ಪಾಕಿಸ್ತಾನ VS ತಾಲಿಬಾನ್

 Pakistan VS Taliban
Pakistan VS Taliban
Published on
ಅಪ್ಘಾನಿಸ್ತಾನದ ಏಳು ಭಯೋತ್ಪಾದಕ ನೆಲೆಗಳ ಮೇಲೆ ಪಾಕಿಸ್ತಾನ ಭಾನುವಾರ ನಡೆಸಿದ ವಾಯುದಾಳಿಯಲ್ಲಿ ಕನಿಷ್ಠ 70 ಭಯೋತ್ಪಾದಕರು ಮೃತಪಟ್ಟಿದ್ದಾರೆ ಎಂದು ಪಾಕಿಸ್ತಾನ ಹೇಳಿದೆ. ಈ ದಾಳಿಯ ಬೆನ್ನಲ್ಲೇ, ತಾಲಿಬಾನ್ ಸರ್ಕಾರ ಸಿಡಿದೆದ್ದಿದೆ. ಪಾಕಿಸ್ತಾನದ ವಿರುದ್ಧ ಪ್ರತೀಕಾರ ಕೈಗೊಳ್ಳುವ ಸಂಕಲ್ಪ ಮಾಡಿದ್ದು, ಮಾಜಿ ದೋಸ್ತಿಗಳು ಈಗ ಕಟ್ಟರ್ ಶತ್ರುಗಳಾಗಿ ಬದಲಾಗಿದ್ದಾರೆ. ಪಾಕಿಸ್ತಾನವು ತನ್ನ ದೇಶದಲ್ಲಿ ನೆಲೆಸಿದ್ದ ಅಪ್ಘಾನ್ ನಿರಾಶ್ರಿತರನ್ನು ವಾಪಸ್ ಕಳುಹಿಸುತ್ತಿದೆ. ಪಾಕಿಸ್ತಾನ ಮತ್ತು ಅಪ್ಘಾನಿಸ್ತಾನದ ನಡುವೆ ದ್ವೇಷಮಯ ಪರಿಸ್ಥಿತಿ ಸೃಷ್ಟಿಯಾಗಿದ್ದು, ನೇರ ಯುದ್ಧ ಏರ್ಪಡುವ ಆತಂಕ ಸೃಷ್ಟಿಯಾಗಿದೆ. ಅಷ್ಟಕ್ಕೂ ಪಾಕ್ ಅಪ್ಘಾನಿಸ್ತಾನದ ಮೇಲೆ ವಾಯುದಾಳಿ ನಡೆಸಿದ್ದು ಏಕೆ, ಎರಡೂ ರಾಷ್ಟ್ರಗಳು ಶತ್ರುಗಳಾಗಿ ಬದಲಾಗಿದ್ದು ಹೇಗೆ? ಈ ಕುರಿತಾದ ವಿವರ ಇಲ್ಲಿದೆ.
ಪಾಕಿಸ್ತಾನ ಮತ್ತು ತಾಲಿಬಾನ್ ನಡುವಿನ ಸೇನಾ ಸಂಘರ್ಷ ಹೆಚ್ಚುತ್ತಲೇ ಇದೆ. ಪಾಕಿಸ್ತಾನದಲ್ಲಿ ಇತ್ತೀಚೆಗೆ ಬಂಡುಕೋರರು ನಡೆಸಿದ ಸರಣಿ ದಾಳಿಗೆ ಪ್ರತಿಕಾರವಾಗಿ ಪಾಕಿಸ್ತಾನವು ಅಪ್ಘಾನಿಸ್ತಾನದಲ್ಲಿನ ಫೆಬ್ರವರಿ 22ರಂದು ಏಳು ಉಗ್ರ ನೆಲೆಗಳ ಮೇಲೆ ವಾಯುದಾಳಿ ನಡೆಸಿದೆ. ನಾಗರಿಕ ಮತ್ತು ಧಾರ್ವಿುಕ ಕೇಂದ್ರವನ್ನು ಗುರಿಯಾಗಿಸಿ ನಡೆಸಲಾದ ಈ ದಾಳಿಗೆ ತಕ್ಕ ಪ್ರತ್ಯುತ್ತರ ನೀಡುವುದಾಗಿ ಅಪ್ಘಾನ್ ಸರ್ಕಾರ ಎಚ್ಚರಿಸಿದೆ. ಅಷ್ಟಕ್ಕೂ, ಅಫ್ಘಾನಿಸ್ತಾನದ ಮೇಲೆ ಪಾಕ್ ವಾಯುದಾಳಿ ನಡೆಸುತ್ತಿರುವುದು ಇದೇ ಮೊದಲೇನಲ್ಲ. ಅಪ್ಘಾನ್ ರಾಜಧಾನಿ ಕಾಬೂಲ್ ಮತ್ತು ಪ್ರಮುಖ ನಗರಗಳಾದ ಜಲಾಲಾಬಾದ್, ಖೋಸ್ತ್ ಮೇಲೆ 2025ರ ಅಕ್ಟೋಬರ್ 9ರ ರಾತ್ರಿ ವಾಯುದಾಳಿ ನಡೆಸಿತ್ತು.
ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಬನ್ನು ಪ್ರದೇಶದಲ್ಲಿ ಶನಿವಾರ ನಡೆದ ಆತ್ಮಾಹುತಿ ದಾಳಿಯಲ್ಲಿ ಲೆಫ್ಟಿನೆಂಟ್ ಕರ್ನಲ್ ಮತ್ತು ಒಬ್ಬ ಸೈನಿಕ ಮೃತಪಟ್ಟಿದ್ದರು. ಈ ದಾಳಿಯನ್ನು ಅಪ್ಘಾನಿಸ್ತಾನ ಮೂಲದ ಭಯೋತ್ಪಾದಕ ನಾಯಕರ ನಿರ್ದೇಶನದಂತೆ ನಡೆಸಲಾಗಿದೆ ಎಂದು ಪಾಕಿಸ್ತಾನ ಹೇಳಿದೆ.
ಪಾಕಿಸ್ತಾನದಲ್ಲಿ ಇತ್ತೀಚೆಗೆ ಆತ್ಮಾಹುತಿ ದಾಳಿಗಳು ಹೆಚ್ಚಾಗಿರುವುದಂತೂ ಹೌದು. ಏಳು ದಶಕಗಳಿಂದ ಭಯೋತ್ಪಾದನೆಯನ್ನು ಪೋಷಿಸಿ, ಹರಡುತ್ತಿರುವ ಪಾಕಿಸ್ತಾನ ಈಗ ಸ್ವತಃ ಭಯೋತ್ಪಾದನೆಯ ಕರಾಳ ಛಾಯೆಯಲ್ಲಿ ಸಿಲುಕಿಕೊಂಡಿದೆ. ಭಾರತ ತನ್ನ ನೆಲದಲ್ಲಿ ನಡೆದ ಭಯೋತ್ಪಾದಕ ದಾಳಿಗಳಲ್ಲಿ ಪಾಕಿಸ್ತಾನದ ಕೈವಾಡವಿರುವುದನ್ನು ಸಾಕ್ಷ್ಯಗಳ ಸಮೇತ ರುಜುವಾತು ಮಾಡಿದರೂ, ಒಪ್ಪಿಕೊಳ್ಳದೆ ಮೊಂಡಾಟವಾಡುತ್ತಿದ್ದ ಪಾಕಿಸ್ತಾನ ಈಗ ತಾನೇ ಪೋಷಿಸಿದ ತಾಲಿಬಾನ್ ಉಗ್ರರಿಂದ ಸಂಕಷ್ಟ ಎದುರಿಸುತ್ತಿದೆ.
ತಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ್ ಹಾಗೂ ಇಸ್ಲಾಮಿಕ್ ಸ್ಟೇಟ್ ಸಂಘಟನೆಗಳು ಪಾಕ್ ಸೇನೆ ಮತ್ತು ಭದ್ರತಾ ಪಡೆಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದು, ಫೆಬ್ರವರಿ ತಿಂಗಳೊಂದರಲ್ಲೇ ಮೂರು ದೊಡ್ಡ ದಾಳಿಗಳು ನಡೆದಿವೆ. ಇಸ್ಲಾಮಾಬಾದ್​ನ ಶಿಯಾ ಮಸೀದಿಯೊಂದರಲ್ಲಿ ಫೆಬ್ರವರಿ 6ರಂದು ನಡೆದ ಆತ್ಮಾಹುತಿ ದಾಳಿಯಲ್ಲಿ 31 ಜನರು ಪ್ರಾಣ ಕಳೆದುಕೊಂಡು, 170 ಜನರು ಗಾಯ ಅನುಭವಿಸಿದರು. ಫೆ.17ರಂದು ಬಜೌರ್ ಪ್ರದೇಶದಲ್ಲಿ ಸ್ಪೋಟಕಗಳಿಂದ ತುಂಬಿದ ವಾಹನವನ್ನು ಪೊಲೀಸ್​ಚೌಕಿಗೆ ಡಿಕ್ಕಿ ಹೊಡೆಸಿದ ಪರಿಣಾಮ 11 ಸೈನಿಕರು ಮತ್ತು ಓರ್ವ ಬಾಲಕ ಪ್ರಾಣ ಕಳೆದುಕೊಂಡರು. ಫೆ.21ರಂದು ಬನ್ನು ನಗರದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಓರ್ವ ಲೆಫ್ಟಿನೆಂಟ್ ಕರ್ನಲ್ ಸೇರಿದಂತೆ ಇಬ್ಬರು ಸೈನಿಕರು ಮೃತಪಟ್ಟರು.

ವಾಯುದಾಳಿ ಏಕೆ?

ಭಯೋತ್ಪಾದಕರ ಚಟುವಟಿಕೆಗಳಿಗೆ ಅಪ್ಘಾನ್​ನೆಲವನ್ನು ಬಳಸುವುದನ್ನು ತಡೆಯುವಂತೆ ಪದೇಪದೆ ಕೇಳಿಕೊಂಡರೂ, ತಾಲಿಬಾನ್ ಸರ್ಕಾರ ಅದನ್ನು ನಿಗ್ರಹಿಸುವಲ್ಲಿ ವಿಫಲವಾಗಿದೆ. ಹೀಗಾಗಿ, ಪಾಕ್-ಅಪ್ಘಾನ್ ಗಡಿ ಪ್ರದೇಶದಲ್ಲಿರುವ ತಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ್ ಮತ್ತು ಅದರ ಅಂಗಸಂಸ್ಥೆಗಳು ಹಾಗೂ ಇಸ್ಲಾಮಿಕ್ ಸ್ಟೇಟ್ ಆಫ್ ಖೊರಸಾನ್ ಪ್ರಾವಿನ್ಸ್​ನ ಭಯೋತ್ಪಾದಕ ಶಿಬಿರಗಳು ಮತ್ತು ಅಡಗುತಾಣಗಳ ಮೇಲೆ ಗುಪ್ತಚರ ಆಧಾರಿತ ನಿಖರ ವಾಯುದಾಳಿಗಳನ್ನು ನಡೆಸಲಾಗಿದೆ ಎಂದು ಪಾಕಿಸ್ತಾನ ಹೇಳಿದೆ. ಈ ದಾಳಿಯ ಬೆನ್ನಲ್ಲೇ ತಾಲಿಬಾನ್ ರಕ್ಷಣಾ ಸಚಿವಾಲಯ ಪಾಕ್​ಗೆ ಕಠಿಣ ಸಂದೇಶ ರವಾನಿಸಿದೆ. ‘ಗಡಿಯನ್ನು ದಾಟಿ ಅಪ್ಘಾನಿಸ್ತಾನದಲ್ಲಿ ದಾಳಿ ನಡೆಸಿದರೆ ಇನ್ನು ಸುಮ್ಮನಿರುವುದಿಲ್ಲ. ಪ್ರತಿದಾಳಿ ನಡೆಸಲು ನಮ್ಮ ಸೇನೆ ಸಿದ್ಧವಾಗಿದೆ’ ಎಂದು ಹೇಳಿದೆ. ‘ಪಾಕಿಸ್ತಾನ ಮತ್ತು ಅಪ್ಘಾನಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚುತ್ತಿದ್ದು, ಪರಿಸ್ಥಿತಿಯ ಮೇಲೆ ನಿಗಾ ಇರಿಸಿದ್ದೇವೆ’ ಎಂದು ಅಮೆರಿಕ ಪ್ರತಿಕ್ರಿಯಿಸಿದೆ.

ಬುಡಮೇಲಾದ ಲೆಕ್ಕಾಚಾರ

ಅಫ್ಘಾನಿಸ್ತಾನದಲ್ಲಿ 1996-2001ರ ಅವಧಿಯಲ್ಲೂ ತಾಲಿಬಾನ್ ಆಡಳಿತವಿತ್ತು. ಆಗ ಪಾಕಿಸ್ತಾನ ಅಪ್ಘಾನ್​ನೊಂದಿಗೆ ಉತ್ತಮ ಬಾಂಧವ್ಯ ಹೊಂದಿತ್ತು. 2001ರಲ್ಲಿ ತಾಲಿಬಾನ್ ಆಡಳಿತ ಪತನಗೊಂಡ ಬಳಿಕವೂ ಈ ಎರಡೂ ರಾಷ್ಟ್ರಗಳ ನಡುವಿನ ಸಂಬಂಧ ಮುಂಚಿನಂತೆಯೇ ಮುಂದುವರಿದಿತ್ತು. 2021ರಲ್ಲಿ ಅಮೆರಿಕ ತನ್ನ ಸೈನಿಕರನ್ನು ಅಪ್ಘಾನ್​ನಿಂದ ವಾಪಸ್ ಕರೆಸಿಕೊಂಡ ಬಳಿಕ ಮತ್ತೆ ತಾಲಿಬಾನ್ ಆಡಳಿತ ಆರಂಭವಾಯಿತು. ತಾಲಿಬಾನ್ ಆಡಳಿತದ ಆರಂಭಿಕ ವರ್ಷಗಳಲ್ಲಿ ಪಾಕಿಸ್ತಾನ ಅಪ್ಘಾನ್​ನೊಂದಿಗೆ ಸ್ನೇಹ ಹೊಂದಿತ್ತಾದರೂ, ಇತ್ತೀಚಿನ ದಿನಗಳಲ್ಲಿ ಅದು ಹಳಸಿದೆ. ತಾಲಿಬಾನಿಗಳನ್ನು ಪೋಷಿಸಿ, ಬೆಳೆಸಿದ್ದೇ ಪಾಕಿಸ್ತಾನ. ಹಾಗಾಗಿ, ತಾಲಿಬಾನ್ ಆಡಳಿತವನ್ನು ಸದಾ ತನ್ನ ನಿಯಂತ್ರಣದಲ್ಲಿ ಇರಿಸಿಕೊಳ್ಳಬಹುದು ಎಂಬ ಲೆಚ್ಚಾಚಾರದಲ್ಲಿ ಪಾಕಿಸ್ತಾನ ಇತ್ತು. ಆದರೆ, ಎರಡನೇ ಬಾರಿ ಅಧಿಕಾರಕ್ಕೆ ಬಂದ ತಾಲಿಬಾನ್ ತನ್ನ ಆಡಳಿತ ಶೈಲಿಯನ್ನು ಬದಲಿಸಿಕೊಂಡಿದೆ. ಅಲ್ಲದೆ, ಜಾಗತಿಕ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಭಾರತ ಸೇರಿದಂತೆ ಇತರ ರಾಷ್ಟ್ರಗಳೊಂದಿಗೆ ಉತ್ತಮ ರಾಜತಾಂತ್ರಿಕ ಸಂಬಂಧ ಸ್ಥಾಪಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಪಾಕಿಸ್ತಾನದ ಒತ್ತಡಕ್ಕೆ ಮಣಿಯದೆ ಸ್ವತಂತ್ರ ನಿರ್ಧಾರ ಕೈಗೊಳ್ಳುತ್ತಿದೆ. ಪಾಕಿಸ್ತಾನದ ಕೈಗೊಂಬೆಯಾಗಿ ಇರಲು ನಿರಾಕರಿಸುತ್ತಿದೆ. ಪಾಕ್ ಕೆಂಗಣ್ಣು ಬೀರಲು ಇದುವೇ ಪ್ರಮುಖ ಕಾರಣ.

ಪಾಕ್ ಪ್ರಮಾದಗಳು

  • ತಾಲಿಬಾನ್ 1990ರ ದಶಕದಲ್ಲಿ ತಲೆ ಎತ್ತಿದಾಗ ಅದಕ್ಕೆ ಭಾರಿ ಪ್ರಮಾಣದಲ್ಲಿ ಸಹಕಾರ ನೀಡಿದ್ದು ಪಾಕಿಸ್ತಾನವೇ.
  • 1996ರಲ್ಲಿ ಕಾಬೂಲ್​ನ್ನು ತಾಲಿಬಾನ್ ಮೊದಲ ಬಾರಿ ವಶಪಡಿಸಿಕೊಂಡಾಗ, ಅದಕ್ಕೆ ಮಾನ್ಯತೆ ನೀಡಿದ ದೇಶಗಳ ಪೈಕಿ ಪಾಕಿಸ್ತಾನ ಎಲ್ಲಕ್ಕಿಂತ ಮುಂದಿತ್ತು.
  • ಅಮೆರಿಕ ಸೇನೆ 2001ರಲ್ಲಿ ಅಪ್ಘಾನಿಸ್ತಾನ ಪ್ರವೇಶಿಸಿದಾಗ, ಪಾಕಿಸ್ತಾನ ಅಮೆರಿಕಕ್ಕೆ ಬೆಂಬಲವಾಗಿ ನಿಂತಿತು. ಆಗ ತಾಲಿಬಾನ್ ಕಮಾಂಡರ್ ಮುಲ್ಲಾ ಉಮರ್ ಪಾಕಿಸ್ತಾನವನ್ನು ‘ವಿಶ್ವಾಸದ್ರೋಹಿ’ ಎಂದು ಕರೆದಿದ್ದ.

ಪಾಕ್ ಪೇಚಾಟ

  1. ಭಾರತದೊಂದಿಗೆ ಉದ್ವಿಗ್ನತೆ. ರಾಜತಾಂತ್ರಿಕ ಸಂಬಂಧಕ್ಕೆ ಹಾನಿ.ಬಲೂಚಿಸ್ತಾನ ಪ್ರಾಂತ್ಯದಲ್ಲಿ ಸ್ವತಂತ್ರ ರಾಷ್ಟ್ರಕ್ಕಾಗಿ ತೀವ್ರಗೊಂಡಿರುವ ಸಂಘರ್ಷ.
  2. ಪಾಕ್ ಮೂಲದ ಭಯೋತ್ಪಾದಕರು ಕೂಡ ಪಾಕ್​ನಲ್ಲೇ ಎದುರಾಳಿ ಉಗ್ರ ಗುಂಪುಗಳನ್ನು ಮತ್ತು ಭದ್ರತಾ ಪಡೆಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿವೆ.
  3. 2025ರ ಒಂದೇ ವರ್ಷದಲ್ಲಿ ಪಾಕಿಸ್ತಾನದಲ್ಲಿ 5 ಸಾವಿರಕ್ಕಿಂತ ಅಧಿಕ ಭಯೋತ್ಪಾದಕ ದಾಳಿಗಳು ನಡೆದಿವೆ. ಅಲ್ಲದೆ, 2025ರಲ್ಲಿ ಟಿಟಿಪಿಯ ದಾಳಿ ಪಾಕ್​ನಲ್ಲಿ ಶೇಕಡ 90ರಷ್ಟು ಹೆಚ್ಚಳಗೊಂಡವು.
  4. ಅಪ್ಘಾನಿಸ್ತಾನ ತಾಲಿಬಾನ್​ನೊಂದಿಗೆ ಸಂಘರ್ಷ ಹೆಚ್ಚಿದ್ದು, ಇದು ಯುದ್ಧದ ಸ್ವರೂಪ ಪಡೆದುಕೊಳ್ಳುವ ಆತಂಕ ಸೃಷ್ಟಿಯಾಗಿದೆ.

ಒಂದೇ ವರ್ಷದಲ್ಲಿ 600 ದಾಳಿಗಳು

ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಭಯೋತ್ಪಾದಕ ಸಂಘಟನೆಯು ಪಾಕಿಸ್ತಾನದ ಮೇಲೆ ನಿರಂತರ ದಾಳಿಗಳನ್ನು ನಡೆಸುತ್ತಿದೆ. 2007ರಿಂದ ಇಲ್ಲಿಯವರೆಗೆ ಟಿಟಿಪಿ 14 ಸಾವಿರ ಪಾಕಿಸ್ತಾನಿಯರನ್ನು ಕೊಂದಿದೆ. ಪಾಕಿಸ್ತಾನದ ವಿಶ್ವವಿದ್ಯಾಲಯಗಳು, ಧಾರ್ವಿುಕ ಮುಖಂಡರು ಹಾಗೂ ಜನಸಾಮಾನ್ಯರನ್ನೂ ಗುರಿಯಾಗಿಸಿ ಟಿಟಿಪಿ ದಾಳಿ ನಡೆಸಿದೆ. ಪಾಕಿಸ್ತಾನದ ದೊಡ್ಡ ಶಹರಗಳಲ್ಲಿ ಆತ್ಮಾಹುತಿ ದಾಳಿಗಳನ್ನು ನಡೆಸಿದೆ.
2021ರಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಮತ್ತೆ ಆಡಳಿತಕ್ಕೆ ಬಂದ ಮೇಲೆ ಟಿಟಿಪಿ ಪಾಕ್​ನ ಭದ್ರತಾ ಪಡೆಗಳ ವಿರುದ್ಧ ಗೊರಿಲ್ಲಾ ಯುದ್ಧ ನಡೆಸುತ್ತಿದೆ. ಟಿಟಿಪಿಗೆ ತಾಲಿಬಾನ್ ಬೆಂಬಲ ಘೋಷಿಸಿರುವುದು ಮಾತ್ರವಲ್ಲದೆ ಸಂಘಟನೆಯ ಪ್ರಮುಖ ನಾಯಕರಿಗೆ ಅಪ್ಘಾನಿಸ್ತಾನದಲ್ಲಿ ಆಶ್ರಯ ನೀಡಿರುವುದು ಪಾಕ್ ಮುನಿಸಿಗೆ ಕಾರಣ. ಟಿಟಿಪಿ 2025ರ ಒಂದೇ ವರ್ಷದಲ್ಲಿ ಪಾಕಿಸ್ತಾನದಲ್ಲಿ 600 ದಾಳಿಗಳನ್ನು ನಡೆಸಿದ್ದು, ಇದರಲ್ಲಿ ಹಲವು ಸೈನಿಕರು ಮತ್ತು ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ.

ಸ್ನೇಹಿತರೇ ವೈರಿಗಳಾದರು!

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಒಂದು ಕಾಲದಲ್ಲಿ ಮಿತ್ರರಾಷ್ಟ್ರಗಳು. ಕಾಲಚಕ್ರ ಬದಲಾಗಿದ್ದು, ಪ್ರಸಕ್ತ ಇವೆರಡೂ ದೇಶಗಳು ಬದ್ಧವೈರಿಗಳಾಗಿ ಮಾರ್ಪಟ್ಟಿವೆ. ಅದರಲ್ಲೂ, ತಾಲಿಬಾನ್ ಹಿಡಿತದಲ್ಲಿರುವ ಅಪ್ಘಾನಿಸ್ತಾನ ಭಾರತದೊಂದಿಗೆ ಸ್ನೇಹಹಸ್ತ ಚಾಚಿರುವುದು ಪಾಕ್​ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಅಪ್ಘಾನ್ ವಿದೇಶಾಂಗ ಮಂತ್ರಿ ಅಮೀರ್ ಖಾನ್ ಮುತ್ತಾಕಿ 2025ರ ಅಕ್ಟೋಬರ್​ನಲ್ಲಿ ಒಂದು ವಾರದ ಕಾಲ ಭಾರತಕ್ಕೆ ಭೇಟಿ ನೀಡಿ, ವಿದೇಶಾಂಗ ಸಚಿವ ಜೈಶಂಕರ್ ಜತೆ ಚರ್ಚೆ ನಡೆಸಿದ್ದರು.
ಇದರ ಪರಿಣಾಮವಾಗಿ ಅಫ್ಘಾನಿಸ್ತಾನದಲ್ಲಿ ಭಾರತ ತನ್ನ ರಾಯಭಾರಿ ಕಚೇರಿಯನ್ನು ಪೂರ್ಣಪ್ರಮಾಣದಲ್ಲಿ ಆರಂಭಿಸಿರುವುದು, ಭಾರತವಿರೋಧಿ ಚಟುವಟಿಕೆಗಳಿಗೆ ತನ್ನ ನೆಲದಿಂದ ಆಸ್ಪದ ನೀಡುವುದಿಲ್ಲ ಎಂದು ತಾಲಿಬಾನ್ ಸರ್ಕಾರ ಹೇಳಿರುವುದು ಸೇರಿದಂತೆ ಸರಣಿ ಬೆಳವಣಿಗೆಗಳು ಪಾಕ್​ನ ನಿದ್ದೆಗೆಡಿಸಿದೆ. ಸೌದಿ ಅರೇಬಿಯಾದ ಜತೆ ರಕ್ಷಣಾ ಒಪ್ಪಂದ ಮಾಡಿಕೊಂಡು ಬೀಗುತ್ತಿದ್ದ ಪಾಕ್, ಅಪ್ಘಾನ್ ಭಾರತಕ್ಕೆ ಹತ್ತಿರವಾಗಬಹುದು ಎಂದು ಊಹಿಸಿಯೂ ಇರಲಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net