Pakistan Airstrikes; ಮಸೀದಿ, ಮನೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ: ಅಫ್ಘಾನಿಸ್ತಾನದಲ್ಲಿ 35 ಮಂದಿ ಸಾವು!

Pakistan airstrikes
Pakistan airstrikes
Published on
ಇಸ್ಲಾಮಾಬಾದ್: ಅಫ್ಘಾನಿಸ್ತಾನ ಗಡಿ ಪ್ರದೇಶದಲ್ಲಿ ಪಾಕಿಸ್ತಾನ ನಡೆಸಿದ 'ಡಬಲ್ ಟ್ಯಾಪ್' ದಾಳಿಯಲ್ಲಿ(Pakistan airstrikes) ಕನಿಷ್ಠ 35 ಮಂದಿ ಮೃತಪಟ್ಟಿದ್ದಾರೆ. ಪಾಕಿಸ್ತಾನವು ಮೃತಪಟ್ಟವರು ಭಯೋತ್ಪಾದಕರು ಎಂದು ಹೇಳಿಕೊಂಡಿದ್ದರೆ, ಅಫ್ಘಾನಿಸ್ತಾನ ಮಾತ್ರ ಮಹಿಳೆಯರು, ಮಕ್ಕಳು ಸೇರಿ ಹಲವು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದೆ. ಈ ಬೆಳವಣಿಗೆ ಎರಡು ದೇಶಗಳ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಏನಿದು 'ಡಬಲ್ ಟ್ಯಾಪ್' ದಾಳಿ?

'ಡಬಲ್ ಟ್ಯಾಪ್' ಎಂಬುದು ಸೇನಾ ಕಾರ್ಯಾಚರಣೆಯಲ್ಲಿ ಬಳಸುವ ತಂತ್ರವಾಗಿದೆ. ಮೊದಲು ಒಂದು ಸ್ಥಳದ ಮೇಲೆ ದಾಳಿ ನಡೆಸಿ, ಕೆಲವೇ ಕ್ಷಣಗಳ ಬಳಿಕ ಅದೇ ಸ್ಥಳದ ಮೇಲೆ ಮತ್ತೊಮ್ಮೆ ದಾಳಿ ನಡೆಸುವುದನ್ನು 'ಡಬಲ್ ಟ್ಯಾಪ್' ಎಂದು ಕರೆಯಲಾಗುತ್ತದೆ.
ಮೊದಲ ದಾಳಿಯ ಬಳಿಕ ರಕ್ಷಣಾ ಸಿಬ್ಬಂದಿ, ವೈದ್ಯಕೀಯ ಸಿಬ್ಬಂದಿ ಹಾಗೂ ಸ್ಥಳೀಯರು ನೆರವಿಗೆ ಬರುವ ಸಮಯದಲ್ಲೇ ಎರಡನೇ ದಾಳಿ ನಡೆಸಲಾಗುತ್ತದೆ. ಈ ಕಾರಣದಿಂದ ಈ ತಂತ್ರದ ಬಗ್ಗೆ ಹಲವು ದೇಶಗಳು ಹಾಗೂ ಮಾನವ ಹಕ್ಕು ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸುತ್ತಿವೆ.

ಮೂರು ಜಿಲ್ಲೆಗಳ ಮೇಲೆ ವೈಮಾನಿಕ ದಾಳಿ

ಲಭ್ಯ ಮಾಹಿತಿ ಪ್ರಕಾರ, ಭಾರತೀಯ ಕಾಲಮಾನ ರಾತ್ರಿ 12.30ರ ಸುಮಾರಿಗೆ ಪಾಕಿಸ್ತಾನ ವಾಯುಪಡೆಯ ಯುದ್ಧ ವಿಮಾನಗಳು ಅಫ್ಘಾನಿಸ್ತಾನದ ಮೂರು ಜಿಲ್ಲೆಗಳ ಮೇಲೆ ದಾಳಿ ನಡೆಸಿವೆ. ಪಕ್ತಿಕಾ ಪ್ರಾಂತ್ಯದ ಗ್ಯಾನ್, ಪಕ್ತಿಯಾ ಪ್ರಾಂತ್ಯದ ಚಮ್ಕಾನಿ ಹಾಗೂ ಕುನಾರ್ ಪ್ರಾಂತ್ಯದ ಮರವಾರಾ ಜಿಲ್ಲೆಗಳಲ್ಲಿ ಮನೆಗಳು ಮತ್ತು ಮಸೀದಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ.

ಪಾಕಿಸ್ತಾನ-ಅಫ್ಘಾನಿಸ್ತಾನದ ಪರಸ್ಪರ ಆರೋಪ

ಈ ಕಾರ್ಯಾಚರಣೆಯಲ್ಲಿ ಭಯೋತ್ಪಾದಕರು ಹತರಾಗಿದ್ದಾರೆ ಎಂದು ಪಾಕಿಸ್ತಾನ ಹೇಳಿದೆ. ಆದರೆ, ಅಫ್ಘಾನಿಸ್ತಾನ ಸರ್ಕಾರ ಈ ಆರೋಪವನ್ನು ತಳ್ಳಿಹಾಕಿದ್ದು, ದಾಳಿಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಹಲವಾರು ನಾಗರಿಕರು ಮೃತಪಟ್ಟಿದ್ದಾರೆ ಹಾಗೂ ಗಾಯಗೊಂಡಿದ್ದಾರೆ ಎಂದು ತಿಳಿಸಿದೆ.
ತಮ್ಮ ದೇಶದ ನೆಲದಲ್ಲಿ ಭಯೋತ್ಪಾದಕರಿಗೆ ಆಶ್ರಯ ನೀಡಲಾಗಿದೆ ಎಂಬ ಪಾಕಿಸ್ತಾನದ ಆರೋಪವನ್ನೂ ಅಫ್ಘಾನಿಸ್ತಾನ ಮತ್ತೊಮ್ಮೆ ನಿರಾಕರಿಸಿದೆ. ಇತ್ತೀಚಿನ ಈ ದಾಳಿ ಎರಡೂ ದೇಶಗಳ ನಡುವಿನ ಗಡಿ ಉದ್ವಿಗ್ನತೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಪರಿಸ್ಥಿತಿಯ ಮೇಲೆ ಜಾಗತಿಕ ಸಮುದಾಯದ ಗಮನ ನೆಟ್ಟಿದೆ,(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net