ಟರ್ಕಿಯಲ್ಲಿ ವಿಮಾನ ಅಪಘಾತ: ಲಿಬಿಯಾ ಸೇನಾ ಮುಖ್ಯಸ್ಥ ಸೇರಿ 8 ಅಧಿಕಾರಿಗಳು ಸಜೀವ ದಹನ!

Plane crash in Turkey
Plane crash in Turkey
Published on
ಅಂಕಾರಾ: ಟರ್ಕಿಯ ರಾಜಧಾನಿ ಅಂಕಾರಾದಲ್ಲಿ ಖಾಸಗಿ ವಿಮಾನವೊಂದು ಅಪಘಾತಕ್ಕೀಡಾಗಿ ಲಿಬಿಯಾದ ಸೇನಾ ಸ್ಟಾಫ್ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಮೊಹಮ್ಮದ್ ಅಲಿ ಅಹ್ಮದ್ ಅಲ್-ಹಡ್ಡಾದ್ ಸಾವನ್ನಪ್ಪಿದ್ದಾರೆ. ಈ ದುರಂತದಲ್ಲಿ ಅವರೊಂದಿಗೆ ಪ್ರಯಾಣಿಸುತ್ತಿದ್ದ ನಾಲ್ವರು ಹಿರಿಯ ಸೇನಾ ಅಧಿಕಾರಿಗಳು ಮತ್ತು ಮೂವರು ಸಿಬ್ಬಂದಿ ಸೇರಿ ಒಟ್ಟು ಎಂಟು ಜನರು ಮೃತಪಟ್ಟಿದ್ದಾರೆ ಎಂದು ಬುಧವಾರ ವರದಿಯಾಗಿದೆ.
ಅಪಘಾತಕ್ಕೊಳಗಾದ ವಿಮಾನವು ಡಸಾಲ್ಟ್ ಫಾಲ್ಕನ್ 50 ಮಾದರಿಯ ಖಾಸಗಿ ಜೆಟ್ ಆಗಿದ್ದು, ಅಂಕಾರಾದ ಎಸೆನ್‌ಬೋಗಾ ವಿಮಾನ ನಿಲ್ದಾಣದಿಂದ ಟ್ರಿಪೋಲಿಗೆ ಹೊರಟಿತ್ತು. ಸ್ಥಳೀಯ ಸಮಯ ಸಂಜೆ 8:10ಕ್ಕೆ ಟೇಕ್‌ಆಫ್ ಆದ ನಂತರ ಸುಮಾರು 40 ನಿಮಿಷಗಳಲ್ಲಿ ರೇಡಿಯೋ ಸಂಪರ್ಕ ಕಡಿತಗೊಂಡಿತು. ವಿಮಾನದಲ್ಲಿ ವಿದ್ಯುತ್ ದೋಷ ಉಂಟಾಗಿ ತುರ್ತು ಲ್ಯಾಂಡಿಂಗ್ ಕೋರಿತ್ತು. ಆದರೆ, ದುರದೃಷ್ಟವಶಾತ್​ ಪತನವಾಗಿದೆ ಎಂದು ಟರ್ಕಿ ಅಧಿಕಾರಿಗಳು ತಿಳಿಸಿದ್ದಾರೆ.
ಲಿಬಿಯಾ ಸರ್ಕಾರದ ಪ್ರಧಾನಿ ಅಬ್ದುಲ್ ಹಮೀದ್ ದ್ಬೇಬಾ ಅವರು ಈ ದುರಂತವನ್ನು ದೃಢಪಡಿಸಿ, "ದೇಶಕ್ಕೆ ದೊಡ್ಡ ನಷ್ಟ" ಎಂದು ಕರೆದಿದ್ದಾರೆ. ಈ ಅಪಘಾತದಿಂದಾಗಿ ಲಿಬಿಯಾದಲ್ಲಿ ಮೂರು ದಿನಗಳ ರಾಷ್ಟ್ರೀಯ ದುಃಖಾಚರಣೆ ಘೋಷಿಸಲಾಗಿದೆ.
ಮೃತರಲ್ಲಿ ಇತರರು: ಗ್ರೌಂಡ್ ಫೋರ್ಸಸ್ ಮುಖ್ಯಸ್ಥ ಮೇಜರ್ ಜನರಲ್ ಅಲ್-ಫಿತೂರಿ ಘರೀಬಿಲ್, ಮಿಲಿಟರಿ ಮ್ಯಾನುಫ್ಯಾಕ್ಚರಿಂಗ್ ಅಥಾರಿಟಿ ನಿರ್ದೇಶಕ ಬ್ರಿಗೇಡಿಯರ್ ಜನರಲ್ ಮಹ್ಮೂದ್ ಅಲ್-ಖತಾವಿ, ಸಲಹೆಗಾರ ಮೊಹಮ್ಮದ್ ಅಲ್-ಅಸಾವಿ ಡಯಾಬ್ ಮತ್ತು ಫೋಟೋಗ್ರಾಫರ್ ಮೊಹಮ್ಮದ್ ಒಮರ್ ಅಹ್ಮದ್ ಮಹ್ಜೂಬ್.
ಲಿಬಿಯಾದಲ್ಲಿ 2011ರ ನಂತರದ ಅಸ್ಥಿರತೆಯ ನಡುವೆ ಅಲ್-ಹಡ್ಡಾದ್ ಅವರು ಪಶ್ಚಿಮ ಲಿಬಿಯಾದ ಪ್ರಮುಖ ಸೇನಾ ನಾಯಕರಾಗಿದ್ದರು ಮತ್ತು ಸೇನಾ ಏಕೀಕರಣ ಪ್ರಯತ್ನಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.ಈ ದುರಂತವು ಲಿಬಿಯಾ ಮತ್ತು ಟರ್ಕಿ ನಡುವಿನ ಸಂಬಂಧಗಳ ಮೇಲೆ ಪ್ರಭಾವ ಬೀರಬಹುದು ಎಂಬ ಆತಂಕ ವ್ಯಕ್ತವಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net