ನೇತನ್ಯಾಹುಗೆ ಸಂಕಷ್ಟ! ಇಸ್ರೇಲ್ ಪ್ರಧಾನಿ ಪದಚ್ಯುತಿಗೆ ನಡೆದಿದೆ ಸಂಚು

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು
Published on

ಅಮೆರಿಕದೊಂದಿಗೆ ಸೇರಿ ಇರಾನ್ ವಿರುದ್ಧ ಯುದ್ಧವನ್ನು ಸಾರಿರುವ ಹಾಗೂ ತಮ್ಮ ಕಠಿಣ ನಿಲುವುಗಳಿಂದಲೇ ಪ್ರಸಿದ್ಧವಾಗಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರಸಕ್ತ ಸಂದಿಗ್ಧ ಸ್ಥಿತಿಯಲ್ಲಿ ಸಿಲುಕಿದ್ದಾರೆ. ಇಸ್ರೇಲ್ ರಾಜಕೀಯ ರಂಗದಲ್ಲಿ ಮಹತ್ವದ ಬೆಳವಣಿಗೆ ಸಂಭವಿಸಿದ್ದು, ನೆತನ್ಯಾಹು ವಿರೋಧಿಗಳು ಒಂದಾಗಿದ್ದಾರೆ. 2021ರಲ್ಲಿ ವಿರೋಧಿಗಳು ಹೀಗೆ ತೋರಿದ ಒಗ್ಗಟ್ಟೇ ನೆತನ್ಯಾಹು ಸೋಲಿಗೆ ಕಾರಣವಾಗಿತ್ತು. ಹಾಗಾಗಿ, ಮುಂಬರುವ ಚುನಾವಣೆಯಲ್ಲಿ ನೆತನ್ಯಾಹು ಅಧಿಕಾರ ಕಳೆದುಕೊಳ್ಳುತ್ತಾರಾ ಎಂಬ ಜಿಜ್ಞಾಸೆ ನಡುವೆಯೇ, ಇಸ್ರೇಲ್ ಪಿಎಂ ಆರೋಗ್ಯದ ಬಗ್ಗೆಯೂ ಕಳವಳ ವ್ಯಕ್ತವಾಗಿದೆ. ಪೊ›ಸ್ಟೇಟ್ ಕ್ಯಾನ್ಸರ್​ನ ಆರಂಭಿಕ ಲಕ್ಷಣ ಕಂಡುಬಂದಿದ್ದರಿಂದ, ಚಿಕಿತ್ಸೆ ಪಡೆದುಕೊಂಡಿರುವ ಮಾಹಿತಿಯನ್ನು ಖುದ್ದು ನೆತನ್ಯಾಹು ಬಹಿರಂಗಪಡಿಸಿದ್ದಾರೆ. ಈ ಬೆಳವಣಿಗೆಗಳ ಕುರಿತಾದ ವಿವರ ಇಲ್ಲಿದೆ.

ಶತ್ರುರಾಷ್ಟ್ರಗಳ ಎದೆ ನಡುಗಿಸುವ ದಿಟ್ಟ ಕ್ರಮಗಳ ಮೂಲಕವೇ ಜಾಗತಿಕ ರಾಜಕಾರಣದಲ್ಲಿ ಗುರುತಿಸಿಕೊಂಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಈ ಬಾರಿಯ ಸಂಘರ್ಷದಲ್ಲಿ ಲೆಬನಾನ್​ಗೂ ಭಾರಿ ಪ್ರಮಾಣದಲ್ಲಿ ಹಾನಿ ಒದಗಿಸಿದ್ದಾರೆ. ಆದರೆ, ಇಸ್ರೇಲ್ ಪದೇಪದೆ ಯುದ್ಧಗಳನ್ನು ಸಾರುತ್ತಿರುವುದು ಮತ್ತು ಆ ಯುದ್ಧಗಳು ದೀರ್ಘಾವಧಿ ನಡೆಯುತ್ತಿರುವ ಪರಿಣಾಮ ನೆತನ್ಯಾಹು ವಿರುದ್ಧ ದೇಶದೊಳಗೇ ಅಸಮಾಧಾನದ ಅಲೆ ಸೃಷ್ಟಿಯಾಗಿದೆ. ಇದರ ಲಾಭ ಪಡೆಯಲು ನೆತನ್ಯಾಹು ವಿರೋಧಿಗಳು ಈಗಿನಿಂದಲೇ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ. ಇಸ್ರೇಲ್ ಸಂಸತ್ತಿಗೆ 2027ರ ಅಕ್ಟೋಬರ್​ನಲ್ಲಿ ಚುನಾವಣೆ ನಡೆಯಲಿದ್ದು, ಈಗಿನಿಂದಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಆದರೆ, 2026ರ ಅಕ್ಟೋಬರ್​ನಲ್ಲೇ ಸಂಸತ್ತನ್ನು ವಿಸರ್ಜಿಸಿ, ಚುನಾವಣೆಗೆ ಹೋಗಲು ನೆತನ್ಯಾಹು ಚಿಂತನೆ ನಡೆಸಿದ್ದಾರೆ.

ಇಸ್ರೇಲ್​ನ ಇಬ್ಬರು ಪ್ರಬಲ ನಾಯಕರಾದ ಮಾಜಿ ಪ್ರಧಾನಿ ನಾಫ್ತಾಲಿ ಬೆನೆಟ್ ಮತ್ತು ಮಾಜಿ ಪ್ರಧಾನಿ, ಹಾಲಿ ಪ್ರತಿಪಕ್ಷ ನಾಯಕ ಯರ್ ಲ್ಯಾಪಿಡ್ ಮುಂಬರುವ ಚುನಾವಣೆಯಲ್ಲಿ ಜಂಟಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ದೀರ್ಘಕಾಲದವರೆಗೆ ಅಧಿಕಾರದಲ್ಲಿರುವ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಪದಚ್ಯುತಗೊಳಿಸುವುದೇ ಈ ಮೈತ್ರಿಯ ಮುಖ್ಯ ಗುರಿಯಾಗಿದೆ. ಈ ಇಬ್ಬರು ನಾಯಕರು ಸೇರಿ ‘ಟುಗೆದರ್’ (ಹೀಬ್ರೂ ಭಾಷೆಯಲ್ಲಿ ‘ಬೆಯಾಹಾದ್’) ಎಂಬ ಹೊಸ ರಾಜಕೀಯ ಪಕ್ಷವನ್ನು ಘೊಷಿಸಿದ್ದಾರೆ. ಈ ನೂತನ ಮೈತ್ರಿಕೂಟದ ನೇತೃತ್ವವನ್ನು ನಾಫ್ತಾಲಿ ಬೆನೆಟ್ ವಹಿಸಲಿದ್ದು, ಅವರೇ ಮುಂದಿನ ಪ್ರಧಾನಿ ಅಭ್ಯರ್ಥಿಯಾಗಿಯೂ ಕಣಕ್ಕಿಳಿಯಲಿದ್ದಾರೆ. ಇಸ್ರೇಲ್ ಸಂಸತ್ತು ಒಟ್ಟು 120 ಕ್ಷೇತ್ರಗಳನ್ನು ಹೊಂದಿದ್ದು, ಬಹುಮತಕ್ಕೆ 61 ಸ್ಥಾನಗಳು ಅವಶ್ಯ.

ಇತಿಹಾಸ ಪುನರಾವರ್ತನೆ

ಬೆನೆಟ್ ಮತ್ತು ಲ್ಯಾಪಿಡ್ ಈ ಹಿಂದೆ 2021ರಲ್ಲೂ ಕೈಜೋಡಿಸಿದ್ದರು. ಆಗ ವಿವಿಧ ಸಿದ್ಧಾಂತಗಳ ಪಕ್ಷಗಳನ್ನು ಒಟ್ಟುಗೂಡಿಸಿದಲ್ಲದೆ, 12 ವರ್ಷಗಳ ನೆತನ್ಯಾಹು ಆಡಳಿತವನ್ನು ಕೊನೆಗೊಳಿಸಿದ್ದರು. ಈಗ ಅದೇ ಮಾದರಿಯಲ್ಲಿ ಮತ್ತೆ ಒಂದಾಗಿರುವ ಈ ನಾಯಕರು, ನೆತನ್ಯಾಹು ಅವರ ಪ್ರಸ್ತುತ ಸರ್ಕಾರಕ್ಕೆ ಪ್ರಬಲ ಸವಾಲೊಡ್ಡಲು ಸಜ್ಜಾಗಿದ್ದಾರೆ. ಈ ಮೈತ್ರಿಯು ಇಸ್ರೇಲ್​ನ 2027ರ ಚುನಾವಣಾ ಫಲಿತಾಂಶದ ಮೇಲೆ ಯಾವ ರೀತಿಯ ಪ್ರಭಾವ ಬೀರಲಿದೆ ಎಂಬುದು ಈಗ ಜಾಗತಿಕ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಇಸ್ರೇಲ್​ನಲ್ಲಿನ ದೀರ್ಘಕಾಲದ ಆಡಳಿತ ವಿರೋಧಿ ಅಲೆಯನ್ನು ಬಳಸಿಕೊಂಡು ಅಧಿಕಾರ ಹಿಡಿಯುವುದು ಹಾಗೂ ದೇಶದ ವಿಭಜಿತ ರಾಜಕೀಯ ಶಕ್ತಿಗಳನ್ನು ಒಂದುಗೂಡಿಸಿ ಸುಸ್ಥಿರ ಸರ್ಕಾರ ನೀಡುವುದು ಈ ಮೈತ್ರಿಯ ಉದ್ದೇಶವಾಗಿದೆ ಎಂದು ನಾಫ್ತಾಲಿ ಬೆನೆಟ್ ಹೇಳಿದ್ದಾರೆ.

ಮೈತ್ರಿ ಸರ್ಕಾರದ ಏರಿಳಿತ

2021ರಲ್ಲಿ ನಡೆದ ಒಪ್ಪಂದದ ಪ್ರಕಾರ, ನಾಫ್ತಾಲಿ ಬೆನೆಟ್ ಮೊದಲು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು ಮತ್ತು ನಂತರದ ಅವಧಿಗೆ ಯರ್ ಲ್ಯಾಪಿಡ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳಬೇಕಿತ್ತು. ಈ ಸರ್ಕಾರವು ಅತ್ಯಲ್ಪ ಬಹುಮತದ ಮೇಲೆ ನಿಂತಿತ್ತು. ಈ ಮೈತ್ರಿಕೂಟದಲ್ಲಿ ದಕ್ಷಿಣಪಂಥಿ, ವಾಮಪಂಥಿ, ಮಧ್ಯಮಾರ್ಗಿ ಹಾಗೂ ಅರಬ್ ಮೂಲದ ಪಕ್ಷಗಳೂ ಸೇರಿದ್ದವು. ವಿಭಿನ್ನ ಸಿದ್ಧಾಂತಗಳನ್ನು ಹೊಂದಿದ್ದ ಈ ಪಕ್ಷಗಳ ನಡುವೆ ರಾಷ್ಟ್ರೀಯ ಭದ್ರತೆ, ಪ್ಯಾಲೆಸ್ತೀನ್ ವಿವಾದ ಮತ್ತು ಇಸ್ರೇಲಿ ವಸಾಹತುಗಳ ನಿರ್ವಣದಂತಹ ಸೂಕ್ಷ್ಮ ವಿಚಾರಗಳಲ್ಲಿ ತೀವ್ರ ಭಿನ್ನಾಭಿಪ್ರಾಯಗಳಿದ್ದವು. ಇದರಿಂದಾಗಿ ಸರ್ಕಾರದ ಒಳಗಡೆ ನಿರಂತರವಾಗಿ ಘರ್ಷಣೆಗಳು ನಡೆಯುತ್ತಿದ್ದವು. ಅಂತಿಮವಾಗಿ ಆಡಳಿತ ನಡೆಸುವುದು ಅಸಾಧ್ಯವಾದಾಗ, ಬೆನೆಟ್ ಮತ್ತು ಲ್ಯಾಪಿಡ್ ಜಂಟಿಯಾಗಿ ಸಂಸತ್ತನ್ನು ವಿಸರ್ಜಿಸಿ ಹೊಸ ಚುನಾವಣೆಗೆ ಹಾದಿ ಮಾಡಿಕೊಟ್ಟಿದ್ದರು.

ನೆತನ್ಯಾಹು ಪುನರಾಗಮನ ಮತ್ತು ಈಗಿನ ಸ್ಥಿತಿ

ನಂತರ 2022ರಲ್ಲಿ ನಡೆದ ಚುನಾವಣೆಯಲ್ಲಿ ಬೆಂಜಮಿನ್ ನೆತನ್ಯಾಹು ಭರ್ಜರಿ ಜಯಗಳಿಸಿ ಮತ್ತೆ ಅಧಿಕಾರಕ್ಕೆ ಮರಳಿದರು. ಯರ್ ಲ್ಯಾಪಿಡ್ ಪ್ರತಿಪಕ್ಷ ನಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮತ್ತೊಂದೆಡೆ, ನಾಫ್ತಾಲಿ ಬೆನೆಟ್ ಸಕ್ರಿಯ ರಾಜಕೀಯದಿಂದ ತಾತ್ಕಾಲಿಕ ವಿರಾಮ ಪಡೆದಿದ್ದರು ಮತ್ತು ಅವರ ‘ಯಮೀನಾ’ ಪಕ್ಷವು 2022ರಲ್ಲಿ ಚುನಾವಣಾ ಕಣದಿಂದ ದೂರ ಉಳಿದಿತ್ತು. ಈಗ ಮತ್ತೆ ಒಂದಾಗಿರುವ ಈ ನಾಯಕರ ಬಗ್ಗೆ ಲ್ಯಾಪಿಡ್ ಅವರ ಪಕ್ಷವು ಪ್ರತಿಕ್ರಿಯಿಸಿದ್ದು, ‘ಈ ನಿರ್ಧಾರದ ಮುಖ್ಯ ಉದ್ದೇಶವೇ ಪ್ರತಿಪಕ್ಷಗಳನ್ನು ಒಗ್ಗೂಡಿಸುವುದು. ಆಂತರಿಕ ಕಲಹಗಳನ್ನು ಕೊನೆಗಾಣಿಸಿ, ಮುಂಬರುವ ನಿರ್ಣಾಯಕ ಚುನಾವಣೆಯಲ್ಲಿ ಗೆಲುವು ಸಾಧಿಸುವುದೇ ನಮ್ಮ ಏಕೈಕ ಗುರಿ’ ಎಂದು ಸ್ಪಷ್ಟಪಡಿಸಿದೆ.

ವಿಭಿನ್ನ ಸಿದ್ಧಾಂತಗಳ ವಿಶಿಷ್ಟ ಮೈತ್ರಿ

ನಾಫ್ತಾಲಿ ಬೆನೆಟ್ ಮತ್ತು ಯರ್ ಲ್ಯಾಪಿಡ್ ಒಂದೇ ಗುರಿಯೊಂದಿಗೆ ಕೈಜೋಡಿಸಿದ್ದರೂ, ಅವರ ವೈಯಕ್ತಿಕ ರಾಜಕೀಯ ಸಿದ್ಧಾಂತಗಳು ಮತ್ತು ಆಲೋಚನಾ ಕ್ರಮಗಳು ಪರಸ್ಪರ ಭಿನ್ನವಾಗಿವೆ ಎಂಬುದು ಗಮನಾರ್ಹ. ನಾಫ್ತಾಲಿ ಬೆನೆಟ್ ಮೂಲತಃ ಕಟ್ಟರ್ ಯಹೂದಿ ರಾಷ್ಟ್ರೀಯತಾವಾದಿ ನಾಯಕ ಎಂದು ಗುರುತಿಸಲ್ಪಟ್ಟಿದ್ದಾರೆ. ಪ್ಯಾಲೇಸ್ತೀನ್ ವಿಚಾರದಲ್ಲಿ ಕಠಿಣ ನಿಲುವನ್ನು ಹೊಂದಿದ್ದು, ಪ್ರತ್ಯೇಕ ಪ್ಯಾಲೇಸ್ತಿನ್ ರಾಷ್ಟ್ರ ರಚನೆಯ ಆಲೋಚನೆಯನ್ನು ಮೊದಲಿನಿಂದಲೂ ವಿರೋಧಿಸುತ್ತ ಬಂದಿದ್ದಾರೆ. ಅಲ್ಲದೆ, ವೆಸ್ಟ್ ಬ್ಯಾಂಕ್​ನಲ್ಲಿ ಯಹೂದಿ ವಸಾಹತುಗಳ ನಿರ್ವಣವನ್ನು ಬಲವಾಗಿ ಬೆಂಬಲಿಸುತ್ತಾರೆ. ‘ಇಸ್ರೇಲ್​ನ ರಾಷ್ಟ್ರೀಯ ಭದ್ರತೆಯೇ ಎಲ್ಲಕ್ಕಿಂತ ಮಿಗಿಲು ಮತ್ತು ಈ ವಿಷಯದಲ್ಲಿ ಯಾವುದೇ ರಾಜಿ ಇಲ್ಲ’ ಎಂಬುದು ಬೆನೆಟ್ ಸ್ಪಷ್ಟ ಸಂದೇಶವಾಗಿದೆ.

ಇದಕ್ಕೆ ತದ್ವಿರುದ್ಧವಾಗಿ, ಯರ್ ಲ್ಯಾಪಿಡ್ ಜಾತ್ಯತೀತ ಮತ್ತು ಉದಾರವಾದಿ ಚಿಂತನೆಯ ನಾಯಕರಾಗಿದ್ದಾರೆ. ಇವರ ರಾಜಕೀಯ ಶೈಲಿ ಹೆಚ್ಚು ವ್ಯವಹಾರಿಕ ಮತ್ತು ಸಮತೋಲಿತ ಎಂದು ಪರಿಗಣಿಸಲಾಗಿದೆ. ನಗರ ಪ್ರದೇಶದ ಮಧ್ಯಮ ವರ್ಗ, ವೃತ್ತಿಪರರು ಮತ್ತು ಉದಾರವಾದಿ ಸಿದ್ಧಾಂತ ಹೊಂದಿರುವ ಮತದಾರರ ನಡುವೆ ಲ್ಯಾಪಿಡ್ ಜನಪ್ರಿಯತೆ ಹೊಂದಿದ್ದಾರೆ.

ರಾಜಕೀಯ ತಂತ್ರಗಾರಿಕೆ

ಇಸ್ರೇಲ್​ನ ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ನಾಫ್ತಾಲಿ ಬೆನೆಟ್ ಮತ್ತು ಯರ್ ಲ್ಯಾಪಿಡ್ ಮೈತ್ರಿಯು ಕೇವಲ ಆಯ್ಕೆಯಾಗಿರದೆ, ಅನಿವಾರ್ಯತೆಯಾಗಿ ಮಾರ್ಪಟ್ಟಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ ಲ್ಯಾಪಿಡ್ ಅವರ ‘ಯೆಶ್ ಅತೀದ್’ ಪಕ್ಷವು 24 ಸ್ಥಾನಗಳೊಂದಿಗೆ ಸಂಸತ್ತಿನಲ್ಲಿ ಅತಿದೊಡ್ಡ ವಿರೋಧ ಪಕ್ಷವಾಗಿದೆ. ಆದರೆ, ಇತ್ತೀಚಿನ ಚುನಾವಣಾ ಪೂರ್ವ ಸಮೀಕ್ಷೆಗಳು ಲ್ಯಾಪಿಡ್ ಅವರಿಗೆ ಆಘಾತ ನೀಡಿವೆ. ಮುಂದಿನ ಚುನಾವಣೆಯಲ್ಲಿ ಅವರ ಪಕ್ಷದ ಸ್ಥಾನಗಳು ಕೇವಲ 5ಕ್ಕೆ ಕುಸಿಯುವ ಸಾಧ್ಯತೆಯಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಇಂತಹ ಸಂಕಷ್ಟದ ಸಮಯದಲ್ಲಿ ಬೆನೆಟ್ ಅವರೊಂದಿಗೆ ಕೈಜೋಡಿಸುವುದು ಲ್ಯಾಪಿಡ್ ಅವರ ರಾಜಕೀಯ ಅಸ್ತಿತ್ವಕ್ಕೆ ಅವಶ್ಯಕವಾಗಿದೆ. ಮತ್ತೊಂದೆಡೆ, ನಾಫ್ತಾಲಿ ಬೆನೆಟ್ ಅವರಿಗೂ ಈ ಮೈತ್ರಿ ಅನಿವಾರ್ಯವಾಗಿತ್ತು. ಇಸ್ರೇಲ್ ಸೇನೆಯ ಮಾಜಿ ಮುಖ್ಯಸ್ಥ ಗಾದಿ ಐಸೆಂಕೋಟ್ ರಾಜಕೀಯ ಪ್ರವೇಶವು ಬೆನೆಟ್ ಮತಬ್ಯಾಂಕ್​ಗೆ ದೊಡ್ಡ ಹೊಡೆತ ನೀಡಿದೆ. ಮಿಲಿಟರಿ ಹಿನ್ನೆಲೆ ಮತ್ತು ಜನಪ್ರಿಯತೆ ಹೊಂದಿರುವ ಐಸೆಂಕೋಟ್ ಅವರು ಬೆನೆಟ್ ಬೆಂಬಲಿಗರನ್ನು ಸೆಳೆಯುತ್ತಿದ್ದಾರೆ. ನಾಫ್ತಾಲಿ ಬೆನೆಟ್ ಅವರು ಐಸೆಂಕೋಟ್ ಅವರಿಗೂ ಈ ‘ಟುಗೆದರ್’ ಮೈತ್ರಿಕೂಟಕ್ಕೆ ಸೇರುವಂತೆ ಅಧಿಕೃತ ಆಹ್ವಾನ ನೀಡಿದ್ದಾರೆ. ಆದರೆ, ಐಸೆಂಕೋಟ್ ಈ ಬಗ್ಗೆ ಇನ್ನೂ ಯಾವುದೇ ಅಂತಿಮ ನಿರ್ಧಾರ ಪ್ರಕಟಿಸಿಲ್ಲ.

ಪ್ರಾಸ್ಟೇಟ್ ಕ್ಯಾನ್ಸರ್ ಎಂದರೇನು?

ಪ್ರಾಸ್ಟೇಟ್ ಕ್ಯಾನ್ಸರ್ ಪುರುಷರಲ್ಲಿ ಕಂಡುಬರುವ ಸಾಮಾನ್ಯ ಕಾಯಿಲೆಯಾಗಿದ್ದು, ಇದು ವೀರ್ಯ ದ್ರವದ ಉತ್ಪಾದನೆಗೆ ಸಹಾಯ ಮಾಡುವ ಸಣ್ಣ ಗ್ರಂಥಿಯಾದ ಪ್ರಾಸ್ಟೇಟ್ ಗ್ರಂಥಿಯಲ್ಲಿ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಈ ಕ್ಯಾನ್ಸರ್ ಬಹಳ ನಿಧಾನವಾಗಿ ಬೆಳೆಯುತ್ತದೆ ಮತ್ತು ಆರಂಭಿಕ ಹಂತದಲ್ಲಿ ಯಾವುದೇ ಸ್ಪಷ್ಟ ಲಕ್ಷಣಗಳನ್ನು ತೋರಿಸುವುದಿಲ್ಲ. ಆದ್ದರಿಂದ, ನಿಯಮಿತ ವೈದ್ಯಕೀಯ ತಪಾಸಣೆಯು ಈ ರೋಗದ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಕ್ಯಾನ್ಸರ್ ಗೆದ್ದ ಬೆಂಜಮಿನ್

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (76) ಪ್ರಾಸ್ಟೇಟ್ ಕ್ಯಾನ್ಸರ್​ನ ಆರಂಭಿಕ ಹಂತದ ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ ಎಂದು ಅಧಿಕೃತವಾಗಿ ಪ್ರಕಟಿಸಲಾಗಿದೆ. 2024ರಲ್ಲಿ ಅವರು ಮಾಡಿಸಿಕೊಂಡಿದ್ದ ಪ್ರಾಸ್ಟೇಟ್ ಸಂಬಂಧಿತ ಶಸ್ತ್ರಚಿಕಿತ್ಸೆಯ ನಂತರದ ನಿಯಮಿತ ತಪಾಸಣೆಯ ವೇಳೆ, ಅತೀ ಸಣ್ಣ ಗಾತ್ರದ (ಒಂದು ಸೆಂಟಿಮೀಟರ್​ಗಿಂತ ಕಡಿಮೆ) ಗೆಡ್ಡೆಯನ್ನು ಆರಂಭದಲ್ಲೇ ಪತ್ತೆಹಚ್ಚಲಾಗಿತ್ತು. ವೈದ್ಯಕೀಯ ವರದಿಗಳ ಪ್ರಕಾರ, ನೆತನ್ಯಾಹು ‘ಟಾರ್ಗೆಟೆಡ್ ರೇಡಿಯೇಶನ್ ಥೆರಪಿ’ಗೆ ಒಳಗಾಗಿದ್ದರು. ಚಿಕಿತ್ಸೆಯ ನಂತರ ಅವರ ದೇಹದಲ್ಲಿ ಕ್ಯಾನ್ಸರ್​ನ ಯಾವುದೇ ಲಕ್ಷಣಗಳಿಲ್ಲ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವುದು ಮತ್ತು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯುವುದು ಎಷ್ಟು ಮುಖ್ಯ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ ಎಂದು ವೈದ್ಯಕೀಯ ತಂಡ ತಿಳಿಸಿದೆ. ಆದರೆ, ನೆತನ್ಯಾಹು ಕ್ಯಾನ್ಸರ್​ಗೆ ಚಿಕಿತ್ಸೆ ಪಡೆದಿದ್ದರು ಎಂಬ ವರದಿಗಳ ಬೆನ್ನಲ್ಲೇ, ಅವರ ಆರೋಗ್ಯದ ಬಗ್ಗೆ ಹಲವು ಊಹಾಪೋಹಗಳು ಕೇಳಿಬರುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net