Pakistan Airstrikes Afghanistan: ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿ ಉದ್ವಿಗ್ನತೆ ಮತ್ತೆ ಹೆಚ್ಚಾಗಿದೆ. ಅಫ್ಘಾನಿಸ್ತಾನದ ಪೂರ್ವ ಭಾಗದಲ್ಲಿರುವ ಉಗ್ರರ ಅಡಗುತಾಣಗಳ ಮೇಲೆ ಪಾಕಿಸ್ತಾನ ಯುದ್ಧವಿಮಾನಗಳು ದಾಳಿ ನಡೆಸಿವೆ.
ಇನ್ನು, ಈ ದಾಳಿಯಲ್ಲಿ 28 ಶಂಕಿತ ಉಗ್ರರು ಹತರಾಗಿದ್ದಾರೆ ಎಂದು ಪಾಕ್ ಅಧಿಕಾರಿಗಳು ಹೇಳಿದ್ದಾರೆ. ಆದರೆ ಕಾಬೂಲ್ ಪ್ರಕಾರ, ದಾಳಿಯಲ್ಲಿ 3 ನಾಗರಿಕರು ಮೃತಪಟ್ಟಿದ್ದು, 4 ಮಂದಿ ಗಾಯಗೊಂಡಿದ್ದಾರೆ. ಎರಡೂ ಹೇಳಿಕೆಗಳನ್ನು ಸ್ವತಂತ್ರವಾಗಿ ದೃಢಪಡಿಸಲಾಗಿಲ್ಲ.
ಪಾಕಿಸ್ತಾನದ ಭದ್ರತಾ ಪಡೆಗಳ ಮೇಲೆ ನಡೆದ ದಾಳಿಗಳ ಬೆನ್ನಲ್ಲೇ ವಾಯುದಾಳಿ ನಡೆದಿದೆ. ಹಂಗು ಜಿಲ್ಲೆಯಲ್ಲಿ 6 ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದರು. ಇದಕ್ಕೂ ಮುನ್ನ ಕೊಹಾಟ್‌ನಲ್ಲಿ ನಡೆದ ದಾಳಿಯಲ್ಲಿ 21 ಮಂದಿ ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಈ ದಾಳಿಗಳ ಹಿಂದೆ ಪಾಕಿಸ್ತಾನ ತಾಲಿಬಾನ್ ಅಥವಾ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (TTP) ಮತ್ತು ಅದರ ಸಹಚರ ಸಂಘಟನೆಗಳ ಕೈವಾಡವಿದೆ ಎಂದು ಪಾಕಿಸ್ತಾನ ಆರೋಪಿಸಿದೆ. ಅಫ್ಘಾನಿಸ್ತಾನದಲ್ಲಿರುವ ಉಗ್ರರ ಅಡಗುತಾಣಗಳು ಮತ್ತು ತರಬೇತಿ ಜಾಲಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಬೂಲ್‌ಗೆ ಪಾಕಿಸ್ತಾನ ಒತ್ತಾಯಿಸಿದೆ.
ಅಫ್ಘಾನ್ ತಾಲಿಬಾನ್ ಸರ್ಕಾರದ ವಕ್ತಾರ ಜಬಿಹುಲ್ಲಾ ಮುಜಾಹಿದ್ ಪಾಕಿಸ್ತಾನದ ವಾಯುದಾಳಿಯನ್ನು ಖಂಡಿಸಿ, ಇದಕ್ಕೆ ಪ್ರತಿಕ್ರಿಯೆ ನೀಡುವುದಾಗಿ ಹೇಳಿದ್ದಾರೆ. ಈ ದಾಳಿಗಳು ಎರಡು ದೇಶಗಳ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದ್ದು, ಗಡಿ ಭಾಗದಲ್ಲಿ ಮತ್ತೆ ಸಂಘರ್ಷ ಉಲ್ಬಣಿಸುವ ಆತಂಕವೂ ಎದುರಾಗಿದೆ.
ಕಳೆದ ಫೆಬ್ರವರಿಯಿಂದ ಪಾಕ್-ಅಫ್ಘಾನ್ ನಡುವೆ ಗಡಿ ಸಂಘರ್ಷ ಮತ್ತು ವಾಯುದಾಳಿ ಮುಂದುವರಿದಿವೆ. ಉದ್ವಿಗ್ನತೆ ಕಡಿಮೆ ಮಾಡಲು ಚೀನಾ ಸೇರಿದಂತೆ ಹಲವು ದೇಶಗಳು ಮಾತುಕತೆ ನಡೆಸುತ್ತಿವೆ. ಆದರೆ ಹೊಸ ದಾಳಿಯಿಂದ ಈ ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆಯಾಗಿದೆ.(ಏಜೆನ್ಸೀಸ್)