ದಿವಾಳಿಯತ್ತ ಪಾಕ್​: 11 ವರ್ಷಗಳಲ್ಲೇ ಭೀಕರ ಬಡತನಕ್ಕೆ ತತ್ತರಿಸಿದ ನೆರೆರಾಷ್ಟ್ರ! 7 ಕೋಟಿ ಜನರಿಗೆ ಸಿಗುತ್ತಿಲ್ಲ ಒಂದು ಹೊತ್ತಿನ ಗಂಜಿ..! Poverty In Pakistan

ದಿವಾಳಿಯತ್ತ ಪಾಕ್​: 11 ವರ್ಷಗಳಲ್ಲೇ ಭೀಕರ ಬಡತನಕ್ಕೆ ತತ್ತರಿಸಿದ ನೆರೆರಾಷ್ಟ್ರ! 7 ಕೋಟಿ ಜನರಿಗೆ ಸಿಗುತ್ತಿಲ್ಲ ಒಂದು ಹೊತ್ತಿನ ಗಂಜಿ
ದಿವಾಳಿಯತ್ತ ಪಾಕ್​: 11 ವರ್ಷಗಳಲ್ಲೇ ಭೀಕರ ಬಡತನಕ್ಕೆ ತತ್ತರಿಸಿದ ನೆರೆರಾಷ್ಟ್ರ! 7 ಕೋಟಿ ಜನರಿಗೆ ಸಿಗುತ್ತಿಲ್ಲ ಒಂದು ಹೊತ್ತಿನ ಗಂಜಿ
Published on
ಇಸ್ಲಾಮಾಬಾದ್: ನೆರೆರಾಷ್ಟ್ರ ಪಾಕಿಸ್ತಾನದ(Poverty In Pakistan) ಆರ್ಥಿಕ ಪರಿಸ್ಥಿತಿ ಅಧೋಗತಿಗೆ ತಲುಪಿದ್ದು, ದೇಶದ ಬಡತನದ ಪ್ರಮಾಣವು ಕಳೆದ 11 ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಪಾಕ್​ ಯೋಜನಾ ಸಚಿವ ಅಹ್ಸಾನ್ ಇಕ್ಬಾಲ್ ಬಿಡುಗಡೆ ಮಾಡಿದ ಅಧಿಕೃತ ಸಮೀಕ್ಷೆಯ ಪ್ರಕಾರ, ದೇಶದ ಒಟ್ಟು ಬಡತನದ ಪ್ರಮಾಣವು ಶೇ. 29ಕ್ಕೆ ತಲುಪಿದ್ದು, ಸುಮಾರು 7 ಕೋಟಿ ಜನ ತೀವ್ರ ಬಡತನದ ರೇಖೆಗಿಂತ ಕೆಳಗೆ ಜೀವನ ಸಾಗಿಸುತ್ತಿದ್ದಾರೆ.

ಬಡತನ ಮತ್ತು ಅಸಮಾನತೆಯ ಭೀಕರ ಅಂಕಿಅಂಶ

ಶೆಹಬಾಜ್ ಷರೀಫ್ ಸರ್ಕಾರದ ಮೊದಲ ವರ್ಷದಲ್ಲೇ ಬಡತನದ ಪ್ರಮಾಣವು ಶೇ. 21.9ರಿಂದ ಶೇ. 28.9ಕ್ಕೆ ಜಿಗಿದಿದೆ. ಇದು 2014ರ ನಂತರದ ಗರಿಷ್ಠ ಮಟ್ಟವಾಗಿದೆ. ಕೇವಲ ಬಡತನ ಮಾತ್ರವಲ್ಲದೆ, ದೇಶದಲ್ಲಿನ ಆದಾಯದ ಅಸಮಾನತೆಯು ಕಳೆದ 27 ವರ್ಷಗಳಲ್ಲೇ ಅತ್ಯಂತ ಕೆಟ್ಟ ಸ್ಥಿತಿಯಲ್ಲಿದೆ. ಬಡವರು ಮತ್ತು ಶ್ರೀಮಂತರ ನಡುವಿನ ಅಂತರವು 1998ರ ನಂತರ ಕೇಳಿ ಕಂಡರಿಯದ ಮಟ್ಟಕ್ಕೆ ಏರಿಕೆಯಾಗಿದೆ.

ನಿರುದ್ಯೋಗ ಮತ್ತು ಕುಸಿದ ಆದಾಯ

ಪಾಕಿಸ್ತಾನವು ಸದ್ಯ ಕಳೆದ 21 ವರ್ಷಗಳಲ್ಲಿ ಕಂಡುಬಾರದಂತಹ ತೀವ್ರ ನಿರುದ್ಯೋಗ ದರವನ್ನು (ಶೇ. 7.1) ಎದುರಿಸುತ್ತಿದೆ. ಜನರ ಮಾಸಿಕ ಆದಾಯವು ಶೇ. 12ರಷ್ಟು ಕುಸಿದಿದ್ದು, ಕೇವಲ 31,127 ರೂಪಾಯಿಗೆ ತಲುಪಿದೆ. ಹಣದುಬ್ಬರವು ಗಗನಕ್ಕೇರುತ್ತಿರುವ ಕಾರಣ, ಜನರ ಆದಾಯಕ್ಕಿಂತ ಖರ್ಚುಗಳೇ ಹೆಚ್ಚಾಗುತ್ತಿವೆ. ಇದರಿಂದಾಗಿ ಲಕ್ಷಾಂತರ ಕುಟುಂಬಗಳು ಅಗತ್ಯ ವಸ್ತುಗಳಿಗೂ ಪರದಾಡುವಂತಾಗಿದೆ.

ಪ್ರಾಂತೀಯ ಮಟ್ಟದಲ್ಲಿ ಹದಗೆಟ್ಟ ಸ್ಥಿತಿ

ಗ್ರಾಮೀಣ ಭಾಗ: ಬಡತನವು ಶೇ. 28.2ರಿಂದ ಶೇ. 36.2ಕ್ಕೆ ಏರಿಕೆಯಾಗಿದೆ.
ಬಲೂಚಿಸ್ತಾನ್: ಇಲ್ಲಿ ಬಡತನದ ಪ್ರಮಾಣ ಅತ್ಯಂತ ಹೆಚ್ಚಾಗಿದ್ದು, ಶೇ. 47ಕ್ಕೆ ತಲುಪಿದೆ.
ಸಿಂಧ್ ಮತ್ತು ಪಂಜಾಬ್: ಸಿಂಧ್‌ನಲ್ಲಿ ಶೇ. 32.6 ಹಾಗೂ ಪಂಜಾಬ್‌ನಲ್ಲಿ ಶೇ. 23.3ಕ್ಕೆ ಬಡತನ ಏರಿಕೆಯಾಗಿದೆ.
ಖೈಬರ್ ಪಖ್ತುನ್ಖ್ವಾ ಮತ್ತು ಬಲೂಚಿಸ್ತಾನದಲ್ಲಿನ ಭದ್ರತಾ ಸವಾಲುಗಳು ಮಾರುಕಟ್ಟೆ ಮತ್ತು ಅಗತ್ಯ ಸೇವೆಗಳ ಪ್ರವೇಶವನ್ನು ನಿರ್ಬಂಧಿಸಿ ಜೀವನೋಪಾಯವನ್ನು ಇನ್ನಷ್ಟು ಕಸಿದುಕೊಂಡಿದೆ.

IMF ಮತ್ತು ಸರ್ಕಾರದ ಅಸಹಾಯಕತೆ

ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯ (IMF) ಷರತ್ತುಗಳಿಗೆ ಬದ್ಧವಾಗಿ ಸರ್ಕಾರವು ಸಬ್ಸಿಡಿಗಳನ್ನು ಹಿಂಪಡೆದಿದ್ದು ಮತ್ತು ರೂಪಾಯಿ ಮೌಲ್ಯ ಕುಸಿತವು ಹಣದುಬ್ಬರಕ್ಕೆ ಕಾರಣವಾಗಿದೆ ಎಂದು ಸಚಿವ ಅಹ್ಸಾನ್ ಇಕ್ಬಾಲ್ ಒಪ್ಪಿಕೊಂಡಿದ್ದಾರೆ. ಬೆನಜೀರ್ ಆದಾಯ ಬೆಂಬಲ ಕಾರ್ಯಕ್ರಮದಡಿ ನೀಡುವ ನಗದು ಹಣವು ಶಾಶ್ವತ ಪರಿಹಾರವಲ್ಲ, ದೇಶಕ್ಕೆ ಈಗ ಆರ್ಥಿಕ ಪ್ರಗತಿ ಮತ್ತು ಸಂಪತ್ತಿನ ಸೃಷ್ಟಿಯ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
ಈ ಪರಿಸ್ಥಿತಿಯನ್ನು ಸುಧಾರಿಸಲು ಕನಿಷ್ಠ ಮೂರು ವರ್ಷಗಳ ಕಾಲಾವಕಾಶ ಬೇಕು ಎಂದು ಸರ್ಕಾರ ಹೇಳುತ್ತಿದ್ದು, ಅಲ್ಲಿಯವರೆಗೆ ಸಾಮಾನ್ಯ ಜನರ ಸ್ಥಿತಿ ಮಾತ್ರ ಶೋಚನೀಯವಾಗಿಯೇ ಇರಲಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net