ಎಐ ಕಲಾವಿದರು, ಕಥೆ ಆಸ್ಕರ್ ಗೆಲ್ಲಲು ಸಾಧ್ಯವಿಲ್ಲ! ನಿಯಮಗಳಲ್ಲಿ ಮಹತ್ವದ ಬದಲಾವಣೆ ತಂದ ಅಕಾಡೆಮಿ | Oscars

ಆಸ್ಕರ್​ ಪ್ರಶಸ್ತಿ
ಆಸ್ಕರ್​ ಪ್ರಶಸ್ತಿ
Published on

ಪ್ರಮುಖ ಮುಖ್ಯಾಂಶಗಳು

  • ಆಸ್ಕರ್​ ನಿಯಮಗಳಲ್ಲಿ ಹೊಸ ಬದಲಾವಣೆಗಳು
  • ಭಾರತದಿಂದ ನಾಮನಿರ್ದೇಶನಗೊಳ್ಳುವ ಚಿತ್ರಗಳಿಗೆ ಅನುಕೂಲ
  • ಒಂದಕ್ಕಿಂತ ಹೆಚ್ಚು ವಿಭಾಗಗಳಲ್ಲಿ ಸ್ಪರ್ಧಿಸಲು ಅವಕಾಶ
  • ಎಐ ನಟರು ಮತ್ತು ಕಥೆ ಆಸ್ಕರ್​ ಗೆಲ್ಲಲು ಅನರ್ಹ
ನ್ಯೂಯಾರ್ಕ್​: ಭಾರತೀಯ ಚಿತ್ರೋದ್ಯಮ ಸೇರಿ ವಿಶ್ವ ಚಿತ್ರರಂಗದಲ್ಲಿ ನೀಡಲಾಗುವ ಅತ್ಯುನ್ನತ ಪ್ರಶಸ್ತಿ ಎಂದರೆ ಅದು ಆಸ್ಕರ್. ಈ ಪ್ರತಿಷ್ಠಿತ ಪ್ರಶಸ್ತಿಯ 99ನೇ ಆವೃತ್ತಿಗೆ ಈಗಾಗಲೇ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಇದರ ನಡುವೆಯೇ ನಿಯಮಗಳಲ್ಲಿ ಕೆಲವು ಮಹತ್ವದ ಬದಲಾವಣೆಗಳು ಆಗಿರುವುದು ಮುನ್ನೆಲೆಗೆ ಬಂದಿವೆ. 
2027ರಲ್ಲಿ ಪ್ರಶಸ್ತಿ ಸಮಾರಂಭ ನಡೆಯಲಿದ್ದು, ಅದಕ್ಕೂ ಮೊದಲೇ ‘ಆಸ್ಕರ್’ ಅಕಾಡೆಮಿಯು ಮಹತ್ವದ ಅಂಶವನ್ನು ಪ್ರಕಟಿಸಿದೆ. ಪ್ರಶಸ್ತಿ ನಾಮನಿರ್ದೇಶನಗೊಳ್ಳುವ ನಿಯಮಗಳಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಿ ಘೋಷಿಸಿದೆ. ಶುಕ್ರವಾರ (ಮೇ 1) ಆಕಾಡೆಮಿ ಗವರ್ನರ್ ಹೊಸ ನಿಯಮಗಳನ್ನು ಪ್ರಕಟಿಸಿದ್ದಾರೆ. 
ಬಹುಮುಖ್ಯವಾಗಿ ನಟನೆ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ನಿಯಮಗಳನ್ನು ಬದಲಾವಣೆ ಮಾಡಿರುವುದರಿಂದ ಭಾರತದಿಂದ ನಾಮನಿರ್ದೇಶನಗೊಳ್ಳುವ ಚಿತ್ರಗಳಿಗೂ ಇದು ಅನುಕೂಲವಾಗಲಿದೆ ಎಂಬ ಮಾತುಗಳು ಕೇಳಿಬಂದಿವೆ. ಮುಂದಿನ ವರ್ಷ ಲಾಸ್‌ ಏಂಜಲೀಸ್‌ನಲ್ಲಿ ನಡೆಯಲಿರುವ 99ನೇ ಆಸ್ಕರ್​ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ, ಇದೇ ಆಗಸ್ಟ್ 13ರಿಂದ ವಿವಿಧ ವಿಭಾಗಗಳಲ್ಲಿ ನಾಮ ನಿರ್ದೇಶನ ಪ್ರಕ್ರಿಯೆ ಆರಂಭವಾಗಲಿದೆ. 

ಹೊಸ ನಿಯಮಗಳು ಏನು? 

ನಟನೆ ವಿಭಾಗದಲ್ಲಿ ನಾಮನಿರ್ದೇಶನಗೊಂಡ ನಟರು ಐದು ಮತಗಳನ್ನು ಪಡೆದರೆ, ಅದೇ ನಟನು ವೈಯಕ್ತಿಕ ವಿಭಾಗದಲ್ಲಿ ಒಂದಕ್ಕಿಂತ ಹೆಚ್ಚು ವಿಭಾಗಗಳಲ್ಲಿ ಪ್ರಶಸ್ತಿಗೆ ಸ್ಪರ್ಧಿಸಬಹುದು. ಈ ಹಿಂದೆ ಹೆಚ್ಚು ಮತ ಪಡೆದ ವಿಭಾಗದಲ್ಲಿ ಮಾತ್ರ ಪ್ರಶಸ್ತಿಗೆ ಅರ್ಹರಾಗಿರುತ್ತಿದ್ದರು. 
ಅಂತಾರಾಷ್ಟ್ರೀಯ ಫೀಚರ್ ಫಿಲಂ ವಿಭಾಗದಲ್ಲಿ ಈ ಮೊದಲು ಒಂದು ದೇಶದಿಂದ ಒಂದೇ ಸಿನಿಮಾವನ್ನು ಕಳುಹಿಸಿಕೊಡಲಾಗುತ್ತಿತ್ತು. ಆದರೆ, ಇದೀಗ ಬದಲಾವಣೆಯ ನಿಯಮದಿಂದ ಎರಡು ಚಿತ್ರಗಳನ್ನು ಕಳುಹಿಸುವ ಅವಕಾಶವಿದೆ. ದೇಶದಿಂದ ಅಧಿಕೃತವಾಗಿ ನಾಮನಿರ್ದೇಶನ ಮಾಡಿದ ಸಿನಿಮಾ ಆಸ್ಕರ್ ಪ್ರಶಸ್ತಿಗೆ ಸ್ಪರ್ಧಿಸುತ್ತದೆ. ಹಾಗೆಯೇ, ಬರ್ಲಿನ್, ಭೂಸನ್, ಕಾನ್ಸ್, ಟೊರೊಂಟೋ ಮತ್ತು ವೆನಿಸ್‌ನಂತಹ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪಾಲ್ಗೊಂಡು ಪ್ರಶಸ್ತಿಗೆ ಅರ್ಹವಾದ ಸಿನಿಮಾಗಳನ್ನು ಕೂಡ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನ ಮಾಡಬಹುದಾಗಿದೆ. 
ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ನಾಮನಿರ್ದೇಶನಗೊಂಡ ಚಿತ್ರವು ಪ್ರಶಸ್ತಿಗೆ ಅರ್ಹವಾದರೆ, ಆ ಪ್ರಶಸ್ತಿ ಫಲಕದ ಮೇಲೆ ಸಿನಿಮಾ, ನಿರ್ದೇಶಕರು, ದೇಶದ ಹೆಸರನ್ನು ಪ್ರಕಟಿಸಲಾಗುತ್ತದೆ. ಏಕೆಂದರೆ, ಈ ಹಿಂದೆ ನಿರ್ದೇಶಕರ ಹೆಸರು ಇರುತ್ತಿರಲಿಲ್ಲ ಎಂಬುದು ಇಲ್ಲಿ ಗಮನಾರ್ಹ.   
ಚಿತ್ರಕಥೆ ಬರವಣಿಗೆಯ ಲೇಖಕರು ಮಾನವರೇ ಆಗಿರಬೇಕು. ಕೃತಕ ಬುದ್ಧಿಮತ್ತೆ ಟೆಕ್ನಾಲಜಿಯ ಸಹಾಯವನ್ನು ಬಳಸಿಕೊಂಡು ಪಡೆದ ಚಿತ್ರಕಥೆಗಳನ್ನು ಅಕಾಡೆಮಿ ಸ್ವೀಕರಿಸುವುದಿಲ್ಲ ಎಂದು ಒತ್ತಿ ಹೇಳಿದೆ. 
ಅಕಾಡೆಮಿ ಸದಸ್ಯರಾಗಿರುವ ಮೇಕಪ್ ಕಲಾವಿದರು, ಕೇಶವಿನ್ಯಾಸ ತಜ್ಞರು ಪ್ರಾಥಮಿಕ ಸುತ್ತಿನಲ್ಲಿ ಮತ ಚಲಾಯಿಸಲು ಅರ್ಹರಾಗಬೇಕೆಂದರೆ, ಆಕಾಡೆಮಿ ಎರಡು ಸಭೆಗಳಲ್ಲಿ ಒಂದರಲ್ಲಿ ಕಡ್ಡಾಯವಾಗಿ ಹಾಜರಿರಬೇಕು ಎಂದು ಸ್ಪಷ್ಟಪಡಿಸಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net