ಗಂಡಸರಲ್ಲಿ ಈ ವಯಸ್ಸಲ್ಲಿ ಲೈಂಗಿಕ ಆಸಕ್ತಿ ಹೆಚ್ಚಾಗುತ್ತಂತೆ: ಹಾಗಾದ್ರೆ ಮಹಿಳೆಯರಲ್ಲಿ? ಹೊಸ ಅಧ್ಯಯನದಲ್ಲಿ ಅಚ್ಚರಿ ಮಾಹಿತಿ! New Study

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ವಯಸ್ಸಾದಂತೆ ಪುರುಷರ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತದೆ ಎಂಬುದು ಸಾಂಪ್ರದಾಯಿಕ ನಂಬಿಕೆ
  • ಎಸ್ಟೋನಿಯಾದ ಟಾರ್ಟು ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಹೊಸ ಸಂಗತಿ
  • 20 ರಿಂದ 84 ವರ್ಷ ವಯಸ್ಸಿನ 67,000 ಪುರುಷರ ಡೇಟಾವನ್ನು ವಿಶ್ಲೇಷಿಸುವ ಮೂಲಕ ಅಧ್ಯಯನ
ಲಂಡನ್: ವಯಸ್ಸಾದಂತೆ ಪುರುಷರ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತದೆ ಎಂಬ ಸಾಂಪ್ರದಾಯಿಕ ನಂಬಿಕೆಯನ್ನು ಹೊಸ ಅಧ್ಯಯನವೊಂದು ಸಾರಾಸಗಟಾಗಿ ತಳ್ಳಿಹಾಕಿದೆ. ಎಸ್ಟೋನಿಯಾದ ಟಾರ್ಟು ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನವು ( New Study ) ಪುರುಷರಲ್ಲಿ ಲೈಂಗಿಕ ಆಸೆಯು 40ರ ದಶಕದಲ್ಲಿ ಗರಿಷ್ಠ ಮಟ್ಟ ತಲುಪುತ್ತದೆ ಎಂದು ತೋರಿಸಿದೆ.
ಸುಮಾರು 20 ರಿಂದ 84 ವರ್ಷ ವಯಸ್ಸಿನ 67,000 ಪುರುಷರ ಡೇಟಾವನ್ನು ವಿಶ್ಲೇಷಿಸುವ ಮೂಲಕ ಸಂಶೋಧಕರು ಇಂಥದ್ದೊಂದು ತೀರ್ಮಾನಕ್ಕೆ ಬಂದಿದ್ದಾರೆ.
ಪುರುಷರಲ್ಲಿ ಲೈಂಗಿಕ ಆಸಕ್ತಿ 20ರ ದಶಕದಲ್ಲಿ ಹೆಚ್ಚಾಗಲು ಆರಂಭವಾಗುತ್ತದೆ. 40ರ ದಶಕದ ಆರಂಭದಲ್ಲಿ ಅದು ಉತ್ತುಂಗಕ್ಕೆ ಏರುತ್ತದೆ. ಇದಾದ ನಂತರ, ಅದು ಕ್ರಮೇಣ ಕಡಿಮೆಯಾಗುತ್ತದೆ. 60ರ ದಶಕದ ಪುರುಷರು 20ರ ದಶಕದಲ್ಲಿರುವಂತೆಯೇ ಲೈಂಗಿಕ ಆಸಕ್ತಿಯನ್ನು ಹೊಂದಿರುತ್ತಾರೆ ಎಂಬುದು ಈ ಅಧ್ಯಯನದಲ್ಲಿ ಕಂಡುಬಂದಿರುವ ಗಮನಾರ್ಹ ಸಂಗತಿ.
ಆದಾಗ್ಯೂ, ಮಹಿಳೆಯರಿಗೆ ಇದು ವಿರುದ್ಧವಾಗಿ ಸಂಭವಿಸುತ್ತದೆ. ಮಹಿಳೆಯರ ಲೈಂಗಿಕ ಆಸಕ್ತಿ 20 ಮತ್ತು 30ರ ದಶಕದ ಆರಂಭದಲ್ಲಿ ಅತ್ಯಧಿಕವಾಗಿರುತ್ತದೆ. 50 ವರ್ಷಗಳ ನಂತರ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಬಹುತೇಕ ಎಲ್ಲಾ ವಯಸ್ಸಿನಲ್ಲೂ ಪುರುಷರಲ್ಲಿ ಮಹಿಳೆಯರಿಗಿಂತಲೂ ಹೆಚ್ಚಿನ ಲೈಂಗಿಕ ಬಯಕೆ ಇರುತ್ತದೆ. 60 ವರ್ಷಗಳ ನಂತರ ಮಾತ್ರ ಪುರುಷರ ಲೈಂಗಿಕ ಆಸಕ್ತಿ ಮಹಿಳೆಯರ ಗರಿಷ್ಠ ಮಟ್ಟಕ್ಕಿಂತ ಕಡಿಮೆಯಾಗುತ್ತದೆ.
ಪುರುಷರ ಹಾರ್ಮೋನ್ ಟೆಸ್ಟೋಸ್ಟೆರಾನ್ ಸಾಮಾನ್ಯವಾಗಿ 30 ವರ್ಷಗಳ ನಂತರ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಆದಾಗ್ಯೂ, 40ರ ದಶಕದಲ್ಲಿ ಲೈಂಗಿಕ ಆಸಕ್ತಿ ಹೆಚ್ಚಾಗುವುದು ಸಂಪೂರ್ಣವಾಗಿ ಜೈವಿಕ ಕಾರಣಗಳಿಂದಲ್ಲ ಎಂದು ಸಂಶೋಧಕರು ಹೇಳುತ್ತಾರೆ. 40ರ ದಶಕದ ಪುರುಷರು ಸುರಕ್ಷಿತ ಮತ್ತು ಸ್ಥಿರವಾದ ವೈವಾಹಿಕ ಸಂಬಂಧಗಳನ್ನು ಹೊಂದಿರುವ ಸಾಧ್ಯತೆ ಹೆಚ್ಚು. ತಮ್ಮ ಸಂಗಾತಿಯೊಂದಿಗೆ ಭಾವನಾತ್ಮಕ ನಿಕಟತೆ ಮತ್ತು ಮಾನಸಿಕ ತೃಪ್ತಿ ಈ ವಯಸ್ಸಿನಲ್ಲಿ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಕಚೇರಿಯಲ್ಲಿ ಕೆಲಸ ಮಾಡುವವರು ಮತ್ತು ಸೇಲ್ಸ್​ ವಿಭಾಗದಲ್ಲಿ ಕೆಲಸ ಮಾಡುವ ಪುರುಷರು ಲೈಂಗಿಕತೆಯ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುತ್ತಾರೆ ಎಂದು ಅಧ್ಯಯನ ಹೇಳುತ್ತದೆ. ಆದರೆ, ಸೈನಿಕರು ಮತ್ತು ಡ್ರೈವರ್​ಗಳಲ್ಲಿ ಇದು ಕಡಿಮೆ ಇರುತ್ತದೆ. ವಿವಾಹಿತ ಪುರುಷರು, ಅವಿವಾಹಿತ ಪುರುಷರಿಗಿಂತ ಹೆಚ್ಚು ಲೈಂಗಿಕ ಆಸಕ್ತಿ ಹೊಂದಿರುತ್ತಾರೆ. ಆದರೆ, ಮಹಿಳೆಯರಲ್ಲಿ, ಸಂಗಾತಿ ಇಲ್ಲದವರು ಹೆಚ್ಚು ಆಸಕ್ತಿ ಹೊಂದಿರುತ್ತಾರೆ ಎಂದು ಅಧ್ಯಯನ ಹೇಳುತ್ತದೆ.
ಇನ್ನು ಹೆಚ್ಚು ಮಕ್ಕಳನ್ನು ಹೊಂದಿರುವ ಮಹಿಳೆಯರು ಕಡಿಮೆ ಲೈಂಗಿಕ ಬಯಕೆ ಹೊಂದಿರುತ್ತಾರೆ ಆದರೆ, ಪುರುಷರು ಇದಕ್ಕೆ ವಿರುದ್ಧವಾಗಿರುತ್ತಾರೆ ಎಂದು ಅಧ್ಯಯನ ಹೇಳಿದೆ. ಅಂದಹಾಗೆ, ಹೊಸ ಅಧ್ಯಯನದ ಪ್ರಕಾರ, ಲೈಂಗಿಕ ಬಯಕೆಯು ಕೇವಲ ದೈಹಿಕ ವಿಷಯವಲ್ಲ, ಅದು ವ್ಯಕ್ತಿಗಳ ಸಾಮಾಜಿಕ ಮತ್ತು ಮಾನಸಿಕ ಸಂದರ್ಭಗಳನ್ನು ಅವಲಂಬಿಸಿರುತ್ತದೆ ಎಂಬುದನ್ನು ಎತ್ತಿ ತೋರಿಸಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net