ಕಾಂಡೋಮ್​ಗಳನ್ನೂ ಬಿಡದ ಚೀನಾ... ಯೂರೋಪ್​ನಲ್ಲಿ ಸೀಜ್​ ಆದ 2 ಲಕ್ಷ ಕಾಂಡೋಮ್​ ಹಿಂದಿದೆ ಭಯಾನಕ ಸಂಗತಿ! Condoms

ಕಾಂಡೋಮ್​ಗಳನ್ನೂ ಬಿಡದ ಚೀನಾ... ಯೂರೋಪ್​ನಲ್ಲಿ ಸೀಜ್​ ಆದ 2 ಲಕ್ಷ ಕಾಂಡೋಮ್​ ಹಿಂದಿದೆ ಭಯಾನಕ ಸಂಗತಿ! Condoms
ಕಾಂಡೋಮ್​ಗಳನ್ನೂ ಬಿಡದ ಚೀನಾ... ಯೂರೋಪ್​ನಲ್ಲಿ ಸೀಜ್​ ಆದ 2 ಲಕ್ಷ ಕಾಂಡೋಮ್​ ಹಿಂದಿದೆ ಭಯಾನಕ ಸಂಗತಿ! Condoms
Published on

ಪ್ರಮುಖ ಮುಖ್ಯಾಂಶಗಳು

  • ಬ್ರ್ಯಾಂಡೆಡ್ ಬಟ್ಟೆ ಆಯ್ತು, ಈಗ ಕಾಂಡೋಮ್‌ನಲ್ಲೂ ಚೀನಾ 'ಡುಪ್ಲಿಕೇಟ್' ಕರಾಮತ್ತು
  • ಆಟಿಕೆ ಹೆಸರಲ್ಲಿ ಯುರೋಪ್‌ಗೆ ಸಾಗಿಸ್ತಿದ್ರು ಲಕ್ಷ ಲಕ್ಷ ನಕಲಿ ಕಾಂಡೋಮ್
  • ವಿಶ್ವದ ಫೇಮಸ್ ಬ್ರ್ಯಾಂಡ್ ಹೆಸರಲ್ಲಿ ಚೀನಾದಿಂದ ಬಂತು ಅಪಾಯಕಾರಿ ನಕಲಿ ಕಾಂಡೋಮ್
  • ಲೈಂಗಿಕ ಸೋಂಕು, ಗರ್ಭಧಾರಣೆಯ ಕಂಟಕ ತರಲಿದೆ ಚೀನಾ ನಕಲಿ ಕಾಂಡೋಮ್
Condoms : ಮೊಬೈಲ್ ಫೋನ್‌ಗಳಿಂದ ಹಿಡಿದು ಬ್ರ್ಯಾಂಡೆಡ್ ಬಟ್ಟೆಗಳವರೆಗೆ ಪ್ರತಿಯೊಂದನ್ನೂ ಡುಪ್ಲಿಕೇಟ್​ ಮಾಡುವಲ್ಲಿ ಹೆಸರುವಾಸಿಯಾಗಿರುವ ಚೀನಾ, ಇದೀಗ ಜನರ ಸುರಕ್ಷತೆಗೆ ಅತ್ಯಂತ ಅಗತ್ಯವಾಗಿರುವ ಕಾಂಡೋಮ್​ಗಳನ್ನೂ ಬಿಡದೆ ನಕಲು ಮಾಡಿ ಸಿಕ್ಕಿಬಿದ್ದಿದೆ.
ಯುರೋಪ್‌ನಲ್ಲಿ ಕಟ್ಟುನಿಟ್ಟಾಗಿರುವ ವೈದ್ಯಕೀಯ ಮತ್ತು ಸುರಕ್ಷತಾ ನಿಯಮಾವಳಿಗಳ ಕಣ್ತಪ್ಪಿಸಿ, ಚೀನಾದ ಖದೀಮರು ನಕಲಿ ಕಾಂಡೋಮ್‌ಗಳನ್ನು ಆಟಿಕೆಗಳ ರೂಪದಲ್ಲಿ ಪರಿವರ್ತಿಸಿ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಸಾಗಿಸಿದ್ದರು. ಆದರೆ ಜಾಗರೂಕತೆಯಿಂದ ಕಾರ್ಯಾಚರಣೆ ನಡೆಸಿದ ಯುರೋಪಿಯನ್ ಅಧಿಕಾರಿಗಳು ಬರೋಬ್ಬರಿ 2 ಲಕ್ಷ ನಕಲಿ ಕಾಂಡೋಮ್‌ಗಳ ಬೃಹತ್ ಜಾಲವನ್ನು ಪತ್ತೆಹಚ್ಚಿ, ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಗುಣಮಟ್ಟದ ಯಾವುದೇ ಗ್ಯಾರಂಟಿ ಇಲ್ಲದ ಈ ನಕಲಿ ಉತ್ಪನ್ನಗಳು ಜನರ ಆರೋಗ್ಯಕ್ಕೆ ತೀವ್ರ ಕಂಟಕ ತರುವ ಸಾಧ್ಯತೆಯಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಯುರೋಪಿಯನ್ ಒಕ್ಕೂಟದಲ್ಲಿ (EU) ಕಾಂಡೋಮ್‌ಗಳನ್ನು ವೈದ್ಯಕೀಯ ಸಾಧನಗಳೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಅವು ಮಾರುಕಟ್ಟೆಗೆ ಬರುವ ಮುನ್ನ ಬ್ಯಾಕ್ಟೀರಿಯಾ ಪರೀಕ್ಷೆ, ಸೋರಿಕೆ ಪರೀಕ್ಷೆ, ಸುರಕ್ಷತೆ, ಗಾತ್ರ ಮತ್ತು ಅವಧಿ ಮುಗಿಯುವ ದಿನಾಂಕ ಸೇರಿದಂತೆ ಹಲವು ಕಟ್ಟುನಿಟ್ಟಿನ ಗುಣಮಟ್ಟದ ತಪಾಸಣೆಗಳಿಗೆ ಒಳಪಡುತ್ತವೆ, ಆದರೆ ಚೀನಾದಿಂದ ಬಂದ ಈ ನಕಲಿ ಕಾಂಡೋಮ್‌ಗಳು ಇಂತಹ ಯಾವುದೇ ಸುರಕ್ಷತಾ ಪರೀಕ್ಷೆಗಳಿಲ್ಲದೆ ನೇರವಾಗಿ ಮಾರುಕಟ್ಟೆ ಸೇರಿವೆ.
ಯುರೋಪ್‌ನ ಆ್ಯಂಟಿ-ಫ್ರಾಡ್ ಏಜೆನ್ಸಿಯಾದ ಯುರೋಪಿಯನ್ ಆ್ಯಂಟಿ-ಫ್ರಾಡ್ ಆಫೀಸ್ ( (OLAF) ಈ ಬೃಹತ್ ವಂಚನೆಯನ್ನು ಪತ್ತೆಹಚ್ಚಿದೆ. ತನಿಖೆಯ ಪ್ರಕಾರ, ಚೀನಾದಿಂದ ಯುರೋಪ್‌ಗೆ ಸಾಗಿಸಲಾದ ಒಟ್ಟು 2 ಲಕ್ಷಕ್ಕೂ ಹೆಚ್ಚು ನಕಲಿ ಕಾಂಡೋಮ್‌ಗಳ ಮೌಲ್ಯ ಸುಮಾರು 2 ಲಕ್ಷ ಯೂರೋಗೂ ಅಧಿಕವಾಗಿದೆ. ಕಟ್ಟುನಿಟ್ಟಿನ ಗುಣಮಟ್ಟದ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಇವುಗಳ ಅಧಿಕೃತ ದಾಖಲೆಗಳಲ್ಲಿ "ಆಟಿಕೆಗಳು" (Toys) ಎಂದು ಸುಳ್ಳು ಲೇಬಲ್ ಹಚ್ಚಲಾಗಿತ್ತು.
ಈ ನಕಲಿ ಕಾಂಡೋಮ್‌ಗಳು ಅತ್ಯಂತ ಅಪಾಯಕಾರಿ ಎಂದು ಒಲಾಫ್ ಪ್ರಧಾನ ನಿರ್ದೇಶಕ ಪೆಟ್ರ್ ಕ್ಲೆಮೆಂಟ್ ಎಚ್ಚರಿಸಿದ್ದಾರೆ. ಇವು ಸರಿಯಾದ ಪರೀಕ್ಷೆಗೆ ಒಳಪಡದ ಕಾರಣ ಯಾವುದೇ ಗುಣಮಟ್ಟದ ನಿಯಂತ್ರಣ ಹೊಂದಿರುವುದಿಲ್ಲ. ಇವುಗಳನ್ನು ಬಳಸುವುದರಿಂದ ಲೈಂಗಿಕವಾಗಿ ಹರಡುವ ಸೋಂಕುಗಳು, ಅನಗತ್ಯ ಗರ್ಭಧಾರಣೆ ಮತ್ತು ಇತರ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗಬಹುದು ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ತನಿಖೆಯ ಸಂದರ್ಭದಲ್ಲಿ ರೊಮೇನಿಯಾ, ಸೆರ್ಬಿಯಾ ಮತ್ತು ಸ್ಪೇನ್ ದೇಶಗಳಲ್ಲಿ ಈ ನಕಲಿ ಕಾಂಡೋಮ್‌ಗಳ ದೊಡ್ಡ ಜಾಲವನ್ನು ವಶಪಡಿಸಿಕೊಳ್ಳಲಾಗಿದೆ. ಜನರು ನೈಜ ಉತ್ಪನ್ನವೆಂದು ನಂಬಿ ಖರೀದಿಸಲಿ ಎಂಬ ಕಾರಣಕ್ಕೆ ವಿಶ್ವದ ಅತ್ಯಂತ ಪ್ರಸಿದ್ಧ ಬ್ರ್ಯಾಂಡ್ ಒಂದರ ಹೆಸರು ಮತ್ತು ಲೋಗೋವನ್ನು ಬಳಸಿ ಇವುಗಳನ್ನು ಮಾರಾಟ ಮಾಡಲಾಗುತ್ತಿತ್ತು. ಆದರೆ, ಪ್ರಸ್ತುತ ತನಿಖೆ ನಡೆಯುತ್ತಿರುವುದರಿಂದ ಆ ಬ್ರ್ಯಾಂಡ್‌ನ ಹೆಸರನ್ನು ತನಿಖಾ ಸಂಸ್ಥೆ ಬಹಿರಂಗಪಡಿಸಿಲ್ಲ.
ಈ ನಕಲಿ ಸರಕುಗಳನ್ನು ಸಾಗಿಸುವ ಜಾಲಗಳು ಅತ್ಯಂತ ವ್ಯವಸ್ಥಿತವಾಗಿ ಕೆಲಸ ಮಾಡುವುದರಿಂದ, ಈಗಾಗಲೇ ಈ 2 ಲಕ್ಷ ಕಾಂಡೋಮ್‌ಗಳಲ್ಲಿ ಎಷ್ಟು ಮಾರುಕಟ್ಟೆ ತಲುಪಿವೆ ಮತ್ತು ಯಾರಿಗೆ ಮಾರಾಟವಾಗಿವೆ ಎಂಬುದನ್ನು ಪತ್ತೆಹಚ್ಚುವುದು ಅಸಾಧ್ಯವಾಗಿದೆ. ಹೀಗಾಗಿ ಗ್ರಾಹಕರಿಗೆ ವೈಯಕ್ತಿಕವಾಗಿ ಎಚ್ಚರಿಕೆ ನೀಡಲು ಸಾಧ್ಯವಾಗುತ್ತಿಲ್ಲ. ಸದ್ಯ ಯುರೋಪಿಯನ್ ಅಧಿಕಾರಿಗಳು ಚೀನಾ ಏಜೆನ್ಸಿಗಳೊಂದಿಗೆ ಸೇರಿ ಇದರ ಹಿಂದಿರುವ ರಫ್ತುದಾರನನ್ನು ಗುರುತಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net