ಶಾಲೆಯಿಲ್ಲ, ಊಟವಿಲ್ಲ.... 10 ದಿನಗಳಿಂದ ಲಾಕ್​ಡೌನ್ ಹೇರಿದ ಪಾಕ್​! ತಮ್ಮದೇ ಸರ್ಕಾರಕ್ಕೆ ಹಿಡಿಶಾಪ ಹಾಕಿದ ಜನರು​

ಪಾಕಿಸ್ತಾನ
ಪಾಕಿಸ್ತಾನ
Published on

ಪ್ರಮುಖ ಮುಖ್ಯಾಂಶಗಳು

  • ಇಸ್ರೇಲ್​-ಅಮೆರಿಕ ಮತ್ತು ಇರಾನ್​ ಮಧ್ಯೆ ಯುದ್ಧ ನಿಲ್ಲಿಸಲು ಪಾಕ್​ ಪಣ
  • ಮೊದಲ ಮಾತುಕತೆ ವಿಫಲದ ನಡುವೆ ಮತ್ತೊಂದು ಪ್ರಯತ್ನಕ್ಕೆ ಮುಂದು
  • ಪಾಕ್​ ಸರ್ಕಾರದ ನಡೆಗೆ ಜನರು ಹೈರಾಣ, ಹಿಡಿಶಾಪ
ಕರಾಚಿ: ಇಸ್ರೇಲ್​-ಅಮೆರಿಕ ಮತ್ತು ಇರಾನ್​ ಮಧ್ಯೆ ಹೇಗಾದರೂ ಯುದ್ಧವನ್ನು ನಿಲ್ಲಿಸಿದರೆ ಸಾಕಪ್ಪ ಎನ್ನುತ್ತಿರುವ ಪಾಕಿಸ್ತಾನ, ಪ್ರಥಮ ಬಾರಿಗೆ ವಿಫಲವಾದ ಮಾತುಕತೆಯನ್ನು ಎರಡನೇ ಪ್ರಯತ್ನದಲ್ಲಿ ಸಕ್ಸಸ್​ ಮಾಡಲು ಪಣತೊಟ್ಟಿದೆ. ಇದಕ್ಕಾಗಿ ತಮ್ಮದೇ ಜನರಿಗೆ ಲಾಕ್​ಡೌನ್​ ಹೊಡೆತ ನೀಡುವ ಮೂಲಕ ಭಾರೀ ಛೀಮಾರಿಗೆ ತುತ್ತಾಗಿದೆ.
ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ಕಳೆದ 10 ದಿನಗಳಿಂದ ಅಘೋಷಿತ ಲಾಕ್‌ಡೌನ್ ಅನುಭವಿಸುತ್ತಿದೆ. ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ, ಶಾಂತಿ ಮಾತುಕತೆಯ ಸಾಧ್ಯತೆ ಮತ್ತು ಉನ್ನತ ಮಟ್ಟದ ವಿದೇಶಿ ಪ್ರತಿನಿಧಿಗಳ ಭೇಟಿಗಳ ಹಿನ್ನೆಲೆಯಲ್ಲಿ ಪಾಕ್​ ಸರ್ಕಾರ ಇಂತಹ ಕಠಿಣ ಭದ್ರತಾ ಕ್ರಮಗಳನ್ನು ಜಾರಿಗೊಳಿಸಿದೆ. ಆದಾಗ್ಯೂ, ಈ ನಿರ್ಬಂಧಗಳಿಂದಾಗಿ ಅಲ್ಲಿನ ಜನರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಇಸ್ಲಾಮಾಬಾದ್‌ನಲ್ಲಿ, ಪ್ರಮುಖ ರಸ್ತೆಗಳ ಮುಚ್ಚುವಿಕೆಯ ಜೊತೆಗೆ, ಮಾರುಕಟ್ಟೆಗಳು ಮತ್ತು ವ್ಯಾಪಾರ ಕೇಂದ್ರಗಳನ್ನು ಬಂದ್​ ಮಾಡಿದೆ. ನಗರದಾದ್ಯಂತ ಮಿಲಿಟರಿ ಮತ್ತು ಪೊಲೀಸರ ನಿಯೋಜನೆಯೊಂದಿಗೆ ಸಾರ್ವಜನಿಕ ಸಾರಿಗೆಯೂ ಸ್ಥಗಿತಗೊಂಡಿದೆ. ಸರ್ಕಾರಿ ನೌಕರರಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಲಾಗಿದ್ದರೂ, ದಿನಗೂಲಿ ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳು ಆದಾಯದ ಕೊರತೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದು ಸರ್ಕಾರದ ವಿರುದ್ಧ ಹಿಡಿಶಾಪ ಹಾಕುವಂತೆ ಮಾಡಿದೆ.
ಈಗಾಗಲೇ ಹಣದುಬ್ಬರ ಮತ್ತು ಬಡತನದಿಂದ ಭಾರೀ ತೊಂದರೆ ಅನುಭವಿಸುತ್ತಿರುವ ಪಾಕಿಸ್ತಾನದ ಜನರಿಗೆ ಈ ಪರಿಸ್ಥಿತಿ ದೊಡ್ಡ ಹೊರೆಯಾಗಿದೆ. ಸ್ಥಳೀಯರು, ಕೆಲಸ ಮಾಡಲು, ಹಣ ತರಲು ಅಥವಾ ತಮ್ಮ ಕುಟುಂಬಗಳನ್ನು ಪೋಷಿಸಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಮಾತುಕತೆ ನಡೆಯುತ್ತಿದೆಯೇ ಅಥವಾ ರದ್ದುಗೊಂಡಿದೆಯೇ ಎಂಬುದರ ಕುರಿತು ಸ್ಪಷ್ಟತೆಯ ಕೊರತೆಯು ಜನರಲ್ಲಿ ತಾಳ್ಮೆಯ ಕಟ್ಟೆಯನ್ನು ಹೊಡೆಯುತ್ತಿದೆ.
ಒಟ್ಟಾರೆಯಾಗಿ, ಯುಎಸ್-ಇರಾನ್ ಮಾತುಕತೆಗಳ ಬಗ್ಗೆ ಅನಿಶ್ಚಿತತೆ ಮುಂದುವರೆದಿರುವುದರಿಂದ ಇಸ್ಲಾಮಾಬಾದ್ ಪರಿಸ್ಥಿತಿ ಅದೋಗತಿಯಾಗಿದೆ. ಸರ್ಕಾರ ಭದ್ರತೆಗೆ ಆದ್ಯತೆ ನೀಡುತ್ತಿದ್ದರೂ, ಸಾಮಾನ್ಯ ಜನರ ಜೀವನ ಬೀದಿಗೆ ಬರುತ್ತಿದೆ. ಮಾತುಕತೆ ಮುಗಿಯುವವರೆಗೂ ಈ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆಯಿದೆ ಎಂದು ಹಲವು ಅಂತಾರಾಷ್ಟ್ರೀಯ ವರದಿಗಳು ಸೂಚಿಸಿವೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net