ನ್ಯೂಯಾರ್ಕ್​ ಜೈಲಿಗೆ ನಿಕೋಲಸ್​ ಮಡುರೊ ಶಿಫ್ಟ್​: ಡೆಲ್ಸಿ ರೊಡ್ರಿಗಸ್ ವೆನೆಜುವೆಲಾದ​ ಹಂಗಾಮಿ ಅಧ್ಯಕ್ಷೆ! Nicolas Maduro

ಬಂಧನಕ್ಕೆ ಒಳಗಾಗಿರುವ ವೆನೆಜುವೆಲಾದ ಅಧ್ಯಕ್ಷ ನಿಕೋಲಸ್​ ಮಡುರೊ ಹಾಗೂ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್
ಬಂಧನಕ್ಕೆ ಒಳಗಾಗಿರುವ ವೆನೆಜುವೆಲಾದ ಅಧ್ಯಕ್ಷ ನಿಕೋಲಸ್​ ಮಡುರೊ ಹಾಗೂ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್
Published on

ಪ್ರಮುಖ ಮುಖ್ಯಾಂಶಗಳು

  • ಅಮೆರಿಕ ಸೇನೆಯಿಂದ ವೆನೆಜುವೆಲಾದ ಅಧ್ಯಕ್ಷ ನಿಕೋಲಸ್​ ಮಡುರೊ ಬಂಧನ
  • ನ್ಯೂಯಾರ್ಕ್​ ಜೈಲಿನಲ್ಲಿ ನಿಕೋಲಸ್​ ಮಡುರೊ ವಾಸ್ತವ್ಯ
  • ವೆನೆಜುವೆಲಾದ​ ಹಂಗಾಮಿ ಅಧ್ಯಕ್ಷೆಯಾಗಿ ಡೆಲ್ಸಿ ರೊಡ್ರಿಗಸ್ ನೇಮಕ
ವಾಷಿಂಗ್ಟನ್​: ಅಮೆರಿಕ ಸೇನೆಯಿಂದ ಬಂಧನಕ್ಕೆ ಒಳಗಾಗಿರುವ ವೆನೆಜುವೆಲಾದ ಅಧ್ಯಕ್ಷ ನಿಕೋಲಸ್​ ಮಡುರೊ ( Nicolas Maduro ) ನನ್ನು ನ್ಯೂಯಾರ್ಕ್​ ಜೈಲಿನಲ್ಲಿ ಇಡಲಾಗಿದೆ. ಮಡುರೋ ಬಂಧನ ಹಿನ್ನೆಲೆಯಲ್ಲಿ ಉಪಾಧ್ಯಕ್ಷೆ ಡೆಲ್ಸಿ ರೊಡ್ರಿಗಸ್, ವೆನೆಜುವೆಲಾದ​ ಹಂಗಾಮಿ ಅಧ್ಯಕ್ಷೆಯಾಗಿ ನೇಮಕವಾಗಿದ್ದಾರೆ. ಆದರೆ, ಅಮೆರಿಕ ತಾತ್ಕಾಲಿಕವಾಗಿ ತಾನೇ ವೆನೆಜುವೆಲಾ ಆಡಳಿತ ವಹಿಸಿಕೊಳ್ಳುತ್ತೇನೆಂದು ಹೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ. 
ಅಮೆರಿಕದ ವಿಶೇಷ ಪಡೆಗಳು "ಆಪರೇಷನ್ ಅಬ್ಸೊಲ್ಯೂಟ್ ರಿಸಾಲ್ವ್" ಹೆಸರಿನಲ್ಲಿ ಶನಿವಾರ ಮುಂಜಾನೆ ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್ ಮೇಲೆ ದಾಳಿ ನಡೆಸಿ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಬಂಧಿಸಿದರು. ಬಳಿಕ ಅವರನ್ನು ನ್ಯೂಯಾರ್ಕ್​ಗೆ ಕರೆತರಲಾಗಿದ್ದು, ಮಾದಕವಸ್ತು ಕಳ್ಳಸಾಗಣೆ ಹಾಗೂ ಭಯೋತ್ಪಾದನೆ ಆರೋಪದ ಮೇಲೆ ವಿಚಾರಣೆ ಎದುರಿಸಲಿದ್ದಾರೆ.
63 ವರ್ಷದ ಮಡುರೊ ಅವರನ್ನು ಬ್ರೂಕ್ಲಿನ್‌ನಲ್ಲಿರುವ ಫೆಡರಲ್ ಸೌಲಭ್ಯವಾದ ಮೆಟ್ರೋಪಾಲಿಟನ್ ಡಿಟೆನ್ಷನ್ ಸೆಂಟರ್‌ನಲ್ಲಿ ಇರಿಸಲಾಗಿದೆ. ಸೋಮವಾರ ಮ್ಯಾನ್‌ಹ್ಯಾಟನ್ ಫೆಡರಲ್ ನ್ಯಾಯಾಲಯದ ಮುಂದೆ ಅವರಿಬ್ಬರನ್ನು ಹಾಜರುಪಡಿಸುವ ಸಾಧ್ಯತೆ ಇದೆ. 
ಮಡುರೊ ಬಂಧನದ ಬಳಿಕ ವೆನೆಜುವೆಲಾ ಅಧ್ಯಕ್ಷ ಸ್ಥಾನ ತೆರವಾಗಿದೆ. ಇದೀಗ ಆ ಸ್ಥಾನಕ್ಕೆ ಮಡುರೊ ಅವರ ಉತ್ತರಾಧಿಕಾರಿ ಎಂದೇ ಹೇಳಲಾಗುವ ವೆನೆಜುವೆಲಾದ ಉಪಾಧ್ಯಕ್ಷ ಡೆಲ್ಸಿ ರೊಡ್ರಿಗಸ್, ಹಂಗಾಮಿ ಅಧ್ಯಕ್ಷೆಯಾಗಿ ನೇಮಕವಾಗಿದ್ದಾರೆ. ಶನಿವಾರ ಮಧ್ಯಾಹ್ನ ಇತರ ಉನ್ನತ ಅಧಿಕಾರಿಗಳೊಂದಿಗೆ ಸರ್ಕಾರದ ದೂರದರ್ಶನದಲ್ಲಿ ಕಾಣಿಸಿಕೊಂಡ ರೊಡ್ರಿಗಸ್​, ಅಮೆರಿಕದ ಕ್ರಮವನ್ನು "ಅಪಹರಣ" ಎಂದು ಕರೆದರು. ಅಲ್ಲದೆ, ಮಡುರೊ ಮತ್ತು ಅವರ ಪತ್ನಿ ಸಿಲಿಯಾರನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದ ರೊಡ್ರಿಗಸ್​, ಮಡುರೊ ಅವರನ್ನು "ವೆನೆಜುವೆಲಾದ ಏಕೈಕ ಅಧ್ಯಕ್ಷರು" ಎಂದು ಕರೆದರು.
ಅಂದಹಾಗೆ, ವೆನೆಜುವೆಲಾದ ನ್ಯಾಯಾಲಯವು 56 ವರ್ಷದ ರೊಡ್ರಿಗಸ್ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸುವಂತೆ ಆದೇಶಿಸಿದೆ. ಆದರೆ, ಅಮೆರಿಕ ಹೇಳುವುದೇ ಬೇರೆ. ಮುಂದಿನ ಅಧ್ಯಕ್ಷ ನೇಮಕವಾಗುವರೆಗೂ ವೆನೆಜುವೆಲಾವನ್ನು ತಾತ್ಕಾಲಿಕವಾಗಿ ಅಮೆರಿಕವೇ ನಿಯಂತ್ರಿಸಲಿದೆ ಎಂದಿದ್ದಾರೆ. ನಾವು ವೆನೆಜುವೆಲಾವನ್ನು ಸುರಕ್ಷಿತ, ಸರಿಯಾದ ಮತ್ತು ವಿವೇಚನಾಯುಕ್ತ ಪರಿವರ್ತನೆ ಮಾಡುವವರೆಗೆ ಆ ದೇಶದಲ್ಲಿ ನಾವೇ ಆಡಳಿತ ನಡೆಸುತ್ತೇವೆ ಎಂದು ಫ್ಲೋರಿಡಾದ ತಮ್ಮ ಮಾರ್-ಎ-ಲಾಗೊ ರೆಸಾರ್ಟ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹೇಳಿದರು.
ಅಮೆರಿಕದ ಪ್ರಮುಖ ತೈಲ ಕಂಪನಿಗಳು ವಿಶ್ವದ ಅತಿದೊಡ್ಡ ತೈಲ ನಿಕ್ಷೇಪಗಳನ್ನು ಹೊಂದಿರುವ ವೆನೆಜುವೆಲಾಕ್ಕೆ ಸ್ಥಳಾಂತರಗೊಳ್ಳುತ್ತವೆ ಮತ್ತು ತೀವ್ರವಾಗಿ ಹದಗೆಟ್ಟಿರುವ ತೈಲ ಮೂಲಸೌಕರ್ಯವನ್ನು ನವೀಕರಿಸುತ್ತವೆ ಎಂದು ಟ್ರಂಪ್​ ಹೇಳಿದರು.

ಬಂಧನ ಏಕೆ?

ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾಗಿ ಟ್ರಂಪ್​ ಅವರು ಶ್ವೇತಭವನದಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ 2025ರ ಆಗಸ್ಟ್​ 09ರಂದು ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಸುಳಿವು ನೀಡಿದವರಿಗೆ 437 ಕೋಟಿ ರೂ. ನೀಡುವುದಾಗಿ ಬಂಪರ್ ಆಫರ್ ಘೋಷಿಸಿದ್ದರು. ಇದಕ್ಕೆ ಕಾರಣ ನೀಡಿರುವ ಅಮೆರಿಕ ಅಟಾರ್ನಿ ಜನರಲ್ ಪಂಬೊಂಡಿ, ನಿಕೋಲಸ್ ಮಡುರೊ ಎಂಬ ವ್ಯಕ್ತಿ ಟ್ರೆನ್ ಡಿ ಅರಾಗುವಾ, ಸಿನಾಲೋವಾ ಮತ್ತು ಕಾರ್ಟೆಲ್ ಆಫ್ ದಿ ಸನ್ಸ್ (ಕಾರ್ಟೆಲ್ ಡಿ ಸೊಲೈಲ್) ನಂತಹ ಉಗ್ರ ಸಂಘಟನೆಗಳನ್ನು ಬಳಸಿಕೊಂಡು ಅಮೆರಿಕದಲ್ಲಿ ಘೋರ ಹಿಂಸಾಚಾರವನ್ನು ನಡೆಸುತ್ತಿದ್ದ. ಆತ ವಿಶ್ವದ ಅತಿದೊಡ್ಡ ಮಾದಕವಸ್ತು ಕಳ್ಳಸಾಗಣೆದಾರರಲ್ಲಿ ಒಬ್ಬ. ಅಮೆರಿಕಕ್ಕೆ ಫೆಂಟನಿಲ್ ಮತ್ತು ಇತರ ಮಾದಕ ದ್ರವ್ಯಗಳನ್ನು ಬೆರೆಸಿದ ಕೊಕೇನ್ ಅನ್ನು ಪೂರೈಸುವ ಮೂಲಕ ಡ್ರಗ್​ ಜಾಲಗಳಲ್ಲಿ ತೊಡಗಿದ್ದಾನೆ. ಇದು ರಾಷ್ಟ್ರೀಯ ಭದ್ರತೆಗೆ ಬೆದರಿಕೆಯಾಗಿದೆ. ಮಡುರೊ ಯಾವುದೇ ಸಂದರ್ಭದಲ್ಲೂ ಟ್ರಂಪ್ ಆಡಳಿತದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮಡುರೊ ಅಪರಾಧಗಳಿಗೆ ಶಿಕ್ಷೆಯಾಗಬೇಕು ಎಂದು ಹೇಳಿದ್ದರು. ಕಡೆಗೂ, ಮಡುರೊ ಅಮೆರಿಕ ಕೈಗೆ ಸಿಕ್ಕಿಬಿದ್ದಿದ್ದಾರೆ. 
ಅಮೆರಿಕ ಮತ್ತು ವೆನೆಜುವೆಲಾ ನಡುವಿನ ಸಂಘರ್ಷ ಹೊಸದೇನಲ್ಲ. 2020ರಿಂದ, ಮಡುರೊ ಮೇಲೆ ಮಾದಕ ದ್ರವ್ಯ, ಭಯೋತ್ಪಾದನೆ ಮತ್ತು ಕೊಕೇನ್ ಕಳ್ಳಸಾಗಣೆ ಆರೋಪಗಳ ಸರಮಾಲೆಯೇ ಇದೆ. ಅವರ ಮೇಲೆ ಯುನೈಟೆಡ್ ಸ್ಟೇಟ್ಸ್ ಆರ್ಥಿಕ ನಿರ್ಬಂಧಗಳನ್ನು ವಿಧಿಸಿತು. ಇದು ರಾಜತಾಂತ್ರಿಕ ಒತ್ತಡವನ್ನೂ ತಂದಿತು. ಆದಾಗ್ಯೂ, 2024ರಲ್ಲಿ, ಮಡುರೊರನ್ನು ವೆನೆಜುವೆಲಾದ ಅಧ್ಯಕ್ಷರಾಗಿ ಮರು ಆಯ್ಕೆ ಮಾಡಲಾಯಿತು. ಇದನ್ನು ಖಂಡಿಸಿರುವ ಅಮೆರಿಕ, ಯುರೋಪಿಯನ್ ಯೂನಿಯನ್ ಮತ್ತು ಅನೇಕ ಲ್ಯಾಟಿನ್ ಅಮೇರಿಕನ್ ದೇಶಗಳು ಚುನಾವಣೆಯನ್ನು ಅಕ್ರಮ ಎಂದು ಬಣ್ಣಿಸಿತು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net