Osman Hadi Death | ಬಾಂಗ್ಲಾ ಇರುವವರೆಗೂ ಉಸ್ಮಾನ್ ಅಜರಾಮರ...ಹಾದಿ ಆದರ್ಶಗಳನ್ನು ಮುಂದಿನ ಪೀಳಿಗೆಗಳಿಗೆ ತಲುಪಿಸುತ್ತೇವೆ ಎಂದ ಯೂನಸ್

 Osman Hadi Death | ಉಸ್ಮಾನ್ ಹಾದಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಮಾತನಾಡಿದ ಯೂನಸ್
Osman Hadi Death | ಉಸ್ಮಾನ್ ಹಾದಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಮಾತನಾಡಿದ ಯೂನಸ್
Published on
Osman Hadi Death: ಇತ್ತೀಚೆಗೆ ಗುಂಡೇಟಿಗೆ ಬಲಿಯಾದ ಬಾಂಗ್ಲಾದೇಶಿ ಕಾರ್ಯಕರ್ತ ಷರೀಫ್ ಉಸ್ಮಾನ್ ಹಾದಿಯ ಆದರ್ಶಗಳನ್ನು ಅನುಸರಿಸುವುದಾಗಿ ಪ್ರತಿಜ್ಞೆ ಮಾಡಿರುವ ಬಾಂಗ್ಲಾದೇಶದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್, ಹಾದಿ ಅವರ ಕನಸನ್ನು ನನಸಾಗಿಸುವ ಮತ್ತು ಅದನ್ನು ಮುಂದಿನ ಪೀಳಿಗೆಗಳಿಗೆ ತಲುಪಿಸುವ ಭರವಸೆ ನೀಡಿದರು.
ಶನಿವಾರ ಉಸ್ಮಾನ್ ಹಾದಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ, ಗೌರವ ಸಲ್ಲಿಸಿ ಮಾತನಾಡಿದ ಯೂನಸ್​, ಅವರು ಸದಾಕಾಲ ಜನರ ಹೃದಯದಲ್ಲಿ ಸ್ಥಾನ ಪಡೆಯುತ್ತಾರೆ, ಅವರಿಂದ ನಿಂತು ಹೋಗಿರುವ ಆದರ್ಶಗಳನ್ನು ಮುಂದುವರೆಸುತ್ತೇನೆ ಎಂದು ಪ್ರತಿಜ್ಞೆ ಮಾಡಿದರು.
ಬಾಂಗ್ಲಾದೇಶದ ಮತ್ತು ವಲಸೆ ಬಂದಿರುವ ಜನರು ಹಾದಿ ಬಗ್ಗೆ ಕೇಳಲು ತುದಿಗಾಲ ಮೇಲೆ ನಿಂತಿದ್ದಾರೆ, ಪ್ರಿಯ ಉಸ್ಮಾನ್ ಹಾದಿ, ನಾವು ಇಲ್ಲಿಗೆ ವಿದಾಯ ಹೇಳಲು ಬಂದಿಲ್ಲ. ನೀವು ನಮ್ಮ ಹೃದಯಗಳಲ್ಲಿ ವಾಸಿಸುತ್ತೀರಿ. ಬಾಂಗ್ಲಾದೇಶ ಇರುವವರೆಗೆ, ನೀವು ಈ ರಾಷ್ಟ್ರದ ಅವಿಭಾಜ್ಯ ಅಂಗವಾಗಿ ಉಳಿಯುತ್ತೀರಿ ಎಂದು ಹೇಳಿದರು. ಹಾದಿ ಜನರೊಂದಿಗೆ ಅತ್ಯಂತ ನಮ್ರತೆಯಿಂದ ನಡೆದುಕೊಳ್ಳುತ್ತಿದ್ದರು, ಯಾರಿಗೂ ತೊಂದರೆ ಉಂಟುಮಾಡದೆ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರು, ತಮ್ಮ ವಿಷಯಾಧಾರಿತ ಪ್ರಚಾರಗಳನ್ನು ಸೌಜನ್ಯದಿಂದ ನಡೆಸುವುದು ಹೇಗೆ ಎಂಬುದನ್ನು ಅವರು ನಮಗೆಲ್ಲಾ ತೋರಿಸಿದ್ದಾರೆ, ನಾವು ಅವರ ಈ ಪಾಠವನ್ನು ಸ್ವೀಕರಿಸುತ್ತೇವೆ ಮತ್ತು ಅದನ್ನು ಕಾರ್ಯಗತಗೊಳಿಸಲು ಬಯಸುತ್ತೇವೆ ಎಂದು ಹೇಳಿದರು.
ನಮ್ಮ ನಾಯಕತ್ವ ಯಾರಿಗೂ ತಲೆಬಾಗುವುದಿಲ್ಲ, ಪ್ರಪಂಚದ ಮುಂದೆ ತಲೆ ಎತ್ತಿ ನಿಲ್ಲುತ್ತದೆ ಎನ್ನುವುದನ್ನು ಹಾದಿ ಜನರಿಗೆ ಭರವಸೆ ನೀಡಿದ್ದರು, ಅದನ್ನು ಈಗ ಈಡೇರಿಸಲಾಗುವುದು ಎಂದರು.

24 ಗಂಟೆಗಳ ಡೆಡ್​ಲೈನ್​..

ಇಂಕ್ವಿಲಾಬ್ ಮಂಚಾದ ಉಸ್ಮಾನ್ ಹಾದಿ ಅವರ ಸಹೋದ್ಯೋಗಿ ಅಬ್ದುಲ್ಲಾ ಅಲ್ ಜಾಬರ್, ಹಾದಿಯ ಹತ್ಯೆಗೆ ಕಾರಣರಾದವರನ್ನು ಬಂಧಿಸಲು ಸರ್ಕಾರ ತೆಗೆದುಕೊಂಡಿರುವ ಕ್ರಮಗಳನ್ನು ಮುಂದಿನ 24 ಗಂಟೆಗಳಲ್ಲಿ ಬಹಿರಂಗಪಡಿಸಬೇಕೆಂದು ಯೂನಸ್ ಸರ್ಕಾರಕ್ಕೆ ಗಡುವು ನೀಡಿದ್ದಾರೆ.

ಹಾದಿ ಹತ್ಯೆ ಮತ್ತು ಪ್ರತಿಭಟನೆಗಳು

ಡಿಸೆಂಬರ್ 12 ರಂದು ಢಾಕಾದ ಬಿಜೋಯ್‌ನಗರ ಪ್ರದೇಶದಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅಪರಿಚಿತ ಬಂದೂಕುಧಾರಿಗಳು 32 ವರ್ಷದ ಹಾದಿ ತಲೆಗೆ ಗುಂಡು ಹಾರಿಸಿದ್ದರು. ನಂತರ ಅವರನ್ನು ಸಿಂಗಾಪುರ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಕೊನೆಯುಸಿರೆಳೆದಿದ್ದಾರೆ. ಹಾದಿ ನಿಧನದ ಬಳಿಕ ಬಾಂಗ್ಲಾದೇಶದ ಹಲವಾರು ಭಾಗಗಳಲ್ಲಿ ಹಿಂಸಾಚಾರ ಮತ್ತು ವಿಧ್ವಂಸಕ ಕೃತ್ಯಗಳು ನಡೆದಿದ್ದು, ಗುರುವಾರ ಚಟ್ಟೋಗ್ರಾಮ್‌ನಲ್ಲಿ ಭಾರತೀಯ ಸಹಾಯಕ ಹೈಕಮಿಷನರ್ ನಿವಾಸದ ಮೇಲೆ ಕಲ್ಲು ಎಸೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಾದಿಯನ್ನು ಶನಿವಾರ ಢಾಕಾ ವಿಶ್ವವಿದ್ಯಾಲಯದ ಮಸೀದಿಯ ಬಳಿ, ರಾಷ್ಟ್ರೀಯ ಕವಿ ಕಾಜಿ ನಜ್ರುಲ್ ಇಸ್ಲಾಂ ಸಮಾಧಿಯ ಪಕ್ಕದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net