ಅಮೆರಿಕದ ತೈಲ ಬಿಕ್ಕಟ್ಟು: ವಿಶ್ವ ಇತಿಹಾಸದಲ್ಲೇ ವೆನೆಜುವೆಲಾ ಜೊತೆ ಅತಿದೊಡ್ಡ ತೈಲ ಒಪ್ಪಂದ ಘೋಷಿಸಿದ ಅಧ್ಯಕ್ಷ ಟ್ರಂಪ್ | President Trump

ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
Published on
ವಾಷಿಂಗ್ಟನ್: ವೆನೆಜುವೆಲಾದ 65 ಶತಕೋಟಿ ಬ್ಯಾರೆಲ್ ತೈಲ ನಿಕ್ಷೇಪಗಳ ನಿಯಂತ್ರಣವನ್ನು ತೆಗೆದುಕೊಳ್ಳಲು ಅಮೆರಿಕ ಮುಂದಾಗಿದ್ದು, ಆ ದೇಶದೊಂದಿಗೆ ವಿಶ್ವದ ಇತಿಹಾಸದಲ್ಲಿ ಅತಿದೊಡ್ಡ ತೈಲ ಒಪ್ಪಂದ ಮಾಡಿಕೊಂಡಿರುವುದಾಗಿ ಶುಕ್ರವಾರ(ಆ. 28) ಅಧ್ಯಕ್ಷ ಡೊನಾಲ್ಡ್ ಟ್ರಂಪ್(President Trump) ಘೋಷಣೆ ಮಾಡಿದ್ದಾರೆ.
ಈ ಕುರಿತು ತಮ್ಮ ಟ್ರೂತ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ಅವರು, ವಿಶ್ವ ಇತಿಹಾಸದಲ್ಲಿಯೇ ಅತಿ ದೊಡ್ಡ ತೈಲ ಒಪ್ಪಂದದ ಕುರಿತು ಅಮೆರಿಕ ಸಂಯುಕ್ತ ಸಂಸ್ಥಾನವು ವೆನೆಜುವೆಲಾ ದೇಶದೊಂದಿಗೆ ಒಪ್ಪಂದ ಮಾಡಿಕೊಂಡಿದೆ! ಎಂದು ಬರೆದುಕೊಂಡಿದ್ದಾರೆ.
ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ, ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಮತ್ತು ವೆನೆಜುವೆಲಾದ ಮಧ್ಯಂತರ ಅಧ್ಯಕ್ಷ ಡೆಲ್ಸಿ ರೊಡ್ರಿಗಸ್ ಅವರು ಮಾತುಕತೆ ನಡೆಸಿ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. 
ಟ್ರಂಪ್ ನಿರ್ದೇಶನದ ಮೇರೆಗೆ ಅಮೆರಿಕದ ಸೇನೆಯು ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಸೆರೆಹಿಡಿದು ಫೆಡರಲ್ ಮಾದಕವಸ್ತು ಭಯೋತ್ಪಾದನೆ ಮತ್ತು ಮಾದಕವಸ್ತು ಕಳ್ಳಸಾಗಣೆ ಆರೋಪಗಳನ್ನು ಎದುರಿಸಲು ಅಮೆರಿಕಕ್ಕೆ ಕರೆತರುವ ಕಾರ್ಯಾಚರಣೆಯನ್ನು ನಡೆಸಿದ ಸುಮಾರು ಒಂಬತ್ತು ತಿಂಗಳ ನಂತರ ಈ ಒಪ್ಪಂದದ ಘೋಷಣೆ ಬಂದಿದೆ.
ಇರಾನ್‌ ಜೊತೆಗಿನ ಯುದ್ಧವು ಯಾವುದೇ ಅಂತ್ಯದ ಸುಳಿವೇ ಇಲ್ಲದೆ ಶುಕ್ರವಾರಕ್ಕೆ ಆರು ತಿಂಗಳ ಅವಧಿಯನ್ನು ಪೂರೈಸಿರುವ ಹಿನ್ನೆಲೆಯಲ್ಲಿ, ಏರುತ್ತಿರುವ ಇಂಧನ ಬೆಲೆಗಳ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಟ್ರಂಪ್ ಆಡಳಿತದ ಮೇಲೆ ಒತ್ತಡ ಹೆಚ್ಚುತ್ತಿದೆ ಎನ್ನಲಾಗಿದೆ. 
ಇನ್ನೂ ಒಪ್ಪಂದ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅಮೆರಿಕ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಮಾರ್ಕ್​ ರುಬಿಯೋ, ಈ ಒಪ್ಪಂದವು ಅಮೆರಿಕ ಮತ್ತು ವೆನೆಜುವೆಲಾ ಎರಡೂ ದೇಶಗಳ ಜನರಿಗೆ ಒಂದು ದೊಡ್ಡ ಗೆಲುವಾಗಿದೆ ಎಂದು ಹೇಳಿದ್ದಾರೆ.
ನಮ್ಮ ಪ್ರದೇಶದಲ್ಲಿ ಸ್ಥಿರವಾದ ತೈಲ ನಿಕ್ಷೇಪಗಳು ಹಾಗೂ ಕಡಿಮೆ ವೆಚ್ಚದ ತೈಲವನ್ನು ಖಾತ್ರಿಪಡಿಸಿಕೊಳ್ಳುವುದು ಮತ್ತು ದೇಶದೊಳಗೆ ಇಂಧನ ಬೆಲೆಗಳನ್ನು ಕಡಿಮೆ ಮಾಡುವ ಮೂಲಕ, ಅಧ್ಯಕ್ಷ ಟ್ರಂಪ್ ಅವರ ದಿಟ್ಟ ವಿದೇಶಾಂಗ ನೀತಿಯು 'ಅಮೆರಿಕ ಮೊದಲು' (America First) ಎಂಬ ತತ್ವದಡಿ ಹೇಗೆ ಯಶಸ್ಸನ್ನು ತರುತ್ತಿದೆ ಎಂಬುದನ್ನು ಇದು ತೋರಿಸಿಕೊಡುತ್ತದೆ.
ವೆನೆಜುವೆಲಾದ ಜನರಿಗೆ, ಈ ಒಪ್ಪಂದವು ಸುಮಾರು 100 ಶತಕೋಟಿ ಡಾಲರ್‌ನಷ್ಟು ಖಾಸಗಿ ಹೂಡಿಕೆಯನ್ನು ತರಲಿದೆ, ಉತ್ತಮ ವೇತನ ನೀಡುವ ಸಾವಿರಾರು ಉದ್ಯೋಗಗಳಿಗೆ ಬೆಂಬಲ ಒದಗಿಸಲಿದೆ ಮತ್ತು ವೆನೆಜುವೆಲಾದ ಆರ್ಥಿಕತೆಯ ಪುನರ್ನಿರ್ಮಾಣಕ್ಕೆ ಚಾಲನೆ ನೀಡಲಿದೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net