ಪುಟಿನ್-ಝೆಲೆನ್ಸ್ಕಿ ನಡುವೆ ತೀವ್ರ ದ್ವೇಷ; ಆದರೂ ಶಾಂತಿ ಮಾತುಕತೆ ಸನ್ನಿಹಿತ: ಅಧ್ಯಕ್ಷ ಡೊನಾಲ್ಡ್ ಟ್ರಂಪ್ | Donald Trump
ಪುಟಿನ್-ಝೆಲೆನ್ಸ್ಕಿ ನಡುವೆ ತೀವ್ರ ದ್ವೇಷ; ಆದರೂ ಶಾಂತಿ ಮಾತುಕತೆ ಸನ್ನಿಹಿತ: ಅಧ್ಯಕ್ಷ ಡೊನಾಲ್ಡ್ ಟ್ರಂಪ್
Published on:
Copied
Follow Us
ನ್ಯೂಯಾರ್ಕ್: ರಷ್ಯಾ ಮತ್ತು ಯುಕ್ರೇನ್ ನಡುವಿನ ಭೀಕರ ಯುದ್ಧವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಮಹತ್ವದ ಪ್ರಗತಿ ಕಂಡುಬಂದಿದೆ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಹೇಳಿದ್ದಾರೆ. ಆದರೆ, ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಯುಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನಡುವಿನ ವೈಯಕ್ತಿಕ ದ್ವೇಷವು ಶಾಂತಿ ಪ್ರಕ್ರಿಯೆಗೆ ದೊಡ್ಡ ಅಡ್ಡಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ದ್ವೇಷದ ನಡುವೆಯೂ ಒಪ್ಪಂದದ ಆಶಾವಾದ
ಈ ಬಗ್ಗೆ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಝೆಲೆನ್ಸ್ಕಿ ಮತ್ತು ಪುಟಿನ್ ಪರಸ್ಪರ ತೀವ್ರವಾಗಿ ದ್ವೇಷಿಸುತ್ತಾರೆ. ಇದು ಮಾತುಕತೆಯನ್ನು ತುಂಬಾ ಕಷ್ಟಕರವಾಗಿಸಿದೆ. ಆದರೂ ನಾವು ಒಂದು ನಿರ್ಣಾಯಕ ಒಪ್ಪಂದಕ್ಕೆ ತಲುಪುವ ಹಂತದಲ್ಲಿದ್ದೇವೆ. ಈ ಸಮಸ್ಯೆಯನ್ನು ಬಗೆಹರಿಸಲು ನಮಗೆ ಉತ್ತಮ ಅವಕಾಶವಿದೆ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದ್ದಾರೆ.
ಟ್ರಂಪ್ ಕೋರಿಕೆಗೆ ಮಣಿದ ಪುಟಿನ್: ಕೀವ್ ಮೇಲೆ ದಾಳಿ ಸ್ಥಗಿತ
ಯುಕ್ರೇನ್‌ನಲ್ಲಿರುವ ದಾಖಲೆ ಮಟ್ಟದ ಚಳಿ ಮತ್ತು ಭೀಕರ ಹವಾಮಾನವನ್ನು ಗಮನದಲ್ಲಿಟ್ಟುಕೊಂಡು, ರಾಜಧಾನಿ ಕೀವ್ ಸೇರಿದಂತೆ ಪ್ರಮುಖ ನಗರಗಳ ಮೇಲೆ ದಾಳಿ ಮಾಡದಂತೆ ಟ್ರಂಪ್ ಇತ್ತೀಚೆಗೆ ಪುಟಿನ್ ಅವರಲ್ಲಿ ವೈಯಕ್ತಿಕವಾಗಿ ಮನವಿ ಮಾಡಿದ್ದರು.
ವಿಪರೀತ ಚಳಿಯಿಂದಾಗಿ ಕೀವ್ ಮತ್ತು ಯುಕ್ರೇನ್‌ನ ಇತರ ನಗರಗಳ ಮೇಲೆ ಒಂದು ವಾರದ ಕಾಲ ದಾಳಿ ಮಾಡಬೇಡಿ ಎಂದು ನಾನು ಅಧ್ಯಕ್ಷ ಪುಟಿನ್‌ರನ್ನು ಕೇಳಿಕೊಂಡಿದ್ದೆ. ಅದಕ್ಕೆ ಅವರು ಒಪ್ಪಿಗೆ ಸೂಚಿಸಿದ್ದಾರೆ. ಅನೇಕರು ಆ ಕರೆಯನ್ನು ವ್ಯರ್ಥ ಎಂದು ಭಾವಿಸಿದ್ದರು, ಆದರೆ ಪುಟಿನ್ ನನ್ನ ಮಾತನ್ನು ಗೌರವಿಸಿದ್ದಾರೆ ಎಂದು ಕ್ಯಾಬಿನೆಟ್ ಸಭೆಯಲ್ಲಿ ಟ್ರಂಪ್ ಬಹಿರಂಗಪಡಿಸಿದ್ದಾರೆ.
ಮಾಸ್ಕೋಗೆ ಝೆಲೆನ್ಸ್ಕಿಗೆ ಆಹ್ವಾನ
ಈ ಬೆಳವಣಿಗೆಗಳ ನಡುವೆ, ರಷ್ಯಾ ಸರ್ಕಾರವು ಯುಕ್ರೇನ್ ಅಧ್ಯಕ್ಷ ಜೆಲೆನ್ಸ್ಕಿ ಅವರನ್ನು ಮಾತುಕತೆಗಾಗಿ ನೇರವಾಗಿ ಮೋಸ್ಕೋಗೆ ಆಹ್ವಾನಿಸಿದೆ. ಅಮೇರಿಕಾ ಮಧ್ಯಸ್ಥಿಕೆಯಲ್ಲಿ ಈ ವಾರಾಂತ್ಯದಲ್ಲಿ ಅಬುಧಾಬಿಯಲ್ಲಿ ನಡೆಯಲಿರುವ ಶಾಂತಿ ಮಾತುಕತೆಗೂ ಮುನ್ನ ಈ ಆಹ್ವಾನ ಬಂದಿರುವುದು ಕುತೂಹಲ ಮೂಡಿಸಿದೆ,(ಏಜೆನ್ಸೀಸ್).