

ನವದೆಹಲಿ: ಜಗತ್ತಿನ ಸಂಪೂರ್ಣ ಗಮನ ಈಗ ಇರಾನ್-ಇಸ್ರೇಲ್ ಯುದ್ಧದ ಮೇಲೆ ನೆಟ್ಟಿದೆ. ಇಸ್ರೇಲ್ ವೇಗವಾಗಿ ಲೆಬನಾನ್ನ್ನು ವಶಪಡಿಸಿಕೊಳ್ಳುತ್ತಿದೆ. ಕಳೆದ 15 ದಿನಗಳಲ್ಲೇ ಲೆಬನಾನ್ನಲ್ಲಿ ಇಸ್ರೇಲ್ ದಾಳಿಯಿಂದ 800 ಜನರು ಮೃತಪಟ್ಟಿದ್ದಾರೆ. ಹಿಜ್ಬುಲ್ಲಾದ ಸೇನಾ ನೆಲೆ ಮತ್ತು ಶಸ್ತ್ರಾಸ್ತ್ರಗಳ ಸಂಗ್ರಹವನ್ನು ಕೊನೆಗೊಳಿಸುವುದೇ ನಮ್ಮ ಉದ್ದೇಶವಾಗಿದೆ ಎಂದು ಇಸ್ರೇಲ್ ಹೇಳಿಕೊಂಡಿದೆ. ಆದರೆ, ಜಾಗತಿಕ ರಕ್ಷಣಾ ವಿಶ್ಲೇಷಕರ ಪ್ರಕಾರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕ್ರಮಗಳು ‘ಗ್ರೇಟರ್ ಇಸ್ರೇಲ್’ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿವೆ. ಈ ಹಿಂದೆ ನಡೆದಿದ್ದ ಇಸ್ರೇಲ್-ಹಮಾಸ್ ಯುದ್ಧದ ಸಂದರ್ಭದಲ್ಲೂ ಇಸ್ರೇಲ್ ಸೈನಿಕರ ಸಮವಸ್ತ್ರದ ಮೇಲೆ ‘ಗ್ರೇಟರ್ ಇಸ್ರೇಲ್’ ನಕ್ಷೆಯ ಚಿತ್ರವಿತ್ತು. ಅಷ್ಟಕ್ಕೂ ಏನಿದು ಗ್ರೇಟರ್ ಇಸ್ರೇಲ್ ಕನಸು, ಈ ವಿಸ್ತರಣಾವಾದದ ಆಶಯ ಈಡೇರುವುದೆ? ಈ ಕುರಿತಾದ ವಿವರ ಇಲ್ಲಿದೆ.
ಗ್ರೇಟರ್ ಇಸ್ರೇಲ್ ಅಥವಾ ‘ಎರೆಟ್ಜ್ ಯಿಸ್ರೇಲ್ ಹಶ್ಲೆಮಾ’ ಎಂಬ ಪರಿಕಲ್ಪನೆಯ ಹಿಂದೆ ಧಾರ್ವಿುಕ ನಂಬಿಕೆ, ಐತಿಹಾಸಿಕ ಅಸ್ಮಿತೆ ಮತ್ತು ಆಧುನಿಕ ಭದ್ರತಾ ಸಿದ್ಧಾಂತಗಳು ಬೆಸೆದುಕೊಂಡಿವೆ. ಗ್ರೇಟರ್ ಇಸ್ರೇಲ್ ಅಥವಾ ಅಖಂಡ ಇಸ್ರೇಲ್ ಎನ್ನುವುದು ಕೇವಲ ಒಂದು ಭೌಗೋಳಿಕ ಗಡಿಯಲ್ಲ, ಅದೊಂದು ದಶಕಗಳ ಹಳೆಯ ರಾಜಕೀಯ ಮತ್ತು ಧಾರ್ವಿುಕ ಸಿದ್ಧಾಂತವಾಗಿದೆ. ‘ಗ್ರೇಟರ್ ಇಸ್ರೇಲ್’ ಪರಿಕಲ್ಪನೆಯು ಇಸ್ರೇಲ್-ಪ್ಯಾಲೇಸ್ತೀನ್ ಸಂಘರ್ಷದ ಕೇಂದ್ರಬಿಂದುವಾಗಿದೆ. ಇಸ್ರೇಲ್ನ ಬಲಪಂಥೀಯ ಸರ್ಕಾರವು ಭದ್ರತೆಯ ದೃಷ್ಟಿಯಿಂದ ಭೂಮಿಯ ಮೇಲಿನ ಹಿಡಿತವನ್ನು ಸಾಧಿಸಲು ಬಯಸಿದರೆ, ಅಂತಾರಾಷ್ಟ್ರೀಯ ಸಮುದಾಯವು ಇದನ್ನು ದ್ವಿ-ರಾಷ್ಟ್ರ ಪರಿಹಾರಕ್ಕೆ ದೊಡ್ಡ ಅಡ್ಡಿ ಎಂದು ಪರಿಗಣಿಸುತ್ತದೆ.
ಗ್ರೇಟರ್ ಇಸ್ರೇಲ್ ಪರಿಕಲ್ಪನೆ ಮುಖ್ಯವಾಗಿ ಬೈಬಲ್ನಲ್ಲಿ ಉಲ್ಲೇಖಿಸಲಾದ ವಾಗ್ದತ್ತ ಭೂಮಿ ಎಂಬ ನಂಬಿಕೆ ಮೇಲೆ ಆಧಾರಿತವಾಗಿದೆ. ಯಹೂದಿಗಳ ಪವಿತ್ರ ಗ್ರಂಥವಾದ ‘ತೋರಾ’ ಮತ್ತು ಕ್ರೖೆಸ್ತರ ‘ಹಳೆಯ ಒಡಂಬಡಿಕೆ’ ಯಲ್ಲಿ ಈ ಭೂಮಿಯ ಬಗ್ಗೆ ಸ್ಪಷ್ಟ ಉಲ್ಲೇಖಗಳಿವೆ. ದೇವರು (ಯೆಹೋವ) ಅಬ್ರಹಾಮನಿಗೆ ಮತ್ತು ಅವನ ವಂಶಸ್ಥರಿಗೆ ಈ ಭೂಮಿಯನ್ನು ನೀಡಿದನು ಎಂಬುದು ಯಹೂದಿಗಳ ಬಲವಾದ ನಂಬಿಕೆ. ವೆಸ್ಟ್ ಬ್ಯಾಂಕ್ ಪ್ರದೇಶವನ್ನು ಯಹೂದಿಗಳು ‘ಜುಡಿಯಾ ಮತ್ತು ಸಮಾರಿಯಾ’ ಎಂದು ಕರೆಯುತ್ತಾರೆ. ಇಲ್ಲಿಯೇ ಅವರ ಪೂರ್ವಜರು ವಾಸಿಸುತ್ತಿದ್ದರು ಮತ್ತು ಪ್ರಮುಖ ಧಾರ್ವಿುಕ ಘಟನೆಗಳು ನಡೆದಿದ್ದವು ಎಂಬುದು ಅವರ ನಂಬಿಕೆ.
ಗ್ರೇಟರ್ ಇಸ್ರೇಲ್ ವ್ಯಾಪ್ತಿಯ ಬಗ್ಗೆ ಎರಡು ಪ್ರಮುಖ ಆಯಾಮಗಳಿವೆ. ಮೊದಲನೆಯದಾಗಿ, ಬೈಬಲ್ನ ಕೆಲವು ವ್ಯಾಖ್ಯಾನಗಳ ಪ್ರಕಾರ, ಇದು ಈಜಿಪ್ತ್ನ ನೈಲ್ ನದಿಯಿಂದ ಇರಾಕ್ನ ಯೂಫ್ರೆಟಿಸ್ ನದಿಯವರೆಗಿನ ವಿಶಾಲ ಪ್ರದೇಶವನ್ನು ಒಳಗೊಂಡಿದೆ. ರಾಜಕೀಯ ಆಯಾಮದಲ್ಲಿ, ‘ಗ್ರೇಟರ್ ಇಸ್ರೇಲ್’ ಎಂದರೆ ಪ್ರಸ್ತುತ ಇರುವ ಇಸ್ರೇಲ್ ದೇಶದ ಜೊತೆಗೆ ವೆಸ್ಟ್ ಬ್ಯಾಂಕ್ (ಜೋರ್ಡಾನ್ ನದಿ ಪಶ್ಚಿಮ ದಂಡೆ), ಗಾಜಾ ಪಟ್ಟಿ ಮತ್ತು ಗೋಲನ್ ಹೈಟ್ಸ್ ಪ್ರದೇಶಗಳನ್ನು ಸಂಪೂರ್ಣವಾಗಿ ಇಸ್ರೇಲ್ನ ಭಾಗವಾಗಿಸುವುದು ಎಂದರ್ಥ. ಇಸ್ರೇಲ್ ಸರ್ಕಾರದ ಹಲವು ನೀತಿಗಳು ಗ್ರೇಟರ್ ಇಸ್ರೇಲ್ ಸಾಕಾರಗೊಳಿಸುವ ದಿಕ್ಕಿನಲ್ಲಿವೆ ಎನ್ನುತ್ತಾರೆ ವಿಶ್ಲೇಷಕರು.
ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಪ್ರಸ್ತುತ ಸರ್ಕಾರವು ಇಸ್ರೇಲ್ ಇತಿಹಾಸದಲ್ಲೇ ಅತ್ಯಂತ ಬಲಪಂಥೀಯ ಸರ್ಕಾರವೆಂದು ಪರಿಗಣಿಸಲ್ಪಟ್ಟಿದೆ. ಈ ಸರ್ಕಾರದಲ್ಲಿರುವ ಬೆಜಲೆಲ್ ಸ್ಮೋಟ್ರಿಚ್ ಮತ್ತು ಇಟಮಾರ್ ಬೆನ್-ಗ್ವಿರ್ ಅವರಂತಹ ಮಂತ್ರಿಗಳು ‘ಗ್ರೇಟರ್ ಇಸ್ರೇಲ್’ ಪರಿಕಲ್ಪನೆಯನ್ನು ಬಹಿರಂಗವಾಗಿ ಬೆಂಬಲಿಸುತ್ತಾರೆ. ಅವರು ವೆಸ್ಟ್ ಬ್ಯಾಂಕ್ನ್ನು ಅಧಿಕೃತವಾಗಿ ಇಸ್ರೇಲ್ಗೆ ಸೇರಿಸಿಕೊಳ್ಳಲು ನಿರಂತರವಾಗಿ ಒತ್ತಡ ಹೇರುತ್ತಿದ್ದಾರೆ.
ವೆಸ್ಟ್ ಬ್ಯಾಂಕ್ ಪ್ರದೇಶದಲ್ಲಿ ಯಹೂದಿ ವಸಾಹತುಗಳನ್ನು ನಿರ್ವಿುಸುವುದು ಇಸ್ರೇಲ್ನ ಅತ್ಯಂತ ಪ್ರಮುಖ ಹೆಜ್ಜೆ. ಇದು ಈ ಪ್ರದೇಶದ ಮೇಲೆ ಇಸ್ರೇಲ್ನ ಹಿಡಿತವನ್ನು ಭದ್ರಪಡಿಸುತ್ತದೆ. ವೆಸ್ಟ್ ಬ್ಯಾಂಕ್ನಲ್ಲಿ 200ಕ್ಕೂ ಹೆಚ್ಚು ಅಧಿಕೃತ ವಸಾಹತುಗಳಿದ್ದು, ಇಲ್ಲಿ 5 ಲಕ್ಷಕ್ಕಿಂತ ಹೆಚ್ಚು ಯಹೂದಿಗಳು ವಾಸಿಸುತ್ತಿದ್ದಾರೆ. ಮಾತ್ರವಲ್ಲ, ಪೂರ್ವ ಜೆರುಸಲೆಮ್ಲ್ಲಿ 2.30 ಲಕ್ಷ ಯಹೂದಿ ವಸಾಹತುಗಾರರು ನೆಲೆಸಿದ್ದಾರೆ. ವೆಸ್ಟ್ ಬ್ಯಾಂಕ್ನಲ್ಲಿ ವಾಸಿಸುವ ಯಹೂದಿಗಳ ಸಂಖ್ಯೆ ಇಸ್ರೇಲ್ನ ಒಟ್ಟು ಯಹೂದಿ ಜನಸಂಖ್ಯೆಯ ಸುಮಾರು 10% ರಷ್ಟಿದೆ. ಒಟ್ಟಾರೆ, ಇಸ್ರೇಲ್ ಸರ್ಕಾರವು ವೆಸ್ಟ್ ಬ್ಯಾಂಕ್ನಲ್ಲಿ 19 ಹೊಸ ವಸಾಹತುಗಳಿಗೆ ಅನುಮೋದನೆ ನೀಡಿದೆ. ಇದರಿಂದ ಒಟ್ಟು ಅಧಿಕೃತ ವಸಾಹತುಗಳ ಸಂಖ್ಯೆ 210ಕ್ಕೆ ಏರಿದೆ. ಇದು ಪ್ಯಾಲೆಸ್ತೀನ್ ರಾಷ್ಟ್ರದ ಕನಸನ್ನು ದುರ್ಬಲಗೊಳಿಸುವ ತಂತ್ರವೆಂದು ವಿಶ್ಲೇಷಿಸಲಾಗುತ್ತಿದೆ.
ಇಸ್ರೇಲ್ನ ವಿಸ್ತರಣಾವಾದಕ್ಕೆ ಸಾಕಷ್ಟು ಸವಾಲು ಮತ್ತು ವಿರೋಧಗಳು ಕೂಡ ಇವೆ. ಪ್ಯಾಲೇಸ್ತೀನ್ ಈ ಕ್ರಮವನ್ನು ವಿರೋಧಿಸುತ್ತಿದ್ದು, ತನ್ನ ಅಸ್ತಿತ್ವಕ್ಕೆ ಮಾರಕ ಎಂದು ಭಾವಿಸಿದೆ. ಆಕ್ರಮಿತ ಪ್ರದೇಶಗಳಲ್ಲಿ ವಸಾಹತು ನಿರ್ವಿುಸುವುದು ಕಾನೂನುಬಾಹಿರ ಎಂದು ವಿಶ್ವಸಂಸ್ಥೆ ಹೇಳಿದೆ. ಅಲ್ಲದೆ, ಇಸ್ರೇಲ್ ಅರಬ್ ಪ್ರದೇಶಗಳನ್ನು ಸಂಪೂರ್ಣವಾಗಿ ಸೇರಿಸಿಕೊಂಡರೆ, ಅಲ್ಲಿನ ಅರಬ್ಬರಿಗೆ ಸಮಾನ ಹಕ್ಕುಗಳನ್ನು ನೀಡಬೇಕಾಗುತ್ತದೆ. ಇದರಿಂದ ಇಸ್ರೇಲ್ನ ‘ಯಹೂದಿ ರಾಷ್ಟ್ರ’ ಸ್ವರೂಪಕ್ಕೆ ಧಕ್ಕೆಯಾಗಬಹುದು.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಪ್ರದರ್ಶಿಸುವ ನಕ್ಷೆಗಳಲ್ಲಿ ಪಶ್ಚಿಮ ದಂಡೆ ಮತ್ತು ಗಾಜಾ ಪಟ್ಟಿಯನ್ನು ಇಸ್ರೇಲ್ನ ಭಾಗವಾಗಿಯೇ ತೋರಿಸುತ್ತಾರೆ. 2023ರಲ್ಲಿ ಅವರು ಪ್ರದರ್ಶಿಸಿದ ‘ಹೊಸ ಮಧ್ಯಪ್ರಾಚ್ಯ’ ನಕ್ಷೆಯಲ್ಲಿ ಪ್ಯಾಲಿಸ್ತೀನ್ ಪ್ರದೇಶಗಳನ್ನು ಪ್ರತ್ಯೇಕವಾಗಿ ಗುರುತಿಸಿರಲಿಲ್ಲ. ಜೋರ್ಡಾನ್ ನದಿಯಿಂದ ಮೆಡಿಟರೇನಿಯನ್ ಸಮುದ್ರದವರೆಗಿನ ಸಂಪೂರ್ಣ ಭೂಪ್ರದೇಶದ ಮೇಲೆ ಇಸ್ರೇಲ್ ಭದ್ರತಾ ನಿಯಂತ್ರಣ ಹೊಂದಿರಬೇಕು ಎಂಬುದು ಅವರ ಖಚಿತ ನಿಲುವು. ಪ್ರಸ್ತುತ ಸಂದರ್ಭದಲ್ಲಿ ಸ್ವತಂತ್ರ ಪ್ಯಾಲಿಸ್ತೀನ್ ರಾಷ್ಟ್ರ ರಚನೆಯನ್ನು ನೆತನ್ಯಾಹು ಬಲವಾಗಿ ವಿರೋಧಿಸುತ್ತಿದ್ದಾರೆ.
ಇತಿಹಾಸದಲ್ಲಿ ಯಹೂದಿಗಳು ಈ ಪ್ರದೇಶದಲ್ಲಿ ಎರಡು ಬಾರಿ ಪ್ರಬಲ ಸಾಮ್ರಾಜ್ಯಗಳನ್ನು ಹೊಂದಿದ್ದರು. ಕಿಂಗ್ ಡೇವಿಡ್ ಮತ್ತು ಸೊಲೊಮನ್ ಕಾಲ (ಕ್ರಿ.ಪೂ. 1000) ದಲ್ಲಿ ಇಸ್ರೇಲ್ ಮತ್ತು ಜುಡಾ ಸಾಮ್ರಾಜ್ಯಗಳು ವಿಸ್ತಾರವಾಗಿದ್ದವು. ಇಂದಿನ ಇಸ್ರೇಲ್, ಪ್ಯಾಲೆಸ್ತೀನ್, ಜೋರ್ಡಾನ್ ಮತ್ತು ಸಿರಿಯಾದ ಕೆಲವು ಭಾಗಗಳು ಈ ಸಾಮ್ರಾಜ್ಯದ ಅಡಿಯಲ್ಲಿದ್ದವು. ರೋಮನ್ ಸಾಮ್ರಾಜ್ಯವು ಯಹೂದಿಗಳನ್ನು ಈ ಭೂಮಿಯಿಂದ ಹೊರಹಾಕಿದ ನಂತರ, ಅವರು 2000 ವರ್ಷಗಳ ಕಾಲ ಪ್ರಪಂಚದಾದ್ಯಂತ ಚದುರಿಹೋದರು. ಈ ಸುದೀರ್ಘ ಅವಧಿಯಲ್ಲಿ ‘ತಮ್ಮ ಮೂಲ ಭೂಮಿಗೆ ಹಿಂತಿರುಗಬೇಕು’ ಎಂಬ ಹಂಬಲ ಅವರಲ್ಲಿ ‘ಗ್ರೇಟರ್ ಇಸ್ರೇಲ್’ ಪರಿಕಲ್ಪನೆಯನ್ನು ಜೀವಂತವಾಗಿರಿಸಿತು.
ಗಾಜಾ ಪಟ್ಟಿಯಲ್ಲಿ ಹಮಾಸ್ ವಿರುದ್ಧದ ಯುದ್ಧದ ನಂತರ, ಇಸ್ರೇಲ್ನ ಕೆಲವು ಹಿರಿಯ ಮಂತ್ರಿಗಳು ‘ಗಾಜಾದಲ್ಲಿ ಮತ್ತೆ ಯಹೂದಿ ವಸಾಹತುಗಳನ್ನು ಸ್ಥಾಪಿಸಬೇಕು’ ಎಂಬ ಹೇಳಿಕೆಗಳನ್ನು ನೀಡಿದ್ದಾರೆ. ಅಲ್ಲದೆ, 2024ರಲ್ಲಿ ಇಸ್ರೇಲ್ ಸರ್ಕಾರವು ವೆಸ್ಟ್ ಬ್ಯಾಂಕ್ನ ಸಾವಿರಾರು ಎಕರೆ ಭೂಮಿಯನ್ನು ಸರ್ಕಾರಿ ಭೂಮಿ ಎಂದು ಘೊಷಿಸಿದೆ. ಇದು ಕಳೆದ 30 ವರ್ಷಗಳಲ್ಲೇ ಅತೀ ದೊಡ್ಡ ಭೂಸ್ವಾಧೀನ ಪ್ರಕ್ರಿಯೆ ಎಂದು ವರದಿಯಾಗಿದೆ. ಅಂತಾರಾಷ್ಟ್ರೀಯ ನ್ಯಾಯಾಲಯವು 2024ರಲ್ಲಿ ಇಸ್ರೇಲ್ ಪ್ಯಾಲಿಸ್ತೀನ್ ಪ್ರದೇಶಗಳನ್ನು ಆಕ್ರಮಿಸಿಕೊಂಡಿರುವುದು ಕಾನೂನುಬಾಹಿರ ಎಂದು ಅಭಿಪ್ರಾಯಪಟ್ಟಿದೆ.
ಇಡೀ ಇಸ್ರೇಲ್ ಮತ್ತು ಪ್ಯಾಲೆಸ್ತೀನ್. ಜೋರ್ಡಾನ್ನ ಪಶ್ಚಿಮ ಭಾಗ. ಸಿರಿಯಾ ಮತ್ತು ಲೆಬನಾನ್ನ ಕೆಲವು ಭಾಗಗಳು. ಈಜಿಪ್ತ್ನ ಸಿನಾಯ್ ಪರ್ಯಾಯ ದ್ವೀಪ ಮತ್ತು ಟರ್ಕಿ ಮತ್ತು ಸೌದಿ ಅರೇಬಿಯಾದ ಕೆಲ ಭಾಗವನ್ನು ಇಸ್ರೇಲ್ ಸರ್ಕಾರ ‘ಗ್ರೇಟರ್ ಇಸ್ರೇಲ್’ ಎಂದು ಕರೆಯುತ್ತದೆ. 1967ರ ಯುದ್ಧದಲ್ಲಿ ಇಸ್ರೇಲ್ ಗಾಜಾ, ವೆಸ್ಟ್ ಬ್ಯಾಂಕ್ ಹಾಗೂ ಸುತ್ತಲಿನ ಕೆಲ ಪ್ರದೇಶಗಳನ್ನು ವಶಪಡಿಸಿಕೊಂಡಿತ್ತು. ಆಗಿನಿಂದಲೇ ‘ಗ್ರೇಟರ್ ಇಸ್ರೇಲ್’ನ ಚರ್ಚೆ ಗರಿಗೆದರಿದೆ. 2025ರಲ್ಲೇ ಇಸ್ರೇಲ್ ಪ್ಯಾಲಿಸ್ತೀನ್, ಲೆಬನಾನ್, ಇರಾನ್, ಸಿರಿಯಾ, ಯಮನ್, ಕತಾರ್ ಮೇಲೆ ಕೇವಲ 72 ಗಂಟೆಗಳಲ್ಲಿ ದಾಳಿ ನಡೆಸಿ, ಮೇಲುಗೈ ಸಾಧಿಸಿತ್ತು. ಇದರಲ್ಲಿ ಇರಾನ್ ಹೊರತುಪಡಿಸಿದರೆ ಬಾಕಿ ಪ್ರದೇಶ ‘ಗ್ರೇಟರ್ ಇಸ್ರೇಲ್’ನ ಭಾಗ. ಇಸ್ರೇಲ್-ಹಮಾಸ್ ನಡುವೆ ಕದನವಿರಾಮ ಏರ್ಪಟ್ಟ ನಂತರವೂ ಗಾಜಾ ಪಟ್ಟಿಯ ಅರ್ಧದಷ್ಟು ಭೂಪ್ರದೇಶದ ಮೇಲೆ ಇಸ್ರೇಲ್ ನಿಯಂತ್ರಣ ಹೊಂದಿದೆ.
ಗೋಲನ್ ಹೈಟ್ಸ್ನ್ನು 1981ರಲ್ಲಿ ಇಸ್ರೇಲ್ ಅಧಿಕೃತವಾಗಿ ತನ್ನ ಪ್ರದೇಶಕ್ಕೆ ಸೇರಿಸಿಕೊಂಡಿತು. ಇತ್ತೀಚಿನ ವರ್ಷಗಳಲ್ಲಿ ವೆಸ್ಟ್ ಬ್ಯಾಂಕ್ನ ಕೆಲವು ಭಾಗಗಳನ್ನು ಅಧಿಕೃತವಾಗಿ ಇಸ್ರೇಲ್ಗೆ ಸೇರಿಸಿಕೊಳ್ಳುವ ಬಗ್ಗೆ ಅಲ್ಲಿನ ಬಲಪಂಥೀಯ ನಾಯಕರು ಒತ್ತಾಯಿಸುತ್ತಿದ್ದಾರೆ. ಅಲ್ಲದೆ, ಭದ್ರತೆಯ ಹೆಸರಿನಲ್ಲಿ ವೆಸ್ಟ್ ಬ್ಯಾಂಕ್ ಸುತ್ತ ನಿರ್ವಿುಸಲಾದ ಗೋಡೆ ವಾಸ್ತವಿಕವಾಗಿ ಹೊಸ ಗಡಿಯನ್ನು ಸೃಷ್ಟಿಸುತ್ತಿದೆ.