ಯುದ್ಧದ ನಡುವೆ ಶಾಂತಿ ಮಂತ್ರ! ಅಮೆರಿಕದೊಂದಿಗೆ ಮಾತುಕತೆಗೆ ಸಿದ್ಧರಾದ ಇರಾನ್ ನೂತನ ಸುಪ್ರೀಂ ಲೀಡರ್..? Mojtaba Khamenei

ಯುದ್ಧದ ನಡುವೆ ಶಾಂತಿ ಮಂತ್ರ! ಅಮೆರಿಕದೊಂದಿಗೆ ಮಾತುಕತೆಗೆ ಸಿದ್ಧರಾದ ಇರಾನ್ ನೂತನ ಸುಪ್ರೀಂ ಲೀಡರ್..?
ಯುದ್ಧದ ನಡುವೆ ಶಾಂತಿ ಮಂತ್ರ! ಅಮೆರಿಕದೊಂದಿಗೆ ಮಾತುಕತೆಗೆ ಸಿದ್ಧರಾದ ಇರಾನ್ ನೂತನ ಸುಪ್ರೀಂ ಲೀಡರ್..?
Published on
ರಿಯಾದ್: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಮತ್ತು ಜಾಗತಿಕ ಇಂಧನ ಬಿಕ್ಕಟ್ಟಿನ ನಡುವೆ ಒಂದು ಮಹತ್ವದ ಬೆಳವಣಿಗೆ ನಡೆದಿದೆ. ಇರಾನ್‌ನ ನೂತನ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿಯು(Mojtaba Khamenei) ಅಮೆರಿಕದೊಂದಿಗೆ ಮಾತುಕತೆ ನಡೆಸಲು ಸಿದ್ಧರಿದ್ದಾರೆ ಎಂದು ಇಸ್ರೇಲಿ ಮಾಧ್ಯಮ ಯೆಡಿಯೊತ್ ಅಹ್ರೋನೋತ್ ವರದಿ ಮಾಡಿದೆ. ಈ ವರದಿಯನ್ನು ಅರಬ್ ನ್ಯೂಸ್ ಉಲ್ಲೇಖಿಸಿದ್ದು, ಇದು ಮೂರು ವಾರಗಳಿಂದ ನಡೆಯುತ್ತಿರುವ ಅಮೆರಿಕ-ಇಸ್ರೇಲ್ ಮತ್ತು ಇರಾನ್ ಸಂಘರ್ಷಕ್ಕೆ ಅಂತ್ಯ ಹಾಡುವ ಮುನ್ಸೂಚನೆ ಎಂದು ವಿಶ್ಲೇಷಿಸಲಾಗುತ್ತಿದೆ.

ರಹಸ್ಯ ಮಾತುಕತೆ ಮತ್ತು ಹಾರ್ಮುಜ್ ಜಲಸಂಧಿಯ ಭವಿಷ್ಯ

ವರದಿಗಳ ಪ್ರಕಾರ, ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಮತ್ತು ಅಮೆರಿಕದ ಮಧ್ಯವರ್ತಿ ಸ್ಟೀವ್ ವಿಟ್ಕಾಫ್ ನಡುವೆ ನಡೆದ ಸಂಭಾಷಣೆಯಲ್ಲಿ ಮೊಜ್ತಬಾ ಖಮೇನಿ ಅವರ ಒಪ್ಪಿಗೆಯನ್ನು ತಿಳಿಸಲಾಗಿದೆ. ಈ ಮಾತುಕತೆಗೆ ಇರಾನ್‌ನ ಅತ್ಯುನ್ನತ ಮಟ್ಟದ ಅನುಮೋದನೆ ದೊರೆತಿದೆ ಎನ್ನಲಾಗಿದೆ.
ಈ ಬೆಳವಣಿಗೆಯ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ಹೇಳಿಕೆ ನೀಡಿದ್ದಾರೆ.
ಜಂಟಿ ನಿಯಂತ್ರಣ: ಜಾಗತಿಕ ತೈಲ ವ್ಯಾಪಾರದ ಸುಮಾರು ಶೇ.25 ರಷ್ಟು ಪಾಲನ್ನು ಹೊಂದಿರುವ ಹಾರ್ಮುಜ್ ಜಲಸಂಧಿ ಶೀಘ್ರದಲ್ಲೇ ಮುಕ್ತವಾಗಲಿದೆ. ಇದನ್ನು ಅಮೆರಿಕ ಮತ್ತು ಇರಾನ್ ಜಂಟಿಯಾಗಿ ನಿರ್ವಹಿಸಬಹುದು ಎಂದು ಟ್ರಂಪ್ ಸೂಚಿಸಿದ್ದಾರೆ.
ದಾಳಿಗಳಿಗೆ ವಿರಾಮ: ರಾಜತಾಂತ್ರಿಕ ಪ್ರಯತ್ನಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ, ಇರಾನ್‌ನ ಇಂಧನ ಮತ್ತು ವಿದ್ಯುತ್ ಸ್ಥಾವರಗಳ ಮೇಲಿನ ಮಿಲಿಟರಿ ದಾಳಿಯನ್ನು ಐದು ದಿನಗಳ ಕಾಲ ಮುಂದೂಡಲು ಟ್ರಂಪ್ ಆದೇಶಿಸಿದ್ದಾರೆ.

ಜಾಗತಿಕ ಇಂಧನ ಭದ್ರತೆ ಮತ್ತು ಆರ್ಥಿಕತೆ

ಹಾರ್ಮುಜ್ ಜಲಸಂಧಿಯು ಪ್ರತಿದಿನ 15 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲ ಮತ್ತು 5 ಮಿಲಿಯನ್ ಬ್ಯಾರೆಲ್ ತೈಲ ಉತ್ಪನ್ನಗಳ ಸಾಗಣೆಗೆ ಪ್ರಮುಖ ಮಾರ್ಗವಾಗಿದೆ. ಪ್ರಸ್ತುತ ಸಂಘರ್ಷದಿಂದಾಗಿ ಈ ಮಾರ್ಗವು ಅಪಾಯಕಾರಿಯಾಗಿದ್ದು, ಜಾಗತಿಕ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಒಂದು ವೇಳೆ ಮಾತುಕತೆ ಯಶಸ್ವಿಯಾದರೆ, ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ಸ್ಥಿರಗೊಳ್ಳುವ ನಿರೀಕ್ಷೆಯಿದೆ.

ಸಂಘರ್ಷದ ಸದ್ಯದ ಸ್ಥಿತಿ

ಯುದ್ಧವು ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದು, ಇರಾನ್‌ನ ನಾಗರಿಕ ಮತ್ತು ಮಿಲಿಟರಿ ಮೂಲಸೌಕರ್ಯಗಳಿಗೆ ಭಾರಿ ಹಾನಿಯಾಗಿದೆ. ಅಧ್ಯಕ್ಷ ಟ್ರಂಪ್ ಅವರು ಇರಾನ್‌ನಲ್ಲಿ ಆಟೋಮ್ಯಾಟಿಕ್ ಆಗಿ ಆಡಳಿತ ಬದಲಾವಣೆ ಸಂಭವಿಸುತ್ತಿದೆ ಎಂದು ಹೇಳಿದ್ದಾರೆ. ಇರಾನ್‌ನ ಪ್ರಸ್ತುತ ಮಾತುಕತೆಗಾರರನ್ನು ಅವರು ವಿವೇಚನಾಯುಕ್ತ ಮತ್ತು ಘನತೆಯುಳ್ಳವರು ಎಂದು ಬಣ್ಣಿಸಿದ್ದಾರೆ.
ಅದರೆ, ಇರಾನ್ ವಿದೇಶಾಂಗ ಸಚಿವಾಲಯವು ಅಮೆರಿಕದೊಂದಿಗೆ ಯಾವುದೇ ಅಧಿಕೃತ ಮಾತುಕತೆ ನಡೆದಿಲ್ಲ ಎಂದು ಈ ಹಿಂದೆ ತಿರಸ್ಕರಿಸಿತ್ತು. ಆದರೆ, ಪ್ರಸ್ತುತ ರಾಜತಾಂತ್ರಿಕ ಮೂಲಗಳು ನೀಡುತ್ತಿರುವ ಮಾಹಿತಿ ಈ ನಿಲುವನ್ನು ಬದಲಿಸುವ ಸಾಧ್ಯತೆಯನ್ನು ಸೂಚಿಸುತ್ತಿವೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net