ಟ್ರಂಪ್​ ಜತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಸಖತ್ ಚಾನ್ಸ್​! ಒಂದೇ ಒಂದು ಫೋಟೋಶೂಟ್​ಗೆ ಇಷ್ಟೊಂದು ಕೊಡಬೇಕಾ? ​

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಆ.27ರಂದು ಹಾಸ್ಟನ್‌ನಲ್ಲಿ ಟ್ರಂಪ್‌ ಹೆಸರಿನಲ್ಲಿ ಬೃಹತ್​ ನಿಧಿ ಸಂಗ್ರಹಣೆ
  • ಟ್ರಂಪ್ ಜತೆ ಫೋಟೋಶೂಟ್‌ಗೆ ದುಬಾರಿ ಮೊತ್ತವೇ ಫಿಕ್ಸ್
  • ಒಂದೇ ಒಂದು ಫೋಟೋ ತೆಗೆಸಿಕೊಳ್ಳಲು ಇಷ್ಟೊಂದು ಕೊಡಬೇಕಾ ಎಂಬ ಪ್ರಶ್ನೆ
ಅಮೆರಿಕ: ಅತ್ತ ಇರಾನ್​ ಮೇಲೆ ಭೀಕರ ಯುದ್ಧವನ್ನು ಸಾರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಳಿದ ರಾಷ್ಟ್ರಗಳ ನಡುವೆ ಶಾಂತಿ ಒಪ್ಪಂದ ಮಾಡಿಸಲು ಮೂಗು ತೂರಿಸುವುದು ವಿಚಿತ್ರ. ಒಂದು ರೀತಿಯಲ್ಲಿ ತಾನೊಬ್ಬ ಸರ್ವಾಧಿಕಾರಿ ಎನ್ನುವಂತೆ ನಡೆದುಕೊಳ್ಳುವ ಟ್ರಂಪ್​ ಜತೆ ಒಂದು ಫೋಟೋ ತೆಗೆಸಿಕೊಳ್ಳುವ ಸುವರ್ಣಾವಕಾಶ ಇದೀಗ ಅಮೆರಿಕನ್ನರಿಗೆ ಲಭಿಸಿದೆ. ಮತ್ತೊಂದೆಡೆ, ಈ ಸುದ್ದಿಯು ಯುಎಸ್​ ಜನಸಾಮಾನ್ಯರು ಮಾತ್ರವಲ್ಲದೇ ನೆಟ್ಟಿಗರ ಹುಬ್ಬೇರಿಸಿದೆ.     
ಅಮೆರಿಕ ಅಧ್ಯಕ್ಷರು ಎಂದರೆ ಸುಮ್ಮನೆ ಅಲ್ಲ. ಅವರಿಗೆ ಅತಿಯಾದ ಹಾಗೂ ಬಿಗಿ ಭದ್ರತೆಯನ್ನು ನೀಡಲಾಗುತ್ತದೆ. ಟ್ರಂಪ್ ಬಳಿ ಅಥವಾ ಸುತ್ತಮುತ್ತಲೂ ಹೋಗಲು ಜನಸಾಮಾನ್ಯರಿಗೆ ಒಂದು ಸಣ್ಣ ಅವಕಾಶವೂ ಇರುವುದಿಲ್ಲ. ಹೀಗಿರುವಾಗ, ಅವರೊಂದಿಗೆ ಒಂದು ಫೋಟೋ ಕ್ಲಿಕ್ಕಿಸಿಕೊಳ್ಳುವುದು ಕಷ್ಟಸಾಧ್ಯ. ಆದರೆ, ರಿಪಬ್ಲಿಕನ್ ರಾಷ್ಟ್ರೀಯ ಸಮಿತಿ, ಇದಕ್ಕೆ ವಿರುದ್ಧ ಎನ್ನುವಂತೆ ಕಾಮನ್​ ಪೀಪಲ್​ಗೆ ಒಂದು ದೊಡ್ಡ ಅವಕಾಶವನ್ನೇ ಒದಗಿಸಿದೆ. ಟ್ರಂಪ್ ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಚಾನ್ಸ್​ ಕೊಡಲಾಗಿದೆ. ಆದರೆ, ಇದಕ್ಕೊಂದು ಷರತ್ತು ಇದೆ.
ಸುಖಾಸುಮ್ಮನೆ ಟ್ರಂಪ್​ ಜತೆ ಫೋಟೋ ತೆಗೆಸಿಕೊಳ್ಳಲು ಸಾಧ್ಯವಿಲ್ಲ. ಅದಕ್ಕೆಂದೇ ಒಂದು ಫಿಕ್ಸ್ ಬೆಲೆಯನ್ನು ನಿಗದಿಪಡಿಸಲಾಗಿದೆ. ಆಗಸ್ಟ್ 27ರಂದು, ರಿಪಬ್ಲಿಕನ್ ರಾಷ್ಟ್ರೀಯ ಸಮಿತಿಯು ಹಾಸ್ಟನ್‌ನಲ್ಲಿ ಟ್ರಂಪ್‌ಗಾಗಿ ವಿಶೇಷ ನಿಧಿಸಂಗ್ರಹಣೆ ಕಾರ್ಯಕ್ರಮವನ್ನು ಆಯೋಜಿಸಲಿದೆ. ಈ ಕಾರ್ಯಕ್ರಮದಲ್ಲಿ ಟ್ರಂಪ್ ಜತೆ ಫೋಟೋ ತೆಗೆಸಿಕೊಳ್ಳಲು ಬರೋಬ್ಬರಿ 85 ಲಕ್ಷ ರೂ. ಹಣವನ್ನು ಕೊಡಬೇಕಿದೆ. ಇದಕ್ಕೆ ಸಂಬಂಧಿಸಿದಂತೆ ಇನ್ವಿಟೇಷನ್​ನ ಪ್ರತಿಯೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. 
ಈ ಕಾರ್ಯಕ್ರಮದ ಟಿಕೆಟ್ ಬೆಲೆಗಳು ಪ್ರತಿ ಜೋಡಿಗೆ 10,000 ಡಾಲರ್​ನಿಂದ (9.5 ಲಕ್ಷ ರೂ.) ಶುರುವಾದರೆ, ಗ್ರೂಪ್ ಫೋಟೋಗೆ 88,600 ಡಾಲರ್​ (85 ಲಕ್ಷ ರೂ.) ಆಗಲಿದೆ ಎಂದು ಆಹ್ವಾನ ಪತ್ರಿಕೆಯಲ್ಲಿ ಉಲ್ಲೇಖಿಸಲಾಗಿದೆ. ಅತ್ಯಂತ ದುಬಾರಿ ಆತಿಥೇಯ ಸಮಿತಿ ಪ್ಯಾಕೇಜ್‌ನ ಬೆಲೆ 4,43,000 ಡಾಲರ್​ (4.2 ಕೋಟಿ ರೂ.) ಎಂಬುದು ನಿಜಕ್ಕೂ ಶಾಕಿಂಗ್​ ಸಂಗತಿಯೇ. ಸದ್ಯದ ಮಟ್ಟಿಗೆ ಈ ಪೋಸ್ಟ್​ಗೆ ಮಿಶ್ರ ಪ್ರತಿಕ್ರಿಯೆಗಳು ಹರಿದುಬಂದಿದ್ದು, ಇದೆಲ್ಲ ನಿಜವೇ? ನಿಧಿ ಸಂಗ್ರಹಣೆ ಅಭಿಯಾನದಲ್ಲಿ ಟ್ರಂಪ್ ಜನಸಾಮಾನ್ಯರೊಂದಿಗೆ ಫೋಟೋ ತೆಗೆಸಿಕೊಳ್ಳುತ್ತಾರಾ? ಎಂಬ ಗೊಂದಲದ ಪ್ರಶ್ನೆಗಳು ಕಾಡತೊಡಗಿವೆ,(ಏಜೆನ್ಸೀಸ್).  ​
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net