ಮಹಾಸಾಗರ ಸಂಚಲನ! ಚೀನಾ ಪ್ರಭಾವ ತಗ್ಗಿಸಲು ಭಾರತ-ಜಪಾನ್ ರಣತಂತ್ರ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಭಾರತ ಮತ್ತು ಜಪಾನ್ ನಡುವಿನ ರಾಜತಾಂತ್ರಿಕ ಸಂಬಂಧಗಳು ಈಗ ಹೊಸದೊಂದು ಉನ್ನತ ಹಂತವನ್ನು ತಲುಪಿವೆ. ಜಪಾನ್ ಪ್ರಧಾನಿ ಸನಾಯೆ ತಕೈಚಿ ಅವರ ಭಾರತ ಭೇಟಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ 16ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯು ಜಾಗತಿಕ ಭೌಗೋಳಿಕ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಈ ಸಂದರ್ಭದಲ್ಲಿ ಹಲವು ಕ್ಷೇತ್ರಗಳಿಗೆ ಸಂಬಂಧಿಸಿ, ಮಹತ್ವದ ಒಪ್ಪಂದಗಳು ಏರ್ಪಟ್ಟಿದ್ದು, ಚೀನಾದ ಪ್ರಭಾವ ತಗ್ಗಿಸಲು ಸೂಕ್ತ ರಣತಂತ್ರ ರೂಪಿಸಲಾಗಿದೆ. ಇಂಡೋ-ಪೆಸಿಫಿಕ್ ವಲಯದಲ್ಲಿ ಶಾಂತಿ ಮತ್ತು ಸ್ಥಿರತೆಗಾಗಿ ಒಟ್ಟಾಗಿ ಕೆಲಸ ಮಾಡಲು ಸಂಕಲ್ಪ ತೊಟ್ಟಿದ್ದು, ಈ ಕುರಿತಾದ ವಿವರ ಇಲ್ಲಿದೆ.

ಭಾರತ ಮತ್ತು ಜಪಾನ್ ಮೈತ್ರಿಯು ಕೇವಲ ಮಿಲಿಟರಿ ಶಕ್ತಿಯ ಪ್ರದರ್ಶನವಲ್ಲ; ಇದು ಪ್ರಜಾಪ್ರಭುತ್ವದ ಮೌಲ್ಯಗಳು, ಮುಕ್ತ ವ್ಯಾಪಾರ ಮತ್ತು ಸಣ್ಣ ರಾಷ್ಟ್ರಗಳ ಸ್ವಾಯತ್ತತೆಯನ್ನು ಗೌರವಿಸುವ ಪರ್ಯಾಯ ಜಾಗತಿಕ ಶಕ್ತಿ ಎಂದೇ ವ್ಯಾಖ್ಯಾನಿಸಲ್ಪಟ್ಟಿದೆ. ಚೀನಾದ ಬೆಲ್ಟ್ ಆಂಡ್ ರೋಡ್ (ಬಿಎಆರ್) ಯೋಜನೆಗೆ ಇದು ಪ್ರಬಲ ಪ್ರಜಾಸತ್ತಾತ್ಮಕ ಪ್ರತಿರೋಧ ಒಡ್ಡಲಿದೆ. ಭಾರತದ ‘ಮಹಾಸಾಗರ’ ಮತ್ತು ಜಪಾನ್​ನ ‘ಎಫ್​ಒಐಪಿ’ ವಿಲೀನವು ಇಂಡೋ-ಪೆಸಿಫಿಕ್ ವಲಯದಲ್ಲಿ ಶಕ್ತಿ ಸಮತೋಲನವನ್ನು ಕಾಪಾಡಲು ಮತ್ತು ಚೀನಾದ ವಿಸ್ತರಣಾವಾದಕ್ಕೆ ತಡೆಹಾಕಲು ದಿಕ್ಸೂಚಿಯಾಗಬಲ್ಲದು. ಭಾರತವು ಹಿಂದೂ ಮಹಾಸಾಗರ ವಲಯದಲ್ಲಿ ಸುರಕ್ಷತೆ, ಸಾರ್ವಭೌಮತ್ವ ಮತ್ತು ಆರ್ಥಿಕ ಪ್ರಗತಿಯನ್ನು ಕಾಯ್ದುಕೊಳ್ಳಲು ರೂಪಿಸಿರುವ ಬೃಹತ್ ಕಡಲ ಕಾರ್ಯತಂತ್ರವೇ ‘ಮಹಾಸಾಗರ’. ಜಪಾನ್ ಮತ್ತು ಭಾರತ ಒಟ್ಟಾಗಿ ಚೀನಾದ ಮೇಲಿನ ಆರ್ಥಿಕ ಅವಲಂಬನೆಯನ್ನು ಕಡಿಮೆ ಮಾಡಲು ನಿರ್ಧರಿಸಿವೆ. ಸೆಮಿಕಂಡಕ್ಟರ್​ಗಳು, ಅಪರೂಪದ ಖನಿಜಗಳು ಮತ್ತು ಔಷಧೀಯ ಕಚ್ಚಾ ವಸ್ತುಗಳ ಪೂರೈಕೆಯಲ್ಲಿ ಚೀನಾದ ಏಕಸ್ವಾಮ್ಯವನ್ನು ಮುರಿಯಲು ಉಭಯ ದೇಶಗಳು ಹೊಸ ಪೂರೈಕೆ ಸರಪಳಿಯನ್ನು ಸೃಷ್ಟಿಸುತ್ತಿವೆ. ಭಾರತ ಮತ್ತು ಜಪಾನ್ ನೌಕಾಪಡೆಗಳು ದಕ್ಷಿಣ ಚೀನಾ ಸಮುದ್ರದ ಆಸುಪಾಸಿನ ಜಲಸಂಧಿಗಳಲ್ಲಿ (ಉದಾಹರಣೆಗೆ ಮಲಕ್ಕಾ ಜಲಸಂಧಿ) ಜಂಟಿ ತಾಲೀಮು ಮತ್ತು ಉಪಗ್ರಹ ಆಧಾರಿತ ಕಣ್ಗಾವಲನ್ನು ಹೆಚ್ಚಿಸಲಿವೆ. ಇದು ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ನೌಕಾಪಡೆಗಳ ಮುಕ್ತ ಚಲನವಲನದ ಮೇಲೆ ತೀವ್ರ ನಿಗಾ ಇಡಲು ನೆರವಾಗುತ್ತದೆ.

ಮಹಾಸಾಗರ ಯೋಜನೆಯ ಮಹತ್ವವೇನು? 

MAHASAGAR (Mutual and Holistic Advancement for Security and Growth Across Regions) ಹಿಂದೂ ಮಹಾಸಾಗರ ವಲಯದಲ್ಲಿರುವ ಸಣ್ಣ ಮತ್ತು ಮಧ್ಯಮ ರಾಷ್ಟ್ರಗಳು ತಮ್ಮ ಸಾರ್ವಭೌಮತ್ವವನ್ನು ಮತ್ತು ಕಡಲ ಗಡಿಗಳನ್ನು ಸ್ವಂತ ಪ್ರಯತ್ನ ಹಾಗೂ ಜಂಟಿ ಸಹಕಾರದ ಮೂಲಕ ರಕ್ಷಿಸಿಕೊಳ್ಳಲು ಈ ಯೋಜನೆ ಪ್ರೇರೇಪಿಸುತ್ತದೆ. ಜಪಾನ್ ಪ್ರಧಾನಿ ಸನಾಯೆ ತಕೈಚಿ ಪ್ರಕಾರ, ಮೋದಿ ಅವರ ‘ಮಹಾಸಾಗರ’ ನೀತಿಯು ಜಪಾನ್​ನ ‘ಫ್ರೀ ಆಂಡ್ ಒಪನ್ ಇಂಡೋ-ಪೆಸಿಫಿಕ್’ ನಿಯಮಾವಳಿಗಳಿಗೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆ. ಎರಡೂ ದೇಶಗಳು ಸಮುದ್ರವನ್ನು ಯಾವುದೇ ಒಂದು ದೇಶದ ಹಿಡಿತಕ್ಕೆ ಬಿಡದೆ, ಜಾಗತಿಕ ಹಂಚಿಕೆಯ ಜಾಗವಾಗಿ ಉಳಿಸಲು ನಿರ್ಧರಿಸಿವೆ. ಕಡಲ ಭದ್ರತೆ ಮತ್ತು ರಕ್ಷಣಾ ತಂತ್ರಜ್ಞಾನ: ಭಾರತೀಯ ಯುದ್ಧನೌಕೆಗಳಿಗಾಗಿ ಜಂಟಿಯಾಗಿ ರೇಡಿಯೋ ಆಂಟೆನಾ ಅಭಿವೃದ್ಧಿಪಡಿಸುವ ಯುನಿಕಾರ್ನ್ ಯೋಜನೆ, ಉಪಗ್ರಹ ಆಧಾರಿತ ಕಡಲ ವಲಯದ ಜಾಗೃತಿ ಮತ್ತು ನೌಕಾಪಡೆಗಳ ನಿರ್ವಹಣೆ ಸಹಕಾರವನ್ನು ಇದು ಒಳಗೊಂಡಿದೆ.

ಚೀನಾದ ಪ್ರಾಬಲ್ಯ ಹೇಗೆ ಕಡಿಮೆಗೊಳ್ಳಲಿದೆ?

ದಕ್ಷಿಣ ಚೀನಾ ಸಮುದ್ರ ಮತ್ತು ಇಂಡೋ-ಪೆಸಿಫಿಕ್ ವಲಯದಲ್ಲಿ ಚೀನಾದ ಏಕಪಕ್ಷೀಯ ಆಕ್ರಮಣಕಾರಿ ಧೋರಣೆ ಹಾಗೂ ಸೇನಾ ಪ್ರಾಬಲ್ಯಕ್ಕೆ ಕಡಿವಾಣ ಹಾಕಲು ಭಾರತ-ಜಪಾನ್ ಜಂಟಿ ಮೈತ್ರಿ ನಿರ್ಣಾಯಕವಾಗಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾವು ಅಂತಾರಾಷ್ಟ್ರೀಯ ಕಾನೂನುಗಳನ್ನು ಗಾಳಿಗೆ ತೂರಿ ಕೃತಕ ದ್ವೀಪಗಳನ್ನು ನಿರ್ವಿುಸುತ್ತಿದೆ ಮತ್ತು ನೆರೆಹೊರೆಯ ದೇಶಗಳ (ಫಿಲಿಪೀನ್ಸ್, ವಿಯೆಟ್ನಾಂ ಇತ್ಯಾದಿ) ಗಡಿಗಳನ್ನು ಅತಿಕ್ರಮಿಸುತ್ತಿದೆ. ಭಾರತದ ‘ಮಹಾಸಾಗರ’ ಮತ್ತು ಜಪಾನ್​ನ ಎಫ್​ಒಐಪಿ ಒಟ್ಟಾಗಿ ಜಾಗತಿಕ ಕಡಲ ಕಾನೂನುಗಳನ್ನು ಎತ್ತಿಹಿಡಿಯುತ್ತವೆ. ಇದು ಚೀನಾದ ಏಕಪಕ್ಷೀಯ ನಿರ್ಧಾರಗಳಿಗೆ ಜಾಗತಿಕ ಮಟ್ಟದಲ್ಲಿ ತಡೆ ಒಡ್ಡುತ್ತದೆ.

ಹಿಂದೂ ಮಹಾಸಾಗರದಲ್ಲಿ ಭಾರತವನ್ನು ಸುತ್ತುವರಿಯಲು ಚೀನಾವು ‘ಸ್ಟ್ರಿಂಗ್ ಆಫ್ ಪರ್ಲ್ಸ್’ ತಂತ್ರದಡಿ ವಿವಿಧ ದೇಶಗಳಲ್ಲಿ ಬಂದರುಗಳನ್ನು ನಿಯಂತ್ರಿಸುತ್ತಿದೆ. ಈಗ ಭಾರತ ಮತ್ತು ಜಪಾನ್ ಜಂಟಿಯಾಗಿ ಆಫ್ರಿಕಾದಿಂದ ಹಿಡಿದು ಪೆಸಿಫಿಕ್ ದ್ವೀಪಗಳವರೆಗಿನ ‘ಗ್ಲೋಬಲ್ ಸೌತ್’ ದೇಶಗಳಿಗೆ ಆರ್ಥಿಕ ಮತ್ತು ಭದ್ರತಾ ಪರ್ಯಾಯಗಳನ್ನು ಒದಗಿಸುತ್ತಿವೆ. ಇದರಿಂದಾಗಿ ಚೀನಾದ ಸಾಲದ ಸುಳಿಗೆ ಸಿಲುಕುವ ದೇಶಗಳ ಸಂಖ್ಯೆ ಕಡಿಮೆಯಾಗಲಿದ್ದು, ಚೀನಾದ ಪ್ರಭಾವ ಕುಗ್ಗಲಿದೆ.

ಮಾತ್ರವಲ್ಲ, ಭಾರತ ಮತ್ತು ಜಪಾನ್ ನೌಕಾಪಡೆಗಳು ದಕ್ಷಿಣ ಚೀನಾ ಸಮುದ್ರದ ಆಸುಪಾಸಿನ ಜಲಸಂಧಿಗಳಲ್ಲಿ (ಉದಾಹರಣೆಗೆ ಮಲಕ್ಕಾ ಜಲಸಂಧಿ) ಜಂಟಿ ತಾಲೀಮು ಮತ್ತು ಉಪಗ್ರಹ ಆಧಾರಿತ ಕಣ್ಗಾವಲನ್ನು ಹೆಚ್ಚಿಸಲಿವೆ. ಇದು ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ನೌಕಾಪಡೆಗಳ ಮುಕ್ತ ಚಲನವಲನದ ಮೇಲೆ ತೀವ್ರ ನಿಗಾ ಇಡಲು ನೆರವಾಗುತ್ತದೆ.

ಉಪಗ್ರಹ ಆಧಾರಿತ ಕಣ್ಗಾವಲು ವ್ಯವಸ್ಥೆ

ಸಮುದ್ರದಲ್ಲಿ ನಡೆಯುವ ಕಡಲ್ಗಳ್ಳತನ, ಅಕ್ರಮ ಮೀನುಗಾರಿಕೆ, ಮಾದಕ ದ್ರವ್ಯ ಸಾಗಣೆ ತಡೆಗೆ ಮತ್ತು ವಿಪತ್ತುಗಳ ಸಮಯದಲ್ಲಿ ತಕ್ಷಣ ಸ್ಪಂದಿಸಲು ನೆರವಾಗುವಂತೆ ಉನ್ನತ ತಂತ್ರಜ್ಞಾನ ಮತ್ತು ಉಪಗ್ರಹ ಆಧಾರಿತ ಕಣ್ಗಾವಲು ವ್ಯವಸ್ಥೆಯನ್ನು ಹಂಚಿಕೊಳ್ಳುವುದು ‘ಮಹಾ ಸಾಗರ’ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಹಿಂದೂ ಮಹಾಸಾಗರದ ಪ್ರಮುಖ ಕಾರ್ಯತಂತ್ರದ ಜಾಗ ದಲ್ಲಿರುವ ಮಾಲ್ಡೀವ್ಸ್, ಶ್ರೀಲಂಕಾ, ಮಾರಿಷಸ್, ಸೀಶೆಲ್ಸ್ ದೇಶಗಳಿಗೆ ಭಾರತವು ಹೈಡ್ರೋಗ್ರಾಫಿಕ್ ಸಮೀಕ್ಷೆ, ನೌಕಾ ಸಿಬ್ಬಂದಿಗೆ ತರಬೇತಿ ಮತ್ತು ಕರಾವಳಿ ರಾಡಾರ್ ವ್ಯವಸ್ಥೆಗಳನ್ನು ಒದಗಿಸುತ್ತಿದೆ. ಚೀನಾದ ಕಣ್ಗಾವಲು ನೌಕೆಗಳ ಮೇಲೆ ನಿಗಾ ಇಡಲು ಈ ದೇಶಗಳು ಭಾರತದೊಂದಿಗೆ ರಕ್ಷಣಾ ಮಾಹಿತಿಯನ್ನು ಹಂಚಿಕೊಳ್ಳುತ್ತಿವೆ. ಅಮೆರಿಕ ಮತ್ತು ಆಸ್ಟ್ರೇಲಿಯಾ ಇಂಡೋ-ಪೆಸಿಫಿಕ್ ವಲಯದಲ್ಲಿ ಭಾರತದ ನಾಯಕತ್ವವನ್ನು ಒಪ್ಪಿಕೊಂಡಿವೆ. ‘ಮಹಾಸಾಗರ’ ಯೋಜನೆಯಡಿಯಲ್ಲಿ ಮಾಹಿತಿಯ ವಿನಿಮಯಕ್ಕಾಗಿ ಭಾರತದ ‘ಇನ್ಪಮೇಷನ್ ಫ್ಯೂಷನ್ ಸೆಂಟರ್- ಇಂಡಿಯನ್ ಓಷನ್ ರೀಜನ್’ನೊಂದಿಗೆ ಈ ದೇಶಗಳು ನಿಕಟವಾಗಿ ಕೆಲಸ ಮಾಡುತ್ತಿವೆ.

2027ಕ್ಕೆ ರಾಜತಾಂತ್ರಿಕ ಬಾಂಧವ್ಯಕ್ಕೆ 75 ವರ್ಷಗಳ ಸಂಭ್ರಮ

ಜಪಾನ್ ಪ್ರಧಾನಿ ಸನಾಯೆ ತಕೈಚಿ ಅವರು ಶುಕ್ರವಾರ ತಮ್ಮ ಅಧಿಕೃತ ಭಾರತ ಪ್ರವಾಸವನ್ನು ಪೂರ್ಣಗೊಳಿಸಿದ್ದು, ಎರಡೂ ದೇಶಗಳ ಪರಸ್ಪರ ಬೆಳವಣಿಗೆ ಮತ್ತು ಸಮೃದ್ಧಿಗೆ ಪೂರಕವಾಗಿರುವ ಪಾಲುದಾರಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಉಭಯ ದೇಶಗಳು ಬದ್ಧತೆಯನ್ನು ಪುನರುಚ್ಚರಿಸಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಭಾರತ-ಜಪಾನ್ ಪಾಲುದಾರಿಕೆಯು ಇಂಡೋ-ಪೆಸಿಫಿಕ್ ವಲಯ ಮತ್ತು ಅದರ ಆಚೆಗೂ ಶಾಂತಿ, ಸಮೃದ್ಧಿ ಮತ್ತು ಸ್ಥಿರತೆಯನ್ನು ಉತ್ತೇಜಿಸುವ ಪ್ರಮುಖ ಕೊಂಡಿಯಾಗಿದೆ ಎಂದು ತಿಳಿಸಿರುವ ವಿದೇಶಾಂಗ ಸಚಿವಾಲಯವು, ನವದೆಹಲಿಯಲ್ಲಿ ನಡೆದ 16ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯು ಅತ್ಯಂತ ಯಶಸ್ವಿಯಾಗಿದೆ ಎಂದು ಪ್ರತಿಪಾದಿಸಿದೆ. ಮುಂದಿನ ವರ್ಷ ಉಭಯ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧಗಳು ಸ್ಥಾಪನೆಯಾಗಿ 75 ವರ್ಷಗಳು ತುಂಬಲಿರುವ ಹಿನ್ನೆಲೆಯಲ್ಲಿ, 2027ರ ವರ್ಷವನ್ನು India-Japan Year of Shared Horizons ಆಗಿ ಆಚರಿಸಲಾಗುವುದು ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಚೀನಾ ಎಚ್ಚರಿಕೆ

ಭಾರತ ಮತ್ತು ಜಪಾನ್ ದೇಶಗಳ ನಡುವಿನ ದ್ವಿಪಕ್ಷೀಯ ಸಹಕಾರವು ಯಾವುದೇ ಮೂರನೇ ದೇಶವನ್ನು ಗುರಿಯಾಗಿಸಬಾರದು ಅಥವಾ ಮತ್ತೊಂದು ರಾಷ್ಟ್ರದ ಹಿತಾಸಕ್ತಿಗಳಿಗೆ ಧಕ್ಕೆ ತರಬಾರದು ಎಂದು ಚೀನಾ ಶುಕ್ರವಾರ ಹೇಳಿದೆ. ನವದೆಹಲಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಸನಾಯೆ ಟಕೈಚಿ ಅವರ ನಡುವಿನ ಮಾತುಕತೆಯ ಬೆನ್ನಲ್ಲೇ ಚೀನಾ ಈ ಪ್ರತಿಕ್ರಿಯೆ ನೀಡಿದೆ. ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಗುವೊ ಜಿಯಾಕುನ್ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ವಿವಿಧ ದೇಶಗಳ ನಡುವಿನ ಸಹಕಾರವು ಪ್ರಾದೇಶಿಕ ದೇಶಗಳ ನಡುವೆ ತಿಳಿವಳಿಕೆ ಮತ್ತು ನಂಬಿಕೆಯನ್ನು ಹೆಚ್ಚಿಸಲು ಹಾಗೂ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಲು ಪೂರಕವಾಗಿರಬೇಕು, ಎಂದರು.

ಜಪಾನ್ ಪ್ರಧಾನಿ ಸನಾಯೆ ಟಕೈಚಿ ಅವರ ಭಾರತ ಭೇಟಿಯನ್ನು ಬೀಜಿಂಗ್ ಸೂಕ್ಷ್ಮವಾಗಿ ಗಮನಿಸಿದೆ. ‘ತೈವಾನ್ ಮೇಲೆ ಚೀನಾ ದಾಳಿ ಮಾಡಿದರೆ ಜಪಾನ್ ಪ್ರತಿಕ್ರಿಯಿಸಬಹುದು’ ಎಂದು ಟಕೈಚಿ 2025ರ ನವೆಂಬರ್​ನಲ್ಲಿ ಹೇಳಿಕೆ ನೀಡಿದ ನಂತರ ಜಪಾನ್ ಮತ್ತು ಚೀನಾ ನಡುವಿನ ಸಂಬಂಧಗಳು ತೀವ್ರವಾಗಿ ಹದಗೆಟ್ಟಿವೆ. ಜಾಗತಿಕವಾಗಿ ಅಪರೂಪದ ಖನಿಜಗಳ ಗಣಿಗಾರಿಕೆಯಲ್ಲಿ ಚೀನಾ ಶೇ.70ರಷ್ಟು ಮತ್ತು ಅದರ ಸಂಸ್ಕರಣೆಯಲ್ಲಿ ಶೇ.90ರಷ್ಟು ಪಾಲನ್ನು ಹೊಂದಿದ್ದು, ಇತ್ತೀಚೆಗೆ ಜಪಾನ್, ಅಮೆರಿಕ ಮತ್ತು ಭಾರತಕ್ಕೆ ಇದರ ರಫ್ತನ್ನು ಕಠಿಣಗೊಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net