ಡಿಜಿಟಲ್​ ದರೋಡೆ ತಾಣ ಉತ್ತರ ಕೊರಿಯಾ: 8,400 ಹ್ಯಾಕರ್​ಗಳ ಸೈನ್ಯ,150 ದೇಶಗಳಲ್ಲಿ ಭೀತಿ

cyber fraud
ಡಿಜಿಟಲ್​ ದರೋಡೆ ತಾಣ ಉತ್ತರ ಕೊರಿಯಾ: 8,400 ಹ್ಯಾಕರ್​ಗಳ ಸೈನ್ಯ,150 ದೇಶಗಳಲ್ಲಿ ಭೀತಿ
Published on: 

ಉತ್ತರ ಕೊರಿಯಾ ಯುದ್ಧದ ಹೊಸ ರಂಗವನ್ನು ಸಿದ್ಧಪಡಿಸಿದೆ. ಅಲ್ಲಿ ಶಸ್ತ್ರಾಸ್ತ್ರಗಳ ಬದಲಿಗೆ ಕಂಪ್ಯೂಟರ್​ಗಳಿವೆ ಮತ್ತು ಶತ್ರುಗಳ ಬ್ಯಾಂಕುಗಳು, ಸರ್ಕಾರಿ ಸಂಸ್ಥೆಗಳು ಹಾಗೂ ಕ್ರಿಪ್ಟೋಕರೆನ್ಸಿ ಎಕ್ಸ್ಚೇಂಜ್ಗಳು ಗುರಿಯಾಗಿವೆ. ಒಮ್ಮೆ ಇತರ ದೇಶಗಳ ವ್ಯವಸ್ಥೆಗಳನ್ನು ಸ್ತಬ್ಧಗೊಳಿಸಲು ಅಭಿವೃದ್ಧಿಪಡಿಸಲಾದ ಈ ಶಕ್ತಿಯು ಈಗ ಶತಕೋಟಿ ಡಾಲರ್ಗಳ ಮೌಲ್ಯದ ಡಿಜಿಟಲ್ ಆಸ್ತಿಯನ್ನು ಕದಿಯುವ ಆರೋಪಗಳಿಗೆ ತಳುಕು ಹಾಕಿಕೊಂಡಿದೆ. ಅಕ್ಟೋಬರ್ ಅಂತ್ಯದಲ್ಲಿ ವಿಶ್ವದ ಅತಿ ದೊಡ್ಡ ಕ್ರಿಪ್ಟೋ ಎಕ್ಸ್ಚೇಂಜ್ ಆದ ಬೈನಾನ್ಸ್ನಿಂದ 53 ಸಾವಿರ ಕೋಟಿ ರೂ. ಮೌಲ್ಯದ ಕ್ರಿಪ್ಟೋಕರೆನ್ಸಿ ಕಳ್ಳತನದಲ್ಲಿ ಉತ್ತರ ಕೊರಿಯಾದ ಹೆಸರು ಕೇಳಿಬಂದಿದೆ.

ಈ ಸೈಬರ್ ದಾಳಿಯ ಹಿಂದೆ ಉತ್ತರ ಕೊರಿಯಾದ ಕುಖ್ಯಾತ ಹ್ಯಾಕಿಂಗ್ ಗುಂಪು ಟ್ರೇಡರ್-ಟ್ರೖೆಟರ್ ಕೈವಾಡವಿದೆ ಎನ್ನಲಾಗಿದೆ. ಇದು ಮೊದಲ ಘಟನೆಯೇನಲ್ಲ. 2019ರಲ್ಲಿ ಅಪ್ಬಿಟ್ (397 ಕೋಟಿ ರೂ.) ಮತ್ತು 2025ರಲ್ಲಿ ಬೈಬಿಟ್ (14,193.28 ಕೋಟಿ ರೂ.) ನಂತಹ ದೊಡ್ಡ ಕ್ರಿಪ್ಟೋ ಎಕ್ಸ್ಚೇಂಜ್ಗಳ ಮೇಲೆ ನಡೆದ ದಾಳಿಗಳಲ್ಲೂ ಉತ್ತರ ಕೊರಿಯಾದ ಹೆಸರೇ ಕೇಳಿಬಂದಿತ್ತು. ಉತ್ತರ ಕೊರಿಯಾ ಪ್ರಸ್ತುತ ಕ್ಷಿಪಣಿ ಮತ್ತು ಪರಮಾಣು ಪರೀಕ್ಷೆಗಳಿಗಷ್ಟೇ ಸೀಮಿತವಾಗಿಲ್ಲ; ಬದಲಾಗಿ ಜಾಗತಿಕ ಸೈಬರ್ ಜಗತ್ತಿನಲ್ಲಿ ಅತ್ಯಂತ ಸಂಘಟಿತ ಹಾಗೂ ಅಪಾಯಕಾರಿ ಡಿಜಿಟಲ್ ದರೋಡೆಯ ಕೇಂದ್ರವಾಗಿ ಮಾರ್ಪಟ್ಟಿದೆ. ತೀವ್ರ ಅಂತಾರಾಷ್ಟ್ರೀಯ ಆರ್ಥಿಕ ನಿರ್ಬಂಧಗಳಿಂದ ನಲುಗಿರುವ ಈ ರಾಷ್ಟ್ರವು ತನ್ನ ಆರ್ಥಿಕ ಅಗತ್ಯಗಳನ್ನು ಪೂರೈಸಲು ಮತ್ತು ಪರಮಾಣು ಶಸ್ತ್ರಾಸ್ತ್ರ ಕಾರ್ಯಕ್ರಮಗಳಿಗೆ ನಿಧಿ ಸಂಗ್ರಹಿಸಲು ಸೈಬರ್ ಅಪರಾಧಗಳನ್ನೇ ಪ್ರಮುಖ ಅಸ್ತ್ರವನ್ನಾಗಿಸಿಕೊಂಡಿದೆ!

ಉತ್ತರ ಕೊರಿಯಾದ ಈ ಡಿಜಿಟಲ್ ದರೋಡೆ ಜಾಲವು ಸಾಂಪ್ರದಾಯಿಕ ಯುದ್ಧಭೂಮಿಗಿಂತ ಭಿನ್ನವಾದ, ಕಣ್ಣಿಗೆ ಕಾಣದ ಸೈಬರ್ ಯುದ್ಧವಾಗಿದೆ. ಇದನ್ನು ಕೇವಲ ಸೈಬರ್ ಕ್ರೖೆಂ ಎಂದು ಪರಿಗಣಿಸದೆ, ಜಾಗತಿಕ ಭದ್ರತಾ ಬಿಕ್ಕಟ್ಟು ಎಂದು ಪರಿಗಣಿಸಿ ಜಗತ್ತಿನ ರಾಷ್ಟ್ರಗಳು ತಂತ್ರಜ್ಞಾನ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಒಟ್ಟಾಗಿ ಎದುರಿಸಬೇಕಿದೆ. ಉತ್ತರ ಕೊರಿಯಾ 1980ರ ದಶಕದಲ್ಲೇ ಕಂಪ್ಯೂಟರ್ ಮತ್ತು ತಾಂತ್ರಿಕ ಶಿಕ್ಷಣದ ಚೌಕಟ್ಟನ್ನು ಸಿದ್ಧಪಡಿಸಲು ಪ್ರಾರಂಭಿಸಿತ್ತು. 1990ರಲ್ಲಿ ‘ಕೊರಿಯಾ ಕಂಪ್ಯೂಟರ್ ಸೆಂಟರ್’ ಸ್ಥಾಪಿಸಲಾಯಿತು. 1995ರಲ್ಲಿ ಆಗಿನ ನಾಯಕ ಕಿಮ್ ಜಾಂಗ್ ಇಲ್ ಸೇನೆಗೆ ರಾಷ್ಟ್ರೀಯ ರಕ್ಷಣಾ ಕಾರ್ಯತಂತ್ರದಲ್ಲಿ ಸೈಬರ್ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ನಿರ್ದೇಶನ ನೀಡಿದರು. 1998ರಿಂದ ಮಾಧ್ಯಮಿಕ ಶಾಲೆಯ ನಾಲ್ಕನೇ ವರ್ಷದಿಂದ ಕಂಪ್ಯೂಟರ್ ಶಿಕ್ಷಣವನ್ನು ಕಡ್ಡಾಯಗೊಳಿಸುವ ಪ್ರಕ್ರಿಯೆ ಆರಂಭವಾಯಿತು.

ನೆಟ್ವರ್ಕ್ ರೂಪುಗೊಂಡ ಬಗೆ

ಉತ್ತರ ಕೊರಿಯಾದಲ್ಲಿ ಸೈಬರ್ ಕಾರ್ಯಾಚರಣೆಗಳಿಗಾಗಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ವಿಶೇಷವಾಗಿ ಆಯ್ಕೆ ಮಾಡಲಾಗುತ್ತದೆ. ನಿರ್ದಿಷ್ಟವಾಗಿ ವಿಜ್ಞಾನ ಮತ್ತು ಗಣಿತದಲ್ಲಿ ಉತ್ತಮ ಸಾಧನೆ ಮಾಡುವವರನ್ನು. ದಕ್ಷಿಣ ಕೊರಿಯಾದ ರಾಷ್ಟ್ರೀಯ ಗುಪ್ತಚರ ಸೇವೆಯ ಅಂದಾಜಿನ ಪ್ರಕಾರ, 2024ರಲ್ಲಿ ಉತ್ತರ ಕೊರಿಯಾದ ಸೈಬರ್ ಸಿಬ್ಬಂದಿಯ ಸಂಖ್ಯೆ 8,400 ಆಗಿತ್ತು. ಇದರಲ್ಲಿ ಹ್ಯಾಕರ್​ಗಳ ಜೊತೆಗೆ ಸೈಬರ್ ಕಾರ್ಯಾಚರಣೆಗಳಿಗೆ ನೆರವು ನೀಡುವ ಇತರ ಸಿಬ್ಬಂದಿಯೂ ಸೇರಿದ್ದಾರೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯ ತಜ್ಞರ ಸಮಿತಿಯ 2024ರ ವರದಿಯ ಪ್ರಕಾರ, 2017ರಿಂದ 2023ರ ನಡುವೆ ಉತ್ತರ ಕೊರಿಯಾಗೆ ಸಂಬಂಧಿಸಿದ 58 ಶಂಕಿತ ಸೈಬರ್ ದಾಳಿಗಳ ತನಿಖೆ ನಡೆಯುತ್ತಿತ್ತು. ಇವುಗಳ ಮೌಲ್ಯ 30 ಸಾವಿರ ಕೋಟಿ ರೂ. ಆಗಿತ್ತು. ಉತ್ತರ ಕೊರಿಯಾದ ವಿದೇಶಿ ವಿನಿಮಯ ಆದಾಯದ ಅರ್ಧದಷ್ಟು ಭಾಗವು ಇಂತಹ ಸೈಬರ್ ಚಟುವಟಿಕೆಗಳಿಂದಲೇ ಬರುತ್ತದೆ.

ಈಗ ಡಿಜಿಟಲ್ ಹಣವೇ ಗುರಿ!

ಸೈಬರ್ ದಾಳಿಗಳ ಆರಂಭಿಕ ಮುಖ್ಯ ಉದ್ದೇಶ ದಕ್ಷಿಣ ಕೊರಿಯಾ ಮತ್ತು ಇತರ ಎದುರಾಳಿ ದೇಶಗಳಲ್ಲಿ ಗೊಂದಲ ಮತ್ತು ಅಸ್ಥಿರತೆಯನ್ನು ಉಂಟುಮಾಡುವುದಾಗಿತ್ತು. 2013ರ ‘ಡಾರ್ಕ್ ಸಿಯೋಲ್’ ದಾಳಿಯಲ್ಲಿ ದಕ್ಷಿಣ ಕೊರಿಯಾದ ಪ್ರಸಾರ ಜಾಲಗಳು ಮತ್ತು ಹಣಕಾಸು ಸಂಸ್ಥೆಗಳ 32 ಸಾವಿರ ಕಂಪ್ಯೂಟರ್ಗಳು ಬಾಧಿತವಾಗಿದ್ದವು. 2014ರಲ್ಲಿ ಕೊರಿಯಾ ಹೈಡ್ರೋ ನ್ಯೂಕ್ಲಿಯರ್ ಪವರ್ ವ್ಯವಸ್ಥೆಯಿಂದ ನೌಕರರ ವೈಯಕ್ತಿಕ ಮಾಹಿತಿ ಮತ್ತು ಪರಮಾಣು ಸ್ಥಾವರಗಳ ತಾಂತ್ರಿಕ ದಾಖಲೆಗಳನ್ನು ಕದಿಯಲಾಗಿತ್ತು.

2017ರ ‘ವನ್ನಾಕ್ರೖೆ’ ದಾಳಿಯು ವಿಂಡೋಸ್ ಕಂಪ್ಯೂಟರ್ಗಳ ಫೈಲ್ಗಳನ್ನು ಲಾಕ್ ಮಾಡಿತು. ನಂತರ ಬಿಟ್ಕಾಯಿನ್ ರೂಪದಲ್ಲಿ ಸುಲಿಗೆ ಹಣಕ್ಕೆ ಬೇಡಿಕೆ ಇಡಲಾಗಿತ್ತು. ಬ್ರಿಟನ್ನ ರಾಷ್ಟ್ರೀಯ ಸೈಬರ್ ಭದ್ರತಾ ಕೇಂದ್ರದ ಪ್ರಕಾರ, ಇದರಿಂದ 150 ದೇಶಗಳಲ್ಲಿ 3 ಲಕ್ಷ ಕಂಪ್ಯೂಟರ್ಗಳು ಬಾಧಿತವಾಗಿದ್ದವು. ಆಸ್ಪತ್ರೆಗಳು, ಕಂಪನಿಗಳು ಮತ್ತು ಸರ್ಕಾರಿ ಸಂಸ್ಥೆಗಳ ಕಾರ್ಯನಿರ್ವಹಣೆಗೆ ಅಡ್ಡಿಯುಂಟಾಗಿತ್ತು.

ಕಾರ್ಯಾಚರಣೆಯ ವಿಧಾನ

ಕ್ರಿಪ್ಟೋ ಎಕ್ಸ್ಚೇಂಜ್​ಗಳು ಮತ್ತು ಬ್ರಿಡ್ಜ್​ಗಳ ಹ್ಯಾಕಿಂಗ್: ಬ್ಲಾಕ್ಚೈನ್ ನೆಟ್ವರ್ಕ್​ಗಳನ್ನು ಜೋಡಿಸುವ ‘ಕ್ರಾಸ್-ಚೈನ್ ಬ್ರಿಡ್ಜ್’ಗಳಲ್ಲಿನ ಸಾಫ್ಟ್ ವೇರ್ ದೋಷಗಳನ್ನು ಬಳಸಿಕೊಂಡು ಸ್ಮಾರ್ಟ್ ಕಾಂಟ್ರಾಕ್ಟ್ ಗಳನ್ನು ಹ್ಯಾಕ್ ಮಾಡಲಾಗುತ್ತದೆ. ಉದಾಹರಣೆಗೆ, ಆಕ್ಸಿ ಇನ್ಪಿನಿಟಿಯ ರೋನಿನ್ ನೆಟ್ವರ್ಕ್ನಿಂದ 600 ಮಿಲಿಯನ್ಗೂ ಹೆಚ್ಚು ಮೌಲ್ಯದ ಕ್ರಿಪ್ಟೋ ಕಳ್ಳತನ.

ಮಿಕ್ಸರ್​ಗಳ, ಮನಿ ಲಾಂಡರಿಂಗ್ ಕದ್ದ ಕ್ರಿಪ್ಟೋ ಟೋಕನ್​ಗಳನ್ನು ಪತ್ತೆಹಚ್ಚಲಾಗದಂತೆ ಮಾಡಲು ‘ಟೊರ್ನಾಡೊ ಕ್ಯಾಶ್’, ‘ಸಿನ್ಬ್ಯಾಡ್’ನಂತಹ ಕ್ರಿಪ್ಟೋ ಮಿಕ್ಸಿಂಗ್ ಸೇವೆ ಬಳಸಲಾಗುತ್ತದೆ. ನಂತರ ಇವುಗಳನ್ನು ಚೀನಾ ಅಥವಾ ರಷ್ಯಾದಲ್ಲಿರುವ ನಕಲಿ ಬ್ರೋಕರ್ಗಳ ಮೂಲಕ ಫಿಯೆಟ್ (ಅಸಲಿ) ಕರೆನ್ಸಿಗೆ ಪರಿವರ್ತಿಸಿಕೊಳ್ಳಲಾಗುತ್ತದೆ.

ಜಾಗತಿಕವಾಗಿ ಆತಂಕ

1) ಪರಮಾಣು ಶಸ್ತ್ರಾಸ್ತ್ರಗಳಿಗೆ ನೇರ ಆರ್ಥಿಕ ಇಂಧನ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವರದಿಗಳ ಪ್ರಕಾರ, ಉತ್ತರ ಕೊರಿಯಾದ ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು ಪರಮಾಣು ಕಾರ್ಯಕ್ರಮಗಳ ವೆಚ್ಚದ ಶೇಕಡ 40ರಿಂದ 50ರಷ್ಟು ಹಣವು ಸೈಬರ್ ಅಪರಾಧಗಳು ಮತ್ತು ಕ್ರಿಪ್ಟೋ ದರೋಡೆಗಳ ಮೂಲಕವೇ ಭರ್ತಿಯಾಗುತ್ತಿದೆ.

2) ಆರ್ಥಿಕ ವ್ಯವಸ್ಥೆಯ ಮೇಲಿನ ನಂಬಿಕೆಗೆ ಧಕ್ಕೆ: ವಿಕೇಂದ್ರೀಕೃತ ಹಣಕಾಸು ಮತ್ತು ಕ್ರಿಪ್ಟೋಕರೆನ್ಸಿ ಮಾರು ಕಟ್ಟೆಗಳಲ್ಲಿ ಹೂಡಿಕೆದಾರರ ನಂಬಿಕೆ ಕುಸಿಯುತ್ತಿದೆ. ಒಂದೇ ದಾಳಿಯಲ್ಲಿ ಶತಕೋಟಿ ರೂಪಾಯಿ ನಷ್ಟವಾಗುವುದರಿಂದ ನವೋದ್ಯಮಗಳು ದಿವಾಳಿಯಾಗುತ್ತಿವೆ.

3) ಸರ್ಕಾರಿ ಪ್ರಾಯೋಜಿತ ಕ್ರಿಮಿನಲೈಸೇಶನ್: ಸಾಮಾನ್ಯ ಸೈಬರ್ ಅಪರಾಧಿಗಳನ್ನು ಪೊಲೀಸರು ಬಂಧಿಸಬಹುದು. ಆದರೆ, ಉತ್ತರ ಕೊರಿಯಾದಲ್ಲಿ ಈ ಕೃತ್ಯಗಳನ್ನು ಸ್ವತಃ ಸರ್ಕಾರವೇ ಪ್ರಾಯೋಜಿಸುವುದರಿಂದ ಮತ್ತು ಅಪರಾಧಿಗಳು ಆ ದೇಶದ ರಕ್ಷಣೆಯಲ್ಲಿರುವುದರಿಂದ ಅವರನ್ನು ಬಂಧಿಸುವುದು ಅಸಾಧ್ಯವಾಗಿದೆ.

ಪ್ರಮುಖ ಜಾಲಗಳು

ಉತ್ತರ ಕೊರಿಯಾದ ಮಿಲಿಟರಿ ಗುಪ್ತಚರ ಸಂಸ್ಥೆಯಾದ ರೆಕಾನಿಸನ್ಸ್ ಜನರಲ್ ಬ್ಯೂರೋ ಅಡಿಯಲ್ಲಿ ಈ ಎಲ್ಲ ಹ್ಯಾಕಿಂಗ್ ಜಾಲಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಪ್ರಮುಖ ಜಾಲಗಳ ವಿವರ ಇಲ್ಲಿದೆ.

ಲಾಜರಸ್ ಗ್ರೂಪ್: ಇದು ಉತ್ತರ ಕೊರಿಯಾದ ಅತ್ಯಂತ ಕುಖ್ಯಾತ ಸೈಬರ್ ಕ್ರೖೆಂ ಸಿಂಡಿಕೇಟ್. 2014ರ ಸೋನಿ ಪಿಕ್ಚರ್ಸ್ ಹ್ಯಾಕ್, 2016ರ ಬಾಂಗ್ಲಾದೇಶ ಬ್ಯಾಂಕ್ನ 81 ಮಿಲಿಯನ್ ದರೋಡೆ ಮತ್ತು 2017ರ ವನ್ನಾಕ್ರೖೆ ದಾಳಿಗಳ ಹಿಂದೆ ಈ ಗುಂಪೇ ಇತ್ತು. ಪ್ರಸ್ತುತ ಈ ಗುಂಪು ಕ್ರಿಪ್ಟೋಕರೆನ್ಸಿ ಸಂಸ್ಥೆಗಳು ಮತ್ತು ‘ವೆಬ್3’ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ನೂರಾರು ಕೋಟಿ ಡಾಲರ್ ಮೌಲ್ಯದ ಡಿಜಿಟಲ್ ಸ್ವತ್ತುಗಳನ್ನು ಲೂಟಿ ಮಾಡುತ್ತಿದೆ.

ಬ್ಲೂನೊರಾಫ್: ಹಣಕಾಸು ಸಂಸ್ಥೆಗಳು, ಬ್ಯಾಂಕ್​ಗಳು, ಸಾಹಸೋದ್ಯಮ ನಿಧಿಗಳು ಮತ್ತು ಕ್ರಿಪ್ಟೋ ಫಿನ್ಟೆಕ್ ಕಂಪನಿಗಳ ಮೇಲೆ ದಾಳಿ ನಡೆಸಿ ಹಣ ಲೂಟಿ ಮಾಡುವುದರಲ್ಲಿ ಪರಿಣತಿ ಹೊಂದಿದೆ.

ಕಿಮ್ಸುಕಿ: ಪ್ರಮುಖವಾಗಿ ದಕ್ಷಿಣ ಕೊರಿಯಾ, ಅಮೆರಿಕ ಮತ್ತು ಇತರ ಮಿತ್ರರಾಷ್ಟ್ರಗಳ ವಿದೇಶಾಂಗ ನೀತಿ, ಪರಮಾಣು ತಜ್ಞರು ಮತ್ತು ಸಂಶೋಧಕರ ಮೇಲೆ ಸ್ಪಿಯರ್-ಫಿಶಿಂಗ್ ದಾಳಿ ನಡೆಸಿ ಮಾಹಿತಿ ಕದಿಯುವ ಜಾಲ.

ಐಟಿ ವರ್ಕರ್ ಸಿಂಡಿಕೇಟ್: ಉತ್ತರ ಕೊರಿಯಾದ ಸಾವಿರಾರು ಸಾಫ್ಟ್ವೇರ್ ಡೆವಲಪರ್​ಗಳು ನಕಲಿ ಪಾಸ್ಪೋರ್ಟ್ ಹಾಗೂ ಕೃತಕ ಜಾಲತಾಣ ಪ್ರೊಫೈಲ್​ಗಳನ್ನು ಬಳಸಿಕೊಂಡು ಅಮೆರಿಕ, ಯುರೋಪ್​ನ ಕಂಪನಿಗಳಲ್ಲಿ ರಿಮೋಟ್ ವರ್ಕರ್ ಆಗಿ ಕೆಲಸ ಗಿಟ್ಟಿಸಿಕೊಳ್ಳುತ್ತಾರೆ. ಇವರು ಕಂಪನಿಯ ಒಳನುಗ್ಗಿ ಮಾಹಿತಿ ಕದಿಯುವುದು ಮತ್ತು ವೇತನದ ರೂಪದಲ್ಲಿ ಬರುವ ವಿದೇಶಿ ಕರೆನ್ಸಿಯನ್ನು ಉತ್ತರ ಕೊರಿಯಾದ ಆಡಳಿತಕ್ಕೆ ವರ್ಗಾಯಿಸುತ್ತಾರೆ.

ಆಂಡ್ರಿಯಲ್: ರಕ್ಷಣಾ ಇಲಾಖೆಗಳು, ಇಂಟೆಲಿಜೆನ್ಸ್ ಮತ್ತು ಏರೋಸ್ಪೇಸ್ ಸಂಸ್ಥೆಗಳನ್ನು ಹ್ಯಾಕ್ ಮಾಡಿ ಸೂಕ್ಷ್ಮ ತಂತ್ರಜ್ಞಾನ ಕದಿಯುವುದರ ಜೊತೆಗೆ ದೇಶೀಯ ನಗದು ಸಂಗ್ರಹಕ್ಕೆ ರಾನ್ಸರ್ಮ್​ ಬಳಸುತ್ತದೆ.

ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳು

ಕದ್ದ ಕ್ರಿಪ್ಟೋ ನಿಧಿಗಳು ಚಲಿಸುವ ವಾಲೆಟ್ಗಳನ್ನು ಬ್ಲಾಕ್ಚೈನ್ ಅನಲಿಟಿಕ್ಸ್ ಸಂಸ್ಥೆಗಳು ತಕ್ಷಣ ಗುರುತಿಸಿ, ಜಾಗತಿಕ ಎಕ್ಸ್ಚೇಂಜ್ಗಳಲ್ಲಿ ಆ ನಿಧಿಗಳನ್ನು ಫ್ರೀಜ್ (ಸ್ಥಗಿತ) ಮಾಡಬೇಕು.

ಕ್ರಿಪ್ಟೋ ಎಕ್ಸ್ಚೇಂಜ್​ಗಳು ಮತ್ತು ಬ್ಲಾಕ್ಚೈನ್ ಪ್ಲಾಟ್​ಫಾರ್ಮ್​ಗಳು ತಮ್ಮ ಕೋಡಿಂಗ್ ಭದ್ರತೆಯನ್ನು ಕಟ್ಟುನಿಟ್ಟಾದ ಮೂರನೇ ವ್ಯಕ್ತಿಯ ಸೈಬರ್ ಭದ್ರತಾ ಲೆಕ್ಕಪರಿಶೋಧನೆಗೆ ಒಳಪಡಿಸಬೇಕು.

ಜಾಗತಿಕ ಐಟಿ ಕಂಪನಿಗಳು ರಿಮೋಟ್ ನೌಕರರನ್ನು ನೇಮಿಸಿಕೊಳ್ಳುವಾಗ ಬಯೋಮೆಟ್ರಿಕ್ ಮತ್ತು ವಿಡಿಯೋ ಪರಿಶೀಲನೆಯನ್ನು ಕಡ್ಡಾಯಗೊಳಿಸಬೇಕು. ಇದರಿಂದ ಉತ್ತರ ಕೊರಿಯಾದ ಏಜೆಂಟರು ನಕಲಿ ದಾಖಲೆಗಳೊಂದಿಗೆ ನುಸುಳುವುದನ್ನು ತಡೆಯಬಹುದು.