ಅಮೆರಿಕ, ಜಪಾನ್, ಬ್ರಿಟನ್ ಮತ್ತು ಹಲವು ಯುರೋಪಿಯನ್ ದೇಶಗಳಲ್ಲಿ ಸರ್ಕಾರಗಳು ಜನರಿಗೆ ಮನೆಯಲ್ಲಿ ತುರ್ತು ಪಡಿತರ, ಪವರ್ ಬ್ಯಾಂಕ್, ಕುಡಿಯುವ ನೀರು ಮುಂತಾದ ಅಗತ್ಯ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಳ್ಳುವಂತೆ ಹೇಳಿವೆ. ರಷ್ಯಾ ತನ್ನ ಮೇಲೆ ದೊಡ್ಡ ಮಟ್ಟದ ದಾಳಿಗೆ ಸಿದ್ಧತೆ ನಡೆಸುತ್ತಿದೆ ಎಂದು ಬ್ರಿಟನ್ ಹೇಳಿದೆ. ಅಮೆರಿಕ ತನ್ನ ಸೇನಾ ನೆಲೆಗಳಲ್ಲಿ 90 ದಿನಗಳವರೆಗಿನ ಆಹಾರ, ಶಸ್ತ್ರಾಸ್ತ್ರ ಮತ್ತು ಇಂಧನವನ್ನು ಒಟ್ಟುಗೂಡಿಸುತ್ತಿದೆ. 3ನೇ ಮಹಾಯುದ್ಧ ಸನ್ನಿಹಿತವಾಗಿದೆ ಎಂದು ಡೊನಾಲ್ಡ್ ಟ್ರಂಪ್ ಈಗಾಗಲೇ ಹೇಳಿದ್ದಾರೆ. ನಿಜವಾಗಿಯೂ ಜಗತ್ತಿನಲ್ಲಿ ಏನಾದರೂ ದೊಡ್ಡ ಅನಾಹುತ ಸಂಭವಿಸಲಿದೆಯೇ? ಈ ಪರಿಸ್ಥಿತಿಗೆ ಯಾರು ಜವಾಬ್ದಾರರು? ತುರ್ತಾಗಿ ಏನೆಲ್ಲ ಸಂಗ್ರಹಿಸಲಾಗುತ್ತಿದೆ? ಈ ಕುರಿತಾದ ವಿವರ ಇಲ್ಲಿದೆ.
ಬ್ರಿಟನ್ ಸರ್ಕಾರವು ಅಕ್ಟೋಬರ್ 22ರಿಂದ "ಬಿ ರೆಡಿ' ಅಭಿಯಾನವನ್ನು ಪ್ರಾರಂಭಿಸಿದೆ. ರಕ್ಷಣಾ ತಂಡಗಳು ಸ್ಥಳಕ್ಕೆ ತಲುಪುವವರೆಗೆ ಅಗತ್ಯ ವಸ್ತುಗಳ ಕೊರತೆಯಾಗಬಾರದು ಎಂದು ಇದರ ವೆಬ್ಸೈಟ್ನಲ್ಲಿ ತಿಳಿಸಲಾಗಿದೆ. ಇದಕ್ಕಾಗಿ 3 ದಿನಗಳ ಸಂಗ್ರಹ ಸಾಕಾಗುತ್ತದೆ. ಜನರಿಗೆ 9 ಲೀಟರ್ ನೀರು, 3 ದಿನಗಳಿಗೆ ಸಾಕಾಗುವಷ್ಟು ಆಹಾರ, ಟಾರ್ಚ್, ಬ್ಯಾಟರಿಗಳು, ಪ್ರಥಮ ಚಿಕಿತ್ಸಾ ಕಿಟ್, ನಗದು ಹಣ, ಪವರ್ ಬ್ಯಾಂಕ್, ಶೌಚಗೃಹ ಸಾಮಗ್ರಿಗಳು, ಹೊದಿಕೆಗಳು, ಗುರುತಿನ ಚೀಟಿಗಳ ಜೆರಾಕ್ಸ್ ಪ್ರತಿಗಳು ಮತ್ತು ರೇಡಿಯೋವನ್ನು ಸಿದ್ಧವಾಗಿಟ್ಟುಕೊಳ್ಳಲು ತಿಳಿಸಲಾಗಿದೆ.
ನೈಸರ್ಗಿಕ ವಿಕೋಪಗಳು, ಯುದ್ಧ, ಭಯೋತ್ಪಾದಕ ದಾಳಿಗಳು ಮತ್ತು ಯುದ್ಧದಂತಹ ತುರ್ತು ಪರಿಸ್ಥಿತಿಗಳಿಗೆ ಸಿದ್ಧತೆ ಮಾಡಿಕೊಳ್ಳುವುದು ಇದರ ಉದ್ದೇಶ ಎಂದು ಹೇಳಲಾಗಿದೆ. ರಕ್ಷಣಾ ತಂಡಗಳು ಏಕಕಾಲದಲ್ಲಿ ಎಲ್ಲೆಡೆ ತಲುಪಲು ಸಾಧ್ಯವಿಲ್ಲ; ಅಲ್ಲಿಯವರೆಗೆ ಈ ವ್ಯವಸ್ಥೆಗಳು ಜನರು ಸುರಕ್ಷಿತವಾಗಿರಲು ನೆರವಾಗುತ್ತವೆ. ಬ್ರಿಟನ್ ರಕ್ಷಣಾ ಕಾರ್ಯದರ್ಶಿ ವೆಸ್ ಸ್ಟ್ರೀಟಿಂಗ್ ಅವರು, "ಶತ್ರುಗಳ ದಾಳಿಗಳು ನಮ್ಮ ದೈನಂದಿನ ಮೂಲಸೌಕರ್ಯಗಳಿಗೆ ಹಾನಿ ಉಂಟುಮಾಡಬಹುದು. ಈ ಅಪಾಯಗಳು ಇನ್ನು ಕಾಲ್ಪನಿಕವಲ್ಲ, ವಾಸ್ತವ' ಎಂದು ಹೇಳಿದ್ದಾರೆ.
ಯುರೋಪಿಯನ್ ಒಕ್ಕೂಟವು ಕಳೆದ ವರ್ಷ "ಪ್ರಿಪೇರ್ಡ್ನೆಸ್ ಯೂನಿಯನ್ ಸ್ಟ್ರಾಟಿಜಿ' ಅಳವಡಿಸಿಕೊಂಡಿದೆ. ಇದರ ಪ್ರಕಾರ, ತುರ್ತು ಸಂದರ್ಭಗಳಲ್ಲಿ ಜನರು ಯಾವುದೇ ನೆರವಿಲ್ಲದೆ 72 ಗಂಟೆಗಳ ಕಾಲ ಕಳೆಯಲು ಸನ್ನದ್ಧರಾಗಿರಬೇಕು.
ಫಿನ್ಲ್ಯಾಂಡ್ 9 ತಿಂಗಳಿಗೆ ಸಾಕಾಗುವಷ್ಟು ಧಾನ್ಯವನ್ನು ಸಂಗ್ರಹಿಸಿಟ್ಟಿದೆ. ಸ್ವೀಡನ್ ತನ್ನ ರಕ್ಷಣಾ ವ್ಯವಸ್ಥೆಗಳನ್ನು ಮೇಲ್ದರ್ಜೆಗೇರಿಸಿದೆ. ಪೋಲೆಂಡ್, ಫಿನ್ಲ್ಯಾಂಡ್, ಎಸ್ಟೋನಿಯಾ, ಲಾಟ್ವಿಯಾ ಮತ್ತು ಲಿಥುವೇನಿಯಾ ದೇಶಗಳು ಆಶ್ರಯ ತಾಣಗಳನ್ನು ಸುಧಾರಿಸಿವೆ.
ಆಗಸ್ಟ್ನಲ್ಲಿ ಐರ್ಲೆಂಡ್ ಆರಂಭಿಸಿದ "ಬಿ ಎಮರ್ಜೆನ್ಸಿ ರೆಡಿ' ಅಭಿಯಾನದಡಿಯಲ್ಲಿ, ಮನೆಯಲ್ಲಿ ಆಹಾರ ಮತ್ತು ನೀರು ಇತ್ಯಾದಿ ಸಂಗ್ರಹಿಸಿಟ್ಟುಕೊಳ್ಳುವಂತೆ, ಕರೆಂಟ್ ಮತ್ತು ಗ್ಯಾಸ್ ಸಂಪರ್ಕ ಕಡಿತಗೊಳ್ಳಲು ಸಿದ್ಧರಾಗಿರಲು ಜನರಿಗೆ ಸಲಹೆ ನೀಡಲಾಗಿದೆ. ಬೆಂಕಿಪೊಟ್ಟಣ ಮತ್ತು ಲೈಟರ್ಗಳನ್ನು ಖರೀದಿಸಿಟ್ಟುಕೊಳ್ಳಲು ಹಾಗೂ ಬೆಲೆಬಾಳುವ ವಸ್ತುಗಳನ್ನು ರಕ್ಷಿಸಲು ಗಟ್ಟಿಮುಟ್ಟಾದ ಪ್ಲಾಸ್ಟಿಕ್ ಬ್ಯಾಗ್ಗಳನ್ನು ಇಟ್ಟುಕೊಳ್ಳಲು ಸೂಚಿಸಲಾಗಿದೆ.
ಅಮೆರಿಕದ ರಕ್ಷಣಾ ಪ್ರಧಾನ ಕಚೇರಿ ಪೆಂಟಗನ್, ಪ್ರಮುಖ ಮಿಲಿಟರಿ ನೆಲೆಗಳನ್ನು ಬಾಹ್ಯ ನೆರವಿಲ್ಲದೆ 90 ದಿನಗಳವರೆಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಜ್ಜುಗೊಳಿಸುತ್ತಿದೆ. ಅಮೆರಿಕದ ಸುದ್ದಿ ವಾಹಿನಿ ಫಾಕ್ಸ್ ಪ್ರಕಾರ, ಸೆಪ್ಟೆಂಬರ್ 30ರಂದು ರಕ್ಷಣಾ ಸಚಿವ ಪೀಟ್ ಹೆಗ್ಸೆತ್ ಅವರು "ಫೋರ್ಟ್ರೆಸ್' ಅಂದರೆ "ಕೋಟೆ' ಹೆಸರಿನ ಈ ಯೋಜನೆಯನ್ನು ಪ್ರಾರಂಭಿಸಿದರು. ಇದರಡಿಯಲ್ಲಿ ಮಿಲಿಟರಿ ನೆಲೆಗಳು ತಮಗೆ ಬೇಕಾದ ವಿದ್ಯುತ್ ಅನ್ನು ತಾವೇ ಉತ್ಪಾದಿಸಿಕೊಳ್ಳಲಿವೆ. ಯುದ್ಧದ ಸಂದರ್ಭದಲ್ಲಿ ನಗರದ ಮೂಲಸೌಕರ್ಯಗಳು ನಾಶವಾದರೂ, ಈ ಮಿಲಿಟರಿ ನೆಲೆಗಳು ಹೊರಗಿನ ವಿದ್ಯುತ್ ಮತ್ತು ಇಂಧನದ ಸಹಾಯವಿಲ್ಲದೆ ಕಾರ್ಯನಿರ್ವಹಿಸುತ್ತಲೇ ಇರುತ್ತವೆ.
ಮಿಲಿಟರಿ ನೆಲೆಗಳಲ್ಲಿ ನೀರು ಹಾಗೂ ವಿದ್ಯುತ್ ಮತ್ತು ಇಂಟರ್ನೆಟ್ ಇಲ್ಲದೆಯೂ ಸಂವಹನ ನಡೆಸಲು ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಮದ್ದುಗುಂಡುಗಳು, ಪ್ರಮುಖ ಖನಿಜಗಳು, ಎಲೆಕ್ಟ್ರಾನಿಕ್ಸ್, ಬಿಡಿಭಾಗಗಳು ಮತ್ತು ವೈದ್ಯಕೀಯ ಸರಬರಾಜುಗಳ ಕಾರ್ಯತಂತ್ರ ಸಿದ್ಧಪಡಿಸಲಾಗುತ್ತಿದೆ. ಮಿಲಿಟರಿಯ ಅಗತ್ಯ ವಸ್ತುಗಳಿಗಾಗಿ ಇಬ್ಬರು ಪೂರೈಕೆದಾರರು ಅಥವಾ ತಯಾರಕರು ಇರುತ್ತಾರೆ; ಇದರಿಂದ ಒಬ್ಬರನ್ನು ಕಳೆದುಕೊಂಡರೂ ಕಾರ್ಯಾಚರಣೆಗಳು ಸ್ಥಗಿತಗೊಳ್ಳುವುದಿಲ್ಲ. ಅಮೆರಿಕವು ನವೆಂಬರ್ 17ರಂದು ತನ್ನ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು (ಇಎಎಸ್) ದೇಶಾದ್ಯಂತ ಪರೀಕ್ಷಿಸಲು ಸಜ್ಜಾಗಿದೆ.
ಭೂಕಂಪ ಮತ್ತು ಜ್ವಾಲಾಮುಖಿ ಸ್ಫೋಟದ ಮುನ್ನೆಚ್ಚರಿಕೆ ಸಿದ್ಧತೆಯಾಗಿ ಕನಿಷ್ಠ 3ರಿಂದ 7 ದಿನಗಳವರೆಗೆ ಸಾಕಾಗುವಷ್ಟು ಆಹಾರ ಮತ್ತು ನೀರನ್ನು ಸಂಗ್ರಹಿಸಿಟ್ಟುಕೊಳ್ಳಲು ಜಪಾನ್ ಸರ್ಕಾರವು ಜನರಿಗೆ ತಿಳಿಸಿದೆ. ನವೆಂಬರ್ 2ರಂದು ಈ ಘೋಷಣೆ ಹೊರಬಿದ್ದಿದೆ. ವಿಪತ್ತು ನಿರ್ವಹಣಾ ಸಚಿವ ಗೋಷಿ ಹೊಸೊನೊ ಅವರು, "ಸರ್ಕಾರದ ಬೆಂಬಲವಿಲ್ಲದೆಯೂ ದಿನ ದೂಡಲು ಸಾಧ್ಯವಾಗುವಂತೆ ಮನೆಯಲ್ಲಿ ಆಹಾರ, ಶೌಚಗೃಹ ಸಾಮಗ್ರಿಗಳು, ಅಗತ್ಯ ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ನೀರನ್ನು ಸಂಗ್ರಹಿಸಿಡಿ' ಎಂದು ತಿಳಿಸಿದ್ದಾರೆ.
ಬ್ರಿಟನ್ ರಕ್ಷಣಾ ಕಾರ್ಯದರ್ಶಿ ವೆಸ್ ಸ್ಟ್ರೀಟಿಂಗ್ ಅಕ್ಟೋಬರ್ 24ರಂದು ಮಾಧ್ಯಮಗಳೊಂದಿಗೆ ಮಾತನಾಡಿ, "ರಷ್ಯಾವು ನ್ಯಾಟೋ ವಿರುದ್ಧ ಹೈಬ್ರಿಡ್ ವಾರ್ಫೇರ್ (ಮಿಶ್ರ ಯುದ್ಧತಂತ್ರ) ತೀವ್ರಗೊಳಿಸುತ್ತಿದೆ. 2030ರ ವೇಳೆಗೆ ಶತ್ರುಗಳ ಬಲ ಮತ್ತು ಆರ್ಥಿಕತೆ ಅವರಿಗೆ ದಾಳಿ ಮಾಡುವ ಸಾಮರ್ಥ್ಯವನ್ನು ನೀಡಲಿದೆ. ನಾವು ಯುದ್ಧ ಮಾಡಲು ಮತ್ತು ಗೆಲ್ಲಲು ಸನ್ನದ್ಧರಾಗಬೇಕು. ನಮ್ಮ ಬಳಿ 1,000 ದಿನಗಳಿವೆ' ಎಂದು ಹೇಳಿದ್ದಾರೆ.
ಬ್ರಿಟನ್ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಪ್ಯಾಟ್ರಿಕ್ ಸ್ಯಾಂಡರ್ಸ್, "ಜಗತ್ತು ಶೀತಲಸಮರದ ಕಾಲಕ್ಕಿಂತಲೂ ಹೆಚ್ಚು ಅಪಾಯಕಾರಿಯಾಗಿದೆ. ನಮ್ಮ ಸೈನಿಕ ಬಲ ಮತ್ತು ನಾಗರಿಕರ ಸುರತೆಯ ಬಗ್ಗೆ ನನಗೆ ಆತಂಕವಿದೆ' ಎಂದಿದ್ದಾರೆ. ಬ್ರಿಟನ್ಗೆ ರಷ್ಯಾದೊಂದಿಗಿನ ಯುದ್ಧಕ್ಕೆ ಸಿದ್ಧತೆ ಮಾಡಿಕೊಳ್ಳಲು 5 ವರ್ಷಕ್ಕಿಂತ ಕಡಿಮೆ ಸಮಯವಿದೆ ಎಂದು ಸ್ಯಾಂಡರ್ಸ್ 2025ರ ಜುಲೈನಲ್ಲೂ ಎಚ್ಚರಿಸಿದ್ದರು. ಬಂಕರ್ಗಳನ್ನು ನಿರ್ಮಿಸಲು ಮತ್ತು ವಾಯು ರಕ್ಷಣಾ ವ್ಯವಸ್ಥೆಯಲ್ಲಿ ಹೂಡಿಕೆ ಮಾಡುವ ಅಗತ್ಯವಿದೆ ಎಂದಿದ್ದರು.
ರಷ್ಯಾ-ಯೂಕ್ರೇನ್ ಯುದ್ಧ ನಿಲ್ಲದಿದ್ದರೆ, ಅದು ಮೂರನೇ ಮಹಾಯುದ್ಧವಾಗಿ ಮಾರ್ಪಡಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಾಗಲೇ ಹೇಳಿದ್ದಾರೆ. ಕಳೆದ ತಿಂಗಳು ನ್ಯಾಟೋ ಮಹಾಕಾರ್ಯದರ್ಶಿ ಮಾರ್ಕ್ ರುಟ್ಟೆ ಕೂಡ, "ರಷ್ಯಾದ ಮುಂದಿನ ಗುರಿ ಯುರೋಪ್ ಆಗಿರಬಹುದು. ನಾವು ಹಳೆಯ ಕಾಲದಂತಹ ಯುದ್ಧಕ್ಕೆ ಸಿದ್ಧರಾಗಿರಬೇಕು' ಎಂದು ಎಚ್ಚರಿಸಿದ್ದರು.
ಅಮೆರಿಕವು ಕೊಲ್ಲಿ ದೇಶಗಳ ಮಿಲಿಟರಿ ನೆಲೆಗಳಲ್ಲಿ ಸೈನಿಕರು, ಶಸ್ತ್ರಾಸ್ತ್ರಗಳು, 20 ಯುದ್ಧನೌಕೆಗಳು, ಪೇಟ್ರಿಯಾಟ್ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಮತ್ತು ಯುದ್ಧ ವಿಮಾನಗಳನ್ನು ನಿಯೋಜಿಸುತ್ತಿದೆ. ಇರಾನ್ ವಿರುದ್ಧದ ಯುದ್ಧವು ಮಧ್ಯಪ್ರಾಚ್ಯದ ವಿಶಾಲ ಪ್ರದೇಶಕ್ಕೆ ಹರಡಬಹುದು.
ಇನ್ನೊಂದೆಡೆ ಜಪಾನ್, ತೈವಾನ್-ಚೀನಾ ಉದ್ವಿಗ್ನತೆ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಜಪಾನ್ ರಕ್ಷಣಾ ಸಚಿವ ಶಿಂಜಿರೊ ಕೊಯಿಜುಮಿ, "ಜಪಾನ್ ಸುತ್ತಲಿನ ಪರಿಸ್ಥಿತಿ ಎರಡನೇ ಮಹಾಯುದ್ಧದ ನಂತರ ಅತ್ಯಂತ ಗಂಭೀರವಾಗಿದೆ. ಚೀನಾ ಅತಿ ದೊಡ್ಡ ಸವಾಲಾಗಿದೆ. ಪಶ್ಚಿಮ ಏಷ್ಯಾದಲ್ಲಿ ಯೂಕ್ರೇನ್ನಂತಹ ಬಿಕ್ಕಟ್ಟು ಎದುರಾಗಬಹುದು' ಎಂದು ಹೇಳಿದ್ದಾರೆ. ಅವರು ರಷ್ಯಾ ಮತ್ತು ಚೀನಾದ ಪಾಲುದಾರಿಕೆಯ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ವೆಬ್ಸೈಟ್ಗಳು ಸ್ಥಗಿತ: ಪಿಎಚ್ಪಿ ಪ್ರೋಗ್ರಾಮಿಂಗ್ ಭಾಷೆಯಲ್ಲಿ ಭದ್ರತಾ ದೋಷ ಇದೇ ತಿಂಗಳು ಪತ್ತೆಯಾಗಿದೆ. ಇದರ ಪರಿಣಾಮವಾಗಿ ಬ್ರಿಟನ್ನಲ್ಲಿ 32 ಆನ್ಲೈನ್ ಸರ್ಕಾರಿ ವೆಬ್ಸೈಟ್ಗಳನ್ನು ತಾತ್ಕಾಲಿಕವಾಗಿ ಮುಚ್ಚಬೇಕಾಯಿತು. ನೆದರ್ಲ್ಯಾಂಡ್ಸ್, ಫಿನ್ಲ್ಯಾಂಡ್, ಫ್ರಾನ್ಸ್ ಮತ್ತು ಇತರ ಯುರೋಪಿಯನ್ ದೇಶಗಳಲ್ಲೂ ಇದೇ ರೀತಿಯಾಯಿತು.
ಇಂಟರ್ನೆಟ್ ಕೇಬಲ್ ಕತ್ತರಿಸಲು ರಷ್ಯಾ ಯತ್ನ: ರಾಯಿಟರ್ಸ್ ಪ್ರಕಾರ, 2026ರಲ್ಲಿ ಬ್ರಿಟನ್, ನಾರ್ವೆ ಮತ್ತು ಅಮೆರಿಕ ದೇಶಗಳು ಆರ್ಕ್ಟಿಕ್ ಸಮುದ್ರ ಪ್ರದೇಶದಲ್ಲಿ ರಷ್ಯಾದ ಕಾರ್ಯಾಚರಣೆಯನ್ನು ತಡೆಹಿಡಿದವು. ರಷ್ಯಾದ ಜಲಾಂತರ್ಗಾಮಿ ನೌಕೆಗಳು ಸಮುದ್ರದ ತಳದಲ್ಲಿ ಹಾಕಲಾಗಿರುವ ಆಪ್ಟಿಕಲ್ ಫೈಬರ್ ಕೇಬಲ್ಗಳನ್ನು ಸದ್ದಿಲ್ಲದೆ ನಿಷ್ಕ್ರಿಯಗೊಳಿಸಲು ಯತ್ನಿಸುತ್ತಿದ್ದವು. ಈ ಕೇಬಲ್ಗಳ ಮೂಲಕವೇ ಜಗತ್ತಿನಾದ್ಯಂತ ಇಂಟರ್ನೆಟ್ ಸಂಪರ್ಕ ಕಾರ್ಯನಿರ್ವಹಿಸುತ್ತದೆ.
ಫ್ರೀಜರ್ಗಳಿಗೆ ಬೆಂಕಿ ಹಚ್ಚಿದ ಹ್ಯಾಕರ್ಗಳು: ಫ್ರಾನ್ಸ್ನ ನೂರಾರು ಸೂಪರ್ಮಾರ್ಕೆಟ್ಗಳಲ್ಲಿದ್ದ ಫ್ರೀಜರ್ಗಳನ್ನು ಹ್ಯಾಕರ್ಗಳು ಅಕ್ಟೋಬರ್ 12 ಮತ್ತು ನವೆಂಬರ್ 3ರಂದು ರಿಮೋಟ್ ಮೂಲಕ ನಿಯಂತ್ರಿಸಿ, ಅವುಗಳ ತಾಪಮಾನವನ್ನು 50 ಡಿಗ್ರಿ ಸೆಲ್ಸಿಯಸ್ಗೆ ಹೆಚ್ಚಿಸಿದರು. ಇದರಿಂದಾಗಿ ಬೆಂಕಿ ಕಾಣಿಸಿಕೊಂಡಿತ್ತು.
ಚೀನಾ, ಅಮೆರಿಕ ಮತ್ತು ರಷ್ಯಾದಂತಹ ದೇಶಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಡ್ರೋನ್ಗಳು, ಕ್ಷಿಪಣಿಗಳು, ಶಸ್ತ್ರಾಸ್ತ್ರಗಳು, ಎಐ ತಂತ್ರಜ್ಞಾನ ಹೊಂದಿರುವ ರಕ್ಷಣಾ ವ್ಯವಸ್ಥೆಗಳು ಮತ್ತು ನೂತನ ಸೈಬರ್ ತಂತ್ರಜ್ಞಾನಗಳ ಪೈಪೋಟಿ ತೀವ್ರಗೊಳ್ಳುತ್ತಿದೆ. ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆ ಹಲವು ಎಚ್ಚರಿಕೆಗಳನ್ನು ನೀಡಿದೆ. ಜಪಾನ್ ಮತ್ತು ಯುರೋಪಿಯನ್ ದೇಶಗಳ ನಾಯಕರೂ ಗಂಭೀರ ಸೈಬರ್ ಮತ್ತು ಹೈಬ್ರಿಡ್ ಅಪಾಯಗಳ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ. ಬ್ರಿಟನ್ ಮಾತ್ರವಲ್ಲ ಫ್ರಾನ್ಸ್ ಮತ್ತು ಜರ್ಮನಿಯಂತಹ ದೇಶಗಳು ಸೈಬರ್ ದಾಳಿಗೆ ಸನ್ನದ್ಧರಾಗಿರಲು ತಮ್ಮ ನಾಗರಿಕರಿಗೆ ಸಲಹೆ ನೀಡಿವೆ.
ಯುರೋಪ್ ಮತ್ತು ಫ್ರಾನ್ಸ್ ವಿರುದ್ಧ ರಷ್ಯಾದ ಹೈಬ್ರಿಡ್ ದಾಳಿಯ ಭೀತಿ ಹೆಚ್ಚಾಗಿದೆ' ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಹೇಳಿದ್ದಾರೆ. ಮಾಹಿತಿ ವ್ಯವಸ್ಥೆಗಳು ಮತ್ತು ವಾಯುಪ್ರದೇಶದಲ್ಲಿ ಒಳನುಸುಳುವಿಕೆ ಹಾಗೂ ಕಣ್ಗಾವಲಿನಂತಹ ವಿಚಾರಗಳನ್ನೂ ಅವರು ಪ್ರಸ್ತಾಪಿಸಿದ್ದಾರೆ.