ನೇಪಾಳ ಪ್ರವಾಹ ದುರಂತ: ಮೃತಪಟ್ಟವರ ಸಂಖ್ಯೆ 552ಕ್ಕೆ ಏರಿಕೆ, 1,500ಕ್ಕೂ ಹೆಚ್ಚು ಮಂದಿ ನಾಪತ್ತೆ; 85 ಭಾರತೀಯರ ರಕ್ಷಣೆ | Nepal flood tragedy

ಪ್ರವಾಹ ವಿಡಿಯೋದ ದೃಶ್ಯ
ಪ್ರವಾಹ ವಿಡಿಯೋದ ದೃಶ್ಯ
Published on
ಕಠ್ಮಂಡು: ನೇಪಾಳದ ಟಿಬೆಟ್ ಗಡಿಯಲ್ಲಿ ಬುಧವಾರ(ಆ.26) ಸಂಭವಿಸಿದ ಹಠಾತ್ ಭೀಕರ ಪ್ರವಾಹ ದುರಂತದಲ್ಲಿ(Nepal flood tragedy) ಚೀನಾದ ಐವರು ಸೇರಿ ಬಲಿಯಾದವರ ಸಂಖ್ಯೆ 552ಕ್ಕೆ ಏರಿಕೆಯಾಗಿದ್ದು, ಸುಮಾರು 1,500ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದಾರೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ವರದಿಯಾಗಿದೆ.
ದುರಂತದಿಂದ ನೇಪಾಳದಲ್ಲಿ ಕನಿಷ್ಠ 547 ಜನರು ಸಾವನ್ನಪ್ಪಿದ್ದಾರೆ ಮತ್ತು 977 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ ಎಂದು ನೇಪಾಳದ ವಿಪತ್ತು ಪ್ರಾಧಿಕಾರ ಶುಕ್ರವಾರ ತಿಳಿಸಿದೆ. ಚೀನಾದಲ್ಲಿ ಐವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಉಭಯ ದೇಶಗಳ ಒಟ್ಟು 552 ಜನ ಮೃತಪಟ್ಟಿದ್ದು, ಸುಮಾರು 1,500 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ ಎನ್ನಲಾಗಿದೆ.
ಇನ್ನೂ ದುರಂತದ ಸ್ಥಳದಲ್ಲೇ ಮೂರನೇ ದಿನವೂ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, 14,000 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ಶೋಧ ಕಾರ್ಯ ನಡೆಸುತ್ತಿದ್ದು, ಸುಮಾರು 3,742 ಜನರನ್ನು ರಕ್ಷಿಸಿದ್ದಾರೆ. 2015ರ ಭೂಕಂಪದ ನಂತರ ನೇಪಾಳ ಕಂಡ ಅತ್ಯಂತ ಮಾರಣಾಂತಿಕ ವಿಪತ್ತು ಇದಾಗಿದೆ.
ಹಿಮನದಿಯೊಂದು ಕುಸಿದು ಬಿದ್ದ ಪರಿಣಾಮವಾಗಿ ಮಂಜುಗಡ್ಡೆ ಮತ್ತು ಅವಶೇಷಗಳ ಬೃಹತ್ ಪ್ರವಾಹ ಉಂಟಾಗಿ ಈ ಪ್ರವಾಹ ಸಂಭವಿಸಿದೆ ಎಂದು ಯುಎಸ್ ಜಿಯಾಲಾಜಿಕಲ್ ಸರ್ವೆ ತಿಳಿಸಿದೆ. ಇನ್ನೂ ಟಿಬೆಟ್ ಭಾಗದಲ್ಲಿದ್ದ ಅಣೆಕಟ್ಟೊಂದು ಒಡೆದ ಬಳಿಕ, ನೇಪಾಳ ಪೊಲೀಸರು ಶುಕ್ರವಾರ ಹೊಸದಾಗಿ ಎಚ್ಚರಿಕೆ ನೀಡಿದರು. ಭದ್ರತಾ ಸಿಬ್ಬಂದಿ ಹಾಗೂ ರಕ್ಷಣಾ ಮತ್ತು ಪರಿಹಾರ ಕಾರ್ಯಕರ್ತರು ಹೆಚ್ಚಿನ ಜಾಗರೂಕತೆಯಿಂದ ಇರುವಂತೆ ಸೂಚಿಸಿದ್ದಾರೆ.

85 ಭಾರತೀಯರ ರಕ್ಷಣೆ

ಇನ್ನೂ ಪ್ರವಾಹ ದುರಂತದಲ್ಲಿ 320 ಭಾರತೀಯರು ಕಾಣೆಯಾಗಿದ್ದಾರೆ ಎನ್ನಲಾಗಿದ್ದು, 85 ಮಂದಿಯನ್ನು ರಕ್ಷಿಸಲಾಗಿದೆ. ನಿನ್ನೆ ನೇಪಾಳದ ಪ್ರವಾಹ ಪೀಡಿತ ಪ್ರದೇಶದಿಂದ 21 ಭಾರತೀಯರು ವಾಪಸ್ ಸುರಕ್ಷಿತವಾಗಿ ತಾಯ್ನಾಡಿಗೆ ಆಗಮಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಈ ಕುರಿತು ಮಾತನಾಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಭಾರತಕ್ಕೆ ಆಗಮಿಸಿರುವ 21 ಭಾರತೀಯರ ಜೊತೆಗೆ ತ್ರಿಶೂಲಿ ಒನ್ ಜಲವಿದ್ಯುತ್ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 63 ಭಾರತೀಯ ಪ್ರಜೆಗಳ ಕುರಿತಾದ ಮಾಹಿತಿಯನ್ನು ನಾವು ನಿನ್ನೆ ನೀಡಿದ್ದೆವು. ಅವರನ್ನೂ ನಿನ್ನೆ ರಕ್ಷಿಸಲಾಗಿದೆ. ಈ 21 ಮತ್ತು 63 ಮಂದಿಯಲ್ಲದೆ, ಚೀನಾದ ಭಾಗದಲ್ಲಿ ಸಿಲುಕಿಕೊಂಡಿದ್ದ 96 ಭಾರತೀಯ ಪ್ರಜೆಗಳು ಭೂಮಾರ್ಗದ ಮೂಲಕ ಸುರಕ್ಷಿತವಾಗಿ ನೇಪಾಳವನ್ನು ಪ್ರವೇಶಿಸಿದ್ದಾರೆ. ಇನ್ನೂ 100 ಮಂದಿ ನಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಹೇಳಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net