ಉ.ಕೊರಿಯಾದಲ್ಲಿ ಕುಮಾರಿ ಪರ್ವ: ರೈಫಲ್ ಹಿಡಿದು ರಂಗಕ್ಕಿಳಿದ ಕಿಮ್ ಪುತ್ರಿ ಕಿಮ್ ಜೂ ಏ! Kim Jong Un

ಉ.ಕೊರಿಯಾದಲ್ಲಿ ಕುಮಾರಿ ಪರ್ವ: ರೈಫಲ್ ಹಿಡಿದು ರಂಗಕ್ಕಿಳಿದ ಕಿಮ್ ಪುತ್ರಿ ಕಿಮ್ ಜೂ ಏ!
ಉ.ಕೊರಿಯಾದಲ್ಲಿ ಕುಮಾರಿ ಪರ್ವ: ರೈಫಲ್ ಹಿಡಿದು ರಂಗಕ್ಕಿಳಿದ ಕಿಮ್ ಪುತ್ರಿ ಕಿಮ್ ಜೂ ಏ!
Published on
ಪ್ಯೊಂಗ್ಯಾಂಗ್: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್(Kim Jong Un) ಉನ್ ಅವರ ಪುತ್ರಿ ಕಿಮ್ ಜೂ ಏ, ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ಈ ಬಾರಿ ಕೇವಲ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುವ ಬದಲು, ಕೈಯಲ್ಲಿ ಅತ್ಯಾಧುನಿಕ ಸ್ನೈಪರ್ ರೈಫಲ್ ಹಿಡಿದು ಶೂಟಿಂಗ್ ರೇಂಜ್‌ನಲ್ಲಿ ಗುರಿ ಇಡುತ್ತಿರುವ ಅವರ ಫೋಟೋಗಳು ಬಿಡುಗಡೆಯಾಗಿದ್ದು, ಇಡೀ ವಿಶ್ವವೇ ಬೆಚ್ಚಿಬಿದ್ದಿದೆ.
ಶನಿವಾರ ಉತ್ತರ ಕೊರಿಯಾದ ಅಧಿಕೃತ ಸುದ್ದಿ ಸಂಸ್ಥೆ (KCNA) ಬಿಡುಗಡೆ ಮಾಡಿದ ಈ ಚಿತ್ರಗಳು, ಕಿಮ್ ಜೂ ಏ ಅವರು ತನ್ನ ತಂದೆಯ ಉತ್ತರಾಧಿಕಾರಿಯಾಗಿ ಸಿದ್ಧರಾಗುತ್ತಿದ್ದಾರೆ ಎಂಬ ವಾದಕ್ಕೆ ಮತ್ತಷ್ಟು ಬಲ ನೀಡಿವೆ.

ಸ್ನೈಪರ್ ರೈಫಲ್ ಹಿಡಿದ ಕಿಮ್ ಪುತ್ರಿ: ಅಧಿಕಾರದ ಸಂಕೇತವೇ..?

ಬಿಡುಗಡೆಯಾದ ಫೋಟೋಗಳಲ್ಲಿ, ಹದಿಹರೆಯದ ಕಿಮ್ ಜೂ ಏ ಅವರು ಕಪ್ಪು ಬಣ್ಣದ ಲೆದರ್ ಜಾಕೆಟ್ ಧರಿಸಿರುವುದು ಕಂಡುಬಂದಿದೆ. ಈ ಲೆದರ್ ಜಾಕೆಟ್ ಕೇವಲ ಉಡುಪಲ್ಲ, ಉತ್ತರ ಕೊರಿಯಾದಲ್ಲಿ ಇದು ಅಧಿಕಾರ ಮತ್ತು ಕಾನೂನುಬದ್ಧತೆಯ ಸಂಕೇತವಾಗಿದೆ. ಈ ಹಿಂದೆ ಕಿಮ್ ಜಾಂಗ್ ಉನ್ ಅವರು ಕೂಡ ಪ್ರಮುಖ ರಾಜಕೀಯ ಮತ್ತು ಮಿಲಿಟರಿ ಕಾರ್ಯಕ್ರಮಗಳಲ್ಲಿ ಇಂತಹದ್ದೇ ಜಾಕೆಟ್ ಧರಿಸುತ್ತಿದ್ದರು.
ಶೂಟಿಂಗ್ ರೇಂಜ್‌ನಲ್ಲಿ ಸ್ನೈಪರ್ ರೈಫಲ್‌ನ ಸ್ಕೋಪ್ ಮೂಲಕ ಗುರಿ ನೋಡಿ, ಟ್ರಿಗ್ಗರ್ ಮೇಲೆ ಬೆರಳಿಟ್ಟು ಗುಂಡು ಹಾರಿಸುತ್ತಿರುವ ಕಿಮ್ ಜೂ ಏ ಅವರ ಚಿತ್ರವು, ಅವರು ಕೇವಲ ಸಾಂಕೇತಿಕ ನಾಯಕಿಯಲ್ಲ, ಬದಲಿಗೆ ಮಿಲಿಟರಿ ತರಬೇತಿಯನ್ನೂ ಪಡೆಯುತ್ತಿದ್ದಾರೆ ಎಂಬ ಸಂದೇಶವನ್ನು ರವಾನಿಸಿದೆ.

ಮಿಲಿಟರಿ ಪರೇಡ್ ಮತ್ತು ಉತ್ತರಾಧಿಕಾರದ ಮುನ್ಸೂಚನೆ

ಈ ವಾರ ನಡೆದ ಉತ್ತರ ಕೊರಿಯಾದ ಪ್ರಮುಖ ಪಕ್ಷದ ಕಾಂಗ್ರೆಸ್ ಸಮಾರೋಪ ಸಮಾರಂಭದ ಮಿಲಿಟರಿ ಪರೇಡ್‌ನಲ್ಲಿಯೂ ಜೂ ಏ ಭಾಗವಹಿಸಿದ್ದರು. ದಕ್ಷಿಣ ಕೊರಿಯಾದ ಗುಪ್ತಚರ ಇಲಾಖೆಯ ವರದಿಯ ಪ್ರಕಾರ, ಪ್ಯೊಂಗ್ಯಾಂಗ್ ಈಗ ಅಧಿಕೃತವಾಗಿ ಜೂ ಏ ಅವರನ್ನು ಕಿಮ್ ಜಾಂಗ್ ಉನ್ ಅವರ ಉತ್ತರಾಧಿಕಾರಿಯನ್ನಾಗಿ ನೇಮಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.
ವಿಶ್ಲೇಷಕರ ಅಭಿಪ್ರಾಯ: ಸೋಲ್‌ನ ಯುನಿವರ್ಸಿಟಿ ಆಫ್ ನಾರ್ತ್ ಕೊರಿಯನ್ ಸ್ಟಡೀಸ್‌ನ ಮಾಜಿ ಅಧ್ಯಕ್ಷ ಯಾಂಗ್ ಮೂ-ಜಿನ್ ಪ್ರಕಾರ, ಕಿಮ್ ಜೂ ಏ ಅವರು ಶಸ್ತ್ರಾಸ್ತ್ರಗಳನ್ನು ಹ್ಯಾಂಡಲ್ ಮಾಡುತ್ತಿರುವುದು ಅವರು ಒಬ್ಬ ಸಮರ್ಥ ನಾಯಕಿಯಾಗಿ ಬೆಳೆಯುತ್ತಿದ್ದಾರೆ ಎಂಬ ಚಿತ್ರಣವನ್ನು ಜನರಲ್ಲಿ ಮೂಡಿಸಲು ಮಾಡುತ್ತಿರುವ ಪ್ರಯತ್ನವಾಗಿದೆ.

ಕಿಮ್ ಕುಟುಂಬದ ಉಕ್ಕಿನ ಹಿಡಿತ

ಉತ್ತರ ಕೊರಿಯಾದಲ್ಲಿ 'ಪೇಕ್ಟು ರಕ್ತದ ಸಾಲು ಎಂದು ಕರೆಯಲ್ಪಡುವ ಕಿಮ್ ಕುಟುಂಬದ ಆಳ್ವಿಕೆ ದಶಕಗಳಿಂದಲೂ ಮುಂದುವರಿಯುತ್ತಿದೆ. ಈ ನಡುವೆ ಕಿಮ್ ಜಾಂಗ್ ಉನ್ ಅವರ ಪ್ರಭಾವಿ ಸಹೋದರಿ ಕಿಮ್ ಯೋ ಜಾಂಗ್ ಅವರಿಗೆ ಪಕ್ಷದ ಜನರಲ್ ಅಫೇರ್ಸ್ ವಿಭಾಗದ ಮುಖ್ಯಸ್ಥೆಯಾಗಿ ಜವಾಬ್ದಾರಿ ನೀಡಲಾಗಿದೆ. ಇದು ಪಕ್ಷದ ಸೆಕ್ರೆಟರಿ ಜನರಲ್ ಹುದ್ದೆಗೆ ಸಮಾನವಾಗಿದ್ದು, ಕಿಮ್ ಕುಟುಂಬವು ಆಡಳಿತ ಮತ್ತು ಸೇನೆಯ ಮೇಲೆ ಸಂಪೂರ್ಣ ಹಿಡಿತ ಸಾಧಿಸುತ್ತಿರುವುದನ್ನು ತೋರಿಸುತ್ತದೆ.
ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಕವಿದಿರುವಾಗಲೇ, ಇತ್ತ ಉತ್ತರ ಕೊರಿಯಾದಲ್ಲಿ ಸದ್ದಿಲ್ಲದೆ ನಡೆಯುತ್ತಿರುವ ಈ ಬೆಳವಣಿಗೆಗಳು ಭವಿಷ್ಯದ ಜಾಗತಿಕ ರಾಜಕೀಯದಲ್ಲಿ ಹೊಸ ಆಯಾಮಗಳನ್ನು ಸೃಷ್ಟಿಸಲಿವೆ. ಶಸ್ತ್ರಸಜ್ಜಿತ ಮಗಳ ಮೂಲಕ ಕಿಮ್ ಜಾಂಗ್ ಉನ್ ಜಗತ್ತಿಗೆ ನೀಡುತ್ತಿರುವ ಎಚ್ಚರಿಕೆ ಏನು ಎಂಬುದು ಈಗ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net