ಕೂದಲೆಳೆಯಲ್ಲಿ ತಪ್ಪಿದ ಆಪತ್ತು... ಚಂದ್ರನಿಗಿಂತಲೂ ಹತ್ತಿರ ಬಂದು ಹೋದ ಫುಟ್‌ಬಾಲ್ ಮೈದಾನ ಗಾತ್ರದ ಉಲ್ಕಾಶಿಲೆ! Huge Asteroid

ಕೂದಲೆಳೆಯಲ್ಲಿ ತಪ್ಪಿದ ಆಪತ್ತು... ಚಂದ್ರನಿಗಿಂತಲೂ ಹತ್ತಿರ ಬಂದು ಹೋದ ಫುಟ್‌ಬಾಲ್ ಮೈದಾನ ಗಾತ್ರದ ಉಲ್ಕಾಶಿಲೆ! Huge Asteroid
ಕೂದಲೆಳೆಯಲ್ಲಿ ತಪ್ಪಿದ ಆಪತ್ತು... ಚಂದ್ರನಿಗಿಂತಲೂ ಹತ್ತಿರ ಬಂದು ಹೋದ ಫುಟ್‌ಬಾಲ್ ಮೈದಾನ ಗಾತ್ರದ ಉಲ್ಕಾಶಿಲೆ! Huge Asteroid
Published on

ಪ್ರಮುಖ ಮುಖ್ಯಾಂಶಗಳು

  • ಸೋಮವಾರ ಭೂಮಿಯ ಅತ್ಯಂತ ಹತ್ತಿರದಿಂದ ಹಾದುಹೋದ ಆಸ್ಟೆರಾಯ್ಡ್ 2026 JH2 ಉಲ್ಕಾಶಿಲೆ
  • ಕಳೆದ ವಾರವಷ್ಟೆ ಖಗೋಳ ವಿಜ್ಞಾನಿಗಳ ಕಣ್ಣಿಗೆ ಪತ್ತೆಯಾಗಿದ್ದ ಫುಟ್‌ಬಾಲ್ ಮೈದಾನದ ಗಾತ್ರದ ಉಲ್ಕಾಶಿಲೆ
  • ಈ ಬಾಹ್ಯಾಕಾಶ ಶಿಲೆಯು ಭೂಮಿಯಿಂದ ಕೇವಲ 50 ಸಾವಿರ ಮೈಲಿ ಸಮೀಪದಲ್ಲಿ ಚಲಿಸಿದೆ
  • ಅತ್ಯಂತ ವೇಗವಾಗಿ ಹಾದು ಹೋದ ಈ ಉಲ್ಕಾಶಿಲೆಯು 2060 ರವರೆಗೆ ಭೂಮಿಯ ಹತ್ತಿರ ಸುಳಿಯುವುದಿಲ್ಲ
Huge Asteroid : ಖಗೋಳ ವಿಜ್ಞಾನಿಗಳ ಕಣ್ಣಿಗೆ ಬಿದ್ದ ಕೆಲವೇ ದಿನಗಳಲ್ಲಿ, ಸರಿಸುಮಾರು ಒಂದು ಫುಟ್‌ಬಾಲ್ ಮೈದಾನ ಗಾತ್ರದ ಬೃಹತ್ ಉಲ್ಕಾಶಿಲೆಯೊಂದು ಭೂಮಿಯ ಅತ್ಯಂತ ಹತ್ತಿರದಿಂದ ಹಾದುಹೋಗುವ ಮೂಲಕ ವಿಜ್ಞಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ!
ಖಗೋಳ ವಿಜ್ಞಾನ ಲೋಕದಲ್ಲಿ ಕುತೂಹಲ ಮೂಡಿಸಿರುವ 'ಆಸ್ಟೆರಾಯ್ಡ್ 2026 JH2' ಎಂಬ ಹೆಸರಿನ ಈ ಬೃಹತ್ ಉಲ್ಕಾಶಿಲೆಯನ್ನು ಅರಿಜೋನಾದ ಮೌಂಟ್ ಲೆಮನ್ ಸರ್ವೆ ತಂಡವು ಕಳೆದ ವಾರವಷ್ಟೇ ಪತ್ತೆಹಚ್ಚಿತ್ತು. ಇದನ್ನು ಭೂಮಿಗೆ ಅತ್ಯಂತ ಹತ್ತಿರವಿರುವ ಉಲ್ಕಾಶಿಲೆ ಎಂದು ತಕ್ಷಣವೇ ವರ್ಗೀಕರಿಸಲಾಗಿದ್ದು, ಇದು ಸೋಮವಾರ ಸಂಜೆ ನಮ್ಮ ಗ್ರಹದ ಚಂದ್ರನ ಕಕ್ಷೆಯ ಮೂಲಕ ಅತ್ಯಂತ ವೇಗವಾಗಿ ಹಾದುಹೋಗಿದೆ.
ವಿಜ್ಞಾನಿಗಳ ಪ್ರಕಾರ, ಈ ಉಲ್ಕಾಶಿಲೆಯು ಭೂಮಿಯಿಂದ ಕೇವಲ 50 ಸಾವಿರ ಮೈಲಿಗಳಷ್ಟು ಹತ್ತಿರಕ್ಕೆ ಬಂದಿತ್ತು, ಅಂದರೆ ಇದು ಭೂಮಿ ಮತ್ತು ಚಂದ್ರನ ನಡುವಿನ ಒಟ್ಟು ದೂರದ ನಾಲ್ಕನೇ ಒಂದು ಭಾಗದಷ್ಟು (ಕಾಲು ಭಾಗ) ಸಮೀಪಕ್ಕೆ ಬಂದಂತಾಗಿದೆ. ಸರಿಸುಮಾರು 16 ರಿಂದ 35 ಮೀಟರ್ ಅಗಲವಿರಬಹುದು ಎಂದು ಅಂದಾಜಿಸಲಾದ ಈ ಉಲ್ಕಾಶಿಲೆಯು ಗಾತ್ರದಲ್ಲಿ ಅತ್ಯಂತ ಚಿಕ್ಕದಾಗಿದ್ದರಿಂದ ಬರಿಗಣ್ಣಿಗೆ ಕಾಣಿಸದಿದ್ದರೂ, ವಿಶ್ವದಾದ್ಯಂತ ವಿವಿಧ ಭಾಗಗಳಲ್ಲಿದ್ದ ದೂರದರ್ಶಕಗಳ ಸಹಾಯದಿಂದ ಇದನ್ನು ಸ್ಪಷ್ಟವಾಗಿ ವೀಕ್ಷಿಸಲಾಗಿದೆ.
'ಆಸ್ಟೆರಾಯ್ಡ್ 2026 JH2' ನಂತಹ ಉಲ್ಕಾಶಿಲೆಗಳು ಭೂಮಿಗೆ ಇಷ್ಟು ಹತ್ತಿರ ಬರುವುದು ಅತ್ಯಂತ ಅಪರೂಪದ ವಿದ್ಯಮಾನವಾಗಿದೆ. ಮುಂಬರುವ ವರ್ಷದಲ್ಲಿ ಚಂದ್ರನ ಕಕ್ಷೆಯ ಒಳಗಿನಿಂದ ಹಾದುಹೋಗಲಿರುವ ಕೇವಲ ಐದು ಬಾಹ್ಯಾಕಾಶ ಶಿಲೆಗಳಲ್ಲಿ ಇದು ಕೂಡ ಒಂದಾಗಿದೆ. ಇದರ ಬೃಹತ್ ಗಾತ್ರದ ಕಾರಣದಿಂದಾಗಿ ಇದನ್ನು 'ಅಪಾಯಕಾರಿ ವಸ್ತು' ಎಂದು ವರ್ಗೀಕರಿಸಲಾಗಿದ್ದರೂ, ಇದರಿಂದ ಭೂಮಿಗೆ ಯಾವುದೇ ರೀತಿಯ ಡಿಕ್ಕಿಯಾಗುವ ಅಪಾಯವಿರಲಿಲ್ಲ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.
ಲಂಕಾಶೈರ್ ವಿಶ್ವವಿದ್ಯಾಲಯದ ಹಿರಿಯ ಖಗೋಳಶಾಸ್ತ್ರ ಉಪನ್ಯಾಸಕರಾದ ಮಾರ್ಕ್ ನಾರ್ರಿಸ್ ಅವರು ಬಿಬಿಸಿ ಸ್ಕೈ ಅಟ್ ನೈಟ್ ಮ್ಯಾಗಜೀನ್‌ಗೆ ಈ ಕುರಿತು ಮಾಹಿತಿ ನೀಡುತ್ತಾ, ಒಂದು ವೇಳೆ ಈ ಗಾತ್ರದ ಉಲ್ಕಾಶಿಲೆಯು ಭೂಮಿಯ ವಾತಾವರಣವನ್ನು ಪ್ರವೇಶಿಸಿದ್ದರೆ, ಅದು ಪ್ರಾದೇಶಿಕವಾಗಿ ಭಾರಿ ಹಾನಿಯನ್ನುಂಟುಮಾಡುವ ಸಾಮರ್ಥ್ಯ ಹೊಂದಿತ್ತು. ಉದಾಹರಣೆಗೆ, 2013 ರಲ್ಲಿ ರಷ್ಯಾದ ಮೇಲೆ ಸ್ಫೋಟಗೊಂಡ 'ಚೆಲ್ಯಾಬಿನ್ಸ್ಕ್' ಉಲ್ಕೆಯು ಸಹ ಇದೇ ಗಾತ್ರದ್ದಾಗಿತ್ತು. ಅದು ಭೂಮಿಗೆ ಅಪ್ಪಳಿಸುವ ಮುನ್ನವೇ ವಾತಾವರಣದಲ್ಲಿ ಒಡೆದು ಚೂರಾಗಿದ್ದರೂ ಸಹ, ನೂರಾರು ಚದರ ಮೈಲಿ ಪ್ರದೇಶದಲ್ಲಿದ್ದ ಕಟ್ಟಡಗಳಿಗೆ ತೀವ್ರ ಹಾನಿ ಉಂಟುಮಾಡಿತ್ತು ಎಂದು ಎಚ್ಚರಿಸಿದ್ದಾರೆ. ಆದರೆ, ಈ ಉಲ್ಕಾಶಿಲೆಯು ನಿನ್ನೆ ಸೂರ್ಯಾಸ್ತದ ವೇಳೆಗೆ ದಕ್ಷಿಣದ ಆಕಾಶದ ಕಡೆಗೆ ವಾಲಿ ಚಲಿಸಿದ್ದರಿಂದ ಉತ್ತರ ಗೋಳಾರ್ಧದ ಆಕಾಶ ವೀಕ್ಷಕರಿಗೆ ಇದು ಸರಿಯಾಗಿ ಕಾಣಿಸಲಿಲ್ಲ. ದಕ್ಷಿಣ ಗೋಳಾರ್ಧದಲ್ಲಿ ಟೆಲಿಸ್ಕೋಪ್ ಹೊಂದಿರುವವರಿಗೆ ಮಾತ್ರ ಇದನ್ನು ವೀಕ್ಷಿಸುವ ಉತ್ತಮ ಅವಕಾಶವಿತ್ತು ಎಂದು ನಾರ್ರಿಸ್ ಹೇಳಿದ್ದಾರೆ.
ಮಾರ್ಕ್ ನಾರ್ರಿಸ್ ಅವರು ಮುಂದುವರಿದು ಮಾಹಿತಿ ನೀಡುತ್ತಾ, "ಈ '2026 JH2' ಉಲ್ಕಾಶಿಲೆಯು ಆಕಾಶದಲ್ಲಿ ಅತ್ಯಂತ ವೇಗವಾಗಿ (ನಿಮಿಷಕ್ಕೆ ಸರಿಸುಮಾರು ಮೂರನೇ ಒಂದು ಡಿಗ್ರಿಯಷ್ಟು) ಚಲಿಸುವುದರಿಂದ, ಸರಿಯಾದ ಟ್ರ್ಯಾಕಿಂಗ್ ವ್ಯವಸ್ಥೆ ಇಲ್ಲದಿದ್ದರೆ ಇದು ಕೇವಲ ಕೆಲವೇ ಸೆಕೆಂಡುಗಳಲ್ಲಿ ಟೆಲಿಸ್ಕೋಪ್‌ನ ದೃಷ್ಟಿಕೋನದಿಂದ ಮರೆಯಾಗುತ್ತದೆ ಎಂದು ತಿಳಿಸಿದ್ದಾರೆ.
ರಷ್ಯಾದ ನಗರವೊಂದರಲ್ಲಿ ಕಿಟಕಿ ಗಾಜುಗಳನ್ನು ಪುಡಿಪುಡಿ ಮಾಡಿ, ಸುಮಾರು 1500 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಲು ಕಾರಣವಾಗಿದ್ದ ಇತಿಹಾಸದ 'ಚೆಲ್ಯಾಬಿನ್ಸ್ಕ್' ಉಲ್ಕೆಯ ಗಾತ್ರವನ್ನೇ ಹೋಲುವ ಈ ಉಲ್ಕಾಶಿಲೆಯ ಕೆಲವು ತುಣುಕುಗಳು ಭೂಮಿಯ ಮೇಲೆ ಬಿದ್ದಿದ್ದರೂ, ಅದೃಷ್ಟವಶಾತ್ ಜನನಿಬಿಡ ಪ್ರದೇಶಗಳಿಗೆ ಯಾವುದೇ ಹಾನಿ ಮಾಡಿರಲಿಲ್ಲ.
ಇನ್ನು ಯುರೋಪಿಯನ್ ಸ್ಪೇಸ್ ಏಜೆನ್ಸಿ (ESA) ಪ್ರಕಾರ, ಈ ಉಲ್ಕಾಶಿಲೆಯು ಇನ್ನು ಮುಂದೆ 2060 ರವರೆಗೆ ಭೂಮಿಯ ಹತ್ತಿರ ಸುಳಿಯುವುದಿಲ್ಲ ಮತ್ತು ಆ ಸಮಯದಲ್ಲಿ ಇದು ಈಗಿಗಿಂತಲೂ ಅತ್ಯಂತ ಹೆಚ್ಚಿನ ದೂರದಲ್ಲಿ ಹಾದುಹೋಗಲಿದೆ ಎಂದು ವರದಿಯಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net