ಹಿಂಸೆಯ ಬೇಗುದಿಯಲ್ಲಿ ಪಿಒಕೆ!: ಚುನಾವಣೆ ಮುನ್ನವೇ ಅಶಾಂತಿಯ ವಾತಾವರಣ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಜನಸಾಮಾನ್ಯರಲ್ಲಿ ಪಾಕಿಸ್ತಾನ ಆಡಳಿತದ ವಿರುದ್ಧ ದಶಕಗಳಿಂದ ಇದ್ದ ಅಸಮಾಧಾನವು ಈಗ ಸಂಪೂರ್ಣ ಬಂಡಾಯದ ರೂಪ ಪಡೆದಿದೆ. ಬಲಪ್ರಯೋಗದ ಮೂಲಕ ಇಂಟರ್ನೆಟ್ ಸ್ಥಗಿತಗೊಳಿಸಿ, ಅರೆ ಸೇನಾಪಡೆ ನಿಯೋಜಿಸಿ ಜನರ ದನಿ ಅಡಗಿಸಲು ಪಾಕಿಸ್ತಾನ ಯತ್ನಿಸುತ್ತಿದ್ದರೂ, ಚುನಾವಣೆ ಹತ್ತಿರವಾಗುತ್ತಿರುವಂತೆ ಪರಿಸ್ಥಿತಿ ಮತ್ತಷ್ಟು ಸ್ಪೋಟಕ ಹಂತ ತಲುಪಿದೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಮತ್ತೊಮ್ಮೆ ಭಾರಿ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದು, ಮೃತರ ಸಂಖ್ಯೆ 46ಕ್ಕೆ, ಗಾಯಾಳುಗಳ ಸಂಖ್ಯೆ 200ಕ್ಕೆ ಏರಿಕೆಯಾಗಿದೆ. ಗಿಲ್ಗಿಟ್-ಬಾಲ್ಟಿಸ್ತಾನ್ ಬೆನ್ನಲ್ಲೇ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಜುಲೈ 27ರಂದು ವಿಧಾನಸಭೆ ಚುನಾವಣೆ ನಡೆಸಲು ನಿರ್ಧರಿಸಲಾಗಿದೆ. ಪಿಒಕೆ ವಿಧಾನಸಭೆಯು ಒಟ್ಟು 53 ಸ್ಥಾನಗಳನ್ನು ಹೊಂದಿದ್ದು, ಇವುಗಳಲ್ಲಿ 45 ಸ್ಥಾನಗಳಿಗೆ ನೇರ ಚುನಾವಣೆ ನಡೆಯಲಿದೆ. ಪಿಒಕೆಯಲ್ಲಿ ಪ್ರಸ್ತುತ ಜಂಟಿ ಅವಾಮಿ ಕ್ರಿಯಾ ಸಮಿತಿ (ಜೆಎಎಸಿ) ಮತ್ತು ಅಲ್ಲಿನ ಸರ್ಕಾರದ ನಡುವೆ 12 ಮೀಸಲು ಸ್ಥಾನಗಳ ಕುರಿತು ತೀವ್ರ ವಿವಾದ ಭುಗಿಲೆದ್ದಿದೆ. ಈ 12 ಸ್ಥಾನಗಳನ್ನು ಜಮ್ಮು-ಕಾಶ್ಮೀರದಿಂದ ವಲಸೆ ಹೋಗಿ ಪಾಕಿಸ್ತಾನದ ಇತರ ಭಾಗಗಳಲ್ಲಿ ನೆಲೆಸಿರುವ ನಿರಾಶ್ರಿತರಿಗಾಗಿ ಮೀಸಲಿಡಲಾಗಿದೆ. ಈ 12 ಮೀಸಲು ಸ್ಥಾನಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕೆಂದು ಆಗ್ರಹಿಸಿ ಜೆಎಎಸಿ ನಿರಂತರ ಪ್ರತಿಭಟನೆ ಹಾಗೂ ಆಂದೋಲನಗಳನ್ನು ನಡೆಸುತ್ತಿದ್ದು, ಕಳೆದೊಂದು ವಾರದಿಂದ ಹಿಂಸಾಚಾರಕ್ಕೆ ತಿರುಗಿದೆ. 

ಆಂದೋಲನ ತೀವ್ರಗೊಂಡ ಹಿನ್ನೆಲೆಯಲ್ಲಿ, ಜೂನ್ 5ರಂದು ಅಲ್ಲಿನ ಸರ್ಕಾರವು ಜಂಟಿ ಅವಾಮಿ ಕ್ರಿಯಾ ಸಮಿತಿ ಮೇಲೆ ‘ಭಯೋತ್ಪಾದನಾ ವಿರೋಧಿ ಕಾಯ್ದೆ’ಯಡಿ ನಿಷೇಧ ಹೇರಿದೆ. ಸರ್ಕಾರದ ಈ ಕ್ರಮದ ಬಳಿಕ ಇಡೀ ಪ್ರದೇಶದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದ್ದು, ಮುಂಬರುವ ಚುನಾವಣೆಯ ಮೇಲೆ ಇದರ ನೆರಳು ಆವರಿಸಿದೆ. ಭಾರತದ ವಿದೇಶಾಂಗ ಸಚಿವಾಲಯವು ಪಾಕಿಸ್ತಾನದ ಈ ಭೀಕರ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿದೆ. ಮುಗ್ಧ ನಾಗರಿಕರ ಹಕ್ಕುಗಳ ಉಲ್ಲಂಘನೆಗಾಗಿ ಪಾಕಿಸ್ತಾನವನ್ನು ಜಾಗತಿಕ ಮಟ್ಟದಲ್ಲಿ ಹೊಣೆಗಾರರನ್ನಾಗಿ ಮಾಡಬೇಕೆಂದು ವಿಶ್ವ ಸಮುದಾಯಕ್ಕೆ ಕರೆ ನೀಡಿದೆ.

ಜನಾಕ್ರೋಶ ಸ್ಪೋಟಗೊಂಡಾಗ

ಹಿಂಸಾಚಾರದ ಹಿಂದೆ ಮುಖ್ಯವಾಗಿ ರಾಜಕೀಯ ಮತ್ತು ತೀವ್ರ ಆರ್ಥಿಕ ಅಸಮಾಧಾನಗಳಿವೆ. ಹೋರಾಟವನ್ನು ಸ್ಥಳೀಯ ವರ್ತಕರು ಮತ್ತು ನಾಗರಿಕರ ಒಕ್ಕೂಟವಾದ ಜಾಯಿಂಟ್ ಅವಾಮಿ ಆಕ್ಷನ್ ಕಮಿಟಿ (ಜೆಎಎಸಿ) ಮುನ್ನಡೆಸುತ್ತಿದೆ. ವಿಧಾನಸಭೆಯಲ್ಲಿ 12 ಸೀಟುಗಳನ್ನು ಪಾಕಿಸ್ತಾನದ ವಿವಿಧ ಪ್ರಾಂತ್ಯಗಳಲ್ಲಿ (ಪಂಜಾಬ್, ಸಿಂಧ್ ಇತ್ಯಾದಿ) ನೆಲೆಸಿರುವ ನಿರಾಶ್ರಿತರಿಗಾಗಿ ಮೀಸಲಿಡಲಾಗಿದೆ. ಈ ಸೀಟುಗಳಿಗೆ ಮತದಾನ ಪಿಒಕೆಯಿಂದ ಹೊರಗೆ ನಡೆಯುತ್ತದೆ. ಪಾಕಿಸ್ತಾನದ ಕೇಂದ್ರ ಸರ್ಕಾರವು ತನ್ನ ಕೈಗೊಂಬೆ ಸರ್ಕಾರವನ್ನು ಪಿಒಕೆಯಲ್ಲಿ ಅಧಿಕಾರಕ್ಕೆ ತರಲು ಈ 12 ಸೀಟುಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬುದು ಸ್ಥಳೀಯರ ಆರೋಪ. ಚುನಾವಣೆಗೂ ಮುನ್ನ ಈ ಮೀಸಲಾತಿಯನ್ನು ರದ್ದುಗೊಳಿಸಬೇಕೆಂದು ಜನಾಂದೋಲನ ರೂಪಿಸಲಾಗಿದೆ. ಆದರೆ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಸೀಟುಗಳ ರದ್ದತಿಗೆ ಸಾಂವಿಧಾನಿಕ ತಿದ್ದುಪಡಿ ಅಗತ್ಯ ಎಂದು ತೀರ್ಪು ನೀಡಿದ್ದು ಜನಾಕ್ರೋಶಕ್ಕೆ ಕಾರಣವಾಗಿದೆ.

ಈ ಭಾಗದಲ್ಲಿ ಉತ್ಪತ್ತಿಯಾಗುವ ಜಲವಿದ್ಯುತ್​ಗೆ ಸ್ಥಳೀಯರಿಗೆ ಹೆಚ್ಚಿನ ದರ ವಿಧಿಸಲಾಗುತ್ತಿದೆ ಮತ್ತು ಗೋಧಿ ಹಿಟ್ಟು ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಮೂಲಭೂತ ಸೌಕರ್ಯಗಳ ಕೊರತೆಯಿಂದ ಜನರು ದೀರ್ಘಕಾಲದಿಂದ ಆಕ್ರೋಶಗೊಂಡಿದ್ದಾರೆ. ಅಲ್ಲದೆ, ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಜೆಎಎಸಿಯನ್ನು ‘ಭಯೋತ್ಪಾದಕ ಸಂಘಟನೆ’ ಎಂದು ಘೊಷಿಸಿ, ನಿಷೇಧಿಸಲಾಗಿದೆ. ಇದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಜೆಎಎಸಿ ಕರೆಗೆ ಇಡೀ ಪ್ರಾಂತ್ಯದ ಮಾರುಕಟ್ಟೆಗಳು ಬಂದ್ ಆಗುತ್ತಿದ್ದವು, ಕರ ವಸೂಲಿ ನಿಲ್ಲುತ್ತಿತ್ತು. ನಾಗರಿಕರ ಈ ಒಗ್ಗಟ್ಟು ಪಾಕಿಸ್ತಾನಿ ಆಡಳಿತ ಮತ್ತು ಸ್ಥಳೀಯ ಸರ್ಕಾರದ ಅಸ್ತಿತ್ವಕ್ಕೇ ಸವಾಲಾಗಿತ್ತು.

ಈವರೆಗಿನ ಬೆಳವಣಿಗೆಗಳು

  • ಜೂನ್ ಮೊದಲ ವಾರದಿಂದಲೂ ಈ ಪ್ರದೇಶದಲ್ಲಿ ಪರಿಸ್ಥಿತಿ ಕೈಮೀರಿ ಹೋಗಿದೆ. 46 ಜನರು ಪ್ರಾಣ ಕಳೆದುಕೊಂಡಿದ್ದರೆ, 200ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. 400ಕ್ಕೂ ಅಧಿಕ ಪ್ರತಿಭಟನಾ ನಿರತರನ್ನು ಬಂಧಿಸಲಾಗಿದೆ. 
  •  ಪ್ರತಿಭಟನೆಯನ್ನು ಹತ್ತಿಕ್ಕಲು ಪಾಕಿಸ್ತಾನ ಸರ್ಕಾರ ಇಡೀ ಪ್ರಾಂತ್ಯದಲ್ಲಿ ಇಂಟರ್ನೆಟ್ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಪ್ರವಾಸಿಗರು ಮತ್ತು ಹೊರಗಿನವರು ತಕ್ಷಣವೇ ಈ ಪ್ರದೇಶವನ್ನು ತೊರೆಯುವಂತೆ ಆದೇಶ ಹೊರಡಿಸಲಾಗಿದೆ.
  • ಜೂನ್ 5ರ ನಂತರ ಪಾಕಿಸ್ತಾನದ ಅರೆಸೇನಾ ಪಡೆಗಳನ್ನು ಪಿಒಕೆಯಾದ್ಯಂತ ನಿಯೋಜಿಸಲಾಗಿದೆ. ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಪ್ರಯೋಗ ಹಾಗೂ ಗುಂಡಿನ ದಾಳಿ ನಡೆಸಲಾಗಿದೆ. ಮುಜಫರಬಾದ್, ರಾವಲಕೋಟ್ ಮತ್ತು ಮಿರ್ಪರ್ ಭಾಗಗಳಲ್ಲಿ ಉದ್ವಿಗ್ನತೆ ಮುಂದುವರಿದಿದೆ.

ಜೆಎಎಸಿ ಹಿನ್ನೆಲೆ

ಜಾಯಿಂಟ್ ಅವಾಮಿ ಆಕ್ಷನ್ ಕಮಿಟಿ-ಇದು ಯಾವುದೇ ರಾಜಕೀಯ ಪಕ್ಷವಲ್ಲ. ಇದು 2023ರಲ್ಲಿ ಅಸ್ತಿತ್ವಕ್ಕೆ ಬಂದ ನಾಗರಿಕ ಒಕ್ಕೂಟ. ಆರಂಭದಲ್ಲಿ 2022-23ರಲ್ಲಿ ರಾವಲಕೋಟ್​ನಲ್ಲಿ ಗೋಧಿ ಬೆಲೆ ಏರಿಕೆ ಮತ್ತು ವಿದ್ಯುತ್ ದರ ಹೆಚ್ಚಳದ ವಿರುದ್ಧ ಸಣ್ಣದಾಗಿ ಆರಂಭವಾದ ವ್ಯಾಪಾರಿಗಳ ಪ್ರತಿಭಟನೆ, 2023ರ ಸೆಪ್ಟೆಂಬರ್ ವೇಳೆಗೆ ಇಡೀ ಪ್ರಾಂತ್ಯವನ್ನು ಒಳಗೊಳ್ಳುವ ದೊಡ್ಡ ಜನಾಂದೋಲನವಾಗಿ ರೂಪಾಂತರಗೊಂಡಿತು. ಇದರಲ್ಲಿ ಪ್ರಮುಖವಾಗಿ ಸ್ಥಳೀಯ ವರ್ತಕರು, ಸಾರಿಗೆ ಯೂನಿಯನ್​ನವರು, ವಕೀಲರು, ವಿದ್ಯಾರ್ಥಿಗಳು ಮತ್ತು ನಾಗರಿಕ ಸಮಾಜದ ಮುಖಂಡರು ಇದ್ದಾರೆ. ರಾಜಕೀಯ ವ್ಯವಸ್ಥೆಯಿಂದ ಬೇಸತ್ತ ಯುವಕರು ಇದರ ದೊಡ್ಡ ಶಕ್ತಿಯಾಗಿದ್ದಾರೆ. ಶೌಕತ್ ನವಾಜ್ ಮಿರ್ ಜೆಎಎಸಿ ಮುಖ್ಯಸ್ಥರಾಗಿದ್ದು, ಉಮರ್ ನಜೀರ್ ಕಾಶ್ಮೀರಿ, ಸರ್ದಾರ್ ಅಮನ್ ಮತ್ತು ಖ್ವಾಜಾ ಮೆಹ್ರಾನ್ ಮುಂತಾದ ಸ್ಥಳೀಯ ನಾಯಕರು ಆಂದೋಲನವನ್ನು ಮುನ್ನಡೆಸುತ್ತಿದ್ದಾರೆ.

ಬೇಡಿಕೆಗಳು: ಜೆಎಎಸಿಯದ್ದು ಮುಖ್ಯವಾಗಿ 38 ಅಂಶಗಳ ಬೇಡಿಕೆಯಾಗಿದೆ. ನಮ್ಮದೇ ನದಿಗಳಿಂದ ಉತ್ಪಾದನೆಯಾಗುವ ಜಲವಿದ್ಯುತ್ ಅನ್ನು ನಮಗೆ ಅಗ್ಗದ ದರದಲ್ಲಿ ಕೊಡಿ, ದಿನಬಳಕೆ ವಸ್ತುಗಳಿಗೆ ಸಬ್ಸಿಡಿ ಕೊಡಿ ಮತ್ತು ಚುನಾವಣೆಯಲ್ಲಿ ಪಾಕಿಸ್ತಾನ ಸರ್ಕಾರದ ಹಸ್ತಕ್ಷೇಪ ತಡೆಯಲು 12 ನಿರಾಶ್ರಿತರ ಸೀಟುಗಳನ್ನು ರದ್ದುಮಾಡಿ ಎಂಬುದು ಇವರ ಪ್ರಮುಖ ಆಗ್ರಹ.

ಪಾಕ್ ಸೇನೆಯ ದೌರ್ಜನ್ಯ

ಪಾಕಿಸ್ತಾನ ಸೇನೆ ಮತ್ತು ಅದರ ಅಧೀನದಲ್ಲಿರುವ ಅರೆಸೇನಾ ಪಡೆಗಳು (ಮುಖ್ಯವಾಗಿ ಪಂಜಾಬ್ ರೇಂಜರ್ಸ್) ಈ ಬಿಕ್ಕಟ್ಟನ್ನು ಬಲಪ್ರಯೋಗದ ಮೂಲಕ ಹತ್ತಿಕ್ಕಲು ಯತ್ನಿಸಿದ್ದು, ಪರಿಸ್ಥಿತಿ ಹದಗೆಡಲು ಕಾರಣ. ಇತ್ತೀಚೆಗೆ ರಾವಲಕೋಟ್ ನಗರದಲ್ಲಿ ನಡೆದ ಪ್ರತಿಭಟನೆ ಮತ್ತು ಶವಸಂಸ್ಕಾರದ ಮೆರವಣಿಗೆಯ ಸಂದರ್ಭದಲ್ಲಿ ಪಾಕಿಸ್ತಾನ ಸೇನೆ ಮತ್ತು ರೇಂಜರ್ಸ್ ಪಡೆಗಳು ನಾಗರಿಕರ ಮೇಲೆ ನೇರ ಗುಂಡಿನ ದಾಳಿ ನಡೆಸಿವೆ. ಈ ಘಟನೆಯಲ್ಲಿ ಕನಿಷ್ಠ 20ಕ್ಕೂ ಹೆಚ್ಚು ಜನ ಸತ್ತಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ.

ಹೀಗಿದೆ ಆಡಳಿತ ವ್ಯವಸ್ಥೆ

ಪಾಕಿಸ್ತಾನ ಆಕ್ರಮಿತ ಕಾಶ್ಮೀರವು ಎರಡು ಪ್ರಾಂತ್ಯಗಳನ್ನು ಹೊಂದಿದೆ. ಆಜಾದ್ ಜಮ್ಮು ಕಾಶ್ಮೀರ (ಎಜೆಕೆ) ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್. ಜೂನ್ 5ರಿಂದ ಹಿಂಸಾಚಾರ ತಾರಕಕ್ಕೆ ಏರಿರುವುದು ‘ಆಜಾದ್ ಕಾಶ್ಮೀರ’ದಲ್ಲಿ. 45 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಈ ಪ್ರದೇಶವನ್ನು ಭಾರತ ವಾಸ್ತವ ಇತಿಹಾಸದ ಹಿನ್ನೆಲೆಯಲ್ಲಿ ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರ’ ಎಂದೇ ಕರೆಯುತ್ತದೆ. ಮುಜಫರಬಾದ್ ಇದರ ರಾಜಧಾನಿ. ಒಟ್ಟು 10 ಜಿಲ್ಲೆಗಳಿದ್ದು, ಮೀರಪುರ್, ಮುಜಫರಬಾದ್ ಮತ್ತು ಪೂಂಚ್ ಪ್ರಾಂತ್ಯಗಳಾಗಿ ವಿಂಗಡಿಸಲಾಗಿದೆ. ಈ ಪ್ರಾಂತ್ಯಕ್ಕೆ ಪ್ರತ್ಯೇಕ ಸಂವಿಧಾನ, ಪ್ರಧಾನಿ, ಅಧ್ಯಕ್ಷರೂ ಇದ್ದಾರೆ. ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಕೂಡ ಇದೆ. ಪ್ರಧಾನಿ ಶಾಸಕಾಂಗದ ಮುಖ್ಯಸ್ಥರಾದರೆ, ಅಧ್ಯಕ್ಷರು ಸಾಂವಿಧಾನಿಕ ಮುಖ್ಯಸ್ಥ. ಪ್ರಸ್ತುತ, ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧಿಕಾರದಲ್ಲಿದ್ದು, ರಾಜಾ ಫೈಸಲ್ ಮಮ್ತಾಜ್ ರಾಥೋಡ್ ಪ್ರಧಾನಿಯಾಗಿದ್ದಾರೆ. ಪಿಒಕೆ ಪ್ರತ್ಯೇಕ ಆಡಳಿತ ವ್ಯವಸ್ಥೆಯನ್ನು ಹೊಂದಿದ್ದರೂ, ಅಲ್ಲಿನ ಆಡಳಿತದ ಮೇಲೆ ಪಾಕಿಸ್ತಾನದ ಕೇಂದ್ರ ಸರ್ಕಾರ ಸಂಪೂರ್ಣ ಹಿಡಿತ ಹೊಂದಿದೆ. ಪಾಕಿಸ್ತಾನ ಸರ್ಕಾರವು 14 ಸದಸ್ಯರನ್ನು ಒಳಗೊಂಡ ‘ಕಾಶ್ಮೀರ ಮಂಡಳಿ’ ಮೂಲಕ ಪಿಒಕೆ ಆಡಳಿತದ ಮೇಲೆ ಪೂರ್ಣ ನಿಯಂತ್ರಣ ಸಾಧಿಸಿದೆ. ಪಾಕಿಸ್ತಾನದ ಪ್ರಧಾನಿ ನೇತೃತ್ವದಲ್ಲಿ ಈ ಮಂಡಳಿ ಕಾರ್ಯನಿರ್ವಹಿಸುತ್ತದೆ.

ಹೇಗಿದೆ ಪಿಒಕೆ?

1947-48ರ ಭಾರತ-ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಪಾಕ್ ಕಬಳಿಸಿಕೊಂಡ ಭೂಭಾಗವೇ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ). ಭಾರತೀಯ ಸೇನೆ ಈ ಭೂಭಾಗವನ್ನು ವಶಕ್ಕೆ ಪಡೆಯಲು ಸಮರ್ಥವಾಗಿತ್ತಾದರೂ, ಕದನವಿರಾಮ ಮಾಡಬೇಕೆಂಬ ವಿಶ್ವಸಂಸ್ಥೆಯ ಸೂಚನೆಯನ್ನು ಆಗಿನ ಪ್ರಧಾನಿ ಜವಾಹರಲಾಲ ನೆಹರು ಒಪ್ಪಿ, ಸಮರವನ್ನು ಮಹತ್ವದ ಘಟ್ಟದಲ್ಲಿ ನಿಲ್ಲಿಸಿದ್ದರಿಂದ ಕಾಶ್ಮೀರಕ್ಕೆ ಸೇರಿದ ಭೂಭಾಗ ಪಾಕಿಸ್ತಾನದ ಬಳಿ ಕಾನೂನುಬಾಹಿರವಾಗಿ ಉಳಿದುಕೊಂಡಿತು. ಹೀಗೆ ಪಾಕಿಸ್ತಾನ ಆಕ್ರಮಿಸಿಕೊಂಡಿರುವ ಕೆಲ ಪ್ರದೇಶವೇ ಪಿಒಕೆ. ಇದರ ಭೌಗೋಳಿಕ ವಿಸ್ತೀರ್ಣ 13 ಸಾವಿರ ಚದರ ಕಿಲೋಮೀಟರ್. ಪಿಒಕೆಯ ಗಡಿಯು ಪಶ್ಚಿಮದಲ್ಲಿ ಪಾಕಿಸ್ತಾನದ ಪಂಜಾಬ್ ಹಾಗೂ ಖೈಬರ್ ಪಖ್ತುನ್​ವಾಲಾ, ಉತ್ತರದಲ್ಲಿ ಚೀನಾದ ಜಿಂಜ್​ಜಿಯಾಂಗ್ ಸ್ವಾಯತ್ತ ಪ್ರಾಂತ್ಯ, ಪೂರ್ವದಲ್ಲಿ ಜಮ್ಮು-ಕಾಶ್ಮೀರದೊಂದಿಗೆ ತಾಗಿಕೊಂಡಿದೆ. 2005ರಲ್ಲಿ ಸಂಭವಿಸಿದ ಭೀಕರ ಭೂಕಂಪದ ಪರಿಣಾಮ ಪಿಒಕೆಯ ಕೆಲ ಭಾಗ ಅಸ್ತಿತ್ವವನ್ನೇ ಕಳೆದುಕೊಂಡಿತ್ತು. ಪಿಒಕೆಯಲ್ಲಿ ಸರ್ಕಾರ ರಚಿಸುವ ಪ್ರಹಸನವನ್ನು ಪಾಕ್ ಹಿಂದಿನಿಂದಲೂ ಮಾಡಿಕೊಂಡು ಬಂದಿದೆ. ಆದರೆ, ಇಲ್ಲಿನ ವಿಧಾನಸಭೆಗೆ ಯಾವುದೇ ಸ್ವಾತಂತ್ರ್ಯ ಅಥವಾ ಅಧಿಕಾರ ನೀಡಲಾಗಿಲ್ಲ.

ತಜ್ಞರು ಏನಂತಾರೆ?

ಇಷ್ಟು ದಿನಗಳ ಕಾಲ ಪಾಕಿಸ್ತಾನ ಪಿಒಕೆಯಲ್ಲಿನ ಜನರಿಗೆ ‘ಸ್ವಾತಂತ್ರ್ಯದ ಕನಸು ತೋರಿಸುತ್ತ ಅವರನ್ನು ಪ್ರಚೋದಿಸುತ್ತ ಬಂದಿದೆ. ಆದರೆ, ಜನರಿಗೆ ಈಗ ವಾಸ್ತವ ಅರ್ಥವಾಗುತ್ತಿದೆ. ಪಾಕಿಸ್ತಾನ ಎಂದಿಗೂ ತಮ್ಮ ಬಾಳನ್ನು ಬದಲಾಯಿಸುವುದಿಲ್ಲ. ಬದಲಿಗೆ ತಮ್ಮನ್ನು ಗಾಳವಾಗಿಸಿಕೊಂಡು ಭಯೋತ್ಪಾದನೆ, ಅಶಾಂತಿಯನ್ನು ಹರಡುತ್ತದೆ ಎಂಬ ಸಂಗತಿ ಮನದಟ್ಟಾಗುತ್ತಿದೆ. ಅದರ ಫಲವಾಗಿಯೇ ಕಳೆದ ನಾಲ್ಕೈದು ವರ್ಷಗಳಿಂದ ಪ್ರತಿಭಟನೆ, ಹೋರಾಟಗಳು ಆಗಾಗ ನಡೆಯುತ್ತಲೇ ಇವೆ. ಆದರೆ, ಈ ಪರಿಸ್ಥಿತಿಯನ್ನು ಭಾರತ ಜಾಣತನದಿಂದ ನಿರ್ವಹಿಸಬೇಕು. ಪಿಒಕೆಯ ವಾಸ್ತವ ಚಿತ್ರಣವನ್ನು ಅಂತಾರಾಷ್ಟ್ರೀಯ ಸಮುದಾಯದೆದುರು ತೆರೆದಿಡಲು ಭಾರತ ಯಶಸ್ವಿಯಾದಲ್ಲಿ ಹಲವು ಬದಲಾವಣೆಗಳನ್ನು ಕಾಣಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net