಿಕ್ ಜಾಕ್ಸನ್ ಅವರಂತಹ ಪ್ರಮುಖ ಹೆಸರುಗಳು ಇವೆ. ಸಂಸದರ ಪೈಕಿ ಜಾರ್ಜಿಯಾದ ಮಾರ್ಜರಿ ಟೇಲರ್, ಕೆಂಟುಕಿಯ ಜೇಮ್ಸ್ ಕೋಮರ್, ಓಹಿಯೋದ ಜಿಮ್ ಜೋರ್ಡಾನ್ ಮತ್ತು ಸೌತ್ ಕ್ಯಾರೊಲಿನಾದ ನ್ಯಾನ್ಸಿ ಮೇಸ್ ಪ್ರಮುಖರಾಗಿದ್ದಾರೆ. ಇವರೆಲ್ಲರೂ ದೀರ್ಘಕಾಲದಿಂದ ಟ್ರಂಪ್ ಅವರ ಕಟ್ಟಾ ಬೆಂಬಲಿಗರಾಗಿದ್ದರು. ಓಹಿಯೋ ಗವರ್ನರ್ ಚುನಾವಣೆ ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ ಅವರಿಗೆ ದೊಡ್ಡ ಪರೀಕ್ಷೆಯಾಗಿ ಪರಿಣಮಿಸಿದೆ. ಟ್ರಂಪ್ 2024ರಲ್ಲಿ ಈ ರಾಜ್ಯವನ್ನು 11 ಪಾಯಿಂಟ್‌ಗಳ ಮುನ್ನಡೆಯಿಂದ ಗೆದ್ದಿದ್ದರು. ಆದರೆ ಸೆಪ್ಟೆಂಬರ್ 24ರಿಂದ 27ರವರೆಗೆ ನಡೆದ ಮಾರಿಸ್ಟ್ ಸಮೀಕ್ಷೆಯಲ್ಲಿ, ಡೆಮಾಕ್ರೆಟ್ ನಾಯಕಿ ಆಮಿ ಆಕ್ಟನ್ 50% ಬೆಂಬಲದೊಂದಿಗೆ ರಾಮಸ್ವಾಮಿ (44%) ಅವರಿಗಿಂತ ಮುನ್ನಡೆ ಸಾಧಿಸಿದ್ದಾರೆ. ಇದೇ ಸಮೀೆಯಲ್ಲಿ ಟ್ರಂಪ್ ಜನಪ್ರಿಯತೆ (ಅಪ್ರೂವಲ್) 42%ರಷ್ಟಿದೆ. ಚುನಾವಣೆಯಲ್ಲಿ ತಮ್ಮ ಮತವು ಮುಖ್ಯವಾಗಿ ಟ್ರಂಪ್ ವಿರುದ್ಧವಾಗಿರುತ್ತದೆ ಎಂದು 41% ಮತದಾರರು ಹೇಳಿದ್ದಾರೆ.
ಪ್ರತಿಪಕ್ಷ ಡೆಮಾಕ್ರೆಟ್ಗಳಿಗೆ 9 ಅಂಕಗಳ ಮುನ್ನಡೆ: ರಾಷ್ಟ್ರೀಯ ಚುನಾವಣಾ ಅಂಕಿಅಂಶಗಳಿಂದಲೂ ರಿಪಬ್ಲಿಕನ್ ಪಕ್ಷದ ಆತಂಕ ಹೆಚ್ಚಿದೆ. ನೇಟ್ ಸಿಲ್ವರ್ ಸರಾಸರಿಯ ಪ್ರಕಾರ, ಸೆಪ್ಟೆಂಬರ್ ಆರಂಭದಲ್ಲಿ ಕಾಂಗ್ರೆಸ್‌ನ ಜೆನೆರಿಕ್ ಬ್ಯಾಲಟ್‌ನಲ್ಲಿ ಡೆಮಾಕ್ರೆಟ್‌ಗಳ ಮುನ್ನಡೆ 6.7 ಅಂಕಗಳಷ್ಟಿತ್ತು, ಅದು ಈಗ 9 ಅಂಕಗಳಿಗೆ ಏರಿಕೆಯಾಗಿದೆ. ಹೌಸ್‌ನಲ್ಲಿ ಇಷ್ಟೊಂದು ದೊಡ್ಡ ಮುನ್ನಡೆ ಇರುವುದು ರಿಪಬ್ಲಿಕನ್ನರಿಗೆ ಗಂಭೀರ ಬೆದರಿಕೆಯಾಗಿದೆ. ಸೆನೆಟ್‌ನಲ್ಲಿಯೂ ಪರಿಸ್ಥಿತಿ ಹಿಂದಿಗಿಂತಲೂ ಕಠಿಣವಾಗಿದೆ. ಪ್ರಸ್ತುತ ರಿಪಬ್ಲಿಕನ್ನರು 53&47ರ ಮುನ್ನಡೆ ಹೊಂದಿದ್ದರೂ, ಹಿಂದೆ ಸುರಕ್ಷಿತವೆಂದು ಪರಿಗಣಿಸಲಾಗಿದ್ದ ಕೆಲವು ಸ್ಥಾನಗಳು ಈಗ ತೀವ್ರ ಸ್ಪರ್ಧಾತ್ಮಕ ಕಣವಾಗಿ ಮಾರ್ಪಟ್ಟಿವೆ.
ಪಕ್ಷ ಆಂತರಿಕ ಇಬ್ಭಾಗ
ರಿಪಬ್ಲಿಕನ್ ಪಕ್ಷವು ಸಂಪೂರ್ಣವಾಗಿ "ಟ್ರಂಪ್ ಪರ ವರ್ಸಸ್ ಟ್ರಂಪ್ ವಿರುದ್ಧ ಬಣ' ಎಂದು ಇಬ್ಭಾಗವಾಗಿದೆ. ಟ್ರಂಪ್‌ರನ್ನು ವಿರೋಧಿಸಿದ ಹಲವು ಪ್ರಮುಖ ಹಿರಿಯ ನಾಯಕರು ಚುನಾವಣಾ ರಾಜಕೀಯದಿಂದ ನಿವೃತ್ತರಾಗಿದ್ದಾರೆ ಅಥವಾ ಟ್ರಂಪ್ ಬೆಂಬಲಿತ ಅಭ್ಯರ್ಥಿಗಳ ಎದುರು ಪ್ರಾಥಮಿಕ ಚುನಾವಣೆಗಳಲ್ಲಿ ಸೋತು ಮೂಲೆಗುಂಪಾಗಿದ್ದಾರೆ. ಸೆನೆಟ್ ಅಥವಾ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ರಿಪಬ್ಲಿಕನ್ನರಿಗೆ ಕಡಿಮೆ ಬಹುಮತವಿರುವ ಸಂದರ್ಭಗಳಲ್ಲಿ, ಭಿನ್ನಮತೀಯ ಸದಸ್ಯರ ನಿಲುವು ಮಹತ್ವದ ಮಸೂದೆಗಳು ಮತ್ತು ವಿದೇಶಾಂಗ ತೀರ್ಮಾನಗಳನ್ನು ತಡೆಹಿಡಿಯುವ ಶಕ್ತಿಯಾಗಿ ಪರಿಣಮಿಸಿದೆ.
ನವೆಂಬರ್‌ನ ಮಧ್ಯಂತರ ಚುನಾವಣೆಯಲ್ಲಿ ಆಡಳಿತಾರೂಢ ರಿಪಬ್ಲಿಕನ್ ಪಕ್ಷವು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ (ಕೆಳಮನೆ) ಅಥವಾ ಸೆನೆಟ್ (ಮೇಲ್ಮನೆ) ನಿಯಂತ್ರಣ ಕಳೆದುಕೊಂಡರೆ, ಡೊನಾಲ್ಡ್ ಟ್ರಂಪ್ ಅವರ ಉಳಿದ ಎರಡೂವರೆ ವರ್ಷಗಳ ಆಡಳಿತಾವಧಿಯ ಮೇಲೆ ಗಂಭೀರ ಪರಿಣಾಮಗಳು ಉಂಟಾಗುತ್ತವೆ. ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಡೆಮಾಕ್ರೆಟ್‌ಗಳು ಬಹುಮತ ಪಡೆದರೆ, ಸಂಸದೀಯ ಸಮಿತಿಗಳ ಸಂಪೂರ್ಣ ನಿಯಂತ್ರಣ ಅವರ ಕೈಸೇರುತ್ತದೆ. ಟ್ರಂಪ್ ಆಡಳಿತದ ಕಾರ್ಯವೈಖರಿ, ವ್ಯಾಪಾರ ಒಪ್ಪಂದಗಳು, ನ್ಯಾಯಾಂಗ ಇಲಾಖೆಯ ನಿರ್ಧಾರಗಳು ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ಸಾರ್ವಜನಿಕ ವಿಚಾರಣೆಗಳು ಆರಂಭವಾಗುತ್ತವೆ. ಸಂಪುಟ ಸಚಿವರು, ಶ್ವೇತಭವನದ ಅಧಿಕಾರಿಗಳಿಗೆ ಸಮನ್ಸ್ ಜಾರಿ ಮಾಡಿ ವಿವರಣೆ ಕೇಳುವ ಅಧಿಕಾರ ವಿರೋಧ ಪಕ್ಷದ ಕೈಗೆ ಬರುತ್ತದೆ.
ಒಂದು ವೇಳೆ ಸೆನೆಟ್‌ನಲ್ಲಿ ರಿಪಬ್ಲಿಕನ್ನರು ಹಿನ್ನಡೆ ಅನುಭವಿಸಿದರೆ, ಅಧ್ಯಕ್ಷರು ಶಿಫಾರಸು ಮಾಡುವ ಫೆಡರಲ್ ನ್ಯಾಯಾಧೀಶರು ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿಯನ್ನು ಡೆಮಾಕ್ರೆಟ್‌ಗಳು ಸುಲಭವಾಗಿ ತಡೆಹಿಡಿಯಬಹುದು. ಪ್ರಮುಖ ಇಲಾಖಾ ಮುಖ್ಯಸ್ಥರು ಮತ್ತು ರಾಯಭಾರಿಗಳ ನೇಮಕಾತಿಗೂ ಸಂಘರ್ಷ ಎದುರಾಗುತ್ತದೆ.