ಅವರು ಪಾವತಿಸುತ್ತಾರೆ, ನಾವು ಪಾವತಿಸಲ್ಲ.. ಸುಪ್ರೀಂ ತೀರ್ಪಿನ ಹೊರತಾಗಿಯೂ ಭಾರತದ ಜೊತೆಗಿನ ಡೀಲ್​ನಲ್ಲಿ ಚೇಂಜಸ್ ಇಲ್ಲ ಎಂದ ಟ್ರಂಪ್! | IndiaUSRelations

 IndiaUSRelations |  ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್
IndiaUSRelations | ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್
Published on
ವಾಷಿಂಗ್ಟನ್: ಅಮೆರಿಕದ ಸುಪ್ರೀಂ ಕೋರ್ಟ್ ಟ್ರಂಪ್​ ಘೋಷಿಸಿರುವ ಸುಂಕ ನೀತಿಯನ್ನು ಕಾನೂನುಬಾಹಿರ ಎಂದು ರದ್ದುಗೊಳಿಸಿದ ಬೆನ್ನಲ್ಲೇ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ವಿಷಯದಲ್ಲಿ ಮಹತ್ವದ ಹೇಳಿಕೆ ನೀಡಿದ್ದು, ನ್ಯಾಯಾಲಯದ ತೀರ್ಪಿನ ಹೊರತಾಗಿಯೂ ಭಾರತದೊಂದಿಗಿನ ವ್ಯಾಪಾರ ಒಪ್ಪಂದ(IndiaUSRelations) ಅಬಾಧಿತವಾಗಿರಲಿದೆ ಎಂದು ಘೋಷಿಸಿದ್ದಾರೆ.
ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್​, ಭಾರತ ಮತ್ತು ಅಮೆರಿಕ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ, ಅವರು ಸುಂಕಗಳನ್ನು ಪಾವತಿಸುತ್ತಾರೆ ಮತ್ತು ನಾವು ಸುಂಕಗಳನ್ನು ಪಾವತಿಸುವುದಿಲ್ಲ ಎಂದು ತಮ್ಮ ಹಳೆಯ ಹೇಳಿಕೆಯನ್ನು ಪುನರುಚ್ಛರಿಸಿದರು.
ಪ್ರಧಾನಿ ನರೇಂದ್ರ ಮೋದಿ ಒಬ್ಬ ಮಹಾನ್ ಸಂಭಾವಿತ ಮತ್ತು ಮಹಾನ್ ವ್ಯಕ್ತಿ, ಭಾರತದೊಂದಿಗಿನ ನನ್ನ ಸಂಬಂಧ ಅದ್ಭುತವಾಗಿದ್ದು, ಉಭಯ ದೇಶಗಳು ವ್ಯಾಪಾರ ಒಪ್ಪಂದದಲ್ಲಿದ್ದೇವೆ, ಭಾರತ ಮೊದಲು ರಷ್ಯಾದಿಂದ ತೈಲ ಖರೀದಿಸುತ್ತಿತ್ತು, ಆದರೆ ಈಗ ನನ್ನ ಕೋರಿಕೆಯ ಮೇರೆಗೆ ಹಿಂದೆ ಸರಿದಿದ್ದಾರೆ. ಅವರ ವ್ಯಾಪಾರದ ಕಾರಣದಿಂದಾಗಿ ಪ್ರತಿ ತಿಂಗಳು 25,000 ಜನರು ಸಾಯುತ್ತಿದ್ದರು, ಆ ಭಯಾನಕ ಯುದ್ಧವನ್ನು ನಾವು ಇತ್ಯರ್ಥಪಡಿಸಲು ಇದು ಅನಿವಾರ್ಯವಾಗಿತ್ತು ಎಂದು ಹೇಳಿದರು.

ಭಾರತವು ಶೇ.10ರಷ್ಟು ಸುಂಕ ಪಾವತಿಸಲಿದೆ

ಇಂದು ಹೊಸದಾಗಿ ಘೋಷಿಸಲಾದ ಶೇ.10 ರಷ್ಟು ಜಾಗತಿಕ ಸುಂಕವು ಭಾರತಕ್ಕೆ ಅನ್ವಯಿಸುತ್ತದೆ ಮತ್ತು ಇನ್ನೊಂದು ಕಾನೂನು ಪ್ರಾಧಿಕಾರವನ್ನು ಅನ್ವಯಿಸುವವರೆಗೆ ಇದು ಜಾರಿಯಲ್ಲಿರುತ್ತದೆ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಮೆರಿಕದ ಎಲ್ಲಾ ವ್ಯಾಪಾರ ಪಾಲುದಾರರು ಅಸ್ತಿತ್ವದಲ್ಲಿರುವ ವ್ಯಾಪಾರ ಒಪ್ಪಂದಗಳಿಗೆ ಕಟ್ಟುನಿಟ್ಟಾಗಿ ಬದ್ಧರಾಗಿರಬೇಕು ಎಂದು ಅಧಿಕಾರಿ ತಿಳಿಸಿದ್ದಾರೆ.
ಭಾರತ ಮತ್ತು ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದವು ಮಾರ್ಚ್‌ನಲ್ಲಿ ಸಹಿ ಹಾಕಲ್ಪಡುವ ಸಾಧ್ಯತೆಯಿದೆ ಮತ್ತು ಏಪ್ರಿಲ್‌ನಲ್ಲಿ ಜಾರಿಗೆ ಬರುವ ಸಾಧ್ಯತೆಯಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಶುಕ್ರವಾರ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ಹೇಳಿದ್ದೇನು..?

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ರ ವಿವಾದಾತ್ಮಕ ಮತ್ತು ಆಕ್ರಮಣಕಾರಿ ಆರ್ಥಿಕ ನೀತಿಯಾದ ಸಾರ್ವತ್ರಿಕ ಸುಂಕ ವಿಧಿಸಿರುವುದಕ್ಕೆ, ಸ್ವತಃ ಅಲ್ಲಿನ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದ್ದು, ಟ್ರಂಪ್ ವಿಧಿಸಿದ್ದ ಎಲ್ಲಾ ಸುಂಕಗಳನ್ನು ರದ್ದುಗೊಳಿಸಿರುವ ನ್ಯಾಯಾಲಯವು, ಅಧ್ಯಕ್ಷರು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ.
ಟ್ರಂಪ್ ಸುಂಕಗಳನ್ನು ವಿಧಿಸುವ ಮೂಲಕ ಸಂವಿಧಾನವು ನೀಡಿದ ಅಧಿಕಾರವನ್ನು ಮೀರಿದ್ದು, ತೆರಿಗೆ ಮತ್ತು ಸುಂಕಗಳ ನಿರ್ಧಾರವು ಕಾಂಗ್ರೆಸ್ (ಅಮೆರಿಕದ ಸಂಸತ್ತು) ವ್ಯಾಪ್ತಿಗೆ ಬರುತ್ತದೆಯೇ ಹೊರತು ಕೇವಲ ಅಧ್ಯಕ್ಷರ ನಿರ್ಧಾರವಲ್ಲ ಎಂದು ಕೋರ್ಟ್ ಹೇಳಿದೆ.
ಟ್ರಂಪ್ 'ಇಂಟರ್ನ್ಯಾಷನಲ್ ಎಮರ್ಜೆನ್ಸಿ ಎಕನಾಮಿಕ್ ಪವರ್ಸ್ ಆಕ್ಟ್' (IEEPA) ಅಡಿಯಲ್ಲಿ ಈ ಸುಂಕಗಳನ್ನು ಜಾರಿಗೆ ತಂದಿದ್ದರು. ಈ ಕಾನೂನನ್ನು ರಾಷ್ಟ್ರೀಯ ತುರ್ತು ಸಂದರ್ಭಗಳಲ್ಲಿ ಮಾತ್ರ ಬಳಸಬೇಕು ಎನ್ನುವ ನಿಯಮವಿದ್ದು, ಆದರೆ ಈಗ ಅದನ್ನು ಸಾಮಾನ್ಯ ವ್ಯಾಪಾರ ನೀತಿಗಾಗಿ ಬಳಸಿರುವುದು ಕಾನೂನುಬಾಹಿರ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net