ಧುರಂಧರ್ ವಿರುದ್ಧ ಪಾಕ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆ; ಪಾಕಿಸ್ತಾನದ ವರ್ಚಸ್ಸಿಗೆ ಹಾನಿ ಆರೋಪ | Dhurandhar

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಪಾಕಿಸ್ತಾನದ ಕರಾಚಿಯ ನ್ಯಾಯಾಲಯದಲ್ಲಿ ಧುರಂಧರ್ ವಿರುದ್ಧ ಅರ್ಜಿ ಸಲ್ಲಿಕೆ
  • ಚಿತ್ರದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಮತ್ತು ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಚಿತ್ರಗಳನ್ನು ಅನುಮತಿ ಇಲ್ಲದೆ ಬಳಸಲಾಗಿದೆ.
  • ಕರಾಚಿಯ ಲಿಯಾರಿ ಪಟ್ಟಣವನ್ನು ಭಯೋತ್ಪಾದಕರ ತಂಗುದಾಣದಂತೆ ಬಿಂಬಿಸಲಾಗಿದೆ
  • ಒಟ್ಟಾರೆ ಪಾಕಿಸ್ತಾನದ ವರ್ಚಸ್ಸನ್ನು ಈ ಸಿನಿಮಾ ಹಾಳುಮಾಡುತ್ತಿದೆ
ಪಾಕಿಸ್ತಾನ : ಶುಕ್ರವಾರ (ಡಿ.13) ಪಾಕಿಸ್ತಾನದ ಕರಾಚಿಯ ನ್ಯಾಯಾಲಯದಲ್ಲಿ ಭಾರತೀಯ ಚಲನಚಿತ್ರ ಧುರಂಧರ್ (Dhurandhar) ವಿರುದ್ಧ ಅರ್ಜಿ ಸಲ್ಲಿಸಲಾಗಿದೆ. ಚಿತ್ರದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರ ಚಿತ್ರಗಳು, ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಧ್ವಜಗಳು ಮತ್ತು ಪಕ್ಷದ ರ್ಯಾಲಿಗಳ ದೃಶ್ಯಗಳನ್ನು ಅನುಮತಿಯಿಲ್ಲದೆ ಬಳಸಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಪಿಪಿಪಿಯನ್ನು ಭಯೋತ್ಪಾದನೆಯನ್ನು ಬೆಂಬಲಿಸುವ ಪಕ್ಷವಾಗಿ ಚಿತ್ರಿಸಲಾಗಿದೆ ಎಂದು ಪಿಪಿಪಿ ಕಾರ್ಯಕರ್ತ ಮೊಹಮ್ಮದ್ ಅಮೀರ್ ಅವರು ಕರಾಚಿಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದ್ದಾರೆ.
ಚಿತ್ರದ ನಿರ್ದೇಶಕ, ನಿರ್ಮಾಪಕ, ನಟರು ಮತ್ತು ಚಿತ್ರದ ನಿರ್ಮಾಣ ಮತ್ತು ಪ್ರಚಾರದಲ್ಲಿ ಭಾಗಿಯಾಗಿರುವ ಇತರರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ. ಅರ್ಜಿಯಲ್ಲಿ ನಿರ್ದೇಶಕ ಆದಿತ್ಯ ಧರ್, ನಿರ್ಮಾಪಕರಾದ ಲೋಕೇಶ್ ಧರ್ ಮತ್ತು ಜ್ಯೋತಿ ಕಿಶೋರ್ ದೇಶಪಾಂಡೆ, ಹಾಗೆಯೇ ನಟರಾದ ರಣವೀರ್ ಸಿಂಗ್, ಸಂಜಯ್ ದತ್, ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್, ಆರ್. ಮಾಧವನ್, ಸಾರಾ ಅರ್ಜುನ್ ಮತ್ತು ರಾಕೇಶ್ ಬೇನಿ ಅವರ ಹೆಸರನ್ನು ಸೇರಿಸಲಾಗಿದೆ.
ಈ ಚಿತ್ರವು ಪಾಕಿಸ್ತಾನದ ವರ್ಚಸ್ಸಿಗೆ ಹಾನಿ ಮಾಡುತ್ತಿದೆ
ಅರ್ಜಿದಾರರ ಪ್ರಕಾರ, ಚಿತ್ರದಲ್ಲಿ ಪಿಪಿಪಿಯನ್ನು ಭಯೋತ್ಪಾದಕರಿಗೆ ಸಹಾನುಭೂತಿ ಹೊಂದಿರುವ ಪಕ್ಷವಾಗಿ ಚಿತ್ರಿಸಲಾಗಿದೆ. ಹಾಗೆಯೇ, ಕರಾಚಿಯ ಲಿಯಾರಿ ಪ್ರದೇಶವನ್ನು ಭಯೋತ್ಪಾದಕ ತಂಗುದಾಣ ಎನ್ನುವ ರೀತಿ ಚಿತ್ರಿಸಲಾಗಿದೆ. ಇದು ಮಾನನಷ್ಟಕರ, ದಾರಿತಪ್ಪಿಸುವ ಮತ್ತು ಪಾಕಿಸ್ತಾನದ ವರ್ಚಸ್ಸಿಗೆ ಹಾನಿಕಾರಕ ಎಂದು ಅರ್ಜಿದಾರರು ಹೇಳಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಲಿಲ್ಲ, ಆದ್ದರಿಂದ ನ್ಯಾಯಾಲಯದ ಮೊರೆ
ತಾನು ಈ ಹಿಂದೆ ಡಾರ್ಖ್ಶನ್ ಪೊಲೀಸ್ ಠಾಣೆಯ ಎಸ್‌ಎಚ್‌ಒಗೆ ಲಿಖಿತ ದೂರು ಸಲ್ಲಿಸಿದ್ದೆ, ಆದರೆ ಪೊಲೀಸರು ಪ್ರಕರಣ ದಾಖಲಿಸಲಿಲ್ಲ ಅಥವಾ ಯಾವುದೇ ಕಾನೂನು ಕ್ರಮ ಕೈಗೊಳ್ಳಲಿಲ್ಲ, ಅದಕ್ಕಾಗಿಯೇ ನಾನು ನ್ಯಾಯಾಲಯವನ್ನು ಸಂಪರ್ಕಿಸಬೇಕಾಯಿತು ಎಂದು ಅರ್ಜಿದಾರರು ಹೇಳಿದ್ದಾರೆ.(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net