ಪಾಟೀಲ್​ ಎಫೆಕ್ಟ್​..ಸಾಫ್ಟ್​​ವೇರ್​​ ಸಾಮ್ರಾಜ್ಯಕ್ಕೆ ಕ್ಲಾಡ್​​ ಸುನಾಮಿ

Patil Effect
Patil Effect
Published on
ಆಂಥ್ರೋಪಿಕ್ ಸಂಸ್ಥೆ ತನ್ನ ಹೊಸ ಕ್ಲಾಡ್ ಆವೃತ್ತಿಯನ್ನು ಕೆಲವು ದಿನಗಳ ಹಿಂದೆ ಲೋಕಾರ್ಪಣೆ ಮಾಡಿದ್ದು, ಅದು ಬಿಡುಗಡೆ ಆಗುತ್ತಿದ್ದಂತೆಯೇ ಇಡೀ ಸಾಫ್ಟ್ವೇರ್ ಲೋಕ ಸ್ತಂಭೀಭೂತವಾಗಿದೆ. ಆ ಒಂದೇ ಒಂದು ಅಪ್ಡೇಟ್, ಸಿಲಿಕಾನ್ ವ್ಯಾಲಿಯಿಂದ ಹಿಡಿದು ದೆಹಲಿ-ಬೆಂಗಳೂರಿನ ಐಟಿ ಪಾರ್ಕ್ಗಳವರೆಗೆ ಕಂಪನ ಸೃಷ್ಟಿಸಿದೆ. ಎಷ್ಟರಮಟ್ಟಿಗೆ ಎಂದರೆ, ದಶಕಗಳಿಂದ ಐಟಿ ಸಾಮ್ರಾಜ್ಯವನ್ನು ಆಳುತ್ತಿದ್ದ ದೈತ್ಯ ಕಂಪನಿಗಳ ಮಾರುಕಟ್ಟೆ ಮೌಲ್ಯವೇ ವೇಗದಿಂದ ಆವಿಯಾಗಿ ಹೋಗುತ್ತಿದೆ.
ಆಂಥ್ರೋಪಿಕ್ ಬಿಡುಗಡೆ ಮಾಡಿರುವ ಹೊಸ ತಂತ್ರಜ್ಞಾನ, ಇಡೀ ಸಾಫ್ಟ್ವೇರ್ ಲೋಕದಲ್ಲಿ ಸ್ಯಾಸ್-ಪೋಕಲಿಪ್ಸ್ ಎಂಬ ಹೊಸ ಭೀತಿಯನ್ನು ಹುಟ್ಟುಹಾಕಿದೆ. ಮೈಕ್ರೋಸಾಫ್ಟ್, ಅಡೋಬ್ ಮತ್ತು ಸೇಲ್ಸ್ಫೋರ್ಸ್ನಂತಹ ದೈತ್ಯ ಸಂಸ್ಥೆಗಳು ತತ್ತರಿಸಿವೆ. ಅತ್ತ ಅಮೆರಿಕದ ವಾಲ್ ಸ್ಟ್ರೀಟ್ನಲ್ಲಿ ರಕ್ತಪಾತವಾಗುತ್ತಿದ್ದರೆ, ಇತ್ತ ದಲಾಲ್ ಸ್ಟ್ರೀಟ್ನಲ್ಲಿ ಭಾರತದ ಐಟಿ ವಲಯದ ಬೆನ್ನೆಲುಬಾದ ಇನ್ಪೋಸಿಸ್ ಮತ್ತು ಟಿಸಿಎಸ್ ಶೇ. 7ರಷ್ಟು ನಷ್ಟ ಅನುಭವಿಸಿವೆ. ಈ ಹೊಸ ಎಐ ಕ್ರಾಂತಿ ಒಟ್ಟು 285 ಶತಕೋಟಿ ಡಾಲರ್ ಹೂಡಿಕೆಯನ್ನು ಮಣ್ಣುಪಾಲಾಗಿಸಿದೆ.
ಇದನ್ನು ಕಂಡು ಕೆರಳಿದ ಜಗತ್ತಿನ ಅತಿದೊಡ್ಡ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್, ಆಂಥ್ರೋಪಿಕ್ ಹೆಸರನ್ನು ಲೇವಡಿ ಮಾಡುತ್ತಾ, ಇದು ಆಂಥ್ರೋಪಿಕ್ (ಮನುಷ್ಯಸ್ನೇಹಿ) ಅಲ್ಲ, ಮಿಸಾಂತ್ರೋಪಿಕ್ (ಮನುಷ್ಯದ್ವೇಷಿ) ಎಂದು ಕಿಚಾಯಿಸಿದ್ದಾರೆ. ಆದರೆ ಮಸ್ಕ್ ಲೇವಡಿ ಏನೇ ಇರಲಿ, ಈ ಚಂಡಮಾರುತದ ಕೇಂದ್ರಬಿಂದುವಿನಲ್ಲಿರುವುದು ಒಬ್ಬ ಅಪ್ಪಟ ಕನ್ನಡಿಗ!
ಬೆಂಗಳೂರಿಗನ ಪಾಟೀಲ್ ಎಫೆಕ್ಟ್ ಈ ಇಡೀ ಕ್ರಾಂತಿಯ ಹಿಂದೆ ಇರುವುದು ಬೆಂಗಳೂರಿನವರಾದ, ಆಂಥ್ರೋಪಿಕ್ ಸಂಸ್ಥೆಯ ಚೀಫ್ ಟೆಕ್ನಾಲಜಿ ಆಫೀಸರ್ (ಸಿಟಿಒ) ರಾಹುಲ್ ಪಾಟೀಲ್. ಮೈಕ್ರೋಸಾಫ್ಟ್ ಮತ್ತು ಅಮೆಜಾನ್ನಂತಹ ಸಂಸ್ಥೆಗಳಲ್ಲಿ ಪಳಗಿದ್ದ ಪಾಟೀಲ್, 2025ರ ಅಕ್ಟೋಬರ್ನಲ್ಲಿ ಆಂಥ್ರೋಪಿಕ್ ಸಿಟಿಒ ಆಗಿ ಜವಾಬ್ದಾರಿ ವಹಿಸಿಕೊಂಡ ಮೇಲೆ ಎಐ ಲೋಕದ ದಿಕ್ಕನ್ನೇ ಬದಲಿಸಿದರು. ಅವರು ಪರಿಚಯಿಸಿದ ಪಾಟೀಲ್ ಎಫೆಕ್ಟ್ ಈಗ ವಿಶ್ವವಿಖ್ಯಾತ. ದುಬಾರಿ ಹಾರ್ಡ್ವೇರ್ ಇಲ್ಲದೆಯೇ, ಅತಿ ಕಡಿಮೆ ವೆಚ್ಚದಲ್ಲಿ ಅತ್ಯಂತ ಶಕ್ತಿಯುತ ಎಐ ಫಲಿತಾಂಶ ಪಡೆಯುವುದು ಹೇಗೆ ಎಂದು ಅವರು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಇದರಿಂದಾಗಿ ಸಾಫ್ಟ್ವೇರ್ ಕಂಪನಿಗಳಿಗೆ ನೀಡುತ್ತಿದ್ದ ಕೋಟ್ಯಂತರ ರೂ.ಗಳ ಮಧ್ಯವರ್ತಿ ವೆಚ್ಚ ಈಗ ಉಳಿತಾಯವಾಗುತ್ತಿದೆ.

ಚಾಟ್ಬಾಟ್ ಕಾಲ ಮುಗೀತು

ಹೊಸ ಕ್ಲಾಡ್ ಕೇವಲ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುವ ಯಂತ್ರವಲ್ಲ; ಅದೊಂದು ಪೂರ್ಣ ಪ್ರಮಾಣದ ಡಿಜಿಟಲ್ ಉದ್ಯೋಗಿ ಅದು ಹೇಗೆ ಕೆಲಸ ಮಾಡುತ್ತದೆ, ಏನೇನು ಕೆಲಸ ಮಾಡುತ್ತದೆ ಎಂಬುದನ್ನು ನೋಡಿದರೆ ಆಶ್ಚರ್ಯವಾಗುವುದು ಖಚಿತ.
ಸ್ವತಂತ್ರ ನಿರ್ಧಾರ: ಈ ಎಐ ಮಾನವನ ಹಸ್ತಕ್ಷೇಪವಿಲ್ಲದೆ ಗಂಟೆಗಟ್ಟಲೆ ಸಂಕೀರ್ಣ ಕಾನೂನು ಒಪ್ಪಂದಗಳನ್ನು ಪರಿಶೀಲಿಸಬಲ್ಲದು.
ಕೋಡಿಂಗ್ ಮಾಂತ್ರಿಕ: ಸಾಫ್ಟ್ವೇರ್ ಇಂಜಿನಿಯರ್ಗಳು ದಿನಗಟ್ಟಲೆ ಮಾಡುತ್ತ ಕುಳಿತುಕೊಳ್ಳುವ ಕೋಡಿಂಗ್ ಕೆಲಸವನ್ನು ಇದು ಕೆಲವೇ ನಿಮಿಷಗಳಲ್ಲಿ ಕರಾರುವಾಕ್ಕಾಗಿ ಮಾಡಿ ಮುಗಿಸುತ್ತದೆ.
ವೆಚ್ಚ ಕಡಿತ: ಈ ಡಿಜಿಟಲ್ ಉದ್ಯೋಗಿಯಿಂದಾಗಿ ಕಂಪನಿಗಳಿಗೆ ಇನ್ನು ಮುಂದೆ ಸಾವಿರಾರು ಉದ್ಯೋಗಿಗಳ ಅವಶ್ಯಕತೆಯೇ ಬೀಳುವುದಿಲ್ಲ.

ಐಟಿ ಕಂಪನಿಗಳ ಷೇರು ಕುಸಿದಿದ್ದೇಕೆ?

ಆಂಥ್ರೋಪಿಕ್ನ ಕ್ಲಾಡ್​ ಕೇವಲ ಮಾಹಿತಿಯನ್ನು ನೀಡುವ ಚಾಟ್ಬಾಟ್ ಆಗಿ ಉಳಿಯದೆ, ಸಾಫ್ಟ್ವೇರ್ ಕೋಡಿಂಗ್, ಕಾನೂನು ದಾಖಲೆಗಳ ವಿಶ್ಲೇಷಣೆ ಮತ್ತು ಸಂಕೀರ್ಣ ಕಾರ್ಯಗಳನ್ನು ಮನುಷ್ಯರಿಗಿಂತ ವೇಗವಾಗಿ, ಅಗ್ಗವಾಗಿ ತಾನೇ ಮಾಡಿ ಮುಗಿಸುತ್ತಿದೆ. ಈ ಹಿಂದೆ ಇಂತಹ ಕೆಲಸಗಳಿಗಾಗಿ ಜಾಗತಿಕ ಕಂಪನಿಗಳು ಇನ್ಪೋಸಿಸ್ ಅಥವಾ ಟಿಸಿಎಸ್ನಂತಹ ಐಟಿ ಸೇವಾ ಸಂಸ್ಥೆಗಳನ್ನು ಅವಲಂಬಿಸಿದ್ದವು. ಈಗ ಎಐ ಏಜೆಂಟ್ಗಳೇ ನೇರವಾಗಿ ಆ ಕೆಲಸ ಮಾಡುವುದರಿಂದ, ಐಟಿ ಕಂಪನಿಗಳಿಗೆ ಸಿಗುತ್ತಿದ್ದ ಭಾರಿ ಮೊತ್ತದ ಆರ್ಡರ್ಗಳು ಮತ್ತು ಕನ್ಸಲ್ಟಿಂಗ್ ಆದಾಯ ಕುಸಿಯುವ ಭೀತಿ ಎದುರಾಗಿದೆ. ಇದರಿಂದಾಗಿ ಸಾಫ್ಟ್ವೇರ್ ಸಂಸ್ಥೆಗಳ ಭವಿಷ್ಯದ ಲಾಭದ ಮೇಲೆ ಹೂಡಿಕೆದಾರರಿಗೆ ಅನುಮಾನ ಮೂಡಿ, ಮಾರುಕಟ್ಟೆಯಲ್ಲಿ ಅವುಗಳ ಷೇರುಗಳ ಮೌಲ್ಯ ದಿಢೀರನೆ ಕುಸಿದಿದೆ.

ಬೆಂಗಳೂರಿಗೆ ಬರಲಿದೆ ಆಂಥ್ರೋಪಿಕ್

ರಾಹುಲ್ ಪಾಟೀಲ್ ತಾವು ಬೆಳೆದ ನಗರವನ್ನು ಮರೆತಿಲ್ಲ. ಟೋಕಿಯೊ ನಂತರ ಜಗತ್ತಿನ ಎರಡನೇ ಅತಿದೊಡ್ಡ ಕಚೇರಿಯನ್ನು ಆಂಥ್ರೋಪಿಕ್ ಸಂಸ್ಥೆ ಬೆಂಗಳೂರಿನಲ್ಲಿ ಆರಂಭಿಸುತ್ತಿದೆ. ತವರು ನೆಲದ ಪ್ರತಿಭೆಗಳಿಗೆ ಜಾಗತಿಕ ವೇದಿಕೆ ಕಲ್ಪಿಸುವುದು ಮತ್ತು ಭಾರತವನ್ನು ಎಐ ರಾಜಧಾನಿಯನ್ನಾಗಿ ಮಾಡುವುದು ಪಾಟೀಲ್ ಅವರ ಮಹತ್ವಾಕಾಂಕ್ಷೆ.

ಕ್ವಾಲಿಟಿ ಕನ್ಸಲ್ಟಿಂಗ್ನ ಅಂತ್ಯ ಸಮೀಪಿಸಿತೆ?

ಹಿಂದೆ ಅನುಭವವಿರುವ ಕನ್ಸಲ್ಟೆಂಟ್ಗಳು ಮಾಡುತ್ತಿದ್ದ ಕೇಸ್ ಸ್ಟಡಿ ಅಥವಾ ರಿಸ್ಕ್ ಅಸೆಸ್ವೆುಂಟ್ ಕೆಲಸಗಳನ್ನು ಕ್ಲಾಡ್ ಈಗ ಕೆಲವೇ ಸೆಕೆಂಡುಗಳಲ್ಲಿ ನಿಖರವಾಗಿ ಮಾಡುತ್ತಿದೆ. ಇದು ಕೇವಲ ಸಾಫ್ಟ್ವೇರ್ ಇಂಜಿನಿಯರ್ಗಳಿಗೆ ಮಾತ್ರವಲ್ಲದೆ, ಎಂಬಿಎ ಪದವೀಧರರು ಮಾಡುವ ವಿಶ್ಲೇಷಣಾತ್ಮಕ ಕೆಲಸಗಳಿಗೂ ಸವಾಲು ಒಡ್ಡಿದೆ.

ಭವಿಷ್ಯದ ಪ್ರಶ್ನೆ

ಕ್ಲಾಡ್ ಈಗ ಕೇವಲ ಒಂದು ತಂತ್ರಜ್ಞಾನ ವಲ್ಲ, ಅದು ಸಾಫ್ಟ್ವೇರ್ ಉದ್ಯಮದ ಅಡಿಪಾಯವನ್ನೇ ಅಲುಗಾಡಿಸುತ್ತಿರುವ ಶಕ್ತಿ. ಎಐ ಎಲ್ಲ ಕೆಲಸಗಳನ್ನು ತಾನೇ ಮಾಡಲು ಆರಂಭಿಸಿದರೆ, ಸಾಂಪ್ರದಾಯಿಕ ಐಟಿ ಸೇವಾ ಸಂಸ್ಥೆಗಳ ಅಸ್ತಿತ್ವದ ಕಥೆಯೇನು? ಈ ಪ್ರಶ್ನೆ ಈಗ ಇಡೀ ವಿಶ್ವವನ್ನು ಕಾಡುತ್ತಿದೆ. ಆದರೆ ಒಂದು ಕಾಲದಲ್ಲಿ ಐಟಿ ಕ್ರಾಂತಿಗೆ ಹೆಸರಾಗಿದ್ದ ಬೆಂಗಳೂರು, ಈಗ ರಾಹುಲ್ ಪಾಟೀಲ್ ಅವರ ನೇತೃತ್ವದಲ್ಲಿ ಎಐ ಕ್ರಾಂತಿಗೂ ಮುನ್ನುಡಿ ಬರೆಯುತ್ತಿದೆ.
ಎಐ ಕಾರ್ಯನಿರ್ವಹಿಸಲು ಎನ್ವಿಡಿಯಾ ಕಂಪನಿಯ ಎಚ್-100ನಂತಹ ಅತ್ಯಂತ ದುಬಾರಿ ಜಿಪಿಯುಗಳು ಬೇಕು. ಆಂಥ್ರೋಪಿಕ್ ಆವಿಷ್ಕರಿಸಿದ ತಂತ್ರಜ್ಞಾನದ ವಿಶೇಷವೇನೆಂದರೆ, ಅವರು ಅಸ್ತಿತ್ವದಲ್ಲಿರುವ ಹಾರ್ಡ್ವೇರ್ನಲ್ಲೇ ಎಐ ಅನ್ನು ಹೆಚ್ಚು ವೇಗವಾಗಿ ಕೆಲಸ ಮಾಡುವಂತೆ ಆಪ್ಟಿಮೈಸ್ ಮಾಡಿದ್ದಾರೆ. ಇದನ್ನು ತಾಂತ್ರಿಕವಾಗಿ ಸ್ಪೆಕ್ಯುಲೇಟಿವ್ ಡಿಕೋಡಿಂಗ್ ಎನ್ನಲಾಗುತ್ತದೆ, ಇದರಿಂದಾಗಿ ಎಐ ಉತ್ತರ ನೀಡುವ ವೆಚ್ಚ ಗಣನೀಯವಾಗಿ ಕಡಿಮೆಯಾಗಿದೆ.

ಮಧ್ಯವರ್ತಿಗಳಿಲ್ಲದ ನೇರ ಮಾರುಕಟ್ಟೆ

ಹಿಂದೆ ದೊಡ್ಡ ಕಂಪನಿಗಳಿಗೆ ಯಾವುದಾದರೂ ಸಾಫ್ಟ್ವೇರ್ ಬೇಕೆಂದರೆ ಅವರು ಇನ್ಪೋಸಿಸ್ ಅಥವಾ ಆಕ್ಸೆಂಚರ್ನಂತಹ ಸಂಸ್ಥೆಗಳಿಗೆ ಕೋಟ್ಯಂತರ ರೂ. ನೀಡಿ ಪ್ರಾಜೆಕ್ಟ್ ಕೊಡುತ್ತಿದ್ದರು. ಆದರೆ ಆಂಥ್ರೋಪಿಕ್ ತಂತ್ರಜ್ಞಾನದಿಂದಾಗಿ, ಕಂಪನಿಗಳು ಈಗ ನೇರವಾಗಿ ಆಂಥ್ರೋಪಿಕ್ನ ಎಐ ಏಜೆಂಟ್ಗಳನ್ನು ಬಳಸಿ ತಮಗೆ ಬೇಕಾದ ಸಾಫ್ಟ್ವೇರನ್ನು ತಾವೇ ಸಿದ್ಧಪಡಿಸಿಕೊಳ್ಳಬಹುದು. ಇದು ಐಟಿ ಕಂಪನಿಗಳ ಮಿಡಲ್ವುನ್ ಸ್ಥಾನಕ್ಕೆ ಸಂಚಕಾರ ತಂದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net