ದುಡ್ಡಿಲ್ಲದೆ ಆಸ್ಟ್ರೇಲಿಯಾ ಪ್ರವಾಸ; ಹೋಟೆಲ್ ಬಿಲ್ ಕಟ್ಟಲಾಗದೆ ಕಿಚನ್‌ ಕ್ಲೀನ್‌ ಮಾಡಿ ಪಾತ್ರೆ ತೊಳೆದ ಪಾಕ್​ ಆಟಗಾರರು..! Pakistan players

ದುಡ್ಡಿಲ್ಲದೆ ಆಸ್ಟ್ರೇಲಿಯಾ ಪ್ರವಾಸ; ಹೋಟೆಲ್ ಬಿಲ್ ಕಟ್ಟಲಾಗದೆ ಕಿಚನ್‌ ಕ್ಲೀನ್‌ ಮಾಡಿ ಪಾತ್ರೆ ತೊಳೆದ ಪಾಕ್​ ಆಟಗಾರರು..!
ದುಡ್ಡಿಲ್ಲದೆ ಆಸ್ಟ್ರೇಲಿಯಾ ಪ್ರವಾಸ; ಹೋಟೆಲ್ ಬಿಲ್ ಕಟ್ಟಲಾಗದೆ ಕಿಚನ್‌ ಕ್ಲೀನ್‌ ಮಾಡಿ ಪಾತ್ರೆ ತೊಳೆದ ಪಾಕ್​ ಆಟಗಾರರು..!
Published on
ಲಾಹೋರ್: ಪಾಕಿಸ್ತಾನದ ರಾಷ್ಟ್ರೀಯ ಕ್ರೀಡೆ ಹಾಕಿ ಇಂದು ಇತಿಹಾಸದಲ್ಲೇ ಕಾಣದಂತಹ ಹೀನಾಯ ಸ್ಥಿತಿಗೆ ತಲುಪಿದೆ. ಆಸ್ಟ್ರೇಲಿಯಾ ಪ್ರವಾಸ ಮುಗಿಸಿ ಬುಧವಾರ ಮುಂಜಾನೆ ಲಾಹೋರ್ ವಿಮಾನ ನಿಲ್ದಾಣಕ್ಕೆ ಮರಳಿದ ಪಾಕಿಸ್ತಾನ(Pakistan players) ಹಾಕಿ ತಂಡದ ನಾಯಕ ಅಮ್ಮದ್ ಶಕೀಲ್ ಬಟ್, ರಾಷ್ಟ್ರೀಯ ಹಾಕಿ ಫೆಡರೇಶನ್ (PHF) ವಿರುದ್ಧ ಸ್ಫೋಟಕ ವಾಗ್ದಾಳಿ ನಡೆಸಿದ್ದಾರೆ. ಪಂದ್ಯ ಆಡಲು ಹೋಗುವ ಮುನ್ನ ಆಟಗಾರರು ಅಡುಗೆ ಮನೆ ಸ್ವಚ್ಛಗೊಳಿಸಿ, ಪಾತ್ರೆ ತೊಳೆಯಬೇಕಾದ ಪರಿಸ್ಥಿತಿ ಬಂದರೆ ಗೆಲುವು ಹೇಗೆ ಸಾಧ್ಯ ಎಂದು ಆಕ್ರೋಶ ಹೊರಹಾಕಿದ್ದಾರೆ.

ರಸ್ತೆಯಲ್ಲಿ ಅಲೆದಾಡಿದ ರಾಷ್ಟ್ರೀಯ ಆಟಗಾರರು..!

ಆಸ್ಟ್ರೇಲಿಯಾ ಪ್ರವಾಸದ ಉದ್ದಕ್ಕೂ ಪಾಕ್ ಆಟಗಾರರು ಅನುಭವಿಸಿದ ಚಿತ್ರಹಿಂಸೆಗಳು ಒಂದೆರಡಲ್ಲ. ಸಿಡ್ನಿ ವಿಮಾನ ನಿಲ್ದಾಣಕ್ಕೆ ತಲುಪಿದ ಆಟಗಾರರು ಮುಂದಿನ ಪ್ರಯಾಣಕ್ಕಾಗಿ ಸುಮಾರು 13-14 ಗಂಟೆಗಳ ಕಾಲ ಅಲ್ಲೇ ಕಾಯಬೇಕಾಯಿತು. ನಂತರ ಕ್ಯಾನ್‌ಬೆರಾ ತಲುಪಿದಾಗ ಹೋಟೆಲ್ ಬಿಲ್ ಪಾವತಿಸದ ಕಾರಣ ಬುಕ್ಕಿಂಗ್ ರದ್ದಾಗಿತ್ತು. ಇದರ ಪರಿಣಾಮವಾಗಿ, ರಾಷ್ಟ್ರೀಯ ತಂಡದ ಆಟಗಾರರು ತಮ್ಮ ಲಗೇಜ್‌ಗಳೊಂದಿಗೆ ಗಂಟೆಗಟ್ಟಲೆ ರಸ್ತೆಯಲ್ಲೇ ಅಲೆದಾಡಬೇಕಾಯಿತು.

ಪಾತ್ರೆ ತೊಳೆಯುವ ಕೆಲಸ ಮತ್ತು ಅತಂತ್ರ ವಾಸ

ವಾಸ: ಹೋಟೆಲ್ ಇಲ್ಲದ ಕಾರಣ ಆಟಗಾರರಿಗೆ 13 ದಿನಗಳ ಪ್ರವಾಸಕ್ಕೆ ಕೇವಲ 10 ದಿನಗಳ ಮಟ್ಟಿಗೆ Airbnb ವ್ಯವಸ್ಥೆ ಮಾಡಲಾಗಿತ್ತು.
ಕನಿಷ್ಠ ಸೌಲಭ್ಯ: ಅಲ್ಲಿ ಆಟಗಾರರೇ ಸ್ವತಃ ಅಡುಗೆ ಮಾಡಿಕೊಳ್ಳುವುದು, ಶೌಚಾಲಯ ಸ್ವಚ್ಛಗೊಳಿಸುವುದು ಮತ್ತು ಪಾತ್ರೆ ತೊಳೆಯುವ ಕೆಲಸಗಳನ್ನು ಮಾಡಬೇಕಾಯಿತು.
ಮಾನಸಿಕ ಕಿರಿಕಿರಿ: ಉಳಿದ ಮೂರು ದಿನಗಳ ಕಾಲ ಆಟಗಾರರನ್ನು ಅತ್ಯಂತ ಅಗ್ಗದ ಮತ್ತು ಕಳಪೆ ಗುಣಮಟ್ಟದ ವಸತಿಗೃಹಗಳಿಗೆ ಸ್ಥಳಾಂತರಿಸಲಾಗಿತ್ತು. ಆಟಗಾರರು ಮಾನಸಿಕವಾಗಿ ಕುಸಿದಿದ್ದರು, ಇಂತಹ ಸ್ಥಿತಿಯಲ್ಲಿ ಗೆಲುವನ್ನು ನಿರೀಕ್ಷಿಸಲು ಸಾಧ್ಯವೇ? ಎಂದು ನಾಯಕ ಪ್ರಶ್ನಿಸಿದ್ದಾರೆ.

ಹಣ ಬಿಡುಗಡೆಯಾದರೂ ತಲುಪಿಲ್ಲ..!

ಕುತೂಹಲಕಾರಿ ವಿಷಯವೆಂದರೆ, ಪಾಕಿಸ್ತಾನ ಕ್ರೀಡಾ ಮಂಡಳಿ (PSB) ಆಟಗಾರರ ಹೋಟೆಲ್ ವೆಚ್ಚಕ್ಕಾಗಿ ಸುಮಾರು 1 ಕೋಟಿ ರೂಪಾಯಿ (10 ಮಿಲಿಯನ್ ರೂ.) ಹಣವನ್ನು ಮೊದಲೇ ಬಿಡುಗಡೆ ಮಾಡಿತ್ತು. ಆದರೆ ಈ ಹಣ ಎಲ್ಲಿಗೆ ಹೋಯಿತು ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಸಮಗ್ರ ತನಿಖೆಗೆ ಆದೇಶಿಸಿದ್ದಾರೆ.
ಈ ಹೈಡ್ರಾಮಾದ ನಡುವೆ ಪಾಕಿಸ್ತಾನ ತಂಡವು ಆಸ್ಟ್ರೇಲಿಯಾ ಮತ್ತು ಜರ್ಮನಿ ವಿರುದ್ಧದ ಎಲ್ಲಾ ಪಂದ್ಯಗಳಲ್ಲಿ ಸೋಲನ್ನಪ್ಪಿ ಮುಖಭಂಗ ಅನುಭವಿಸಿದೆ. ನಮಗೆ ವಿದೇಶಿ ತರಬೇತುದಾರ ಮತ್ತು ದಕ್ಷ ಮ್ಯಾನೇಜ್‌ಮೆಂಟ್ ಅಗತ್ಯವಿದೆ. ಪ್ರಸ್ತುತ ಇರುವ ಆಡಳಿತ ಮಂಡಳಿಯೊಂದಿಗೆ ನಾವು ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಅಮ್ಮದ್ ಶಕೀಲ್ ಬಟ್ ಹೇಳಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net