ಮುಸ್ಲಿಂ ದೇಶಗಳೊಂದಿಗೆ ಪಾಕ್ ದೋಸ್ತಿ!

ಪಾಕಿಸ್ತಾನ, ಟರ್ಕಿ, ಕತಾರ್ ಮತ್ತು ಇಂಡೋನೇಷ್ಯಾ ಇನ್ನು ಮುಂದೆ ಒಟ್ಟಾಗಿ ಶಸ್ತ್ರಾಸ್ತ್ರಗಳನ್ನು ತಯಾರಿಸಲಿವೆ. ನಾಲ್ಕೂ ದೇಶಗಳು ಬುಧವಾರ ಕತಾರ್​ನ ರಾಜಧಾನಿ ದೋಹಾದಲ್ಲಿ ‘ಬದ್ರ್’ ಒಪ್ಪಂದಕ್ಕೆ ಸಹಿ ಹಾಕಿವೆ. ಇತ್ತೀಚೆಗೆ ಏರ್ಪಟ್ಟ ಮೆಕ್ಕಾ ಒಪ್ಪಂದದ ನಂತರ ಪಾಕಿಸ್ತಾನವು ಮುಸ್ಲಿಂ ಬಾಹುಳ್ಯವಿರುವ ದೇಶಗಳೊಂದಿಗೆ ಪಾಲುದಾರಿಕೆಯನ್ನು ಹೆಚ್ಚಿಸಿಕೊಳ್ಳುತ್ತಿರುವುದು ಪ್ರದೇಶದಲ್ಲಿ ಹೊಸ ರಕ್ಷಣಾ ಸಮೀಕರಣಗಳನ್ನು ಸೃಷ್ಟಿಸಬಹುದು.
ಮುಸ್ಲಿಂ ದೇಶಗಳೊಂದಿಗೆ ಪಾಕ್ ದೋಸ್ತಿ!
WEB
Published on: 

ಪಾಕಿಸ್ತಾನ, ಟರ್ಕಿ, ಕತಾರ್ ಮತ್ತು ಇಂಡೋನೇಷ್ಯಾ ಇನ್ನು ಮುಂದೆ ಒಟ್ಟಾಗಿ ಶಸ್ತ್ರಾಸ್ತ್ರಗಳನ್ನು ತಯಾರಿಸಲಿವೆ. ನಾಲ್ಕೂ ದೇಶಗಳು ಬುಧವಾರ ಕತಾರ್​ನ ರಾಜಧಾನಿ ದೋಹಾದಲ್ಲಿ ‘ಬದ್ರ್’ ಒಪ್ಪಂದಕ್ಕೆ ಸಹಿ ಹಾಕಿವೆ. ಇತ್ತೀಚೆಗೆ ಏರ್ಪಟ್ಟ ಮೆಕ್ಕಾ ಒಪ್ಪಂದದ ನಂತರ ಪಾಕಿಸ್ತಾನವು ಮುಸ್ಲಿಂ ಬಾಹುಳ್ಯವಿರುವ ದೇಶಗಳೊಂದಿಗೆ ಪಾಲುದಾರಿಕೆಯನ್ನು ಹೆಚ್ಚಿಸಿಕೊಳ್ಳುತ್ತಿರುವುದು ಪ್ರದೇಶದಲ್ಲಿ ಹೊಸ ರಕ್ಷಣಾ ಸಮೀಕರಣಗಳನ್ನು ಸೃಷ್ಟಿಸಬಹುದು. ಶಸ್ತ್ರಾಸ್ತ್ರಗಳಿಗಾಗಿ ಇತರ ದೇಶಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಮತ್ತು ತಮ್ಮ ಸೈನಿಕ ಶಕ್ತಿಯನ್ನು ಹೆಚ್ಚಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಈ ಒಪ್ಪಂದ ಏನು? ಇದರಿಂದ ಶಸ್ತ್ರಾಸ್ತ್ರ ಪೈಪೋಟಿ ಮತ್ತಷ್ಟು ಹೆಚ್ಚಲಿದೆಯೇ? ಈ ಕುರಿತಾದ ವಿವರ ಇಲ್ಲಿದೆ.

ಸೌದಿ ಅರೇಬಿಯಾ ಮತ್ತು ಟರ್ಕಿಯ ನಡುವಿನ ಮೆಕ್ಕಾ ರಕ್ಷಣಾ ಒಪ್ಪಂದದ ಬಳಿಕ, ಪಾಕಿಸ್ತಾನವು ಈಗ ಕತಾರ್ ಹಾಗೂ ಇಂಡೋನೇಷ್ಯಾದೊಂದಿಗೂ ತನ್ನ ರಕ್ಷಣಾ ಪಾಲುದಾರಿಕೆಯನ್ನು ವಿಸ್ತರಿಸಿದೆ. ಬುಧವಾರ ಕತಾರ್​ನ ರಾಜಧಾನಿ ದೋಹಾದಲ್ಲಿ ಮಹತ್ವದ ಬದ್ರ್ ಒಪ್ಪಂದಕ್ಕೆ (ಆಚಛ್ಟ ಕಚ್ಚಠಿ) ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್, ಟರ್ಕಿಯ ರಕ್ಷಣಾ ಸಚಿವ ಯಾಶರ್ ಗುಲರ್, ಕತಾರ್​ನ ಉಪ ಪ್ರಧಾನಿ ಶೇಖ್ ಸೌದ್ ಹಾಗೂ ಇಂಡೋನೇಷ್ಯಾದ ಉಪ ರಕ್ಷಣಾ ಸಚಿವ ಯೂಸುಫ್ ಜೌಹರಿ ಸಹಿ ಹಾಕಿದರು. ಅಮೆರಿಕ-ಇರಾನ್ ಯುದ್ಧ ಮತ್ತು ಹೊಮುಜ್ ಜಲಸಂಧಿಯ ಬಿಕ್ಕಟ್ಟಿನಿಂದ ಎದುರಾದ ರಕ್ಷಣಾ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಈ ಒಪ್ಪಂದವನ್ನು ಅಂತಿಮಗೊಳಿಸಲಾಗಿದೆ. ಟರ್ಕಿಯು ನ್ಯಾಟೋ ಮೈತ್ರಿಕೂಟದಲ್ಲಿಯೇ ಎರಡನೇ ಅತಿ ದೊಡ್ಡ ಸೇನೆ ಹಾಗೂ ಪ್ರಬಲ ರಕ್ಷಣಾ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ಆರಂಭಿಕವಾಗಿ ನಾಲ್ಕೂ ದೇಶಗಳು ತಮ್ಮ ರಕ್ಷಣಾ ಅಗತ್ಯತೆಗಳ ಪಟ್ಟಿಯನ್ನು ಸಿದ್ಧಪಡಿಸಲಿದ್ದು, ನಂತರ ತಾಂತ್ರಿಕ ತಂಡಗಳು ಉತ್ಪಾದನೆಯ ನೀಲಿನಕ್ಷೆಯನ್ನು ರೂಪಿಸಲಿವೆ. ಮುಂದಿನ ದಿನಗಳಲ್ಲಿ ಇತರ ರಾಷ್ಟ್ರಗಳಿಗೂ ಈ ಒಕ್ಕೂಟಕ್ಕೆ ಸೇರ್ಪಡೆಗೊಳ್ಳಲು ಮುಕ್ತ ಅವಕಾಶವಿದೆ. ಕತಾರ್ ರಕ್ಷಣಾ ಸಚಿವಾಲಯದ ಪ್ರಕಾರ, ಈ ನಾಲ್ಕೂ ದೇಶಗಳ ಶಸ್ತ್ರಾಸ್ತ್ರ ತಯಾರಿಕಾ ಸಾಮರ್ಥ್ಯವನ್ನು ಹೆಚ್ಚಿಸುವುದು ಮತ್ತು ರಕ್ಷಣಾ ಉದ್ಯಮದಲ್ಲಿ ಪರಸ್ಪರ ಸಹಕಾರವನ್ನು ಬಲಪಡಿಸುವುದು ಈ ಒಪ್ಪಂದದ ಗುರಿಯಾಗಿದೆ. ಇದರ ಅಡಿಯಲ್ಲಿ ನಾಲ್ಕೂ ದೇಶಗಳು ತಮ್ಮ ಸಂಪನ್ಮೂಲಗಳು, ತಂತ್ರಜ್ಞಾನ, ಮಾನವ ಸಂಪನ್ಮೂಲ ಮತ್ತು ಹೂಡಿಕೆಯನ್ನು ಪರಸ್ಪರ ನೆರವಿಗಾಗಿ ಬಳಸಿಕೊಳ್ಳಲಿವೆ.

ಏನಿದು ಬದ್ರ್?

ಸೌದಿ ಅರೇಬಿಯಾದ ಬದ್ರ್ ಎಂಬಲ್ಲಿ ಕ್ರಿ.ಶ. 624ರಲ್ಲಿ ಐತಿಹಾಸಿಕ ಕದನ ನಡೆದಿತ್ತು. ಇದರಲ್ಲಿ ಪ್ರವಾದಿ ಮುಹಮ್ಮದ್ ಮತ್ತು ಅವರ ಅನುಯಾಯಿಗಳು ವಿರೋಧಿ ಪಡೆಗಳನ್ನು ಸೋಲಿಸಿದ್ದರು. ‘ಬದ್ರ್’ ಎಂದರೆ ಹುಣ್ಣಿಮೆಯ ಚಂದ್ರ ಎಂಬ ಅರ್ಥವೂ ಇದೆ. ಕತಾರ್ ಪ್ರಕಾರ, ಈ ಹೆಸರು ಒಕ್ಕೂಟದಲ್ಲಿರುವ ನಾಲ್ಕೂ ದೇಶಗಳು ಪರಸ್ಪರರ ಸಾಮರ್ಥ್ಯಗಳನ್ನು ಪೂರಕವಾಗಿ ಬೆಂಬಲಿಸುವ ಪಾಲುದಾರಿಕೆಯ ಸಂಕೇತವಾಗಿದೆ.

ಶಸ್ತ್ರಾಸ್ತ್ರ ಪೈಪೋಟಿ

  1. ಬದ್ರ್ ಒಪ್ಪಂದವು ಪ್ರಾದೇಶಿಕ ಮತ್ತು ಜಾಗತಿಕ ರಕ್ಷಣಾ ವಲಯದಲ್ಲಿ ಶಸ್ತ್ರಾಸ್ತ್ರ ಪೈಪೋಟಿಯನ್ನು ಗಣನೀಯವಾಗಿ ಹೆಚ್ಚಿಸುವ ಸಾಧ್ಯತೆಯಿದೆ. ಕತಾರ್ ಮತ್ತು ಟರ್ಕಿ ಬಣವು ಪ್ರಬಲವಾಗುತ್ತಿರುವುದು ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಂತಹ ಇತರ ಕೊಲ್ಲಿ ರಾಷ್ಟ್ರಗಳಿಗೆ ಹೊಸ ಸವಾಲು. ಇದು ಕೊಲ್ಲಿ ವಲಯದಲ್ಲಿ ಹೊಸ ಮೈತ್ರಿಕೂಟಗಳು ಮತ್ತು ರಕ್ಷಣಾ ಖರೀದಿಗಳನ್ನು ಹೆಚ್ಚಿಸಬಹುದು.

  2. ದಕ್ಷಿಣ ಚೀನಾ ಸಮುದ್ರದ ಉದ್ವಿಗ್ನತೆಯ ನಡುವೆ ಇಂಡೋನೇಷ್ಯಾ ತನ್ನ ನೌಕಾ ಮತ್ತು ವಾಯುಪಡೆಯನ್ನು ಬಲಪಡಿಸಿಕೊಳ್ಳುತ್ತಿದ್ದು, ಇದು ಆಸಿಯಾನ್ ವಲಯದಲ್ಲಿ ಇತರ ದೇಶಗಳ ರಕ್ಷಣಾ ವೆಚ್ಚವನ್ನು ಹೆಚ್ಚಿಸಲು ಪ್ರೇರೇಪಿಸಬಹುದು.

  3. ಸಾಮಾನ್ಯವಾಗಿ ಮುಸ್ಲಿಂ ರಾಷ್ಟ್ರಗಳು ಅಮೆರಿಕ ಮತ್ತು ಯುರೋಪಿಯನ್ ಕಂಪನಿಗಳಿಂದ ಶಸ್ತ್ರಾಸ್ತ್ರ ಖರೀದಿಸುತ್ತಿದ್ದವು. ಈ ಒಕ್ಕೂಟವು ಪರ್ಯಾಯವಾಗಿ ಬೆಳೆದರೆ, ಜಾಗತಿಕ ರಕ್ಷಣಾ ರಫ್ತು ಮಾರುಕಟ್ಟೆಯಲ್ಲಿ ತೀವ್ರ ಪೈಪೋಟಿ ಉಂಟಾಗಲಿದೆ. ಈ ಒಪ್ಪಂದವು ಮಿಲಿಟರಿ ಸಹಕಾರಕ್ಕೆ ಸೀಮಿತವಾಗಿರದೆ, ಜಾಗತಿಕ ರಕ್ಷಣಾ ನೀತಿಗಳಲ್ಲಿ ಪಾಶ್ಚಿಮಾತ್ಯರ ಪ್ರಾಬಲ್ಯವನ್ನು ಕಡಿಮೆ ಮಾಡಿ, ಇಸ್ಲಾಮಿಕ್ ರಾಷ್ಟ್ರಗಳ ಹೊಸ ಸ್ವತಂತ್ರ ರಕ್ಷಣಾ ಸಮೂಹವನ್ನು ರೂಪಿಸುವ ಕಾರ್ಯತಂತ್ರದ ಭಾಗವಾಗಿದೆ.

ಟರ್ಕಿ: ಈ ಒಕ್ಕೂಟದ ತಾಂತ್ರಿಕ ಬೆನ್ನೆಲುಬು. ಸ್ಥಳೀಯವಾಗಿ ಯುದ್ಧವಿಮಾನಗಳು, ಡ್ರೋನ್​ಗಳು ಮತ್ತು ಯುದ್ಧನೌಕೆಗಳನ್ನು ಅಭಿವೃದ್ಧಿಪಡಿಸುವ ಪೂರ್ಣ ಸಾಮರ್ಥ್ಯ ಹೊಂದಿದೆ.

ಕತಾರ್: ಸಣ್ಣ ಸೈನ್ಯ ಹೊಂದಿದ್ದರೂ, ತಲಾ ಆದಾಯ ಮತ್ತು ಆರ್ಥಿಕತೆಯಲ್ಲಿ ಪ್ರಬಲವಾಗಿದ್ದು, ಒಕ್ಕೂಟಕ್ಕೆ ಆರ್ಥಿಕ ಹೂಡಿಕೆ ಒದಗಿಸುವ ಶಕ್ತಿ ಹೊಂದಿದೆ.

ಪಾಕಿಸ್ತಾನ: ಈ ಒಕ್ಕೂಟದಲ್ಲಿ ಪರಮಾಣು ಶಸ್ತ್ರಾಸ್ತ್ರ ಹೊಂದಿರುವ ಏಕೈಕ ದೇಶ.

ಇಂಡೋನೇಷ್ಯಾ: ವಿಶಾಲ ಸಮುದ್ರ ಮಾರ್ಗಗಳನ್ನು ನಿಯಂತ್ರಿಸುವ ನೌಕಾ ಸಾಮರ್ಥ್ಯ ಮತ್ತು ಭವಿಷ್ಯದ ಶಸ್ತ್ರಾಸ್ತ್ರ ಮಾರುಕಟ್ಟೆಯಾಗಿ ಮಹತ್ವದ ಪಾತ್ರ ವಹಿಸುತ್ತದೆ.

ಒಪ್ಪಂದದ ಪ್ರಮುಖಾಂಶಗಳು

  • ಪಾಕಿಸ್ತಾನ, ಟರ್ಕಿ, ಕತಾರ್ ಮತ್ತು ಇಂಡೋನೇಷ್ಯಾ- ಈ ನಾಲ್ಕೂ ರಾಷ್ಟ್ರಗಳು ಒಗ್ಗೂಡಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ರಕ್ಷಣಾ ಉಪಕರಣಗಳನ್ನು ತಯಾರಿಸಲಿವೆ. ಪರಸ್ಪರ ತಂತ್ರಜ್ಞಾನ ವಿನಿಮಯ ಮಾಡಿಕೊಳ್ಳುವುದರ ಜೊತೆಗೆ ಜಂಟಿ ರಕ್ಷಣಾ ಸಂಶೋಧನೆಯಲ್ಲೂ ತೊಡಗಿಕೊಳ್ಳಲಿವೆ.

  • ಶಸ್ತ್ರಾಸ್ತ್ರ ಉತ್ಪಾದನಾ ಘಟಕಗಳು ಟರ್ಕಿಯಲ್ಲಿ ಸ್ಥಾಪನೆಯಾಗಲಿವೆ. ಈ ಯೋಜನೆಗಳಿಗೆ ಬೇಕಾಗುವ ಅಗತ್ಯ ಆರ್ಥಿಕ ನೆರವು ಹಾಗೂ ಬಂಡವಾಳವನ್ನು ಕತಾರ್ ಒದಗಿಸಲಿದೆ.

ಭಾರತಕ್ಕೆ ಹೊಸ ಸವಾಲು

ಪಾಕಿಸ್ತಾನಕ್ಕೆ ಟರ್ಕಿಯ ಅತ್ಯಾಧುನಿಕ ಡ್ರೋನ್ (ಉದಾ: ಆಚಢ್ಟಚkಠಿಚ್ಟ ಖಆ2/ಅkಜ್ಞಿ್ಚ) ಮತ್ತು ಎಲೆಕ್ಟ್ರಾನಿಕ್ ವಾರ್​ಫೇರ್ ತಂತ್ರಜ್ಞಾನ ಸುಲಭವಾಗಿ ಲಭ್ಯವಾದರೆ, ಭಾರತದ ಗಡಿ ನಿಯಂತ್ರಣ ರೇಖೆ (ಎಲ್​ಒಸಿ) ಹಾಗೂ ಅಂತಾರಾಷ್ಟ್ರೀಯ ಗಡಿಯಲ್ಲಿ ಕಣ್ಗಾವಲು ಮತ್ತು ಭದ್ರತಾ ಸವಾಲುಗಳು ಹೆಚ್ಚಾಗಲಿವೆ. ಇಂತಹ ಜಂಟಿ ತಂತ್ರಜ್ಞಾನ ಎದುರಿಸಲು ಭಾರತವು ತನ್ನ ವಾಯು ರಕ್ಷಣಾ ವ್ಯವಸ್ಥೆಗಳನ್ನು ಮತ್ತಷ್ಟು ಚುರುಕುಗೊಳಿಸಬೇಕಾಗುತ್ತದೆ ಹಾಗೂ ದೇಶೀಯ ಆಂಟಿ-ಡ್ರೋನ್ ವ್ಯವಸ್ಥೆಗಳ ನಿಯೋಜನೆಯನ್ನು ತ್ವರಿತಗೊಳಿಸಬೇಕಾಗುತ್ತದೆ. ಭಾರತವು ಮಧ್ಯಪ್ರಾಚ್ಯದಲ್ಲಿ ಯುಎಇ ಮತ್ತು ಸೌದಿ ಅರೇಬಿಯಾದೊಂದಿಗೆ ಹೊಂದಿರುವ ಬಲವಾದ ಕಾರ್ಯತಂತ್ರದ ಸಂಬಂಧಗಳನ್ನು ಬಳಸಿಕೊಂಡು ಕತಾರ್-ಟರ್ಕಿ-ಪಾಕ್ ಮೈತ್ರಿಯ ಪ್ರಭಾವವನ್ನು ರಾಜತಾಂತ್ರಿಕವಾಗಿ ಸಮತೋಲನದಲ್ಲಿಡಲು ಯತ್ನಿಸಲಿದೆ.

ಬಹಿರಂಗಗೊಂಡ ಷರತ್ತುಗಳು

ಪಾಕಿಸ್ತಾನ, ಸೌದಿ ಅರೇಬಿಯಾ ಮತ್ತು ಟರ್ಕಿ ನಡುವೆ ನಡೆದಿದ್ದ ಮೆಕ್ಕಾ ಒಪ್ಪಂದದ ಪೂರ್ಣ ಷರತ್ತುಗಳು ಮೊದಲ ಬಾರಿಗೆ ಬಹಿರಂಗಗೊಂಡಿವೆ. ಯುದ್ಧ ಮತ್ತು ಶಾಂತಿ ಎರಡೂ ಸಂದರ್ಭಗಳಲ್ಲಿ ಈ ಮೂರೂ ದೇಶಗಳು ಪರಸ್ಪರ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು, ಇಂಧನ, ಬಿಡಿಭಾಗಗಳು ಮತ್ತು ಮಿಲಿಟರಿ ಉಪಕರಣಗಳನ್ನು ಒದಗಿಸಲಿವೆ. ಜಂಟಿ ಶಸ್ತ್ರಾಸ್ತ್ರ ನಿರ್ವಣದ ಜೊತೆಗೆ ಮಿಲಿಟರಿ ತಂತ್ರಜ್ಞಾನವನ್ನೂ ಹಂಚಿಕೊಳ್ಳಲಿವೆ. ಒಪ್ಪಂದದ ಪ್ರಮುಖ ಅಂಶವೆಂದರೆ, ಸದಸ್ಯ ರಾಷ್ಟ್ರಗಳು ತಮ್ಮ ಎಲ್ಲ ಸಾಮರ್ಥ್ಯಗಳೊಂದಿಗೆ ಪರಸ್ಪರ ನೆರವಿಗೆ ಬರಬೇಕೆಂಬ ನಿಯಮವಿದೆ. ಇದರಿಂದಾಗಿ ಪಾಕಿಸ್ತಾನದ ಅಣ್ವಸ್ತ್ರ ಸಾಮರ್ಥ್ಯವೂ ಈ ರಕ್ಷಾಕವಚದಲ್ಲಿ ಒಳಗೊಳ್ಳಲಿದೆ ಎನ್ನಲಾಗಿದೆ. ಟರ್ಕಿ ಸರ್ಕಾರವು ಈ ಒಪ್ಪಂದವನ್ನು ಸಂಸತ್ತಿನ ಅನುಮೋದನೆಗೆ ಸಲ್ಲಿಸಿದೆ. ಇದರಲ್ಲಿ ಗುಪ್ತಚರ ಮಾಹಿತಿ ವಿನಿಮಯಕ್ಕೂ ಅವಕಾಶವಿದೆ. ಮೂರು ದೇಶಗಳ ಪೈಕಿ ಯಾವುದೇ ಒಂದರ ಮೇಲೆ ದಾಳಿ ನಡೆದರೂ ಅದನ್ನು ಮೂರೂ ದೇಶಗಳ ಮೇಲಿನ ದಾಳಿ ಎಂದೇ ಪರಿಗಣಿಸಲಾಗುತ್ತದೆ. ಈ ಮೈತ್ರಿಕೂಟದ ಪ್ರಧಾನ ಕಚೇರಿಯು ಸೌದಿ ಅರೇಬಿಯಾದಲ್ಲಿ ಇರಲಿದ್ದು, ಮೊದಲ ಪ್ರಧಾನ ಕಾರ್ಯದರ್ಶಿ ಪಾಕಿಸ್ತಾನದವರಾಗಿರುತ್ತಾರೆ. ಇದು ಅನಿರ್ದಿಷ್ಟಾವಧಿಯ ಒಪ್ಪಂದವಾಗಿದ್ದು, ಮುಂದಿನ 10 ವರ್ಷಗಳವರೆಗೆ ಯಾವುದೇ ರಾಷ್ಟ್ರವು ಇದರಿಂದ ಹೊರಬರುವಂತಿಲ್ಲ.

ಟರ್ಕಿ ಈ ಮೈತ್ರಿಯ ಅತಿದೊಡ್ಡ ರಕ್ಷಣಾ ಉತ್ಪಾದಕ

ನಾಲ್ಕೂ ದೇಶಗಳು ತಮ್ಮ ರಕ್ಷಣಾ ಅಗತ್ಯಗಳ ಪಟ್ಟಿಯನ್ನು ಸಿದ್ಧಪಡಿಸಲಿದ್ದು, ತಜ್ಞರನ್ನೊಳಗೊಂಡ ಕಾರ್ಯಕಾರಿ ಮಂಡಳಿಯು ಶಸ್ತ್ರಾಸ್ತ್ರಗಳ ಜಂಟಿ ಉತ್ಪಾದನಾ ಯೋಜನೆಯನ್ನು ಅಂತಿಮಗೊಳಿಸಲಿದೆ. ಸದಸ್ಯ ರಾಷ್ಟ್ರಗಳು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಯೋಜನೆಗೆ ಕೊಡುಗೆ ನೀಡಲಿವೆ. ಕತಾರ್ ಹಣಕಾಸು ನೆರವು ಒದಗಿಸಲು ಬದ್ಧವಾಗಿದ್ದರೆ, ಟರ್ಕಿಯು ತನ್ನ ಸುಧಾರಿತ ರಕ್ಷಣಾ ತಂತ್ರಜ್ಞಾನ ಹಾಗೂ ಮೂಲಸೌಕರ್ಯವನ್ನು ಒದಗಿಸಲಿದೆ. ಟರ್ಕಿ ಮತ್ತು ಪಾಕಿಸ್ತಾನ ಈ ಹಿಂದೆಯೂ ಜಂಟಿಯಾಗಿ ರಕ್ಷಣಾ ಯೋಜನೆಗಳಲ್ಲಿ ಕೈಜೋಡಿಸಿವೆ. ಟರ್ಕಿಯು ಪಾಕಿಸ್ತಾನಕ್ಕಾಗಿ 4 ಯುದ್ಧನೌಕೆಗಳ ಯೋಜನೆಯಲ್ಲಿ ಕೆಲಸ ಮಾಡಿದ್ದು, ಅವುಗಳಲ್ಲಿ ಎರಡು ಟರ್ಕಿಯಲ್ಲಿ ಮತ್ತು ಇನ್ನೆರಡು ಪಾಕಿಸ್ತಾನದಲ್ಲಿ ನಿರ್ವಣಗೊಂಡಿದ್ದವು. ಪ್ರಸ್ತುತ ಈ ನಾಲ್ಕು ದೇಶಗಳ ಪೈಕಿ ಟರ್ಕಿಯು ಅತಿದೊಡ್ಡ ರಕ್ಷಣಾ ಉತ್ಪಾದಕ ರಾಷ್ಟ್ರವಾಗಿದೆ. 2025ರಲ್ಲಿ ಟರ್ಕಿಯ ರಕ್ಷಣಾ ಮತ್ತು ಏರೋಸ್ಪೇಸ್ ರಫ್ತು ಪ್ರಮಾಣವು ಶೇಕಡ 48ರಷ್ಟು ಹೆಚ್ಚಳ ಕಂಡು, ಒಟ್ಟು 10 ಶತಕೋಟಿ ಡಾಲರ್​ಗಿಂತಲೂ ಅಧಿಕ ಮಟ್ಟಕ್ಕೆ ತಲುಪಿದೆ.

ಪಾಕ್-ಮಾಲ್ಡೀವ್ಸ್ ರಕ್ಷಣಾ ಕಾರ್ಯಾಚರಣೆ

ಪಾಕಿಸ್ತಾನ ಮತ್ತು ಮಾಲ್ಡೀವ್ಸ್ ರಕ್ಷಣಾ ಸಹಕಾರ ಮತ್ತು ಕಡಲ ಭದ್ರತೆಯನ್ನು ಹೆಚ್ಚಿಸಲು ಅಕ್ಟೋಬರ್ 21ರಂದು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿವೆ. ಇದರನ್ವಯ ಪಾಕಿಸ್ತಾನವು ಮಾಲ್ಡೀವ್ಸ್​ನ ಸೈನಿಕರು ಹಾಗೂ ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡಲಿದೆ. ಉಭಯ ದೇಶಗಳು ತಮ್ಮ ಕಾರ್ಯತಂತ್ರದ ರಕ್ಷಣಾ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ನಿರ್ಧರಿಸಿವೆ. ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಅವರ ಇತ್ತೀಚಿನ ಮೂರು ದಿನಗಳ ಪಾಕಿಸ್ತಾನ ಪ್ರವಾಸದ ವೇಳೆ ಒಟ್ಟು 20 ಒಪ್ಪಂದಗಳಿಗೆ ಅಂಕಿತ ಬಿದ್ದಿದ್ದು, ಅವುಗಳಲ್ಲಿ ಸೈಬರ್ ಭದ್ರತೆ, ಕೃತಕ ಬುದ್ಧಿಮತ್ತೆ (ಎಐ) ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿನ ಸಹಕಾರವೂ ಸೇರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net