Peace Declaration: ಜಾಗತಿಕ ರಾಜತಾಂತ್ರಿಕತೆಯಲ್ಲಿ ಐತಿಹಾಸಿಕ ಕ್ಷಣವೊಂದಕ್ಕೆ ಸಾಕ್ಷಿಯಾದ ಚೀನಾದ ಶೆನ್‌ಜೆನ್ ನಗರದಲ್ಲಿ ಗುರುವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಒಂದು ಗಂಟೆಗೂ ಹೆಚ್ಚು ಕಾಲ ತ್ರಿಪಕ್ಷೀಯ ಶೃಂಗಸಭೆ ನಡೆಸಿದರು.
ಪರಮಾಣು ಶಸ್ತ್ರಾಸ್ತ್ರ ಕಡಿತ, ಉಕ್ರೇನ್ ಯುದ್ಧ, ಇಂಧನ ಭದ್ರತೆ ಮತ್ತು ಜಾಗತಿಕ ಸ್ಥಿರತೆಯ ಕುರಿತು ಮೂವರು ನಾಯಕರು ಸುದೀರ್ಘ ಚರ್ಚೆ ನಡೆಸಿದರು. ಜಗತ್ತಿನ ಮೂರು ಪ್ರಬಲ ರಾಷ್ಟ್ರಗಳ ನಾಯಕರು ಒಂದೇ ವೇದಿಕೆಯಲ್ಲಿ ಮುಖಾಮುಖಿಯಾಗಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಗಮನ ಸೆಳೆದಿದೆ.
ಶೃಂಗಸಭೆಯ ಬಳಿಕ ಅಮೆರಿಕ, ಚೀನಾ ಮತ್ತು ರಷ್ಯಾ ದೇಶಗಳು ಜಂಟಿ ಶಾಂತಿ ಘೋಷಣೆಯನ್ನು ಬಿಡುಗಡೆ ಮಾಡಿವೆ. ಪ್ರಸ್ತುತ ಅಂತಾರಾಷ್ಟ್ರೀಯ ಪರಿಸ್ಥಿತಿಯ ಕುರಿತು ಮೂವರು ನಾಯಕರು ಚರ್ಚೆ ನಡೆಸಿದ್ದು, ಕಾರ್ಯತಂತ್ರದ ಸ್ಥಿರತೆ ಮತ್ತು ಅಂತಾರಾಷ್ಟ್ರೀಯ ಭದ್ರತೆಯನ್ನು ಎತ್ತಿಹಿಡಿಯಲು ಬದ್ಧರಾಗಿದ್ದಾರೆ ಎಂದು ಘೋಷಣೆಯಲ್ಲಿ ತಿಳಿಸಲಾಗಿದೆ. ಅಲ್ಲದೆ, ಸಂಸ್ಕರಿಸಿದ ಪೆಟ್ರೋಲಿಯಂ ಉತ್ಪನ್ನಗಳ ಉತ್ಪಾದನೆ ಮತ್ತು ಪೂರೈಕೆಯನ್ನು ಹೆಚ್ಚಿಸುವ ಯೋಜನೆ, ಇಂಧನದ ಸ್ಥಿರ ಹರಿವಿನ ಮಹತ್ವ ಹಾಗೂ ಪರಮಾಣು ಅಪಾಯಗಳನ್ನು ತಗ್ಗಿಸಲು ಮತ್ತು ಪರಮಾಣು ಪ್ರಸರಣ ತಡೆಯಲು ನಿರಂತರ ಸಂವಾದ ನಡೆಸುವ ಕುರಿತು ಈ ಘೋಷಣೆಯಲ್ಲಿ ಉಲ್ಲೇಖಿಸಲಾಗಿದೆ.
ಈ ಐತಿಹಾಸಿಕ ಸಭೆಯಲ್ಲಿ ಪರಮಾಣು ಶಸ್ತ್ರಾಸ್ತ್ರ ನಿಯಂತ್ರಣ ವಿಷಯವೇ ಪ್ರಮುಖವಾಗಿ ಚರ್ಚೆಯಾಯಿತು. ಉಕ್ರೇನ್ ಮತ್ತು ಇರಾನ್ ಸಂಘರ್ಷಗಳನ್ನು ಬಗೆಹರಿಸಲು ಹಾಗೂ ಶಸ್ತ್ರಾಸ್ತ್ರ ನಿಯಂತ್ರಣಕ್ಕೆ ಹೊಸ ಚೌಕಟ್ಟು ರೂಪಿಸಲು ಈ ಸಭೆಯು ಉತ್ತಮ ವೇದಿಕೆಯಾಗಿದೆ ಎಂದು ಡೊನಾಲ್ಡ್ ಟ್ರಂಪ್ ಬಣ್ಣಿಸಿದರು.
ನಾವು ನಿಜವಾಗಿಯೂ ಇತಿಹಾಸ ನಿರ್ಮಿಸುತ್ತಿದ್ದೇವೆ. ಭೂಮಿಯ ಮೇಲಿನ ಪರಮಾಣು ಶಸ್ತ್ರಾಸ್ತ್ರಗಳ ಸಂಖ್ಯೆಯನ್ನು ಹೇಗೆ ಕಡಿಮೆ ಮಾಡುವುದು ಮತ್ತು ಅವುಗಳ ಬಳಕೆಯ ಅಪಾಯವನ್ನು ತಗ್ಗಿಸುವುದು ಹೇಗೆ ಎಂಬುದರ ಕುರಿತು ಚರ್ಚಿಸಲು ಅಮೆರಿಕ, ರಷ್ಯಾ ಮತ್ತು ಚೀನಾ ವಿಶಿಷ್ಟ ಸ್ಥಾನದಲ್ಲಿವೆ ಎಂದು ಟ್ರಂಪ್ ಹೇಳಿದರು.
ಮತ್ತೊಂದೆಡೆ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಮೂರು ಪರಮಾಣು ಶಕ್ತಿಗಳ ನಡುವಿನ ಸಂವಾದ ಮತ್ತು ಜಾಗತಿಕ ಶಾಂತಿಯ ಅಗತ್ಯವನ್ನು ಒತ್ತಿಹೇಳಿದರು. ಚೀನಾದ ಸರ್ಕಾರಿ ಮಾಧ್ಯಮ ಸಿಸಿಟಿವಿ ವರದಿಯ ಪ್ರಕಾರ, ಪರಮಾಣು ಶಸ್ತ್ರಾಸ್ತ್ರಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಮತ್ತು ನಾಶಪಡಿಸಬೇಕು ಎಂದು ಕರೆ ನೀಡಿದ ಕ್ಸಿ, ಪರಮಾಣು ಅಸ್ತ್ರ ಮುಕ್ತ ಜಗತ್ತನ್ನು ನಿರ್ಮಿಸುವಂತೆ ಸಲಹೆ ನೀಡಿದರು. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಾತನಾಡಿ, ಎರಡನೇ ಮಹಾಯುದ್ಧದ ವಿಜೇತರಾಗಿ ಮೂರು ರಾಷ್ಟ್ರಗಳು ಹಂಚಿಕೊಂಡಿರುವ ಇತಿಹಾಸವನ್ನು ಸ್ಮರಿಸಿದರು. ಅಂತಾರಾಷ್ಟ್ರೀಯ ಶಾಂತಿಯನ್ನು ಕಾಪಾಡುವಲ್ಲಿ ನಮಗೆ ಜಂಟಿ ಜವಾಬ್ದಾರಿಯಿದೆ ಎಂದು ಪುಟಿನ್ ಹೇಳಿದರು.
ಅಮೆರಿಕ ಮತ್ತು ರಷ್ಯಾ ನಡುವಿನ ಕೊನೆಯ ಪರಮಾಣು ಶಸ್ತ್ರಾಸ್ತ್ರ ಒಪ್ಪಂದವಾದ ನ್ಯೂ ಸ್ಟಾರ್ಟ್ ಕಳೆದ ಫೆಬ್ರವರಿಯಲ್ಲಿ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ಜಾಗತಿಕ ಪರಮಾಣು ನಿಯಂತ್ರಣದಲ್ಲಿ ಅನಿಶ್ಚಿತತೆ ಎದುರಾಗಿದೆ. ಚೀನಾವನ್ನೂ ಒಳಗೊಂಡಂತೆ ಹೊಸ, ಸುಧಾರಿತ ಮತ್ತು ಆಧುನೀಕರಿಸಿದ ಒಪ್ಪಂದಕ್ಕೆ ಟ್ರಂಪ್ ಆಸಕ್ತಿ ತೋರಿಸಿದ್ದಾರೆ.
ಆದರೆ, ಅಮೆರಿಕ ಮತ್ತು ರಷ್ಯಾ ಹೊಂದಿರುವ ಅಪಾರ ಪ್ರಮಾಣದ ಪರಮಾಣು ಶಸ್ತ್ರಾಸ್ತ್ರಗಳಿಗೆ ಹೋಲಿಸಿದರೆ ತನ್ನ ಬಳಿ ಇರುವ ಅಸ್ತ್ರಗಳ ಸಂಖ್ಯೆ ತೀರಾ ಕಡಿಮೆಯಿರುವ ಕಾರಣ ಚೀನಾ ಈ ನಿರ್ಬಂಧಗಳಿಗೆ ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತಿದೆ. ಅಮೆರಿಕ ಮತ್ತು ರಷ್ಯಾ ತಲಾ 5,000ಕ್ಕೂ ಹೆಚ್ಚು ಪರಮಾಣು ಸಿಡಿತಲೆಗಳನ್ನು ಹೊಂದಿದ್ದರೆ, ಚೀನಾ ಬಳಿ 600ಕ್ಕೂ ಹೆಚ್ಚು ಸಿಡಿತಲೆಗಳಿವೆ ಎಂದು ಅಂದಾಜಿಸಲಾಗಿದೆ. ಈ ಸವಾಲನ್ನು ಒಪ್ಪಿಕೊಂಡಿರುವ ಟ್ರಂಪ್, ಒಮ್ಮೆ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದ ಮೇಲೆ, ಅವುಗಳನ್ನು ಬಿಟ್ಟುಕೊಡುವುದು ಅಷ್ಟು ಸುಲಭದ ಕೆಲಸವಲ್ಲ ಎಂದು ಮಾರ್ಮಿಕವಾಗಿ ಮಾತನಾಡಿದ್ದಾರೆ(ಏಜೆನ್ಸೀಸ್).