ಜಿ7 ಶೃಂಗಸಭೆಯಲ್ಲಿ ಟ್ರಂಪ್ ಎದುರೇ ಮೂವರು ಭಾರತೀಯ ನಾವಿಕರ ಸಾವಿನ ವಿಷಯ ಪ್ರಸ್ತಾಪಿಸಿದ ಪ್ರಧಾನಿ ಮೋದಿ: ನಾವಿಕರ ಸುರಕ್ಷತೆಗೆ ಕರೆ | PM Modi

ಜಿ7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತನಾಡುತ್ತಿರುವುದು.
ಜಿ7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತನಾಡುತ್ತಿರುವುದು.
Published on
ನವದೆಹಲಿ: ಫ್ರಾನ್ಸ್​​ನಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎದುರೇ ಪ್ರಧಾನಿ ಮೋದಿ(PM Modi) ಓಮನ್ ಕರಾವಳಿಯಲ್ಲಿ ಅಮೆರಿಕ ಸೇನೆಯ ದಾಳಿಯಿಂದ ಮೃತಪಟ್ಟ ಮೂವರು ನಾವಿಕರ ವಿಷಯವನ್ನು ಪ್ರಸ್ತಾಪಿಸಿದ್ದು, ನಾವಿಕರ ಸುರಕ್ಷತೆ ನಮ್ಮ ಜವಾಬ್ದಾರಿಯಾಗಿದೆ ಎಂದು ಅವರ ಸುರಕ್ಷೆತೆಗೆ ಕರೆ ನೀಡಿದ್ದಾರೆ.
ಫ್ರಾನ್ಸ್‌ನ ಎವಿಯನ್‌ನಲ್ಲಿ ನಡೆದ ಜಿ 7 ಶೃಂಗಸಭೆಯಲ್ಲಿ ಮಂಗಳವಾರ(ಜೂ. 16) ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದು, ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪಿಸುವಲ್ಲಿ ಆಗಿರುವ ಪ್ರಗತಿಯನ್ನು ನಾವು ಸ್ವಾಗತಿಸುತ್ತೇವೆ. ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷವು ಈ ಪ್ರದೇಶದಲ್ಲಿ ನಮ್ಮ ಮಿತ್ರರಾಷ್ಟ್ರಗಳಿಗೆ ಜೀವ ಮತ್ತು ಆಸ್ತಿಪಾಸ್ತಿ ನಷ್ಟವನ್ನುಂಟು ಮಾಡಿದೆ ಎಂದಿದ್ದಾರೆ.
ಹಾರ್ಮುಜ್ ಜಲಸಂಧಿಯ ಮೂಲಕ ಸಮುದ್ರ ವ್ಯಾಪಾರಕ್ಕೆ ಆಗಿರುವ ಅಡಚಣೆಗಳು ಜಾಗತಿಕ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ. ಓಮನ್ ಕರಾವಳಿಯಲ್ಲಿ ಹಡಗಿನ ಮೇಲೆ ನಡೆದ ದಾಳಿಯಲ್ಲಿ ಭಾರತೀಯ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಜಾಗತಿಕ ಕಡಲ ವ್ಯಾಪಾರದ ಮೂಲಕ ದೇಶಗಳ ನಡುವೆ ಸೇತುವೆಗಳಾಗಿ ಕಾರ್ಯನಿರ್ವಹಿಸುವ ನಾವಿಕರ ಸುರಕ್ಷತೆಯು ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.
ಸಮುದ್ರ ಮಾರ್ಗಗಳು ಸುರಕ್ಷಿತವಾಗಿವೆ ಮತ್ತು ನಾವಿಕರು ಯಾವುದೇ ಭಯವಿಲ್ಲದೆ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬಹುದು ಎಂದು ಖಚಿತಪಡಿಸಿಕೊಳ್ಳಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಅವಶ್ಯಕತೆಯಿದೆ ಎಂದು ಸಭೆಯಲ್ಲಿ ಹೇಳಿದ್ದಾರೆ.

ಮೂವರು ನಾವಿಕರ ಸಾವು

ಇತ್ತೀಚೆಗೆ ಓಮನ್ ಕರಾವಳಿಯಲ್ಲಿ ಭಾರತೀಯರನ್ನು ಹೊತ್ತೊಯ್ಯುತ್ತಿದ್ದ ಹಡಗಿನ ಮೇಲೆ ಅಮೆರಿಕ ದಾಳಿ ನಡೆಸಿತ್ತು. ಅಮೆರಿಕದ ದಾಳಿಯಿಂದಾಗಿ ಮೂವರು ಭಾರತೀಯ ನಾವಿಕರಾದ ಡೆಕ್ ಕೆಡೆಟ್ ಆದಿತ್ಯ ಶರ್ಮಾ, ಎಂಜಿನ್ ಫಿಟ್ಟರ್ ಶಿವಾನಂದ್ ಚೌರಾಸಿಯಾ ಹಾಗೂ ಮುಖ್ಯ ಎಂಜಿನಿಯರ್ ಪಟ್ನಾಲ ಸುರೇಶ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದರು.

16 ತಿಂಗಳ ನಂತರ ಮೋದಿ-ಟ್ರಂಪ್ ಭೇಟಿ

ಸುಮಾರು 16 ತಿಂಗಳ ನಂತರ ಜಿ7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ಮುಖಾಮುಖಿಯಾಗಿ ಭೇಟಿಯಾದರು. ಆತ್ಮೀಯವಾಗಿ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು, ಸ್ವಲ್ಪ ಹೊತ್ತು ಮಾತನಾಡಿದರು. ಶೃಂಗಸಭೆಯಲ್ಲಿ ಇಬ್ಬರು ನಾಯಕರು ಅಕ್ಕಪಕ್ಕದಲ್ಲಿ ಕುಳಿತಿದ್ದರು. ಇಂದು ಬುಧವಾರ ಇಬ್ಬರು ನಾಯಕರು ಭೇಟಿಯಾಗಲಿದ್ದಾರೆ. ಭಾರತ-ಯುಎಸ್ ಸಂಬಂಧಗಳ ಕುರಿತು ಚರ್ಚಿಸುವ ಸಾಧ್ಯತೆಯಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net