ರಾಜಧಾನಿಯ ಪರೇಡ್ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವಕ್ಕೆ ಸಿದ್ಧತೆ
independence-day
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮೈದಾನದ ಆಸುಪಾಸು ಸ್ವಚ್ಚತೆ, ವಾಹನ ನಿಲುಗಡೆ, ಅಲಂಕಾರಕ್ಕೆ ಆದ್ಯತೆ
ವಿವಿಧ ಇಲಾಖೆಗಳೊಂದಿಗೆ ಸಮನ್ವಯಕ್ಕಾಗಿ ಅಭಿವೃದ್ಧಿ ಆಯುಕ್ತರಿಗೆ ಹೊಣೆ
ಕೇಂದ್ರ ನಗರ ಪಾಲಿಕೆಯ ಆಯುಕ್ತ ಜಿ.ಜಗದೀಶ್ ಸ್ಥಳಪರಿಶೀಲನೆ
ಬೆಂಗಳೂರು: ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಆ.15ರಂದು ನಡೆಯಲಿರುವ ರಾಜ್ಯ ಮಟ್ಟದ ಸ್ವಾತಂತ್ರ್ಯೋತ್ಸವ ಸಮಾರಂಭವನ್ನು ಯಶಸ್ಸುಗೊಳಿಸುವ ನಿಟ್ಟಿನಲ್ಲಿ, ಕೇಂದ್ರ ನಗರ ಪಾಲಿಕೆಯ ಆಯುಕ್ತ ಜಿ.ಜಗದೀಶ್ ಅವರು ಸ್ಥಳಪರಿಶೀಲನೆ ನಡೆಸಿ ಸಿದ್ಧತಾ ಕಾರ್ಯಗಳನ್ನು ತಪಾಸಣೆ ನಡೆಸಿದರು.
ಪರೇಡ್ ಮೈದಾನವನ್ನು ಸ್ವಚ್ಛಗೊಳಿಸಿ ಸಮತಟ್ಟುಗೊಳಿಸುವ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಸಿಎಂ ಆದಿಯಾಗಿ ಗಣ್ಯರು, ಅತಿಥಿಗಳು, ಸಾರ್ವಜನಿಕರು ಯಾವ ದ್ವಾರದಿಂದ ಪ್ರವೇಶಿಸಬೇಕು ಹಾಗೂ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯ ಕುರಿತು ಯಾವುದೇ ಲೋಪ ಆಗದಂತೆ ಕ್ರಮ ವಹಿಸಬೇಕು. ಲೋಕೋಪಯೋಗಿ ಇಲಾಖೆಯ ಸಹಯೋಗದೊಂದಿಗೆ ಸಮಾರಂಭಕ್ಕೆ ಅಗತ್ಯ ಸಿದ್ಧತೆಗಳನ್ನು ಬೇಗನೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಮೈದಾನದ ಮುಖ್ಯದ್ವಾರದಲ್ಲಿ ಹೂವಿನ ಸ್ವಾಗತ ಕಮಾನು, ಹೂ ಕುಂಡಗಳ ಜೋಡಣೆ, ಪುಷ್ಪಾಲಂಕಾರ, ಶೌಚಾಲಯ, ಡಸ್ಟ್ ಬಿನ್ ಇತ್ಯಾದಿ ವ್ಯವಸ್ಥೆ ಬಗ್ಗೆ ನಿಗಾ ಇಡಬೇಕು. ಭದ್ರತೆಗೆ ಹೆಚ್ಚುವರಿಯಾಗಿ ಪಾಲಿಕೆಯ ಮಾರ್ಷಲ್ಗಳ ನಿಯೋಜನೆ, ಗಣ್ಯರು ಹಾಗೂ ಇತರರಿಗೆ ಆಹಾರ ವಿತರಿಸಲು ಹೆಚ್ಚಿನ ಕೌಂಟರ್ ಸ್ಥಾಪಿಸಬೇಕು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಅಗತ್ಯ ತುರ್ತು ಔಷಧ, ಆಕ್ಸಿಜನ್ ಸಿಲಿಂಡರ್, ಆಂಬುಲೆನ್ಸ್ ಸೇರಿ ವೈದ್ಯಕೀಯ ತಂಡಗಳನ್ನು ನಿಯೋಜಿಸುವಂತೆ ಅಧಿಕಾರಿಗಳಿಗೆ ಆಯುಕ್ತರು ನಿರ್ದೇಶಿಸಿದರು.
ವಿವಿಧ ಇಲಾಖೆಗಳೊಂದಿಗೆ ಸಮನ್ವಯಕ್ಕೆ ಸೂಚನೆ:
ಸಮಾರಂಭಕ್ಕೆ ಸಂಬಂಧಿಸಿದ ಆಡಳಿತಾತ್ಮಕ ವ್ಯವಸ್ಥೆ ಸುಗಮವಾಗಿ ನಡೆಯುವಂತೆ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲು ಪೂರ್ವಭಾವಿ ಸಭೆ ನಡೆಸಿ ಸ್ವಾತಂತ್ರ್ಯೋತ್ಸವವನ್ನು ಯಶಸ್ವಿಯಾಗಿ ಹಾಗೂ ವ್ಯವಸ್ಥಿತವಾಗಿ ನಡೆಸುವ ಎಲ್ಲ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸುವಂತೆ ಅಧಿಕಾರಿಗಳಿಗೆ ಜಿ.ಜಗದೀಶ್ ಸೂಚಿಸಿದರು.
ಈ ವೇಳೆ ಕೇಂದ್ರ ಪಾಲಿಕೆಯ ಜಂಟಿ ಆಯುಕ್ತ ಹೇಮಂತ್ ಶರಣ್, ಮುಖ್ಯ ಅಭಿಯಂತರ ಹೇಮಲತಾ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಅಭಿವೃದ್ದಿ ಆಯುಕ್ತರಿಂದ ಮೇಲುಸ್ತುವಾರಿ:
ಪರೇಡ್ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವ ಸಿದ್ಧತಾ ಕೆಲಸಗಳನ್ನು ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸಬೇಕು. ನಗರ ಜಿಲ್ಲಾಧಿಕಾರಿ ಕಚೇರಿಯ ಸಹಕಾರದಲ್ಲಿ ಇತರ ಇಲಾಖೆಗಲೊಂದಿಗೆ ಸಮನ್ವಯ ಸಾಧಿಸಿ ಎಲ್ಲ ಕೆಲಸಗಳನ್ನು ಆ.14ರ ಸಂಜೆಯೊಳಗೆ ಮುಕ್ತಾಯಗೊಳಿಸಬೇಕು. ಇದಕ್ಕಾಗಿ ಅಪರ ಆಯುಕ್ತರು (ಅಭಿವೃದ್ಧಿ) ಸಮಗ್ರ ಮೇಲುಸ್ತುವಾರಿ ವಹಿಸಲಿದ್ದಾರೆ ಎಂದು ಆಯುಕ್ತ ಜಿ.ಜಗದೀಶ್ ತಿಳಿಸಿದ್ದಾರೆ.