ಮಧ್ಯಪ್ರಾಚ್ಯದಲ್ಲಿ ಯುದ್ಧ ಅಂತ್ಯದ ಮುನ್ಸೂಚನೆ: ಅಮೆರಿಕ ಮತ್ತು ಇರಾನ್ ಶಾಂತಿ ಒಪ್ಪಂದದ ವಿವರ ಬಿಚ್ಚಿಟ್ಟ ಪಾಕ್​ ಪ್ರಧಾನಿ ಶೆಹಬಾಜ್ ಷರೀಫ್! Shehbaz Sharif

ಮಧ್ಯಪ್ರಾಚ್ಯದಲ್ಲಿ ಯುದ್ಧ ಅಂತ್ಯದ ಮುನ್ಸೂಚನೆ: ಅಮೆರಿಕ ಮತ್ತು ಇರಾನ್ ಶಾಂತಿ ಒಪ್ಪಂದದ ವಿವರ ಬಿಚ್ಚಿಟ್ಟ ಪಾಕ್​ ಪ್ರಧಾನಿ ಶೆಹಬಾಜ್ ಷರೀಫ್!
ಮಧ್ಯಪ್ರಾಚ್ಯದಲ್ಲಿ ಯುದ್ಧ ಅಂತ್ಯದ ಮುನ್ಸೂಚನೆ: ಅಮೆರಿಕ ಮತ್ತು ಇರಾನ್ ಶಾಂತಿ ಒಪ್ಪಂದದ ವಿವರ ಬಿಚ್ಚಿಟ್ಟ ಪಾಕ್​ ಪ್ರಧಾನಿ ಶೆಹಬಾಜ್ ಷರೀಫ್!
Published on
ಇಸ್ಲಾಮಾಬಾದ್: ಇಡೀ ವಿಶ್ವವೇ ಕಾತರದಿಂದ ಕಾಯುತ್ತಿರುವ ಅಮೆರಿಕ ಮತ್ತು ಇರಾನ್ ನಡುವಿನ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಅತ್ಯಂತ ಮಹತ್ವದ ಹಾಗೂ ರೋಚಕ ಸುದ್ದಿಯೊಂದು ಹೊರಬಿದ್ದಿದೆ. ಮುಂಬರುವ 24 ಗಂಟೆಗಳ ಒಳಗಾಗಿ ಉಭಯ ದೇಶಗಳ ನಡುವೆ ಎಲೆಕ್ಟ್ರಾನಿಕ್ ಡಿಜಿಟಲ್ ಸಹಿ ಪ್ರಕ್ರಿಯೆ ನಡೆಯಲಿದ್ದು, ಆರಂಭಿಕ ಶಾಂತಿ ಒಪ್ಪಂದ ಅಧಿಕೃತವಾಗಿ ಜಾರಿಗೆ ಬರಲಿದೆ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್(Shehbaz Sharif) ಶನಿವಾರ ಜಗತ್ತಿಗೆ ಪ್ರಕಟಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಮೇಲಿನ ಸೈನಿಕ ದಾಳಿಯ ಯೋಜನೆಗಳನ್ನು ಕೊನೆ ಕ್ಷಣದಲ್ಲಿ ಕೈಬಿಟ್ಟು, ಯುದ್ಧಕ್ಕೆ ಮುಕ್ತಾಯ ಹಾಡುವುದಾಗಿ ಘೋಷಿಸಿದ ಬೆನ್ನಲ್ಲೇ ಈ ಬಿಗ್ ಬ್ರೇಕ್ ಥ್ರೂ ಸಿಕ್ಕಿದೆ. ಯುರೋಪ್‌ನ ರಹಸ್ಯ ಸ್ಥಳವೊಂದರಲ್ಲಿ ಈ ವಾರಾಂತ್ಯದಲ್ಲೇ ಒಪ್ಪಂದಕ್ಕೆ ಅಂತಿಮ ಮುದ್ರೆ ಬೀಳಲಿದೆ.

"ಶಾಂತಿ ಇಷ್ಟೊಂದು ಹತ್ತಿರ ಬಂದಿರಲಿಲ್ಲ: ಪಾಕ್ ಪ್ರಧಾನಿ ಟ್ವೀಟ್!

ಮಧ್ಯಪ್ರಾಚ್ಯದ ಶಾಂತಿ ಮಾತುಕತೆಯಲ್ಲಿ ಮಧ್ಯಸ್ಥಿಕೆ ವಹಿಸಿರುವ ಪ್ರಮುಖ ರಾಷ್ಟ್ರಗಳಲ್ಲಿ ಒಂದಾದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ತಮ್ಮ ಅಧಿಕೃತ Xನಲ್ಲಿ ಈ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ನಾವು ಇತಿಹಾಸದಲ್ಲೇ ಹಿಂದೆಂದಿಗಿಂತಲೂ ಶಾಂತಿ ಒಪ್ಪಂದಕ್ಕೆ ಅತ್ಯಂತ ಹತ್ತಿರವಾಗಿದ್ದೇವೆ. ಮುಂದಿನ 24 ಗಂಟೆಗಳಲ್ಲಿ ಎಲ್ಲಾ ಪ್ರಕ್ರಿಯೆಗಳು ಅಂತಿಮಗೊಳ್ಳುವ ನಿರೀಕ್ಷೆಯಿದೆ. ಒಪ್ಪಂದದ ತಕ್ಷಣವೇ ಪಾಕಿಸ್ತಾನವು ಎಲೆಕ್ಟ್ರಾನಿಕ್ ಸಹಿ ಪ್ರಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಮುಂದಿನ ವಾರದಿಂದ ತಾಂತ್ರಿಕ ಮಟ್ಟದ ಮಾತುಕತೆಗಳು ಆರಂಭವಾಗಲಿವೆ ಎಂದು ತಿಳಿಸಿದ್ದಾರೆ.
ಈ ದೀರ್ಘ ಹಾಗೂ ಜಟಿಲವಾದ ಸಂಧಾನ ಪ್ರಕ್ರಿಯೆಯಲ್ಲಿ ಸತತ ಬದ್ಧತೆ ಪ್ರದರ್ಶಿಸಿದ ಅಮೆರಿಕ ಮತ್ತು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ದೇಶಗಳಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಈ ಐತಿಹಾಸಿಕ ಒಪ್ಪಂದವು ಮಧ್ಯಪ್ರಾಚ್ಯದಲ್ಲಿ ಶಾಶ್ವತ ಶಾಂತಿಗೆ ಬಲವಾದ ಅಡಿಪಾಯವಾಗಲಿದೆ ಎಂಬ ನಂಬಿಕೆ ನಮಗಿದೆ. ಶಾಂತಿ ಎಂಬುದು ಈಗ ನಮ್ಮ ಕೈಗೆಟುಕುವಷ್ಟು ಹತ್ತಿರದಲ್ಲಿದೆ ಎಂದು ಷರೀಫ್ ಭರವಸೆ ವ್ಯಕ್ತಪಡಿಸಿದ್ದಾರೆ.

ಯುದ್ಧದ ಅಂಚಿನಿಂದ ಶಾಂತಿಯ ಕಡೆಗೆ: ರೋಚಕ ಹಿನ್ನೆಲೆ

ಕಳೆದ ಕೆಲವು ದಿನಗಳ ಹಿಂದಷ್ಟೇ ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ಸತತ ಮೂರು ದಿನಗಳ ಕಾಲ ಭೀಕರ ಕ್ಷಿಪಣಿ ಹಾಗೂ ಶಸ್ತ್ರಾಸ್ತ್ರಗಳ ದಾಳಿ ನಡೆದಿತ್ತು. ಈ ಘಟನೆಯು ಮಧ್ಯಪ್ರಾಚ್ಯವನ್ನು ಮತ್ತೊಮ್ಮೆ ಮಹಾಯುದ್ಧದ ಕದಡಿಗೆ ತಳ್ಳಿತ್ತು. ಆದರೆ, ಶುಕ್ರವಾರ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಅವರು Xನಲ್ಲಿ ಪೋಸ್ಟ್ ಮಾಡಿ, ಒಪ್ಪಂದವು ಎಂದಿಗೂ ಇಷ್ಟು ಹತ್ತಿರ ಬಂದಿರಲಿಲ್ಲ ಎಂದು ಬರೆದುಕೊಂಡಿದ್ದರು. ವಿಶೇಷವೆಂದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ವಿದೇಶಾಂಗ ಸಚಿವರ ಈ ಪೋಸ್ಟ್ ಅನ್ನು ತಮ್ಮ ಸ್ವಂತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಒಪ್ಪಂದದ ಸತ್ಯಾಸತ್ಯತೆಯನ್ನು ಜಗತ್ತಿಗೆ ಖಚಿತಪಡಿಸಿದ್ದರು.

ಜಾಗತಿಕ ಮಾರುಕಟ್ಟೆಗೆ ನಿಟ್ಟುಸಿರು: ಕಚ್ಚಾ ತೈಲ ಪೂರೈಕೆ ಪುನರಾರಂಭ?

ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಆರಂಭಿಸಿದ್ದ ಯುದ್ಧದಿಂದಾಗಿ ಇಡೀ ಮಧ್ಯಪ್ರಾಚ್ಯ ತತ್ತರಿಸಿಹೋಗಿತ್ತು. ವಿಶೇಷವಾಗಿ ಪರ್ಷಿಯನ್ ಗಲ್ಫ್ ವಲಯದಿಂದ ಜಗತ್ತಿನಾದ್ಯಂತ ಸರಬರಾಜಾಗುತ್ತಿದ್ದ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲದ ಸಾಗಣೆ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಇದು ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಏರಿಕೆ ಹಾಗೂ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿತ್ತು. ಏಪ್ರಿಲ್ 7 ರಿಂದ ಜಾರಿಯಲ್ಲಿದ್ದ ಸಣ್ಣ ಕದನ ವಿರಾಮದ ಬಳಿಕ, ಈಗ ಸಂಪೂರ್ಣವಾಗಿ ಯುದ್ಧ ಮುಕ್ತಾಯಗೊಳ್ಳುತ್ತಿರುವುದು ಜಾಗತಿಕ ಮಾರುಕಟ್ಟೆ ಹಾಗೂ ಭಾರತ ಸೇರಿದಂತೆ ಹಲವು ದೇಶಗಳಿಗೆ ಭಾರಿ ನಿಟ್ಟುಸಿರು ತಂದಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net