ನೇಪಾಳ-ಟಿಬೆಟ್​ ಗಡಿಯಲ್ಲಿ ಜಲ ಪ್ರಳಯ: ಸಾವಿನ ಸಂಖ್ಯೆ 400 ಕ್ಕೆ ಏರಿಕೆ, 1,468 ಮಂದಿ ಕಣ್ಮರೆ; ಭಾರತದಿಂದ ನೆರೆರಾಷ್ಟ್ರಕ್ಕೆ ಸಹಾಯಹಸ್ತ! Nepal Flood

ನೇಪಾಳ-ಟಿಬೆಟ್ ಗಡಿಯಲ್ಲಿ ಭೀಕರ ಪ್ರವಾಹ
ನೇಪಾಳ-ಟಿಬೆಟ್ ಗಡಿಯಲ್ಲಿ ಭೀಕರ ಪ್ರವಾಹ
Published on

ಪ್ರಮುಖ ಮುಖ್ಯಾಂಶಗಳು

  • ನೇಪಾಳ-ಟಿಬೆಟ್ ಗಡಿಯಲ್ಲಿ ಸಂಭವಿಸಿದ ಭೀಕರ ಪ್ರವಾಹ
  • ಪ್ರವಾಹಕ್ಕೆ ತುತ್ತಾಗಿ 400 ಸಾವು ಮತ್ತು 1400ಕ್ಕೂ ಹೆಚ್ಚು ನಾಪತ್ತೆ
  • ಸಂತ್ರಸ್ತರ ರಕ್ಷಣೆಗೆ ಧಾವಿಸಿದ ಭಾರತ
ಕಠ್ಮಂಡು: ನೇಪಾಳ ಮತ್ತು ಟಿಬೆಟ್ ಗಡಿಯಲ್ಲಿ ಸಂಭವಿಸಿದ ಭೀಕರ ಪ್ರವಾಹ (Nepal Flood) ದಿಂದಾಗಿ ಸೃಷ್ಟಿಯಾಗಿರುವ ದುರಂತದ ದೃಶ್ಯಗಳು ಎದೆ ನಡುಗಿಸುವಂತಿವೆ. ಹಿಮನದಿ ಕುಸಿತ ಮತ್ತು ಹಿಮಪಾತದಿಂದಾಗಿ ಉಂಟಾದ ಈ ದಿಢೀರ್ ಪ್ರವಾಹದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಈದೀಗ 400 ರ ಗಡಿ ದಾಟಿದೆ. ಇದರೊಂದಿಗೆ ಗಡಿಯ ಎರಡೂ ಬದಿಗಳಲ್ಲಿ 1,468 ಜನರು ಕಣ್ಮರೆಯಾಗಿದ್ದು, ಆತಂಕದ ನೆರಳು ಕವಿದಿದೆ.

ಕೆಲವೇ ನಿಮಿಷಗಳಲ್ಲಿ ನುಂಗಿಹೋದ ಊರುಗಳು

ಮಧ್ಯ ನೇಪಾಳದ ಮೂಲಕ ನುಗ್ಗಿಬಂದ ನೀರು, ಮಣ್ಣು ಮತ್ತು ಬೃಹತ್ ಪರ್ವತಗಳ ಅಬ್ಬರಕ್ಕೆ ಸುಂದರ ಹಳ್ಳಿಗಳು, ಪಟ್ಟಣಗಳು ಕೆಲವೇ ನಿಮಿಷಗಳಲ್ಲಿ ಧರೆಗುರುಳಿವೆ. ರಸುವಾ ಮತ್ತು ನುವಾಕೋಟ್‌ನಲ್ಲಿ ಇಡೀ ವಸಾಹತುಗಳೇ ಮಣ್ಣಿನ ಅಡಿಯಲ್ಲಿ ಸಂಪೂರ್ಣವಾಗಿ ಹೂತುಹೋಗಿವೆ. ರಸ್ತೆಗಳು ಕೊಚ್ಚಿಹೋಗಿವೆ, ಸೇತುವೆಗಳು ಮುರಿದುಬಿದ್ದಿವೆ.

ಭೋಟೆ ಕೋಶಿ ನದಿ ಪಾತ್ರದಲ್ಲಿರುವ ಜಲವಿದ್ಯುತ್ ಯೋಜನೆಗಳಿಗೂ ಭಾರೀ ಹಾನಿಯಾಗಿದ್ದು, ನದಿಗಳ ರಭಸಕ್ಕೆ ಮನೆಗಳು, ವಾಹನಗಳು ಬೆಂಕಿ ಪೊಟ್ಟಣದಂತೆ ಕೊಚ್ಚಿಕೊಂಡು ಹೋಗಿವೆ ಎಂದು ಪ್ರಾಣಾಪಾಯದಿಂದ ಪಾರಾಗಿರುವ ಸ್ಥಳೀಯರು ಕಣ್ಣೀರಿಡುತ್ತಿದ್ದಾರೆ.


ಕಾಣೆಯಾದವರಲ್ಲಿ 290 ಭಾರತೀಯರು

ಈ ದುರಂತವು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ನೇಪಾಳದಲ್ಲಿ ಸಿಲುಕಿರುವ ಸುಮಾರು 290 ಭಾರತೀಯ ಪ್ರಜೆಗಳ ಜೊತೆ ಸಂಪರ್ಕ ಕಡಿತಗೊಂಡಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ವಿವಿಧ ರಾಜ್ಯಗಳಿಂದ ಕೆಲಸಕ್ಕಾಗಿ ತೆರಳಿದ್ದ ಜಲವಿದ್ಯುತ್ ಕಾರ್ಮಿಕರು ಮತ್ತು ಕೈಲಾಸ ಮಾನಸ ಸರೋವರ ಹಾಗೂ ಗೋಸೈನ್‌ಕುಂಡದ ಕಡೆಗೆ ತೆರಳುತ್ತಿದ್ದ ಪ್ರವಾಸಿಗರು ಈ ಪ್ರವಾಹದಲ್ಲಿ ಸಿಲುಕಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ನೇಪಾಳ ಪ್ರಧಾನಿ ಬಾಲೇಂದ್ರ ಶಾ ಅವರೊಂದಿಗೆ ಮಾತನಾಡಿ, ಭಾರತದ ಸಂಪೂರ್ಣ ಮಾನವೀಯ ನೆರವಿನ ಭರವಸೆ ನೀಡಿದ್ದಾರೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಿ, ಸಿಲುಕಿರುವ ಭಾರತೀಯರನ್ನು ರಕ್ಷಿಸಲು ತುರ್ತು ಪ್ರಯತ್ನಗಳನ್ನು ಆರಂಭಿಸಲಾಗಿದೆ.
ಭಾರತೀಯ ರಕ್ಷಣಾ ತಂಡಗಳು ಈಗಾಗಲೇ ಕಾರ್ಯಾಚರಣೆ ಪ್ರಾರಂಭಿಸಿದ್ದು, ತ್ರಿಶೂಲಿ-1 ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಸಿಲುಕಿದ್ದ 63 ಭಾರತೀಯ ಕಾರ್ಮಿಕರು ಸೇರಿದಂತೆ ಒಟ್ಟು 84 ಮಂದಿಯನ್ನು ರಕ್ಷಿಸಲಾಗಿದೆ. ಟಿಬೆಟ್ ಕಡೆಯಿಂದಲೂ ಸುಮಾರು 200 ಭಾರತೀಯರು ಸಹಾಯಕ್ಕಾಗಿ ಸಂಪರ್ಕಿಸಿದ್ದಾರೆ. ಭಾರತೀಯರ ರಕ್ಷಣೆಗಾಗಿ 24 ಗಂಟೆಗಳ ನಿಯಂತ್ರಣ ಕೊಠಡಿಯನ್ನು ತೆರೆಯಲಾಗಿದೆ.

ನೇಪಾಳಕ್ಕೆ ಭಾರತದಿಂದ 47.5 ಟನ್ ಪರಿಹಾರ ಸಾಮಗ್ರಿ


ಸಂಕಷ್ಟದಲ್ಲಿರುವ ನೆರೆಯ ರಾಷ್ಟ್ರಕ್ಕೆ ನೆರವಾಗಲು ಭಾರತ ಮುಂದಾಗಿದ್ದು, ಇದುವರೆಗೆ ಒಟ್ಟು 47.5 ಟನ್ ಮಾನವೀಯ ನೆರವು ಹಾಗೂ ವಿಪತ್ತು ಪರಿಹಾರ ಸಾಮಗ್ರಿಗಳನ್ನು ಮಿಲಿಟರಿ ವಿಮಾನಗಳ ಮೂಲಕ ಕಳುಹಿಸಿಕೊಟ್ಟಿದೆ. ಇದರಲ್ಲಿ ತಾತ್ಕಾಲಿಕ ಆಶ್ರಯ ತಾಣಗಳು, ಕಂಬಳಿಗಳು, ನೈರ್ಮಲ್ಯ ಕಿಟ್‌ಗಳು, ಸೌರ ದೀಪಗಳು, ಜೀವ ರಕ್ಷಕ ಔಷಧಿಗಳು ಮತ್ತು ಆಹಾರದ ಪ್ಯಾಕೆಟ್‌ಗಳು ಸೇರಿವೆ.

ಪ್ರಯಾಣಿಕರಿಗೆ ಎಚ್ಚರಿಕೆ: ದೆಹಲಿ-ಕಠ್ಮಂಡು ಬಸ್ ರದ್ದು


ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿರುವ ಕಾರಣ, ಮುನ್ನೆಚ್ಚರಿಕೆ ಕ್ರಮವಾಗಿ ದೆಹಲಿ ಮತ್ತು ಕಠ್ಮಂಡು ನಡುವಿನ ಬಸ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಆಗಸ್ಟ್ 28 ಮತ್ತು 29 ರಂದು ನಡೆಯಬೇಕಿದ್ದ ಬಸ್ ಸಂಚಾರವನ್ನು ದೆಹಲಿ ಸಾರಿಗೆ ನಿಗಮ ರದ್ದುಪಡಿಸಿದೆ.
ಪ್ರಕೃತಿಯ ಈ ರೌದ್ರಾವತಾರದಿಂದ ನೊಂದಿರುವ ನೇಪಾಳ ಜನತೆಗೆ ನೆರವಾಗಲು ಜಗತ್ತು ಕೈಜೋಡಿಸುತ್ತಿದ್ದು, ನಾಪತ್ತೆಯಾಗಿರುವವರ ಪತ್ತೆಗಾಗಿ ಸೈನಿಕರು, ಡ್ರೋನ್‌ಗಳು ಹಾಗೂ ಹೆಲಿಕಾಪ್ಟರ್‌ಗಳ ಮೂಲಕ ಹಗಲಿರುಳು ರಕ್ಷಣಾ ಕಾರ್ಯ ಮುಂದುವರಿದಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net