ಇನ್ನೊಂದು ಆಘಾತಕಾರಿ ವಿಷಯವೆಂದರೆ, ಈ ಭೀಕರ ಸಾಮೂಹಿಕ ಹತ್ಯೆ ನಡೆಯುವ ಕೇವಲ ಒಂದು ದಿನ ಮುಂಚಿತವಾಗಿ, ಅಂದರೆ ಮೇ 26 ರಂದು ಫಾರೋಸ್ ಸಂಸತ್ತು ಪ್ರಾಣಿ ಕಲ್ಯಾಣ ಕಾಯ್ದೆಯನ್ನು ತಿದ್ದುಪಡಿ ಮಾಡಿ, ಬೇಟೆಯಾಡಲಾಗುವ ಡಾಲ್ಫಿನ್‌ಗಳಿಗೆ ಕಾನೂನಿನಿಂದ ಸಿಗುತ್ತಿದ್ದ ರಕ್ಷಣೆಯನ್ನು ಹಿಂಪಡೆದಿದೆ ಎಂದು 'ಓಷನ್ ಕೇರ್' ಸಂಸ್ಥೆ ತಿಳಿಸಿದೆ. ಈ ಕುರಿತು ಆಕ್ರೋಶ ಹೊರಹಾಕಿರುವ ಓಷನ್ ಕೇರ್ ಸಂಸ್ಥೆಯ ವಿಜ್ಞಾನ ವಿಭಾಗದ ನಿರ್ದೇಶಕ ಮಾರ್ಕ್ ಸಿಮಂಡ್ಸ್, ಒಂದು ಕ್ರೂರ ಚಟುವಟಿಕೆಯನ್ನು ಕಾನೂನಿನ ರಕ್ಷಣೆಯಿಂದ ಹೊರಗಿಟ್ಟ ತಕ್ಷಣ ಅದು ಮಾನವೀಯ ಎನಿಸಿಕೊಳ್ಳುವುದಿಲ್ಲ, ದ್ವೀಪದ ರಾಜಧಾನಿಯಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಬೇಟೆ ನಡೆಯುವ ಕೆಲವೇ ಗಂಟೆಗಳ ಮುನ್ನ ಸಂಸತ್ತು ಈ ನಿರ್ಧಾರ ಕೈಗೊಂಡಿರುವುದು ಸಂಪ್ರದಾಯದ ರಕ್ಷಣೆಯಲ್ಲ, ಬದಲಿಗೆ ಆ ಮೂಕ ಪ್ರಾಣಿಗಳಿಗೆ ಕಾನೂನಿನ ರಕ್ಷಣೆ ಸಿಗದಂತೆ ಮಾಡಿದ ಉದ್ದೇಶಪೂರ್ವಕ ಸಂಚು ಎಂದು ಕಿಡಿಕಾರಿದ್ದಾರೆ, (ಏಜೆನ್ಸೀಸ್).