ಪಾಕ್ ಭಿಕ್ಷುಕ, ಇಫ್ತಿಕಾರ್ ಬಟ್ ಮತ್ತು ಧುರಂಧರ!

ವಿಶೇಷ ಅಂಕಣ
ವಿಶೇಷ ಅಂಕಣ
Published on

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

ಪಾಕಿಸ್ತಾನದ ಇಸ್ಲಾಮಾಬಾದ್ ಸನಿಹದ ಕಥುವಾ ಎಂಬ ಗ್ರಾಮ ಮೇಲ್ನೋಟಕ್ಕೆ ಸಾಧಾರಣವಾಗಿ ಕಂಡರೂ ಒಂದು ಸಾಮಾನ್ಯ ಜಾಗವಲ್ಲ. ಪಾಕಿಸ್ತಾನದ ‘ಅಣು ಪಿತಾಮಹ’ ಎಂದೇ ಹೆಸರಾದ ಎ.ಕ್ಯೂ. ಖಾನ್ ಅವರ ಖಾನ್ ರಿಸರ್ಚ್ ಲ್ಯಾಬೊರೇಟರಿ (ಕೆಆರ್​ಎಲ್) ಇರುವ ತಾಣ. ಹೀಗಾಗಿ ಅಲ್ಲಿ ಬಿಗು ಭದ್ರತೆಯಿತ್ತು. 1980ರ ದಶಕದಲ್ಲಿ ಅಲ್ಲೊಬ್ಬ ಭಿಕ್ಷುಕ ನೆಲೆಸಿದ್ದ. ಹರಿದ ಶಾಲು ಹೊದೆದುಕೊಂಡು ಬೀದಿ ಅಲೆಯುತ್ತಿದ್ದ. ಆಗೀಗ ಯಾರಾದರೂ ನಾಣ್ಯ ಹಾಕುತ್ತಿದ್ದರು.

1974ರಲ್ಲಿ ಭಾರತ ಅಣುಪರೀಕ್ಷೆ ನಡೆಸಿತ್ತು. ಇದನ್ನು ಕಂಡು ಪಾಕಿಸ್ತಾನಕ್ಕೆ ಹೊಟ್ಟೆಯುರಿಯಾಗಿ ತಾನೂ ಅಣ್ವಸ್ತ್ರ ಹೊಂದಬೇಕು ಎಂಬ ತಹತಹಿಕೆ ಶುರುವಾಯಿತು. ಚೀನಾದಂತಹ ದೇಶಗಳ ಬೆಂಬಲವಿತ್ತು. ಆದರೆ ಈ ರಹಸ್ಯ ಯೋಜನೆಯ ಬಗ್ಗೆ ಭಾರತಕ್ಕೆ ಸಾಕಷ್ಟು ಪುರಾವೆ ಬೇಕಿತ್ತು. ಆಗ ಇಸ್ಲಾಮಾಬಾದಿನ ಬೀದಿಗಳಲ್ಲಿ ಪ್ರತ್ಯಕ್ಷನಾದವನೇ ಈ ಮೇಲೆ ಉಲ್ಲೇಖಿಸಿದ ‘ಭಿಕ್ಷುಕ’. ಅಲ್ಲಿಲ್ಲಿ ಓಡಾಡುತ್ತ ಸೂಕ್ಷ್ಮಕಣ್ಣುಗಳಿಂದ ಗಮನಿಸುತ್ತಿದ್ದ. ಅಲ್ಲಿ ಒಂದು ಸಣ್ಣ ಕ್ಷೌರದಂಗಡಿಯಿತ್ತು. ಕೆಆರ್​ಎಲ್ ಅಧಿಕಾರಿಗಳು ಈ ಅಂಗಡಿಗೆ ಆಗಾಗ ಬರುತ್ತಿದ್ದುದನ್ನು ಗಮನಿಸಿದ ಈತನಿಗೆ ಏನೋ ಅನುಮಾನ ಮೂಡಿತು. ಅಲ್ಲಿ ಬಿದ್ದ ತಲೆಗೂದಲನ್ನು ಸಂಗ್ರಹಿಸಿ ಪರೀಕ್ಷೆಗಂದು ಭಾರತಕ್ಕೆ ಕಳಿಸಿದ.

ಆ ಕೂದಲು ಅವಶೇಷಗಳಲ್ಲಿ ಯುರೇನಿಯಂ ಮತ್ತು ವಿಕಿರಣದ ಅಂಶ ಪತ್ತೆಯಾಯಿತು. ಅಂದರೆ, ಪಾಕಿಸ್ತಾನ ಅಣ್ವಸ್ತ್ರ ಅಭಿವೃದ್ಧಿಪಡಿಸುತ್ತಿದೆ ಎಂಬುದು ದೃಢಪಟ್ಟಿತು. ದೊಡ್ಡ ಗುಟ್ಟೊಂದು ಬಯಲಾಗಿದ್ದು ಹೀಗೆ. ಇದರಿಂದಾಗಿ, ಭಾರತ ತನ್ನ ಭವಿಷ್ಯದ ಸುರಕ್ಷತಾ ಯೋಜನೆಗಳನ್ನು ರೂಪಿಸಿಕೊಳ್ಳಲು ಅನುಕೂಲವಾಯಿತು. ಅಂದಹಾಗೆ, ಆ ‘ಭಿಕ್ಷುಕ’ ಬೇರಾರೂ ಅಲ್ಲ, ಹಾಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್! ದೋವಲ್ ಸುಮಾರು ಆರು ವರ್ಷ ಅಪಾಯದ ನೆರಳಿನಲ್ಲೇ ಬದುಕಿದ್ದರು. ಈ ಸಾಹಸದಿಂದಾಗಿ ಪಾಕಿಸ್ತಾನದ ಅಣ್ವಸ್ತ್ರ ಪರೀಕ್ಷಾ ಸಾಮರ್ಥ್ಯ ಸುಮಾರು 15 ವರ್ಷ ಮುಂದಕ್ಕೆ ಹೋಯಿತು ಎಂಬುದಾಗಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸಾವಿನ ಜತೆ ಸವಾರಿ ಎಂದರೆ ಅದುವೇ. ಅಪಾಯದ ಬಲೆ ಸದಾ ಬೀಸಿಕೊಂಡೇ ಇರುತ್ತದೆ. ತುಸು ಎಚ್ಚರತಪ್ಪಿದರೂ ಅಥವಾ ಯಾಮಾರಿದರೂ ಪ್ರಾಣಕ್ಕೇ ಕುತ್ತು. ಅವರ ಜತೆ ಇರಬೇಕು; ಇರದಂತೆಯೂ ಇರಬೇಕು. ಇಷ್ಟವಿದೆಯೋ ಇಲ್ಲವೋ ಅವರ ಮಾತಿಗೆಲ್ಲ ಹೂಂಗುಡಬೇಕು. ತನ್ನ ನಿಜರೂಪವನ್ನು ಬಚ್ಚಿಟ್ಟುಕೊಂಡು ಸ್ವಲ್ಪವೂ ಅನುಮಾನ ಬರದ ಹಾಗೆ ಪರಕಾಯ ಪ್ರವೇಶ ಮಾಡಬೇಕು. ಡಿಟೆಕ್ಟಿವ್ ಅಥವಾ ಗೂಢಚಾರಿಗಳ ಬದುಕು ಕಲ್ಪನೆಯಲ್ಲಿ ಥ್ರಿಲ್ಲಿಂಗ್ ಅನಿಸುತ್ತದೆ. ಸ್ಟೈಲ್ ಆಗಿ ಡ್ರೆಸ್ ಮಾಡಿ, ಸಿಗಾರ್ ಸೇದುತ್ತ ಗನ್ ಹಿಡಿದು ನಿಂತಿರುವ ಚಿತ್ರವೂ ಕಣ್ಮುಂದೆ ಬಂದೀತು. ಆದರೆ ವಾಸ್ತವ ಬೇರೆಯೇ ಇರುತ್ತದೆ.

2009ರ ಸಮಯ. ಜಮ್ಮು-ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ಉಗ್ರರು ಒಳನುಸುಳುತ್ತಿದ್ದಾರೆಂಬ ಗುಪ್ತಚರ ಮಾಹಿತಿ ಲಭಿಸಿತ್ತು. ಕಾಶ್ಮೀರ ಕಣಿವೆಯಲ್ಲಿ ಆಗ ಇಂಥ ಮಾಹಿತಿಗಳು ಬರುವುದು ಅಪರೂಪವೇನೂ ಆಗಿರಲಿಲ್ಲ. ಭಾರತೀಯ ಸೇನೆಯ ಮೇಜರ್ ಮೋಹಿತ್ ಶರ್ಮಾ ಅವರ ಯುನಿಟ್ ಅನ್ನು ಕುಪ್ವಾರಾದಲ್ಲಿ ನಿಯೋಜಿಸಲಾಗಿತ್ತು. ಅನೇಕ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಭಾಗಿಯಾದ ಅನುಭವ ಅವರಿಗಿತ್ತು. ಶೋಧ ಕಾರ್ಯಾಚರಣೆ ನಡೆಸಿ, ಉಗ್ರರನ್ನು ಹೊಡೆದುರುಳಿಸಬೇಕೆಂದು ಭದ್ರತಾ ಪಡೆಗಳು ನಿರ್ಧರಿಸಿದವು. ಹಫ್ರುದಾ ಅರಣ್ಯ ಪ್ರದೇಶದಲ್ಲಿ ಒಳನುಸುಳುವ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುವ ಹೊಣೆ ಶರ್ಮಾ ನೇತೃತ್ವದ ಬ್ರೇವೋ ಅಸಲ್ಟ್ ಟೀಂನದಾಗಿತ್ತು. ಗುಪ್ತಚರ ಮಾಹಿತಿ ಸರಿಯಿತ್ತು. ಶರ್ಮಾ ತಂಡ ಮುನ್ನುಗ್ಗುತ್ತಿದ್ದಾಗ ಉಗ್ರರು ಮೂರು ದಿಕ್ಕುಗಳಿಂದ ಗುಂಡು ಹಾರಿಸತೊಡಗಿದರು.

ನಾಲ್ವರು ಕಮಾಂಡೋಗಳು ಗಂಭೀರವಾಗಿ ಗಾಯಗೊಂಡರು. ಎದುರಿನಿಂದ ಗುಂಡಿನ ಸುರಿಮಳೆಯೇ ಆಗುತ್ತಿದ್ದರೂ ಅಂಜದ ಶರ್ಮಾ ಸಹಸೈನಿಕರನ್ನು ರಕ್ಷಿಸಬೇಕೆಂದು ಹಠ ತೊಟ್ಟು ತೆವಳುತ್ತಲೇ ಸಾಗಿ ಇಬ್ಬರು ಕಮಾಂಡೋಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಿದರು. ಉಗ್ರರು ಮತ್ತಷ್ಟು ಮುಂದೊತ್ತಿ ಬರುವುದನ್ನು ಗಮನಿಸಿ ಗ್ರನೇಡ್​ಗಳನ್ನು ಎಸೆದು ಇಬ್ಬರು ಉಗ್ರರನ್ನು ಯಮಪುರಿಗೆ ಕಳಿಸಿದರು. ಈ ಕಸರತ್ತಿನ ಸಮಯದಲ್ಲೇ ಅವರಿಗೆ ಎದೆ ಮೇಲೆ ಗುಂಡು ಬಿತ್ತು. ಆದರೆ ಅದಕ್ಕೆಲ್ಲ ಹೆದರುವನಲ್ಲ ಶರ್ಮಾ . ಹೋರಾಟವನ್ನು ಮುಂದುವರಿಸಿದರು. ಅಷ್ಟಾದರೂ ತಂಡವನ್ನು ಮುನ್ನಡೆಸುವ ಕರ್ತವ್ಯದಿಂದ ವಿಮುಖರಾಗಲಿಲ್ಲ.

ಇನ್ನೂ ಇಬ್ಬರು ಉಗ್ರರನ್ನು ಅವರು ಹೊಡೆದುರುಳಿಸಿದರು. ದುರದೃಷ್ಟ, ಗುಂಡಿನ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಶರ್ಮಾ ಅಸುನೀಗಿದರು. ಕೇಂದ್ರ ಸರ್ಕಾರ ಅವರಿಗೆ ಮರಣೋತ್ತರವಾಗಿ ಅಶೋಕ ಚಕ್ರ ಪ್ರದಾನಿಸಿ ಗೌರವಿಸಿತು. 1978ರ ಜನವರಿ 13ರಂದು ಹರ್ಯಾಣದ ರೋಹ್ಟಕ್​ನಲ್ಲಿ ಜನಿಸಿದ ಮೋಹಿತ್ ಶರ್ಮಾ ಮೊದಲಿಂದಲೂ ಸೇನೆ ಸೇರಿ ದೇಶಸೇವೆ ಮಾಡುವಾಸೆ. ಇದಕ್ಕೆಂದೇ, ಮೊದಲು ಇಂಜಿನಿಯರಿಂಗ್ ಸೇರಿದವರು ನಂತರ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್​ಡಿಎ) ಸೇರಿ, ಕನಸನ್ನು ನನಸಾಗಿಸಿಕೊಳ್ಳುವತ್ತ ಹೆಜ್ಜೆಯಿಟ್ಟರು.

ಎನ್​ಡಿಎಯಿಂದ ಕರೆ ಬಂದಾಗ, ಮೊದಲು ಅವರ ಪಾಲಕರು ತಿಳಿಸಿರಲಿಲ್ಲವಂತೆ. ಏಕೆಂದರೆ ಮಗ ಸೇನೆ ಸೇರುವುದು ಅವರಿಗೆ ಅಷ್ಟು ಇಷ್ಟ ಇರಲಿಲ್ಲವಂತೆ. ಆದರೆ ಬದುಕಿನ ಗುರಿಯನ್ನು ಮೋಹಿತ್ ನಿರ್ಧರಿಸಿಯಾಗಿತ್ತು. ಅವರ ಮೊದಲ ಪೋಸ್ಟಿಂಗ್ ಹೈದರಾಬಾದಿನಲ್ಲಾಯಿತು. ನಂತರ, 38 ರಾಷ್ಟ್ರೀಯ ರೈಫಲ್ಸ್ ದಳದ ಮೂಲಕ ಕಾಶ್ಮೀರದಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದರು. ಸೇನೆಯ ಉನ್ನತ ಹಂತಕ್ಕೇರಿ ಇನ್ನಷ್ಟು ಕಾರ್ಯಗೈಯಬೇಕೆಂಬ ಪ್ರಬಲ ಇಚ್ಛೆಯಿದ್ದ ಅವರು, 2003ರಲ್ಲಿ 1 ವಿಭಾಗ ಸೇರಿದರು. ಇದು ಭಾರತೀಯ ಸೇನೆಯ ವಿಶೇಷ ವಿಭಾಗವಾಗಿದ್ದು, ಮಿಂಚಿನ ವೇಗ ಮತ್ತು ಕಠಿಣ ಕಾರ್ಯಾಚರಣೆಗಳಿಗೆ ಎತ್ತಿದ ಕೈ. ಇಲ್ಲಿನ ತರಬೇತಿ ಅವಧಿಯೂ ಕಠಿಣಾತಿಕಠಿಣವಾಗಿರುತ್ತದೆ.

ಈ ದಳದಲ್ಲಿದ್ದಾಗ ಮೋಹಿತ್ ಶರ್ಮಾ ಗೈದ ಸಾಹಸ ಒಂದೆರಡಲ್ಲ. ಅದರಲ್ಲಿ ಅವರ ದಿಟ್ಟತನ, ಧೈರ್ಯ ಹಾಗೂ ದೇಶಕ್ಕಾಗಿ ಏನುಬೇಕಾದರೂ ಮಾಡಬಲ್ಲೆ ಎಂಬ ಮನೋಭಾವಕ್ಕೆ ಸಾಕ್ಷಿ ಎನಿಸುವುದು ಹಿಜ್ಬುಲ್ ಮುಜಾಹಿದಿನ್​ನ ಅಬು ತೊರಾರಾ ಮತ್ತು ಅಬು ಸಬ್ಜಾರ್ ವಿರುದ್ಧ ನಡೆಸಿದ ಮಾರುವೇಷದ ಕಾರ್ಯಾಚರಣೆ. ಇಫ್ತಿಕಾರ್ ಬಟ್ ಎಂಬ ಹೆಸರಿನಲ್ಲಿ ಉಗ್ರರ ಗುಂಪನ್ನು ಸೇರಿ, ಅವರ ವಿಶ್ವಾಸವನ್ನು ಸಂಪಾದಿಸಿ, ಇನ್ನೊಂದೆಡೆ ರಹಸ್ಯವಾಗಿ ಮಾಹಿತಿ ಸಂಗ್ರಹಿಸುತ್ತ, ಅವರ ಚಟುವಟಿಕೆಗಳನ್ನು ಗಮನಿಸುತ್ತ ಕೊನೆಗೊಂದು ದಿನ ಹೈ ರಿಸ್ಕ್ ಕಾರ್ಯಾಚರಣೆಯಲ್ಲಿ ಈ ಇಬ್ಬರೂ ಉಗ್ರರನ್ನು ಹೊಡೆದುರುಳಿಸಿದ ಭುಜಬಲ ಪರಾಕ್ರಮಿ ಈ ಮೋಹಿತ್ ಶರ್ಮಾ. ಅವರ ಈ ಸಾಹಸಕ್ಕಾಗಿ 2004ರಲ್ಲಿ ಸೇನಾ ಮೆಡಲ್ ನೀಡಿ ಗೌರವಿಸಲಾಯಿತು. ಅಂದಹಾಗೆ, ಈ ಯೋಧನೊಳಗೊಬ್ಬ ಸಂಗೀತಗಾರನೂ ಇದ್ದ. ಒಟ್ಟಿನಲ್ಲಿ ಹೇಳುವುದಾದರೆ, ಶಿಸ್ತು, ದೇಶಪ್ರೇಮ, ಕಲಾಚಾತುರ್ಯ ಇದೆಲ್ಲದರ ಸಂಗಮದಂತಿತ್ತು ಅವರ ಬದುಕು.

ಭಾರತೀಯ ಸೇನೆಯಲ್ಲಿದ್ದ ಲೆಫ್ಟಿನೆಂಟ್ ಕರ್ನಲ್ ರಿಷಿಮಾ ಶರ್ವರನ್ನು ಮೋಹಿತ್ ವಿವಾಹವಾಗಿದ್ದರು. ಇಲ್ಲಿ ಒಂದು ವಿಶೇಷವೂ ಇದೆ. ಮೋಹಿತ್ ಶರ್ಮಾ ಬೆಳಗಾವಿಯ ಕಮಾಂಡೋ ತರಬೇತಿ ಕೇಂದ್ರದಲ್ಲಿ ತರಬೇತುದಾರನಾಗಿಯೂ ಕೆಲ ಕಾಲ ಕಾರ್ಯನಿರ್ವಹಿಸಿದ್ದರು. ಅನೇಕ ಕಮಾಂಡೋಗಳಿಗೆ ತರಬೇತಿ ನೀಡಿದ್ದರು. ‘2004ರಲ್ಲಿ ಕುಟುಂಬದವರು ನನ್ನ ಜನ್ಮದಿನ ಆಚರಣೆಯ ಸಂಭ್ರಮದಲ್ಲಿರುವಾಗ ಮೋಹಿತ್ ಚಿಕ್ಕಪ್ಪ ಪಾಕಿಸ್ತಾನದಲ್ಲಿ ಭಯೋತ್ಪಾದಕರ ಜತೆ ಚಹಾ ಕುಡಿಯುತ್ತಿದ್ದರು’ ಎಂದು ಮೋಹಿತ್ ಸೋದರನ ಮಗಳು ಅನನ್ಯಾ ಮಧುರ್ ಶರ್ಮಾ ಒಂದೆಡೆ ನೆನಪಿಸಿಕೊಂಡಿದ್ದಾಳೆ.

ಉಗ್ರರ ಹಾಗೇ ಕಾಣುವ ಉದ್ದೇಶದಿಂದ ಉದ್ದದ ಕೂದಲು ಮತ್ತು ಗಡ್ಡ ಬಿಟ್ಟುಕೊಂಡು ಭಯೋತ್ಪಾದಕರ ಗುಂಪು ಸೇರಿದ್ದರು. ಇಫ್ತಿಕಾರ್ ಬಟ್ ಎಂಬುದು ಅವರ ಕೋಡ್​ನೇಮ್ ಆಗಿತ್ತು. ಮುಖ್ಯ ಮಾಹಿತಿಗಳನ್ನು ಪಡೆಯಲು ಅವರೊಂದಿಗೆ ಎರಡು ವಾರ ಇದ್ದರು. ಕೊನೆಗೆ ಅತ್ಯಂತ ಅಪಾಯಕಾರಿಯಾದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು, ತೀವ್ರವಾಗಿ ಗಾಯಗೊಂಡ ಸ್ಥಿತಿಯಲ್ಲಿಯೂ ಚಿಕ್ಕಪ್ಪನಲ್ಲಿದ್ದ ಸೈನಿಕ ಜಾಗೃತನಾಗಿಯೇ ಇದ್ದ. ‘ಫೈರಿಂಗ್ ರುಕ್ನಿ ನಹಿ ಚಾಹಿಯೇ. ಹಮ್ ಇಸೀ ಕೇ ಲಿಯೇ ಸ್ಪೆಷಲ್ ಫೋರ್ಸ್ ಮೇ ಹೈ ಔರ್ ಇಸೀ ಕೇ ಲಿಯೇ ಟ್ರೇನ್ ಕರ್ತೆಹೈ’ ಎನ್ನುತ್ತಿದ್ದರು ಎಂದೂ ಅನನ್ಯಾ ಉಲ್ಲೇಖಿಸಿದ್ದಾರೆ.

ಅವರು ಬೆಳೆದಿದ್ದು ಉತ್ತರ ಪ್ರದೇಶದ ಗಾಜಿಯಾಬಾದಿನಲ್ಲಿ. ಮೇಜರ್ ಮೋಹಿತ್ ಶರ್ಮಾ ಗೌರವಾರ್ಥ 2011ರಲ್ಲಿ ಗಾಜಿಯಾಬಾದಿನ ರಾಜೇಂದ್ರ ನಗರದಲ್ಲಿ ಲೋನಿ ರಸ್ತೆ ಮತ್ತು ಜಿಟಿ ರಸ್ತೆಯನ್ನು ಸಂಪರ್ಕಿಸುವ ರಸ್ತೆಗೆ ‘ಶಹೀದ್ ಮೇಜರ್ ಮೋಹಿತ್ ಶರ್ಮಾ ಮಾರ್ಗ’ ಎಂದು ನಾಮಕರಣ ಮಾಡಲಾಗಿದೆ. ರಾಜೇಂದ್ರ ನಗರ ಮೆಟ್ರೋ ನಿಲ್ದಾಣದ ಹೆಸರನ್ನು ‘ಮೇಜರ್ ಮೋಹಿತ್ ಶರ್ಮಾ ರಾಜೇಂದ್ರ ನಗರ ನಿಲ್ದಾಣ’ ಎಂದು 2019ರಲ್ಲಿ ಪುನರ್ ನಾಮಕರಣ ಮಾಡಲಾಗಿದೆ. ರಾಜೇಂದ್ರನಗರದಲ್ಲಿ ಸ್ಥಾಪಿಸಲಾಗಿರುವ ಮೋಹಿತ್ ಶರ್ಮಾ ಪುತ್ಥಳಿಯನ್ನು ರಕ್ಷಣಾ ಸಚಿವ ರಾಜನಾಥ ಸಿಂಗ್ 2021ರಲ್ಲಿ ಉದ್ಘಾಟಿಸಿದರು. ದೆಹಲಿಯ ಇಂದಿರಾ ಗೇಟ್​ನ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಮೋಹಿತ್ ಹೆಸರನ್ನು ಸ್ವರ್ಣಾಕ್ಷರದಲ್ಲಿ ಕೆತ್ತಲಾಗಿದೆ. ಅವರ ಕುಟುಂಬವು ಮೋಹಿತ್ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿದ್ದು, ಶಿಕ್ಷಣ ಮತ್ತು ಹೆಣ್ಣುಮಕ್ಕಳ ಆರೋಗ್ಯದ ಬಗ್ಗೆ ಒತ್ತು ನೀಡಿ ಕೆಲಸ ಮಾಡುತ್ತಿದೆ.

ಕೆಲ ದಿನಗಳ ಹಿಂದೆ ತೆರೆಕಂಡ ‘ಧುರಂಧರ’ ಎಂಬ ಸ್ಪೈ-ಥ್ರಿಲ್ಲರ್ ಹಿಂದಿ ಸಿನಿಮಾ ಭರ್ಜರಿ ಯಶಸ್ಸು ಕಂಡಿದೆ. ಈ ಚಿತ್ರದಲ್ಲಿ ರಣವೀರ್ ಸಿಂಗ್ ನಿರ್ವಹಿಸಿದ ಸ್ಪೈ ಪಾತ್ರ ಮೋಹಿತ್ ಶರ್ವರನ್ನು ಹೋಲುತ್ತದೆ ಎಂಬುದು ಅನೇಕರ ಅಂಬೋಣ. ಪಾತ್ರದ ಲುಕ್, ಕಾರ್ಯ ಮುಂತಾದವನ್ನು ಇದಕ್ಕೆ ಅವರು ಸಮರ್ಥನೆಯಾಗಿ ನೀಡುತ್ತಾರೆ. ಈ ಚಿತ್ರವು ಮೋಹಿತ್ ಶರ್ಮಾ ಜೀವನಾಧಾರಿತ ಇದ್ದ ಹಾಗಿದ್ದು, ತಮ್ಮ ಪೂರ್ವಾನುಮತಿ ಪಡೆದಿಲ್ಲ ಎಂದು ಶರ್ಮಾ ಕುಟುಂಬ ದೆಹಲಿ ಹೈಕೋರ್ಟ್ ಮೆಟ್ಟಿಲೇರಿತ್ತು. ಆದರೆ ಚಿತ್ರಕ್ಕೆ ತಡೆಯಾಜ್ಞೆ ನೀಡಲು ಕೋರ್ಟ್ ನಿರಾಕರಿಸಿತ್ತು.

‘ಧುರಂಧರ’ ಚಿತ್ರದ ನಿರ್ದೇಶಕ ಆದಿತ್ಯ ಧರ್ ಕಾಶ್ಮೀರಿ ಪಂಡಿತ ಸಮುದಾಯಕ್ಕೆ ಸೇರಿದವರು. ಹೀಗಾಗಿ ಅವರಿಗೆ ಭಯೋತ್ಪಾದನೆಯ ವಿವಿಧ ಮುಖಗಳು, ಸೇನೆಯ ಕಾರ್ಯನಿರ್ವಹಣೆ, ಕಣಿವೆ ರಾಜ್ಯದ ಸಾಮಾಜಿಕ ಸ್ಥಿತಿಗತಿ ಇತ್ಯಾದಿ ಕುರಿತು ಅರಿವಿದೆ. ಈ ಹಿನ್ನೆಲೆಯು ಅವರಿಗೆ ‘ಧುರಂಧರ’ ಸಿನಿಮಾವನ್ನು ಕಟ್ಟುವಲ್ಲಿ ನೆರವಾಗಿದೆ. ಈ ಹಿಂದೆ ಅವರು ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಎಂಬ ಸಿನಿಮಾವನ್ನು ನಿರ್ದೇಶಿಸಿದ್ದರು. ನಟರ ಯಥೋಚಿತ ಅಭಿನಯ, ಮನಸೆಳೆಯುವ ಸಂಗೀತ ಮುಂತಾದ ಅಂಶಗಳು ಚಿತ್ರವನ್ನು ಎತ್ತರಿಸಲು ಸಹಕರಿಸಿವೆ. ಇನ್ನೂ ಮುಖ್ಯವಾಗಿ, ನೈಜ ಘಟನೆಗಳನ್ನು ಕಥೆಗೆ ಪೂರಕವಾಗಿ ಪೋಣಿಸಿ ಚಿತ್ರಕಥೆ ರಚಿಸುವಲ್ಲಿ ನಿರ್ದೇಶಕ ಆದಿತ್ಯ ಧರ್ ವೃತ್ತಿಪರತೆ ತೋರಿದ್ದಾರೆ. ಅದರಲ್ಲೂ, ಕಂದಹಾರ್ ವಿಮಾನ ಅಪಹರಣ ಪ್ರಸಂಗ, 2001ರ ಸಂಸತ್ ಭವನದ ಮೇಲಿನ ದಾಳಿ ಮತ್ತು 2008ರ ಮುಂಬೈ ದಾಳಿ... ಇವನ್ನೆಲ್ಲ ಜೋಡಿಸಿರುವುದು ಭಾರತೀಯ ಪ್ರೇಕ್ಷಕರಲ್ಲಿ ಭಾವನಾತ್ಮಕ ಪರಿಣಾಮ ಉಂಟುಮಾಡಿರುವುದಕ್ಕೆ ಸಿನಿಮಾದ ಯಶಸ್ಸೇ ಸಾಕ್ಷಿ.

ಕೊನೇ ಮಾತು: ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಪಂದ್ಯ ನಡೆಯಲಿ, ಘರ್ಷಣೆ ನಡೆಯಲಿ ಅಥವಾ ನಾಯಕರ ನಡುವೆ ಮಾತಿನ ಚಕಮಕಿ ನಡೆಯಲಿ, ಯಾವುದೇ ಇದ್ದರೂ ಎರಡೂ ದೇಶದಲ್ಲಿ ಭಾವಾವೇಶ ಉಂಟುಮಾಡುವುದು ಗೊತ್ತಿರುವಂಥದೇ. ‘ಧುರಂಧರ’ ಚಿತ್ರ ಯಶಸ್ವಿಯಾಗುವಲ್ಲಿ ಈ ಸಂಗತಿ ಕೂಡ ಪಾತ್ರ ವಹಿಸಿದಂತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net